ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನಕ್ಕೆ ಹೋದಾಗ...

Last Updated 13 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸಂದರ್ಶನಕ್ಕೆ ಹೊರಡಲು ಸಂಪೂರ್ಣವಾಗಿ ಸಜ್ಜಾದ ನಂತರವೂ ಒಂದು ಆತಂಕ, ನಡುಕ ಮನಸಿನೊಳಗೆ ಇದ್ದೇ ಇರುತ್ತದೆ. ಕೆಲಸ ಸಿಗುವುದೇ ಎಂಬ ಆತಂಕದೊಡನೆ ಹೋದರೆ, ಕಾಲು ನಡುಗುವುದು ಸಾಮಾನ್ಯ. ಸಿಕ್ಕೇ ಸಿಗುವುದು ಎಂಬ ಅತಿ ಅಹಂಕಾರದಿಂದ ಹೋದರೂ ನಿರಾಸೆ ಕಟ್ಟಿಟ್ಟ ಬುತ್ತಿ. ಸಂದರ್ಶನಕ್ಕೆ ಹೋದ ನಂತರ ಹೇಗಿರಬೇಕು ನಿಮ್ಮ ವರ್ತನೆ? ಇಲ್ಲಿದೆ ನೋಡಿ ಮಾಹಿತಿ.

*ಸಂದರ್ಶನದ ಸ್ಥಳ ತಲುಪಿದ ತಕ್ಷಣ ಅಲ್ಲಿರುವ ಅಭ್ಯರ್ಥಿಗಳ ಸಾಲು ನೋಡಿ ಕಂಗೆಡಬೇಡಿ. ಎಲ್ಲರೊಂದಿಗೆ ಮಾತಿಗಿಳಿಯಬೇಡಿ. ಉಡಾಫೆತನ ಬೇಡ, ಬಡಾಯಿ ಕೊಚ್ಚಿಕೊಳ್ಳುವುದೂ ಬೇಡ. ಅಗತ್ಯವಿದ್ದರೆ ಮೆಲುದನಿಯಲ್ಲಿ ಮಾತಿರಲಿ. ಸೌಹಾರ್ದದ ನಗೆ ಇರಲಿ.  ನಿಮ್ಮ ಸರದಿಗೆ ತಾಳ್ಮೆಯಿಂದ ಕಾಯುತ್ತಿರಿ. ಪದೇ ಪದೇ ವಾಚ್‌ ನೋಡುವುದು, ಚಡಪಡಿಸುವುದು ಬೇಡ.

*ನಿಮ್ಮ ಸರದಿ ಬಂದು ಹೆಸರು ಕರೆದ ತಕ್ಷಣ ಗಲಿಬಿಲಿಗೊಳ್ಳಬೇಡಿ. ಅವಸರದಿಂದ ಓಡಬೇಡಿ. ಆತ್ಮವಿಶ್ವಾಸದಿಂದ ಕೊಠಡಿ ಬಳಿ ಹೋಗಿ. ತಕ್ಷಣ ಒಳ ನುಗ್ಗದೇ ‘ಮೇ ಐ ಕಮಿನ್‌’ ಎಂತಲೋ, ‘ಒಳಗೆ ಬರಬಹುದೇ’ ಎಂದು ವಿನಮ್ರಪೂರ್ವಕವಾಗಿ ಕೇಳಿ. ಒಳ ಹೋದ ತಕ್ಷಣ ಎಲ್ಲರಿಗೂ  ನಮಸ್ಕಾರ ಸಲ್ಲಿಸಿ. ಅಥವಾ ಸಂದರ್ಶಕರ ಸೀಟಿನಲ್ಲಿ ಇರುವ ಎಲ್ಲರಿಗೂ ಕಣ್ಣಿನಿಂದಲೇ ಅಭಿನಂದನೆ ಸಲ್ಲಿಸಿ. ಕೈ ಕುಲುಕುವ  ಸಂದರ್ಭ ಬಂದರೆ ಕೈಗಳು ಮೇಲ್ಮುಖವಾಗಿ ಇರುವಂತೆ ನೋಡಿಕೊಳ್ಳುವುದು ಪ್ರಾಮಾಣಿಕತೆಯನ್ನು ತೋರಿಸುತ್ತದೆ ಎನ್ನುತ್ತಾರೆ ಮನಶಾಸ್ತ್ರಜ್ಞರು.
ಒಂದು ಮಾತು ನೆನಪಿರಲಿ. ಕೊಠಡಿಯೊಳಗೆ ನೀವು ಹೆಜ್ಜೆ ಇಡುತ್ತಿದ್ದಂತೆಯೇ ನಿಮ್ಮ ಪರೀಕ್ಷೆ ಆರಂಭವಾಗುತ್ತದೆ. ಆದ್ದರಿಂದ ಡ್ರೆಸ್‌ ಸರಿಮಾಡಿಕೊಳ್ಳುವುದು, ಕೂದಲು ಬಾಚುವುದು, ಕೈ ಆಡಿಸುವುದು ಅಸಮಂಜಸ ವರ್ತನೆ ಎನ್ನಿಸಲೂಬಹುದು. 

*ಒಮ್ಮಿಂದೊಮ್ಮೆಲೆ ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ಅಪೇಕ್ಷಣೀಯ ವರ್ತನೆ ಅಲ್ಲ.  ಕೂರಲು ಹೇಳುವವರೆಗೂ ಕಾಯಬೇಕು. ಕೈಯಲ್ಲಿ ಇರುವ ಫೈಲ್‌ಗಳನ್ನು ಅಲ್ಲಿರುವ ಮೇಜಿನ ಮೇಲೆ ನಯವಾಗಿ ಇರಿಸಿ. ಕೈಯಲ್ಲಿ ಪರ್ಸ್, ಬ್ಯಾಗ್‌, ಬ್ರೀಫ್‌ಕೇಸ್ ಏನಾದರೂ ಇದ್ದಲ್ಲಿ ಅದನ್ನು ಸಾಮಾನ್ಯವಾಗಿ ಕಾಲ ಮೇಲೆ ಇಟ್ಟುಕೊಳ್ಳುವುದು ರೂಢಿ. ಆದರೆ ಸಂದರ್ಶನದ ವೇಳೆ ಅವುಗಳನ್ನೆಲ್ಲ ನೆಲದ ಮೇಲಿಟ್ಟು ನಿರಾಳವಾಗಿ ಕುಳಿತುಕೊಳ್ಳಿ.

*ನೀವು ಕುಳಿತುಕೊಳ್ಳುವ ಭಂಗಿ ಕೂಡ ಉದ್ಯೋಗದತ್ತ ಒಂದು ಹೆಜ್ಜೆಯಾದೀತು ಎನ್ನುವುದು ನೆನಪಿರಲಿ. ನೇರವಾಗಿ ಕುಳಿತುಕೊಳ್ಳಿ, ಎರಡೂ ಪಾದಗಳು ನೆಲಕ್ಕೆ ತಾಗುತ್ತಿರಲಿ. ಕಾಲನ್ನು ಹಿಂದಕ್ಕೆ ಬಗ್ಗಿಸಿ ಕುಳಿತುಕೊಳ್ಳುವುದು ಸರಿಯಲ್ಲ. ಅದು ನೀವು ಭಯಭೀತರಾಗಿದ್ದೀರಿ ಎಂದು ತೋರಿಸುತ್ತದೆ. ಹಿಂದಕ್ಕೆ ಒರಗಿ ಕಾಲುಚಾಚಿ ಕುಳಿತರೆ ನಿಮಗೆ ಬೇಸರವಾಗಿದೆ ಎಂಬುದನ್ನು ತೋರಿಸುತ್ತದೆ. ಕಾಲನ್ನು ಮುಂದಕ್ಕೆ ಬಾಗಿದರೆ ಆಕ್ರಮಣಕಾರಿ ಪ್ರವೃತ್ತಿ ತೋರಿಸುತ್ತದೆ ಎನ್ನುತ್ತದೆ ಮನಃಶಾಸ್ತ್ರ.

ತಲೆಯ ಬಗ್ಗೆಯೂ ಗಮನ ಇರಲಿ. ಸಂದರ್ಶನಕಾರರ ಎದುರು ತಲೆ ಕೆಳಗೆ ಮಾಡಿ ಕುಳಿತುಕೊಳ್ಳಬಾರದು. ಇದು ನಕಾರಾತ್ಮಕ
ಮನೋಭಾವ ತೋರಿಸುತ್ತದೆ. ತಲೆ ನೇರವಾಗಿರಲಿ.  ತಲೆಯನ್ನು ತುಂಬಾ ಸಲ ಅಲುಗಾಡಿಸಿದರೆ ಅದು ಭಯದ ಸಂಕೇತ.

ಸಂದರ್ಶನ ಆರಂಭವಾದ ಮೇಲೆ...
ಸಂದರ್ಶನ ಆರಂಭವಾದ ಮೇಲೆ ಒಂದಿಷ್ಟು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇಲ್ಲಿ ಬಹು ಮುಖ್ಯವಾದುದು ಆಂಗಿಕ ಭಾಷೆ (ಬಾಡಿ ಲಾಂಗ್ವೇಜ್‌). ಸ್ವಾಭಾವಿಕ ಆಂಗಿಕ ಭಾಷೆ ಇರಲಿ. ಇದು ಅತಿಯಾಗಿ ಸಂದರ್ಶಕರ ಮೇಲೆ ಪರಿಣಾಮ ಬೀರಲು ಹೋದರೆ ಎಡವಟ್ಟಾಗಬಹುದು. ಏಕೆಂದರೆ ನಿಮ್ಮ ಈ ಹಾವಭಾವಗಳಿಂದ ಆಲೋಚನೆಗಳನ್ನು ಅರಿಯಬಹುದು. ಆದ್ದರಿಂದ, ಆಂಗಿಕ ಭಾಷೆಗೂ, ಆಲೋಚನೆಗಳಿಗೂ ಸಾಮ್ಯತೆಯಿರಬೇಕು.
*ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ, ಆತ್ಮವಿಶ್ವಾಸದಿಂದ ಉತ್ತರಿಸಿ.

*ಸಂದರ್ಶನಕಾರರು ಕೇಳುವ ಪ್ರಶ್ನೆಗಳಿಗೆ ನಿಮಗೆ ಉತ್ತರ ಗೊತ್ತಿರಲಿ, ಇಲ್ಲದೇ ಇರಲಿ ಅದನ್ನು ನಿಮ್ಮ ಆಂಗಿಕ ಭಾಷೆಯಿಂದ ತೋರಿಸಬೇಡಿ. ಕಣ್ಣುಗಳನ್ನು ಹೊರಳಿಸುವುದು ಅಥವಾ ಬೇರೆಲ್ಲೋ ನೋಡುವುದು, ಕೆಳಕ್ಕೆ ನೋಡುವುದು ಸರಿಯಲ್ಲ. ಇದರಿಂದ ನಿಮ್ಮ ಬಗ್ಗೆ ನಿಮಗೆ ಆತ್ಮವಿಶ್ವಾಸ ಇಲ್ಲ ಎನ್ನುವುದು ತೋರಿಸುತ್ತದೆ. ಹಾಗೆಯೇ ಪ್ರಶ್ನೆ ಕೇಳುತ್ತಿರುವವರನ್ನು ಬಿಟ್ಟು ಬೇರೆಯ ವ್ಯಕ್ತಿಗಳನ್ನು ದಿಟ್ಟಿಸಿ ನೋಡಬೇಡಿ.

*ತೋಳು ಮತ್ತು ಕೈಗಳನ್ನು ಕೂಡ ಅಲ್ಲಾಡಿಸುವುದಾಗಲೀ, ಬಿಗಿಯಾಗಿ ಹಿಡಿದುಕೊಂಡು ಕುಳಿತುಕೊಳ್ಳುವುದಾಗಲೀ, ಭುಜಗಳನ್ನು ಕುಣಿಸುವುದಾಗಲೀ ಸರಿಯಲ್ಲ. ನೀವು ತೀರಾ ಒತ್ತಡಕ್ಕೆ ಒಳಗಾಗಿದ್ದೀರಿ ಎನ್ನುವುದನ್ನು ಇದು ತೋರಿಸುತ್ತದೆ.

*ಕೇಳುವ ಪ್ರಶ್ನೆಗಳಿಗೆ ಸ್ಪಷ್ಟ ಉಚ್ಚಾರಣೆಯಿಂದ, ನೇರವಾಗಿ ಸರಳವಾಗಿ ಉತ್ತರಿಸಿ. ಅರೆಬರೆ ವಾಕ್ಯಗಳನ್ನು ಹೇಳುವುದಾದಗಲೀ, ಉತ್ತರ ನುಂಗುತ್ತ ಹೇಳುವುದಾಗಲೀ ಸಲ್ಲದು. ಪ್ರಶ್ನೆಗಳಿಗೆ ನಿಮ್ಮ ಉತ್ತರ ಸಾವಧಾನದಿಂದ ಕೂಡಿರಲಿ. ತುಂಬಾ ಟೆನ್ಷನ್‌ ಮಾಡಿಕೊಂಡರೆ ನಿಮ್ಮ ಅಪ್ಪನ ಹೆಸರು ಕೇಳಿದಾಗ ಅಮ್ಮನ ಹೆಸರು ಹೇಳುವ ಸಾಧ್ಯತೆಯೂ ಇದೆ. ಯಾವುದೋ ಸಿಂಪಲ್‌ ಪ್ರಶ್ನೆ ಕೇಳಿದಾಗ ‘ಇದೆಂಥ ಸಿಲ್ಲಿ ಪ್ರಶ್ನೆಯಪ್ಪ‘ ಎಂದು ನಿಮ್ಮ ಮುಖದಲ್ಲಿ ಉದಾಸೀನ ಭಾವ ಕಾಣಿಸಬೇಡಿ. ನಿಮಗೆ ಸಿಲ್ಲಿ ಎನಿಸುವ ಇಂತಹ ಪ್ರಶ್ನೆ ಕೇಳುವ ಹಿಂದೆಯೂ ಸಂದರ್ಶಕರದ್ದು ಯಾವುದೋ ಉದ್ದೇಶ ಇರಲೂಬಹುದು.

*ಯಾವುದೇ ವ್ಯಕ್ತಿಯ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿದಾಗ ಜಾಗೃತೆಯಿಂದ ಉತ್ತರಿಸಿ. ಆ ವ್ಯಕ್ತಿಯ ಬಗ್ಗೆ ನಿಮಗೆ ವೈಯಕ್ತಿಕವಾಗಿ ದ್ವೇಷ ಇರಬಹುದು ಅಥವಾ ಆ ವ್ಯಕ್ತಿಯ ಸ್ವಭಾವ ನಿಮಗೆ ಹಿಡಿಸದೇ ಇರಬಹುದು. ಆದರೆ ನಿಮ್ಮ ಉತ್ತರದಲ್ಲಿ ಆ ವ್ಯಕ್ತಿಯ ಬಗ್ಗೆ ನಿಂದನೆ ಇರಬಾರದು. ಆ ವ್ಯಕ್ತಿ ಇಷ್ಟವಾಗದಿದ್ದರೆ ಏಕೆ ಇಷ್ಟ ಆಗುವುದಿಲ್ಲ ಎಂದು ಸಂದರ್ಶಕರಿಗೆ ಮನವರಿಕೆ ಆಗುವಂತೆ ಹೇಳಿ ವಿನಾ ಅವಾಚ್ಯ ಶಬ್ದ ಅಥವಾ ನಿಂದನಾರ್ಹ ಪದಗಳ ಬಳಕೆ ಸಲ್ಲದು.

*ಅರ್ಜಿ ಗುಜರಾಯಿಸುವಾಗ ನಿಮ್ಮ ಬಗ್ಗೆ ಏನೇನೋ ಮಾಹಿತಿ ಬರೆದಿರುತ್ತೀರಿ. ಸಂದರ್ಶನಕ್ಕೆ ಹೋಗುವ ಪೂರ್ವದಲ್ಲಿ ಆ ಬಗ್ಗೆ ಇನ್ನೊಮ್ಮೆ ಸರಿಯಾಗಿ ಓದಿಕೊಂಡು ಹೋಗಿ. ನಿಮ್ಮ ಅರ್ಜಿಯನ್ನು ಕೈಯಲ್ಲಿ ಹಿಡಿದುಕೊಂಡು ಸಂದರ್ಶಕರು ಆ ಬಗ್ಗೆ ಪ್ರಶ್ನೆ ಕೇಳಿದರೆ ತಪ್ಪು ಉತ್ತರ ಕೊಡದ ಹಾಗೆ ಎಚ್ಚರಿಕೆವಹಿಸಿ.

*ಸಂದರ್ಶಕರು ಕೇಳಿದ ಪ್ರಶ್ನೆ ನಿಮಗೆ ತಿಳಿದಿಲ್ಲ ಎಂದಿಟ್ಟುಕೊಳ್ಳಿ. ಆ ಸಂದರ್ಭದಲ್ಲಿ ಊಹಾತ್ಮಕ ಉತ್ತರ ಕೊಡುವುದು ಸರಿಯಲ್ಲ.  ‘ಕ್ಷಮಿಸಿ, ನನಗೆ ತಿಳಿದಿಲ್ಲ’ ಎನ್ನಿ ಸಾಕು. ಹೀಗೆ ಒಂದಿಷ್ಟು ಮೂಲ ಮಾಹಿತಿಗಳನ್ನು ಗಮನ ಇಟ್ಟುಕೊಂಡರೆ ಕಂಪೆನಿಯ ಬಾಗಿಲು ಸದಾ ನಿಮಗೆ ತೆರೆದಿರುತ್ತದೆ.

*ಉತ್ತರ ಪ್ರಾಮಾಣಿಕವಾಗಿ ಇಲ್ಲದಿದ್ದರೆ ತೊಂದರೆಗೆ ಸಿಲುಕೀರಿ ಜೋಕೆ. ಉದಾಹರಣೆಗೆ ನಿಮ್ಮ ಹವ್ಯಾಸ ಏನು ಎಂದು ಕೇಳಬಹುದು ಅಥವಾ ನಿಮಗೆ ಯಾವ ಲೇಖಕ ಇಷ್ಟ ಎಂದು ಕೇಳಬಹುದು. ನೀವು ‘ನನ್ನ ಹವ್ಯಾಸ ಪುಸ್ತಕ ಓದುವುದು’ ಎಂದೋ ನನಗೆ ಇಂತಹ ಲೇಖಕ ಇಷ್ಟ ಎಂದು ಯಾವುದೋ ಪ್ರಸಿದ್ಧ ಲೇಖಕರ ಹೆಸರು ಹೇಳಿ ಸಂದರ್ಶಕರನ್ನು ಮೆಚ್ಚಿಸುವ ಯತ್ನ ಮಾಡದಿರಿ ಆ ಲೇಖಕ ಬರೆದಿರುವ ಯಾವುದೋ ಪ್ರಸಿದ್ಧ ಪುಸ್ತಕದ ಬಗ್ಗೆ ಮಾಹಿತಿ ಕೇಳಿದರೆ ನಿಮ್ಮ ಕಥೆ ಅಷ್ಟೇ; ಅದಕ್ಕೆ ಸಂದರ್ಶನದಲ್ಲಿ ಸುಳ್ಳಿಗೆ ಅವಕಾಶ ನೀಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT