ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ

ಎಲ್ಲೆಡೆ ಬೆಲೆ ಏರಿಕೆಯ ಬಿಸಿ ನಡುವೆಯೂ ಭಕ್ತಾದಿಗಳಿಂದ ದೇವಿಗೆ ವಿಶೇಷ ಅಲಂಕಾರ, ಪೂಜೆ
Last Updated 29 ಆಗಸ್ಟ್ 2015, 8:58 IST
ಅಕ್ಷರ ಗಾತ್ರ

ರಾಮನಗರ: ವರ ಮಹಾಲಕ್ಷ್ಮಿ ಹಬ್ಬವನ್ನು ನಗರದ ಜನ ಸಂಭ್ರಮದಿಂದ ಆಚರಿಸಿದರು. ಜಿಲ್ಲಾ ಕೇಂದ್ರದ ಹಲವರ ಮನೆಗಳಲ್ಲಿ ಲಕ್ಷ್ಮಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿ ಪೂಜಿಸಲಾಯಿತು.

ದೇವಿಯ ಮೂರ್ತಿ ಮುಂಭಾಗ ಹಣ್ಣು, ಹಂಪಲು ಹಾಗೂ ವಿಶೇಷ ಸಿಹಿ ತಿನಿಸುಗಳನ್ನಿಡಲಾಗಿತ್ತು. ಹಬ್ಬದ ಪ್ರಯುಕ್ತ ಬಹುತೇಕರ ಮನೆಯಲ್ಲಿ ಸಿಹಿ ತಿನಿಸು ಮಾಡಲಾಗಿತ್ತು. ನಗರದ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.
ಸಂಜೆಯಾಗುತ್ತಲೇ ಗೃಹಿಣಿಯರು ಮಕ್ಕಳೊಂದಿಗೆ ನೆರೆ ಹೊರೆಯ ಮನೆಗಳಿಗೆ ಹೋಗಿ ಕುಂಕುಮ ಸ್ವೀಕರಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಮಾಗಡಿ ವರದಿ
ನಿತ್ಯಬಳಕೆಯ ವಸ್ತುಗಳ ಬೆಲೆ ಏರಿಕೆ ನಡುವೆಯೂ  ವರ ಮಹಾಲಕ್ಷ್ಮೀ ಹಬ್ಬವನ್ನು ಸಡಗರ ಸಂಭ್ರಮದಿಂದ ಪಟ್ಟಣದಲ್ಲಿ ಆಚರಿಸಲಾಯಿತು. ಮನೆಗಳಿಗೆ ತಳಿರು ತೋರಣ ಕಟ್ಟಿ, ವರಮಹಾ ಲಕ್ಷ್ಮೀಯನ್ನು ಅಲಂಕರಿಸಿ, ಹೊಸಬಟ್ಟೆ ಧರಿಸಿ, ಪೂಜಿಸಿ, ಮುತ್ತೈದೆಯರು ಮನೆ ಮನೆಗೆ ತೆರಳಿ ಫಲತಾಂಬೂಲ ವಿನಿಮಯ ಮಾಡಿಕೊಂಡರು. ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ಅಲಂಕಾರ ನಡೆಯಿತು.

ಪಟ್ಟಣದಲ್ಲಿ ಮಾರುಕಟ್ಟೆಗೆ ಸ್ಥಳವಿಲ್ಲದ ಕಾರಣ ಕೋಟೆಯ ಪಶ್ಚಿಮ ದಿಕ್ಕಿನಲ್ಲಿ ಇದ್ದ ಕಂದಕವನ್ನು ಮುಚ್ಚಿ ದ್ವಿಮುಖ ರಸ್ತೆ ನಿರ್ಮಿಸಲಾಗಿದೆ. ಪ್ರತಿನಿತ್ಯ ಮುಂಜಾನೆ 4 ಗಂಟೆಗೆ ಗ್ರಾಮೀಣ ಭಾಗದ ರೈತರು ತರಕಾರಿ, ಸೊಪ್ಪು, ಹೂವು, ತಂದು ಫುಟ್‌ಪಾತ್‌ ಮೇಲೆ ಮಾರುವುದು ವಾಡಿಕೆಯಾಗಿದೆ. ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ತಾಜಾ ತರಕಾರಿ, ಹೂವು, ಖರೀದಿಸಲು ಬೆಂಗಳೂರಿನಿಂದ ತರಕಾರಿ ಮಾರಾಟಗಾರರು ಟೆಂಪೋಗಳಲ್ಲಿ ನಿತ್ಯ ಬರುತ್ತಾರೆ.

ಬೆಳಿಗ್ಗೆ 9 ಗಂಟೆಯವರೆಗೆ ರಸ್ತೆಯ ಮೇಲೆ ಯಾವುದೇ ವಾಹನ ಸಂಚರಿಸಲು  ಕಷ್ಟವಾಗುತ್ತದೆ. ವರಮಹಾ ಲಕ್ಷ್ಮೀ ಹಬ್ಬದ ಅಂಗವಾಗಿ ಪಟ್ಟಣದಲ್ಲಿ 40 ಸಾವಿರ ಜನಸಂಖ್ಯೆಯಲ್ಲಿ  ಅಂದಾಜು 2 ಸಾವಿರ ಜನರು ಮಾರುಕಟ್ಟೆಗೆ ತಾಜಾ ತರಕಾರಿ ಹೂವು ಬಾಳೆಕಂಬ ಖರೀದಿಸಲು ಬಂದಿದ್ದರು. ನೂಕುನುಗ್ಗಲು ಉಂಟಾಗಿತ್ತು.

‘ಬೆಲೆ ದುಬಾರಿಯಾಗಿದ್ದರೂ ಸಹಿತ ಸಾಲ ಮಾಡಿಯಾದರೂ ಸಹ ಮನೆಗೆ ಲಕ್ಷ್ಮೀ ಕರೆತರಲು ಸಾಲ ಮಾಡಿ, ತಾವರೆ ಹೂವು, ಖರೀದೀಸಿದ್ದೀವಿ. ವರ್ಷಕ್ಕೆ ಒಂದೇ ಸಲ ವರಮಹಾ ಲಕ್ಷ್ಮೀ ಹಬ್ಬ ಅಲ್ಲವೆ? ಸಾಲ ಮಾಡಿದರೆ ತೀರಿಸೋಣ ಹಬ್ಬ ಮಾಡೋಣ’ ಎಂಬುದು ಹೂವು ಮಾರುವ ಹೊಂಬಾಳಮ್ಮನಪೇಟೆಯ ರಮ್ಯ ಅನಿಸಿಕೆ.

ಸಾತನೂರಿನ ಕಬ್ಬಿನ ಗರಿ ಮತ್ತು ಬಾಳೆಕಂಬ ಮಾರುವ ರೈತ ಹನುಮಯ್ಯನ ಪ್ರಕಾರ ‘ಪೇಟೆ ಜನರ ಬಳಿ ಹಣವಿದೆ. ಹಳ್ಳೀಲಿ ಬಾಳೆಹಣ್ಣು, ಬಾಳೆಕಂಬ ಕಬ್ಬು, ಕುಂಬಳಕಾಯಿ ಇದೆ. ಇದೆಲ್ಲಾ ದೇವರ ದಯೆ ಅಲ್ಲವೇ? ಒಂದು ದಿನ ಸ್ವಲ್ಪ ಜಾಸ್ತಿ ದುಡ್ಡುಕೊಟ್ಟು ಖರೀದಿಸಲಿ, ಕೋಡೋಳು ಲಕ್ಷ್ಮೀ ತಾನೇ? ಗಿಲೀಟು ಮಾಡಬೇಡಿ. ಉದಾರವಾಗಿ ಕೊಡಿ. ದೇವರ ಭಕ್ತಿ ಗಳಿಸಿ’ ಎಂದು ನಗುತ್ತಾರೆ.

ಕಾಕಡ, ಕನಕಾಂಬರ, ಮಲ್ಲಿಗೆ ಹೂವು ಮಾರು ಹೂವಿಗೆ₨150 ರಂತೆ ಮಾರಾಟವಾಗುತ್ತಿದ್ದವು. ನಾಟಿಕೋಳಿ ಮಾತ್ರ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದವು. ಪ್ರತಿಶುಕ್ರವಾರ ಸಂತೆಯಲ್ಲಿ ₨890ಕ್ಕೆ ಮಾರಾಟವಾಗುತ್ತಿದ್ದ, ನಾಟಿಕೋಳಿ. ವರಮಹಾ ಲಕ್ಷ್ಮೀ ಹಬ್ಬದ ಅಂಗವಾಗಿ ₨560ಕ್ಕೆ ಮಾರಾಟವಾದವು.

ಚನ್ನಪಟ್ಟಣ  ವರದಿ
ತಾಲ್ಲೂಕಿನ ಮನೆಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಮನೆಮನೆಗಳಲ್ಲಿ ಲಕ್ಷ್ಮಿ ದೇವತೆಯನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಲಾಯಿತು. ಮಹಿಳೆಯರು, ಮಕ್ಕಳು ಶ್ರದ್ಧಾಭಕ್ತಿಯಿಂದ ದೇವಿಗೆ ಪೂಜೆ ಸಲ್ಲಿಸಿದರು.

ಆನೇಕಲ್‌ ವರದಿ
ಪಟ್ಟಣದಲ್ಲಿ ವರಮಹಾಲಕ್ಷ್ಮೀ ಹಬ್ಬದ ಆಚರಣೆ ಸಂಭ್ರಮ ಸಡಗರಗಳಿಂದ ನೆರವೇರಿತು. ಮನೆಮನೆಗಳಲ್ಲಿ ವರಮಹಾಲಕ್ಷ್ಮೀಯನ್ನು ಕುಳ್ಳರಿಸಿ ಭಕ್ತಿಯನ್ನು ಸಮರ್ಪಿಸಿದ ದೃಶ್ಯ ಸಾಮಾನ್ಯವಾಗಿತ್ತು.

ಮನೆಮನೆಗಳಲ್ಲಿ ವರಮಹಾಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಅಲಂಕಾರ ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಬೆಲೆ ಏರಿಕೆಯ ನಡುವೆಯೂ ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆಯಿರಲಿಲ್ಲ. ತಳಿರು ತೋರಣಗಳಿಂದ ಮನೆಮನೆಗಳನ್ನು ಸಿಂಗರಿಸಿ ಲಕ್ಷ್ಮೀಯ ವ್ರತದ ಮೂಲಕ ಸಂಭ್ರಮಿಸಿದರು.

ಪೂಜೆಯ ನಂತರ ಮುತ್ತೈದೆಯರಿಗೆ ಬಾಗಿನ ಕೊಟ್ಟು ಮಡಿಲಕ್ಕಿ ತುಂಬಿ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಭಕ್ತಿಯಿಂದ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಬಾಗಿನ ನೀಡಿದರೇ ವರಮಹಾಲಕ್ಷ್ಮೀ ಸಂತೃಪ್ತಿಯಾಗಿ ಸಮೃದ್ದಿಯ ವರ ನೀಡುವಳೆಂಬ ಪ್ರತೀತಿಯಿದೆ. ಹಾಗಾಗಿ ಮಹಿಳೆಯರು ಭಕ್ತಿ ಶ್ರದ್ದೆಗಳಿಂದ ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವ ಸಂಪ್ರದಾಯ ನಡೆದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT