ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಜ ಅನ್ನೋದು ದೊಡ್ಡದು ಕನಾ...

Last Updated 5 ಮೇ 2016, 19:30 IST
ಅಕ್ಷರ ಗಾತ್ರ

ನನ್ನ ಅಜ್ಜಿ ತೀರಿಕೊಂಡಿದ್ದರು. ಅವರ ತಿಥಿಗೆ ಕರೆಯಲು ಹೋದಾಗ ತಮ್ಮೇಗೌಡ ಸಿಕ್ಕರು. ಸಿನಿಮಾದಲ್ಲಿ ನಟಿಸ್ತೀರಾ ಎಂದು ಕೇಳಿದಾಗ ಅವರಿಗೆ ತುಂಬಾ ಖುಷಿಯಾಯ್ತು. ಚೆನ್ನಾಗೇ ಅಭಿನಯಿಸಿದರು. ಅವಕಾಶ ಸಿಕ್ಕರೆ ಮತ್ತೆ ನಟಿಸುವ ಆಸೆ ಅವರಿಗಿದೆ.

ಸೆಂಚುರಿಗೌಡರಿಗೆ ಈಗ 98 ವರ್ಷ. ಈಗಲೂ ತೋಟಕ್ಕೆ ಹೋಗುತ್ತಾರೆ. ಚಿತ್ರೀಕರಣ ಸಂದರ್ಭದಲ್ಲಿ ಮಾತ್ರ ಅವರಿಂದ ಬೆಳಿಗ್ಗೆ ಹತ್ತು ಗಂಟೆ ನಂತರ ಕೆಲಸ ಮಾಡಿಸುತ್ತಿರಲಿಲ್ಲ. ಬಿಸಿಲಲ್ಲಿ ಚಿತ್ರೀಕರಣ ನಡೆದಾಗ ಕೊಡೆ ಹಿಡಿದಿದ್ದೂ ಇದೆ. ಯಾವುದಾದರೂ ಸೀನ್ ಸರಿಯಾಗಿಲ್ಲ ಎನ್ನಿಸಿದರೆ, ‘ಏ, ಇನ್ನೊಂದ್ಸಲ ತಗೊಳ್ರೋ’ ಎನ್ನುವಷ್ಟು ಉತ್ಸಾಹ ಅವರಿಗೆ. ಈ ವಯಸ್ಸಿನಲ್ಲೂ ಇಷ್ಟು ಗಟ್ಟಿಯಾಗಿದ್ದೀನಿ ಅನ್ನೋ ಖುಷಿ. ಈ ಸಿನಿಮಾ ಗಡಿಬಿಡಿಯಲ್ಲಿ ನನ್ನ ತಂಗಿಯ ಮದುವೆಗೆ ಸೆಂಚುರಿ ಗೌಡರನ್ನು ಕರೆದೇ ಇರಲಿಲ್ಲ.

ಆಮೇಲೆ ಒಂದು ದಿನ ಅವರು ನನ್ನ ಹೆಂಡತಿಗೆ ‘ನಿನ್ನ ಗಂಡ ಮದುವೆ ವಿಚಾರ ನನಗೆ ಹೇಳೇ ಇಲ್ಲ. ಅವನು ಮಾಡಿದ್ದು ಸರೀನಾ’ ಎಂದು ಜೋರು ಮಾಡಿದ್ದಾರೆ.

ಸಿನಿಮಾದಲ್ಲಿ ಬಯಲುಸೀಮೆ ಜನರಿದ್ದಾರೆ. ಅವರಲ್ಲಿ ಎರಡು ತಂಡಗಳಿವೆ. ಅದರಲ್ಲಿ ಒಂದು ತಂಡ ನನ್ನನ್ನು ‘ಮಗ’ ಎನ್ನುತ್ತದೆ. ಇನ್ನೊಂದು ತಂಡ ನನ್ನ ಹೆಂಡತಿಯನ್ನು ‘ಮಗಳು’ ಎಂದು ಕರೆಯುತ್ತದೆ. ನಾವೆಲ್ಲ ಅಷ್ಟು ಆತ್ಮೀಯರಾಗಿದ್ದೇವೆ. ಸಿನಿಮಾಕ್ಕಾಗಿ ಅವರು ನಮ್ಮ ಮನೆಯಲ್ಲಿ ಇದ್ದಷ್ಟು ದಿನಗಳೂ ಅವರಿಗೆ ಸುಮ್ಮನೇ ಕೂರಲು ಆಗುತ್ತಿರಲಿಲ್ಲ. ತೋಟಕ್ಕೆ ಹೋಗಿ ಕೆಲಸ ಮಾಡುತ್ತೇನೆ ಎನ್ನುತ್ತಿದ್ದರು.

ನಟನೆಗೆಂದು ಕರೆದುಕೊಂಡು ಬಂದು ತೋಟದ ಕೆಲಸ ಮಾಡಿಸುವುದು ಸರಿಯಲ್ಲ ಎಂದು ನಾನೇ ಬೇಡ ಎನ್ನುತ್ತಿದ್ದೆ. ಆದರೂ ಅವರು ಊರಲ್ಲಿ ನಮ್ಮ ಸಂಬಂಧಿಕರ ಮನೆಗೆಲ್ಲ ಹೋಗಿ ಒಳ್ಳೆಯ ಸಂಬಂಧಿಕರೇ ಆಗಿಬಿಟ್ಟಿದ್ದಾರೆ. ಈಗಲೂ ಅವರ ಮನೆಯ ಹಬ್ಬಕ್ಕೆ ನಮ್ಮನ್ನು ಕರೆಯುತ್ತಾರೆ. ಸಿನಿಮಾದಲ್ಲಿ ತಿಪ್ಪಣ್ಣನ ಪಾತ್ರ ಮಾಡಿದವರ ಮಗಳ ಮದುವೆಗೆ ಈಗ ಆಹ್ವಾನ ಬಂದಿದೆ. ಆ ಮದುವೆಯನ್ನು ನಾವೆಲ್ಲ ಮುಂದೆ ನಡೆಸಿಕೊಡಬೇಕು.

ಇವರೆಲ್ಲರಿಂದ ನಟನೆ ತೆಗೆಸುವುದು ಸುಲಭವಾಗಿರಲಿಲ್ಲ. ಅವರ ದಿನನಿತ್ಯದ ಬದುಕಿನಂತೆ ಸಹಜವಾದ ಅಭಿನಯ ನಮಗೆ ಬೇಕಿತ್ತು. ಕ್ಯಾಮೆರಾ ಎದುರು ನಟಿಸುತ್ತಿದ್ದೇವೆ ಎಂಬ ಭಾವ ಅವರಿಗೆ ಬಾರದಂತೆ ನೋಡಿಕೊಳ್ಳಬೇಕಿತ್ತು. ಉದಾಹರಣೆಗೆ, ಹೊಲಕ್ಕೆ ನೀರು ಹಾಯಿಸಬೇಕು, ಕೊಯ್ಲು ಮಾಡಬೇಕು ಎಂಬ ಚಿಂತೆ ಅವರ ತಲೆಯಲ್ಲಿ ಇದ್ದರೆ ಅವರಿಗೆ ನಟನೆ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಎಷ್ಟೋ ಬಾರಿ ಅವರು ನಟನೆ ಮಾಡುವ ಸಂದರ್ಭದಲ್ಲಿ ಅವರ ತೋಟಕ್ಕೆ ನಾವೇ ಆಳುಗಳನ್ನು ಕಳುಹಿಸಿಕೊಟ್ಟಿದ್ದಿದೆ.

ಅವರು ನಿಶ್ಚಿಂತೆಯಿಂದ ಸಿನಿಮಾದಲ್ಲಿ ತೊಡಗಿಕೊಳ್ಳಲಿ ಎಂಬುದರ ಜೊತೆಗೆ, ನಟಿಸುವಾಗ ಹೊಲದ ಕೆಲಸದ ಚಿಂತೆ ಅವರನ್ನು ಕಾಡಬಾರದು ಎಂಬ ಕಾಳಜಿ ನಮ್ಮದಾಗಿತ್ತು.

ಸೆಂಚುರಿ ಸೌಭಾಗ್ಯ
ನಮ್ಮ ಅಣ್ಣ ಒಂದು ಮದುವೆ ಸಮಾರಂಭಕ್ಕೆ ಹೋಗಿದ್ದ. ಅವನಿಗೆ ನೂರು ವರ್ಷವಾಗಿತ್ತು. ಅವನು ಕಷ್ಟ ಪಡಬಾರದು ಎಂದು ಈರೇಗೌಡರು ಅವನನ್ನು ಕಾರಿನಲ್ಲಿ ಮನೆಗೆ ತಂದುಬಿಟ್ಟಿದ್ದರು. ಆಗ ಅವರು ನನ್ನನ್ನು ನೋಡಿದ್ದರು. ನಂತರ ಸಿನಿಮಾ ಸಿದ್ಧತೆ ನಡೆದಾಗ, ಸೆಂಚುರಿಗೌಡನ ಪಾತ್ರಕ್ಕೆ ನಮ್ಮ ಅಣ್ಣನನ್ನು ಹುಡುಕಿಕೊಂಡು ಬಂದಿದ್ದರು. ಆದರೆ ಆ ವೇಳೆಗೆ ಅಣ್ಣ ತೀರಿಕೊಂಡಿದ್ದರು. ನನಗೂ ತೊಂಬತ್ತೈದು ವರ್ಷ ದಾಟಿತ್ತು. ಆ ಪಾತ್ರಕ್ಕೆ ನಾನೇ ಸರಿ ಎಂದು ನನ್ನನ್ನೇ ಎತ್ತಾಕಿಕೊಂಡು ಹೋದರು.
–ಸಿಂಗ್ರಿ ಗೌಡ (ಸಿನಿಮಾದಲ್ಲಿ ಸೆಂಚುರಿ ಗೌಡ)

ಗೇಲಿ ಮಾಡಿದವರು ಗಪ್‌ಚುಪ್!
ಈರೇಗೌಡ ಅವರೆಲ್ಲ ಕಾರು ತಗೊಂಡು ಸಿನಿಮಾ ಸಂಬಂಧ ಮಾತಾಡುವುದಕ್ಕಾಗಿ ನಮ್ಮ ಮನೆಗೆ ಬರುತ್ತಿದ್ದರು. ಆಗ ಊರಲ್ಲಿ ಕೆಲವರು, ‘ಅವರು ಯಾರು?’ ಎಂದು ಕೇಳುತ್ತಿದ್ದರು. ಮೊದಮೊದಲು ಸಿನಿಮಾ ಸುದ್ದಿ ಕೇಳಿದಾಗ ‘ಇವರೇನು ಸಿನಿಮಾ ಮಾಡ್ತಾರೆ’ ಎಂದು ಜನ ಗೇಲಿ ಮಾಡುತ್ತಿದ್ದರು. ಆಮೇಲಾಮೇಲೆ ಸಿನಿಮಾದವರು ಬಂದಾಗೆಲ್ಲ, ‘ಅವರು ನಮ್ಮ ಸಂಬಂಧಿಕರು. ಬೆಂಗಳೂರಿನಿಂದ ಬಂದಿದ್ದಾರೆ’ ಎಂದು ಸಾಗಹಾಕುತ್ತಿದ್ದೆ. ಯಾವಾಗ ಸಿನಿಮಾಕ್ಕೆ ಎರಡು ಪ್ರಶಸ್ತಿ ಬಂದವಲ್ಲ, ಎಲ್ಲರೂ ಥಂಡಾ ಆಗೋದ್ರು. ಈಗಲೂ ಅಷ್ಟೇ, ಯಾರ ಹತ್ತಿರವೂ ಸಿನಿಮಾ ಬಗ್ಗೆ ಮಾತನಾಡೋಕೇ ಹೋಗಲ್ಲ.

ಸಿನಿಮಾ ಮುಗಿದು ಎಷ್ಟೋ ಸಮಯ ಆಗೋಯ್ತು. ಮೊನ್ನೆ ಒಂದು ದಿನ ಈರೇಗೌಡ ಅವರೆಲ್ಲ ನಮ್ಮ ಮನೆಗೆ ಬಂದಾಗ ರಾತ್ರಿಯಾಗಿತ್ತು, ನನಗೆ ಆರೋಗ್ಯ ಕೆಟ್ಟಿತ್ತು. ನಾವು ಆಸ್ಪತ್ರೆಗೆ ಹೋಗೋದು ಅಪರೂಪ. ಈರೇಗೌಡ ನನ್ನನ್ನು ರಾತ್ರೋ ರಾತ್ರಿ ಆಸ್ಪತ್ರೆಗೆ ಕರೆದೊಯ್ದರು. ಇಲ್ಲದಿದ್ದರೆ ಇಂದು ಮಾತನಾಡಲು ತಮ್ಮೇಗೌಡ ಇರುತ್ತಿರಲಿಲ್ಲ. ನಿಜಕ್ಕೂ ಹೇಳುತ್ತೇನೆ, ನನ್ನ ಹೆತ್ತವರೇ ಇದ್ದರೂ ಅಷ್ಟು ಕಾಳಜಿ ಮಾಡುತ್ತಿದ್ದರೋ ಇಲ್ಲವೋ.
–ತಮ್ಮೇಗೌಡ (ಸಿನಿಮಾದಲ್ಲಿ ತಮ್ಮಣ್ಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT