ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಸಂಜೀವಿನಿ

Last Updated 5 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಸಂಗೀತ ಸಂಯೋಜನೆ, ಹಾಡು–ನೃತ್ಯ, ನಟನೆ... ಹೀಗೆ ಹತ್ತು ಹಲವು ಪ್ರತಿಭೆಗಳಿಗೆ ಸಾಕ್ಷಿಯಾದ ಸೋನಾ ಮೊಹಾಪಾತ್ರ ಅವರ ನಲ್ಮೆಯ ನೆಲೆ ಸಂಗೀತವೇ. ಸಂಗೀತವೇ ಬದುಕಾಗಿ, ಬದುಕೆಲ್ಲ ಆಲಾಪದ ಅಲೆಯಾಗಿ ತೇಲಿ ನಿಂತ ಬಗೆಯನ್ನು ಅವರು ಮೆಟ್ರೊ ಜೊತೆ ಹಂಚಿಕೊಂಡರು–

*ನಿಮ್ಮ ಪಾಲಿಗೆ ಸಂಗೀತ ಎಂದರೆ ಏನು?
ಸಂಗೀತ ಎಂದರೆ ಅನೇಕರು ಮನರಂಜನೆಯ ಒಂದು ಬಗೆ ಎಂದು ತಿಳಿದುಕೊಂಡಿರುವುದಿದೆ. ಆದರೆ ಮನರಂಜನೆ ಒದಗಿಸುವುದಕ್ಕಷ್ಟೇ ಸಂಗೀತ ಸೀಮಿತವಾಗಿಲ್ಲ. ಅದು ಬದುಕಿನ ಸಾಕ್ಷಾತ್ಕಾರಕ್ಕಿರುವ ಒಂದು ಮಾರ್ಗ. ಜೀವಸೆಲೆ, ಸಂಜೀವಿನಿ.

ಯಾರಲ್ಲೂ ಹೇಳಿಕೊಳ್ಳಲಾಗದ ಬೇಗೆಯೊಂದು ಮನವನ್ನು ಕಲಕಿ ನಿಂತಾಗ, ಅವರ್ಣನೀಯ ನೋವು ಎದೆ ತುಂಬಿದಾಗ, ಕಣ್ಣ ಹನಿಗಳಿಗೂ ಬರ ಬಂದು, ಹೃದಯ ಭಾರವಾದಾಗ... ಸುಮ್ಮನೇ ಒಬ್ಬರೇ ಕಣ್ಣು ಮುಚ್ಚಿ ಕುಳಿತು ನಿಮಗಿಷ್ಟವಾಗುವ ಸಂಗೀತದಲ್ಲಿ ಮುಳುಗಿ ಬಿಡಿ. ನೋವೆಲ್ಲ ಕರಗಿ, ಕಣ್ಣೀರ ಹನಿಯಾಗಿ ಕರಗಿ ಹೋಗಿ ಮನ ಹಗುರ... ಹಗುರ... ಆಗುತ್ತ ಹೋಗುತ್ತದಲ್ಲ, ಅದೇ ಸಂಗೀತದ ಗುಣ. ಅಂತಹ ಮನೌಷಧಿ ಮತ್ತೊಂದಿಲ್ಲ.

*ಹಾಡಿನ ಲೋಕಕ್ಕೆ ನೀವು ಆಪ್ತರಾದುದು ಹೇಗೆ?
ಸಂಗೀತ ನನಗೆ ಕುಟುಂಬದಿಂದ ಬಂದ ಬಳುವಳಿ ಏನೂ ಅಲ್ಲ. ಮನದಲ್ಲಿ ಮೂಡಿ, ತನು–ಮನವೆಲ್ಲ ಹಬ್ಬಿ ನಿಂತ ಬಳ್ಳಿ. ಅಪ್ಪ ದಿಲೀಪ್‌ ಮಹಾಪಾತ್ರ ಇಂಡಿಯನ್‌ ನೇವಿಯಲ್ಲಿದ್ದರು. ಅವರ ವರ್ಗಾವಣೆಯ ಕಾರಣದಿಂದ ಹತ್ತು–ಹಲವು ಜಾಗಗಳಿಗೆ ಓಡಾಡುವುದು ಅನಿವಾರ್ಯವಾಗಿತ್ತು. ಆದರೆ ಅದೆಲ್ಲ ನನ್ನ ಭವಿಷ್ಯಕ್ಕೆ ಪೂರಕವಾಗುತ್ತಲೇ ಹೋಯಿತು. ಹೊಸ ಹೊಸ ವೇಷ–ಭಾಷೆ, ಆಚಾರ–ವಿಚಾರ, ಕಲೆ–ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು.

ಸಂಗೀತ ಬೇರಿನ ಜೊತೆ ಹೊಸ ಹೊಸ ಆಯಾಮವನ್ನು ಸೇರಿಸಿಕೊಳ್ಳುತ್ತ ಹೋಗಲು ಅನುವು ಮಾಡಿಕೊಟ್ಟಿತು. ವೃತ್ತಿಯಲ್ಲಿ ಅಧ್ಯಾಪಕಿಯಾಗಿದ್ದ ಅಮ್ಮನೂ ನನ್ನ ಸಂಗೀತ ಪ್ರೀತಿಗೆ ಪ್ರೋತ್ಸಾಹ ನೀಡಿದರು.

*ಎಂಜಿನಿಯರಿಂಗ್‌ ಮತ್ತು ಎಂ.ಬಿ.ಎ.ಯಲ್ಲಿ ಶಿಕ್ಷಣ ಪಡೆದು, ಬ್ರಾಂಡ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತ ಸಂಗೀತವನ್ನು ಪ್ರೀತಿಸಿದ ಬಗೆ?
ಪಯಣದ ಪ್ರತಿಯೊಂದು ಹಂತವನ್ನು ಅನುಭವಿಸುತ್ತ ಸಾಗುವ ಗುಣ ನನ್ನದು. ಬದುಕಿನ ಎಲ್ಲಾ ಹಂತಗಳನ್ನು, ಎಲ್ಲಾ ಮುಖಗಳನ್ನು ಸಂಪೂರ್ಣವಾಗಿ ಜೀವಿಸಿ ಬಿಡುತ್ತೇನೆ. ಯಾವುದೇ ಪುಟ್ಟ ಬದಲಾವಣೆ/ ಬೆಳವಣಿಗೆಯನ್ನು ಮಿಸ್‌ ಮಾಡಿಕೊಳ್ಳಲು ಬಯಸೊಲ್ಲ. ಅತ್ಯಂತ ಆಸಕ್ತಿ ಹಾಗೂ ಪ್ರೀತಿಯಿಂದಲೇ ಶಿಕ್ಷಣ ಪೂರೈಸಿದೆ. ವೃತ್ತಿಯಲ್ಲಿಯೂ ಅಷ್ಟೇ ಪ್ರೀತಿ ಇತ್ತು. ಸಂಗೀತ ಯಾವತ್ತಿಗೂ ನನ್ನ ಆಪ್ತ ಜಗತ್ತು, ಅದರೊಂದಿಗೇ ಇದೆಲ್ಲ ನಡೆದುಕೊಂಡು ಸಾಗಿತಷ್ಟೆ.

*ಸಂಗೀತ ಪಯಣದ ಮುಖ್ಯ ಘಟ್ಟಗಳು?
ಸಂಗೀತದ ಜಗತ್ತಿನಲ್ಲಿ ನನ್ನ ಮೊದಲ ಹೆಜ್ಜೆ ಮೂಡಿದ್ದು ಜಾಹೀರಾತಿನ ಮೂಲಕ. 2006–07ರಲ್ಲಿ ಮೊದಲ ಆಲ್ಬಂ ಬಿಡುಗಡೆಯಾಯಿತು. ಇದು ರಾಕ್, ರಿದಮ್ ಮತ್ತು ಬ್ಲೂಸ್, ಫ್ಲಮೆಂಕೊ, ಹಿಂದೂಸ್ತಾನಿ ಬೌಲ್ ಹಾಗೂ ರೋಮಾನಿ ಸಂಗೀತದ ವೈವಿಧ್ಯಮಯ ಶೈಲಿಗಳ ಅನ್ವೇಷಣೆಯ ಒಂದು ಪ್ರಯತ್ನವಾಗಿತ್ತು. ನಂತರ ಸಿನಿಮಾ ಅವಕಾಶಗಳು ಬರತೊಡಗಿದವು.

*ಯಾವ ಪ್ರಕಾರದ ಹಾಡು ನಿಮಗಿಷ್ಟ?
ನಾನು ಗಾಯಕಿ ಮಾತ್ರವಲ್ಲ, ಹಾಡಿನ ಮೂಲಕ ಕಥೆ ಹೇಳುವುದು ನನಗಿಷ್ಟ. ನನ್ನ ಹಾಡು ಕೇಳುತ್ತಿದ್ದರೆ ಎದೆಯ ನೋವು ಕರಗಿ ಉಲ್ಲಾಸ ಪುಟಿಯಬೇಕು. ನನಗೆ ಸ್ಫೂರ್ತಿದಾಯಕ ಗೀತೆಗಳನ್ನು ಹಾಡುವುದು ಬಹಳ ಇಷ್ಟ. ಜಗತ್ತಿನಲ್ಲಿ ನೋವು–ಸಂಕಟ, ಜಿಗುಪ್ಸೆಗಳನ್ನು ಹುಟ್ಟಿಸುವ ಘಟನೆಗಳಿಗೆ ಕೊರತೆ ಏನಿಲ್ಲ. ಆದರೆ ನಗು ಹಂಚುವ, ಖುಷಿ ಹರಡುವ ಪ್ರಯತ್ನಗಳು ನಡೆಯಬೇಕು. ನನ್ನ ಹಾಡುಗಳ ಮೂಲ ಉದ್ದೇಶ ಇದೇ.

*ಸಿನಿಮಾ, ಸ್ಟುಡಿಯೊ, ಸಿ.ಡಿ. ಆಲ್ಬಂ, ವೇದಿಕೆ ಕಾರ್ಯಕ್ರಮ... ಯಾವುದು ನಿಮ್ಮ ನೆಚ್ಚಿನ ವೇದಿಕೆ?
ನಾನು ಕ್ಯಾಮೆರಾಗಿಂತ ವೇದಿಕೆಯನ್ನೇ ಹೆಚ್ಚು ಪ್ರೀತಿಸುತ್ತೇನೆ. ವೇದಿಕೆ ಮೇಲಿರುವಷ್ಟೂ ಹೊತ್ತು ನನ್ನ ಮನಸ್ಸು ಯಾವುದೋ ಅನ್ಯ ಲೋಕದಲ್ಲಿ ಮುಳುಗಿ ಹೋಗಿರುತ್ತದೆ. ಇದೇ ನನ್ನ ಕನಸು ಮತ್ತು ನನ್ನ ಕನಸನ್ನು ನಾನು ಜೀವಿಸುತ್ತಿದ್ದೇನೆ.

*ಸಾಕಷ್ಟು ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ನೀಡಿದ್ದೀರಿ. ಇಲ್ಲಿನ ಮತ್ತು ಅಲ್ಲಿನ ಅಭಿಮಾನಿಗಳಲ್ಲಿ ಸಾಂಸ್ಕೃತಿಕ ವ್ಯತ್ಯಾಸವೇನಾದರೂ ಇದೆಯೇ?
ಕಲೆಗೆ ದೇಶ–ಭಾಷೆಯ ವ್ಯತ್ಯಾಸವಿಲ್ಲ. ಅದು ಸರ್ವವ್ಯಾಪಿ. ಆದರೂ ವಿದೇಶದ ಮತ್ತು ನಮ್ಮ ದೇಶದ ಅಭಿಮಾನಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಎಲ್ಲರಿಗೂ ಸಂಗೀತದ ಸೂಕ್ಷ್ಮಗಳು ಗೊತ್ತಿಲ್ಲ. ಒಂದು ಬ್ಯಾಂಡ್‌ ಪ್ರದರ್ಶನ ನೀಡುತ್ತಿರುವಾಗ ಎದ್ದು ನಿಂತು ತಮ್ಮ ‘ಫರ್ಮಾಯಿಶ್‌’ ವ್ಯಕ್ತಪಡಿಸುತ್ತಾರೆ. ಅದು ತಮ್ಮ ಸಂಗೀತ ಪ್ರೀತಿಯ ಪ್ರತೀಕ ಎಂದುಕೊಳ್ಳುತ್ತಾರೆ. ಆದರೆ ನಾವು ಮ್ಯೂಸಿಕ್‌ ಬಾಕ್ಸ್‌ ಅಲ್ಲ. ನಾವು ನಮ್ಮದೇ ಆದ ತಯಾರಿಯಲ್ಲಿ ಬಂದಿರುತ್ತೇವೆ. ಅವರು ಕೇಳಿದ ತಕ್ಷಣ ಅವರ ನೆಚ್ಚಿನ ಹಾಡಿಗೆ ಶಿಫ್ಟ್‌ ಆಗಲು ನಮ್ಮ ತಂಡಕ್ಕೆ ಕಷ್ಟವಾಗುತ್ತದೆ ಎನ್ನುವುದು ಅವರಿಗೆ ಗೊತ್ತೇ ಆಗುವುದಿಲ್ಲ. ಆದರೆ ಇಂತಹ ಪರಿಸ್ಥಿತಿಗಳನ್ನು ನಿಭಾಯಿಸುವುದೂ ಒಂದು ಸವಾಲು, ಅದು ನನಗಿಷ್ಟ.

*ಹಳೇ ಹಾಡುಗಳ ರೀಮಿಕ್ಸಿಂಗ್‌ ಬಗ್ಗೆ ನಿಮ್ಮ ಅಭಿಪ್ರಾಯ?
ಈ ಪರಂಪರೆಗೆ ಎರಡು ಮುಖಗಳಿವೆ. ಎರಡೂ ಮುಖಗಳ ನಡುವೆ ಸೂಕ್ಷ್ಮವಾದ ಪರದೆ ಇದೆ. ರೀಮಿಕ್ಸಿಂಗ್ ಅಷ್ಟು ಸುಲಭವಲ್ಲ, ಈ ಕೆಲಸಕ್ಕೆ ಕೈ ಹಾಕಲು ಗಟ್ಸ್‌ ಬೇಕು. ಸುಮ್ಮನೇ ರೀಮಿಕ್ಸಿಂಗ್ ಮಾಡುವುದಲ್ಲ. ಅದರಲ್ಲಿಯೂ ಸೃಜನಶೀಲತೆ ತೋರಿಸಬೇಕು, ವಿಭಿನ್ನವಾಗಿ ಪ್ರಸ್ತುತಪಡಿಸಬೇಕು. ಸಂಗೀತದ ಮೂಲ ಗುಣ ಸಂತೋಷ ಹಂಚುವುದೇ ಆಗಿರುತ್ತದೆ. ಆ ಗುಣ ವೃದ್ಧಿಯಾಗಬೇಕೆ ಹೊರತು ಕುಂದಬಾರದು. ‘ರೀಮಿಕ್ಸಿಂಗ್‌’ ಎಂದರೆ ಹಳೆಯ ಮತ್ತು ಹೊಸತದರ ನಡವಿನ ಕೊಂಡಿ ಇದ್ದಂತೆ.

*ಕನ್ನಡ ಸಿನಿಮಾಗಳಿಗೆ ಹಾಡುವ ಪ್ರಯತ್ನ ಮಾಡಲಿಲ್ಲವೇ?
ಕನ್ನಡದಲ್ಲಿ ಹಾಡುವ ಅವಕಾಶಗಳು ಬಂದಿಲ್ಲ. ನನಗೆ ಭಾಷೆ ಯಾವುದಾದರೂ ಸರಿ, ಉತ್ತಮ ಅವಕಾಶಗಳು ಮುಖ್ಯ. ಅಲ್ಲದೇ, ನನಗೆ ಕನ್ನಡ ಹಾಗೂ ಬೆಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಇದೆ. ನನ್ನ ಪತಿ ರಾಮ್‌ ಬೆಂಗಳೂರು ಮೂಲದವರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT