ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿಯ ಹಳ್ಳಿ ಚಿತ್ರಗಳು...

Last Updated 6 ಮೇ 2015, 19:30 IST
ಅಕ್ಷರ ಗಾತ್ರ

ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾದ ನಂತರವೇ ನಟ ಸಂಚಾರಿ ವಿಜಯ್ ಚಿತ್ರ–ಚಹರೆ ಎಲ್ಲೆಡೆ ಕಾಣುತ್ತಿರುವುದು. ‘ನಾನು ಅವನಲ್ಲ ಅವಳು’ ಮತ್ತು ‘ಹರಿವು’ ಗಂಭೀರ ವಸ್ತುವಿನ ಸಿನಿಮಾಗಳು. ಆದರೆ ವಿಜಯ್ ರಂಗಭೂಮಿಯಲ್ಲಿ ಕಾಮಿಡಿಯನ್ನು ಇಷ್ಟಪಟ್ಟವರು. ಹಾಸ್ಯ ನಾಟಕವನ್ನು ನಿರ್ದೇಶಿಸಿದವರು. ಅವರ ಹಳ್ಳಿ ಬದುಕಿನ ಕಥೆಗಳೇ ಕಾಮಿಡಿಯಾಗಿವೆ, ಕಚಗುಳಿ ನೀಡುತ್ತವೆ. 

ಹಳ್ಳಿಯಲ್ಲಿ ಶಾಲೆಗೆ ಹೋಗುವಾಗ ಸಿಕ್ಕಾಪಟ್ಟೆ ತರ್ಲೆ ತುಂಟಾಟ ಮಾಡುತ್ತಿದ್ದಿರಿ ಎನ್ನುವ ಆರೋಪ ಇದೆಯಲ್ಲ ನಿಮ್ಮ ಮೇಲೆ? 
ಹ್ಹ ಹ್ಹ ಹ್ಹ... ಒಂದೆರಡಲ್ಲ ಎಷ್ಟೊಂದು ತರ್ಲೆ–ತುಂಟಾಟ. ನಾನು ಮೂರನೇ ಕ್ಲಾಸ್‌ನಲ್ಲಿದ್ದಾಗ ಒಬ್ಬರ ಮನೆಯ ತೊಟ್ಟಿಯಲ್ಲಿ ಈಜಾಡಲು ಹೋಗಿದ್ದೆವು. ಆ ತೊಟ್ಟಿ ಮಾಲೀಕರು ಓಡಿಸಿಕೊಂಡು ಬಂದರು. ಚೆಡ್ಡಿ ಇಲ್ಲದೆ ಬೆತ್ತಲಾಗಿ ಮನೆಗೆ ಓಡಿ ಬಂದಿದ್ದೆ. ಒಮ್ಮೆ ಈಜಾಡುವಾಗ ನಮ್ಮ ಅಮ್ಮ ಬಂದ್ರು. ಕೈಯಲ್ಲಿ ಕೋಲು. ಅದನ್ನು ನೋಡಿ ನಾನು ನೀರಿನಲ್ಲಿ ಮುಳುಗಿಕೊಂಡೆ. ಇವನು ಇಲ್ಲಿ ಇಲ್ಲ ಎಂದು ವಾಪಸು ಹೊರಟರು. ಅಷ್ಟರಲ್ಲಿ ಮೇಲೆದ್ದೆ. ಆದರೆ ಬಟ್ಟೆ ನೋಡಿ ವಾಪಸು ಬಂದು ಚೆನ್ನಾಗಿಯೇ ಬತ್ತಾಸು ಕೊಟ್ಟು ಮನೆಗೆ ಕರೆದುಕೊಂಡು ಹೋದರು. 

ನಮ್ಮೂರಲ್ಲಿ ಯಾರಾದ್ರೂ ಎದುರಿಗೆ ಬಾಳೆಹಣ್ಣು ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದಾರೆ ಎಂದರೆ ನಾನೊಂದು ಬಾಳೆಹಣ್ಣು ತೆಗೆದುಕೊಂಡು ಅವರ ಎದುರಿಗೆ ಅಸಹ್ಯವಾಗಿ ತಿನ್ನುತ್ತಿದ್ದೆ. ಅದನ್ನು ನೋಡಿದರೆ  ಅವರು ಬಾಳೆಹಣ್ಣು ತಿನ್ನಲೇಬಾರದು ಹಾಗೆ!

* ಫಸ್ಟ್‌ಲವ್‌, ಸೆಕೆಂಡ್‌ ಲವ್‌, ಜಸ್ಟ್‌ ಲವ್‌ ಆಗಿದ್ದು ಇದೆಯೇ?
ನಾವೇ ಪ್ರಪೋಸ್ ಮಾಡಬೇಕಿತ್ತು, ನಮ್ಮನ್ನು  ಪ್ರಪೋಸ್ ಮಾಡುವವರು ಯಾರೂ ಇರಲಿಲ್ಲ. ಧೈರ್ಯವೂ ಇರಲಿಲ್ಲ. ಸುಖಾ ಸುಮ್ಮನೆ ಯಾವುದನ್ನೂ ಮೈ ಮೇಲೆ ಎಳೆದುಕೊಳ್ಳುವುದು ಇಷ್ಟವಿರಲಿಲ್ಲ. ನಮಗೇ ಹಿಟ್ಟಿಲ್ಲ. ಪ್ರೀತಿ ಬಗ್ಗೆ ಒಂದು ಸಣ್ಣ ಭಯ ಹುಟ್ಟಲು ಒಂದು ಹಿನ್ನೆಲೆಯೂ ಇದೆ. ನಾನು ಎಂಟನೇ ತರಗತಿಯಲ್ಲಿ ಆಣೆಗೆರೆಯಲ್ಲಿ (ಕಡೂರು ತಾಲ್ಲೂಕು) ಓದುತ್ತಿದ್ದೆ. ನನ್ನ ಸ್ನೇಹಿತ ಮಂಜನಿಗೆ ಒಂದು ಹುಡುಗಿ ಮೇಲೆ ಪ್ರೀತಿ ಆಯಿತು. ಅದೇ ಸಮಯಕ್ಕೆ ಪ್ರಕಾಶ ಎನ್ನುವವನು ಬೆಂಗಳೂರಿನಿಂದ ಬಂದು ನಮ್ಮ ಶಾಲೆಗೆ ಸೇರಿದ್ದ. ನಮಗೆ ಎದೆ ಸೀಳಿದರೆ ಎರಡು ಅಕ್ಷರ ಇಂಗ್ಲಿಷ್ ಬರುತ್ತಿರಲಿಲ್ಲ. ಐ ಲವ್‌ ಯೂ ಎಂದು ಆ ಹುಡುಗಿ ಕುಳಿತುಕೊಳ್ಳುವ ಸ್ಥಳದ ಮೇಲೆ ಬರೆಯುವ ನಿರ್ಧಾರ ಮಾಡಿದೆವು. ಹ್ಯಾಗ್ಯಾಗೋ ಮಾಡಿ ಐ ಲವ್ ಯೂ ಎನ್ನುವ ಇಂಗ್ಲಿಷ್ ಅಕ್ಷರ ತಿಳಿದುಕೊಂಡು ಬರೆದೆವು. ಆ ಹುಡುಗಿ ಕಣ್ಣಲ್ಲಿ ನೀರಧಾರೆ. ಕೊಲೆ ಮಾಡಿದ್ದಾರೆ ಎನ್ನುವ ರೀತಿ ಮೇಷ್ಟ್ರು  ‘ಯಾರು ಈ ರೀತಿ ಮಾಡಿದ್ದು’ ಎಂದು ಬೊಬ್ಬಿರಿದರು. ಊರಲ್ಲೆಲ್ಲ ಸುದ್ದಿ. ಇಂಗ್ಲಿಷ್ ಬರುತ್ತಿದ್ದ ಪ್ರಕಾಶನಿಗೆ, ಮೇಷ್ಟ್ರು ರೂಂ ಒಳಗೆ ಹಾಕಿಕೊಂಡು ಚೆನ್ನಾಗಿಯೇ ರುಬ್ಬಿದರು. ಅಂದಿನಿಂದ ಈ ಪ್ರೀತಿ ಅಂದ್ರೆ ಸ್ವಲ್ಪ ಭಯ. ಈಗ ಮದುವೆಯಾಗುವ ನಿರ್ಧಾರ ಮಾಡಿದ್ದೇನೆ. ಇದೇ ಸರಿಯಾದ ಸಮಯ, ಬಿಟ್ಟರೆ ಮತ್ತಷ್ಟು ಕಾಯಬೇಕು!

* ಹಾಗಿದ್ರೆ ಊರಲ್ಲಿ ದೊಡ್ಡ ಕಲಾವಿದ ನೀವು?
ಹೌದು! ನನ್ನ ಹಳ್ಳಿಯಲ್ಲಿ ನನ್ನ ಕರೆಯುತ್ತಿದ್ದದ್ದೇ ‘ಕಲಾವಿದ’ ಎಂದು. ಪ್ರೇಮಿಗಳ ದಿನದಂದು 50ಕ್ಕೂ ಹೆಚ್ಚು ಜನರು ನನ್ನ ಹತ್ತಿರ ಗ್ರೀಟಿಂಗ್‌ಗೆ ಏನಾದರೂ ಬರೆಸಿಕೊಂಡು ಹೋಗುತ್ತಿದ್ದರು. ಕಾಲೇಜಿನಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿಯಲ್ಲಿ ಹಾಡು–ಡ್ಯಾನ್ಸ್‌– ಸ್ಟೇಜ್ ನಿರ್ಮಾಣ, ಚಿತ್ರ ಬಿಡಿಸುವುದು ಎಲ್ಲ ಆಟವನ್ನು ಆಡುತ್ತಿದ್ದೆ. ನನಗೆ ಬೇರೆಯವರ ಗ್ರೀಟಿಂಗ್‌ಗಳಿಗೆ ಬರೆದುಕೊಡುವುದು ಗೊತ್ತಿತ್ತು ಅಷ್ಟೇ. ನಾನೇ ಬರೆದು ಹುಡುಗಿಯರಿಗೆ ಕೊಡುವ ಧೈರ್ಯ ಇರಲಿಲ್ಲ.

*‘ಹರಿವು’ ಚಿತ್ರದಲ್ಲಿ ಅಪ್ಪನ ಪಾತ್ರ ಮಾಡಿದ್ದಕ್ಕೆ ಸಂಸಾರ–ಮಕ್ಕಳು, ಮರಿ ಆಲೋಚನೆ ಬಂದಿದ್ದಾ?
ಹಾಗೇನೂ ಇಲ್ಲ. ನಾನು ಮಕ್ಕಳ ಜತೆ ಹೆಚ್ಚು ಸೇರುತ್ತಿರಲಿಲ್ಲ. ಕಿರಿಕಿರಿ ಎನಿಸುತ್ತಿತ್ತು. ಆದರೆ ಈ ಚಿತ್ರ ನೋಡಿ ಹೊರಬಂದವರು ತಂದೆಯ ಬಗ್ಗೆ ತೀವ್ರ ಭಾವುಕರಾಗುವರು. ನನಗೂ ಅಪ್ಪನ ನೆನಪಾಯಿತು. ನಾನು ಈ ರೀತಿ ಮಾಡುವುದಕ್ಕೆ ಆಗುತ್ತಿಲ್ಲವಲ್ಲ ಎನಿಸಿತು. ಮತ್ತೊಂದು ಮಾತು... ‘ನಾಟಕ ಮಾಡಿಕೊಂಡಿದ್ದೀಯಾ ನಿನಗೆ ಯಾರು ಹೆಣ್ಣು ಕೊಡುತ್ತಾರೋ’ ಎಂದು ಸುಮಾರು ಜನ ಹೇಳುತ್ತಿದ್ದರು. ಒಂದು ರೀತಿ ಆ ಕಾರಣಕ್ಕೆ ಭಯಬಿದ್ದು, ಬರಗೆಟ್ಟಿದ್ದೀವಿ. ಬೇಗ ಮದುವೆ ಆಗಿಬಿಡೋದೇ.

* ‘ನಾನು ಅವನಲ್ಲ ಅವಳು’ ಚಿತ್ರದಲ್ಲಿ ಮಂಗಳಮುಖಿಯಾಗಿ ನಟಿಸಿದ ಅನುಭವ ಹೇಗಿತ್ತು? 
‘ಬಂದು ಬಿಡಿ ನಮ್ಮ ಜತೆ’ ಎಂದು ಹೇಳುತ್ತಿದ್ದರು. ನನಗೆ ಸೀರೆ ಉಡಿಸುತ್ತಿದ್ದುದು ವಸ್ತ್ರವಿನ್ಯಾಸಕರು. ‘ಸೀರೆ ಉಡುವುದು ಈ  ರೀತಿ ಅಲ್ಲ’ ಎಂದು ಮಂಗಳಮುಖಿಯರೇ ನನಗೆ ಸೀರೆ ಉಡಿಸುತ್ತಿದ್ದರು. ಆ ಕ್ಷಣ ಮುಜುಗರವಾಗುತ್ತಿತ್ತು. ನಿರ್ವಾಣ (ಸರ್ಜರಿ) ಆದಾಗ ತೀವ್ರ ನೋವು ಆಗುತ್ತದೆಯಂತೆ. ನಡೆಯುವುದು ಕಷ್ಟ. ಆ ಬಗ್ಗೆ ಹೇಳಿ ನಡೆಯುವ ಶೈಲಿಯನ್ನು ತಿದ್ದಿದರು.

* ಸಿಕ್ಕಿದ್ದೆಲ್ಲ ಪ್ರೇಕ್ಷಕನಿಗೆ ಕಣ್ಣೀರು ಹಾಕಿಸುವ ಪಾತ್ರಗಳೇ?
ನನಗೆ ಕಾಮಿಡಿ ಎಂದ್ರೆ ಇಷ್ಟ. ಹಾಸ್ಯ ನಾಟಕವನ್ನು ನಿರ್ದೇಶಿಸಿದ್ದೇನೆ. ನನ್ನ ಅದೃಷ್ಟವೋ ದುರಾದೃಷ್ಟವೋ ಸಿಕ್ಕಿದ್ದೆಲ್ಲವೂ ಗಂಭೀರ ಪಾತ್ರಗಳು. ಪ್ರೇಕ್ಷಕರು ತಮ್ಮ ಶಕ್ತಾನುಸಾರ ಕಣ್ಣೀರು ಹಾಕಬಹುದು. ತುಂಬಾ ಮೂಡಿ ನಾನು. ನನ್ನ ಸುತ್ತ ಯಾರಾದರೂ ಇದ್ದರೆ ಕಾಮಿಡಿ ಆಗಿರುತ್ತೇನೆ. ಮೂಡು ಕೆಟ್ಟರೆ ಮೌನಿ. ವಿಪರೀತ ಸಿಟ್ಟು.  

* ಓ ಗೊತ್ತಾಯಿತು ಬಿಡಿ. ಏಕೆ ಮದುವೆ ಆಲೋಚನೆ ಎಂದು?
ಹ್ಹಹ್ಹಹ್ಹ... ಜತೆಯಲ್ಲಿ ಹೆಂಡತಿ ಇದ್ದರೆ ಕಾಮಿಡಿ ಮಾಡಿಕೊಂಡು ಇರಬಹುದು. ಸಿಟ್ಟು ತಣಿಸುವುದಕ್ಕೆ ಅವಳು ಇರುತ್ತಾಳೆ. ನನ್ನ ಹುಡುಗಿ ಬಗ್ಗೆ ಕನಸುಗಳನ್ನೇನೂ ಕಟ್ಟಿಲ್ಲ. ನಿಜವಾದ ಕನಸು ಎಂದರೆ ಇಷ್ಟು ವರುಷ ಹೋಟೆಲ್ ಊಟ ತಿಂದು ಸಾಕಾಗಿದೆ, ಒಳ್ಳೆಯ ಊಟ ಸಿಗಬೇಕು!

* ಗೋಲ್ಡನ್, ಡೈಮೆಂಡ್‌ ಇತ್ಯಾದಿ ಸ್ಟಾರ್‌ಗಳೆಲ್ಲ ಖಾಲಿ ಆಗಿವೆ. ನಿಮಗೆ ಯಾವುದು ಬೇಕು?
ಟ್ರಾನ್ಸ್ ಸ್ಟಾರ್‌. ಟ್ರಾನ್ಸ್ ಜೆಂಡರ್ ಹಾಗಿದ್ದನಲ್ಲ ಅದಕ್ಕೆ.

* ಈ ಒಂದು ಪ್ರಶಸ್ತಿ ನಿಮ್ಮ ಬಗ್ಗೆ ಅಪಾರ ಮಾತಿಗೆ ಕಾರಣವಾಗಿದೆ?
ನನಗೆ ಗೊತ್ತಿದ್ದಂತೆ ನನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಒಂದು ಬದಲಾವಣೆ ಆಗುತ್ತೆ ಎಂದುಕೊಂಡಿದ್ದೆ ಆದರೆ ಇಷ್ಟೆಲ್ಲ ಆಗುತ್ತದೆ ಎಂದುಕೊಂಡಿರಲಿಲ್ಲ. ನಾಟಕ ಮಾಡಿಕೊಂಡು ಅಲ್ಲಿ ಇಲ್ಲಿ ಮಾತಾಡಿಕೊಂಡು ಇದ್ದೆ. ಆದರೆ ಈ ಪ್ರಶಸ್ತಿ ಕೊಟ್ಟು ಮಾತನಾಡದ ಹಾಗೆ ಮಾಡಿದ್ದಾರೆ. ಒಂದು ರಾಜ್ಯ ಪ್ರಶಸ್ತಿ ಸಿಗಲಪ್ಪ ಅಂದುಕೊಂಡಿದ್ದವನು ನಾನು. ಈಗ ಕೆಲವು ನಿರ್ಮಾಪಕರು–ನಿರ್ದೇಶಕರು ಇವನ ಕೈಯಲ್ಲಿ ಈ ಪಾತ್ರ ಮಾಡಿಸಬಹುದು ಎಂದರೆ, ಅದು ಸಾಧ್ಯವಿಲ್ಲ ಎಲ್ಲ ಪಾತ್ರವನ್ನೂ ಮಾಡುತ್ತಾನೆ ಎಂದು ಕೆಲವರು. ಹೀಗೆ ಅವರವರ ಭಾವಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ. ಸದ್ಯ ಮಾತನಾಡುತ್ತಿದ್ದಾರಲ್ಲ ಎನ್ನುವುದೇ ಖುಷಿ!

ಎಲೆ ಅಡಿಕೆ ಚೀಲದ ಕಳ್ಳ
ಹೊಸದುರ್ಗದ ಬಸ್‌ ನಿಲ್ದಾಣ. ಏನಾದರೂ ತಿನ್ನಬೇಕಿತ್ತು. ಅಮ್ಮನನ್ನು ಎಷ್ಟು ಕೇಳಿದರೂ ದುಡ್ಡು ಕೊಡಲಿಲ್ಲ. ಅಷ್ಟರಲ್ಲಿ ಒಬ್ಬ ಅಜ್ಜಿ ಎಲೆ ಅಡಿಕೆ ಚೀಲ ಬಿಚ್ಚಿ ಎಲೆ ಅಡಿಕೆ ಹಾಕಿಕೊಳ್ಳುತ್ತಿದ್ದರು. ನಾನು ಆ ಚೀಲವನ್ನು ಕದ್ದು ಬಿಟ್ಟೆ. 70 ರೂಪಾಯಿ ಇತ್ತು. ಅಜ್ಜಿ ‘ಅಯ್ಯೋ ನನ್ನ ಚೀಲ ಕೊಡ್ರಪ್ಪ’ ಎಂದರು. ಯಾರ ಹತ್ತಿರವೋ ಸಾಲ ತೆಗೆದುಕೊಂಡು ಬಸ್ಸಿಗೆ ಹೋದರು. ಮನೆಗೆ ಬಂದ ನಂತರ ಅಮ್ಮನಿಗೆ ಈ ಬಗ್ಗೆ ಹೇಳಿದೆ ಒದೆ ಸರಿಯಾಗಿ ಬಿತ್ತು.

ಸಾಮಾನ್ಯವಾಗಿ ಬಯಲು ಸೀಮೆಯಲ್ಲಿ ಎತ್ತೋಟಕ್ಕೆ ಹೋಗುತ್ತಾರೆ (ಬೆಳಗಿನ ಜಾವ ತೋಟಕ್ಕೆ ಹೋಗುವುದು). ನಮಗೆ ತೋಟ ಇರಲಿಲ್ಲ. ನಾನು ಬೆಳಿಗ್ಗೆ ಐದು ಗಂಟೆಗೆ ಎದ್ದು ಕತ್ತಲೆಯಲ್ಲಿ ತೋಟಗಳಿಗೆ ಹೋಗಿ ಬಿದ್ದ ತೆಂಗಿನ ಕಾಯಿಗಳನ್ನು ಕದ್ದು ಮನೆಗೆ ತರುತ್ತಿದ್ದೆ. ಎತ್ತೋಟಕ್ಕೆ ಹೋದ ರೈತರಿಗೆ ಕಾಯಿ ಸಿಕ್ಕುತ್ತಿರಲಿಲ್ಲ.

ಒಂದು ದಿನ ಪಟೇಲರು ಮನೆ ಹತ್ತಿರ ಬಂದರು. ಇವರಿಗೆ ತೆಂಗಿನ ತೋಟ ಇಲ್ಲ. ಇಷ್ಟೊಂದು ತೆಂಗಿನ ಕಾಯಿ ಎಲ್ಲಿಂದ ಬಂದಿತು ಎಂದರು. ‘ನೋಡಿ ಮೊದಲು ಇವನಿಗೆ ಬುದ್ಧಿ  ಕಲಿಸಿ. ಎಷ್ಟು ಹೇಳಿದರೂ ಕೇಳಲ್ಲ’ ಎಂದು ನಿಜವನ್ನು ಹೇಳಿದರು. ಬೇರೆಯವರ ತೋಟಗಳಿಂದ ತೆಂಗಿನ ಕಾಯಿ ತರಬಾರದು ಎಂದು ಒಂದು ದಿನ ಕೈ ಕಟ್ಟಿ ಕಾರದ ಪುಡಿ ಘಾಟು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT