ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಪ್ರಚಾರಕನ ಗ್ರಂಥಯಾತ್ರೆ

Last Updated 19 ಆಗಸ್ಟ್ 2015, 19:39 IST
ಅಕ್ಷರ ಗಾತ್ರ

ಗ್ರಾನ್ವಿಲ್ ಆಸ್ಟಿನ್ ನಮ್ಮನ್ನಗಲಿ ಒಂದು ವರ್ಷವಾಯಿತು. ವಿಪರ್ಯಾಸವೆಂದರೆ ಅವರು  ಯಾರು, ಅವರ ಸಾಧನೆ ಏನು, ಅದು ನಮಗೆ ಹೇಗೆ ಪ್ರಸ್ತುತವೆನ್ನುವುದು ನಮ್ಮ ಅರಿವಿನ ಅಂಚಿಗೆ ಸರಿದುಹೋಗಿದೆ. ಪ್ರತಿ ಭಾರತೀಯನೂ ಅವಶ್ಯವಾಗಿ ಓದಲೇಬೇಕಾದ ‘The Indian Constitution: Cornerstone of a Nation’ (1966) ಮತ್ತು ‘ Working a Democratic Constitution: A History of the Indian Experience’ಗಳ (1999) ಗ್ರಂಥಕರ್ತ ಅವರು.

1927ರಲ್ಲಿ ಜನಿಸಿದ ಆಸ್ಟಿನ್ ಅಮೆರಿಕ ಮೂಲದವರು. ಆಧುನಿಕ ಇತಿಹಾಸದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಆಕ್‌್ಸಫರ್ಡ್‌ಗೆ ಬಂದಾಗ ಬಹುಶಃ ಅವರಿಗೆ ಭಾರತದ ಬಗ್ಗೆ ಆಸಕ್ತಿ ಹುಟ್ಟಿರಬೇಕು. ನಂತರ ತಮ್ಮ ಸಂಶೋಧನೆಗೆ ಅವರು ಆಯ್ಕೆ ಮಾಡಿಕೊಂಡ ವಿಷಯ ‘ಭಾರತ ಸಂವಿಧಾನ ಮತ್ತು ಪ್ರಜಾತಂತ್ರ’. 1960ರ ಆರಂಭದಲ್ಲಿ ಎಲ್ಲರಲ್ಲೂ ಇದ್ದ ಪ್ರಶ್ನೆ ‘ನೆಹರೂ ನಂತರ ಯಾರು?’ ಭಾರತದ ಪ್ರಜಾತಂತ್ರದ ಬದ್ಧತೆ ಎಷ್ಟರಮಟ್ಟಿನದು ಮತ್ತು ಇನ್ನೆಷ್ಟು ದಿನಗಳ ಕಾಲ ಈ ಬದ್ಧತೆ ಮುಂದುವರಿಯುತ್ತದೆ ಎಂದು ಇಡೀ ವಿಶ್ವವೇ ಉಸಿರು ಬಿಗಿ ಹಿಡಿದು ಕಾದು ನೋಡುತ್ತಿತ್ತು.

ಆಸ್ಟಿನ್ ಭಾರತಕ್ಕೆ ಬಂದ ಕೆಲಕಾಲದಲ್ಲಿ ನೆಹರೂ ತೀರಿಕೊಂಡರು. ಆಗ ಶಾಂತಿಯುತವಾಗಿ ಮುಂದಿನ ಮುಖಂಡ (ಲಾಲ್‌ಬಹದ್ದೂರ್‌ ಶಾಸ್ತ್ರಿ) ಪದ ಸ್ವೀಕಾರ ಮಾಡಿದ್ದು, ಭಾರತ-ಚೀನಾ ಯುದ್ಧದ ಸಮಯದಲ್ಲಿ ಕೂಡ ಸೇನಾಡಳಿತ ಹೇರದಿರುವಂತಹ ಹಲವಾರು ಸಂಗತಿಗಳು ಮತ್ತು ವ್ಯಕ್ತಿಗಳನ್ನು ನೋಡಿ ಆಸ್ಟಿನ್‌ ಅವರಿಗೆ ಭಾರತದ ಸಂವಿಧಾನ ಹಾಗೂ ಪ್ರಜಾತಂತ್ರದ ಬಗ್ಗೆ ಗೌರವಾದರ ಮೂಡುತ್ತದೆ.  ಅವರ ಮೇರುಕೃತಿ ‘...Cornerstone’ನಲ್ಲಿ, ಭಾರತದ ಸಾಂವಿಧಾನಿಕ ಸಭೆಯ ಚರ್ಚೆಗಳು ಹೇಗೆ ನಡೆದವು, ಸಭೆಯ ಆಚೆ ನಡೆದ ಮಾತುಕತೆ, ಸಮಜಾಯಿಷಿಗಳು ಹೇಗೆ ಸಭೆಯೊಳಗಿನ ಚರ್ಚೆಯನ್ನು ರೂಪಿಸಿದವು, ಯಾರ ಮಾತಿಗೆ ಎಷ್ಟು ಬೆಲೆಯಿತ್ತು, ಯಾರು ಮುಂಚೂಣಿಯಲ್ಲಿದ್ದು ಸಭೆಯ ಕಲಾಪಗಳನ್ನು ಶಾಂತಿ, ಸೌಹಾರ್ದದಿಂದ ಮುನ್ನಡೆಸಿದರು, ಸಮಾಜದ ಭಿನ್ನ ಅಂಗಗಳು ಹೇಗೆ ತಮ್ಮ ತಮ್ಮ  ಆಶಯದ ಸಾಕಾರಕ್ಕೆ ಸಕ್ರಿಯವಾಗಿ ಭಾಗವಹಿಸಿದವು  ಎಂಬುದನ್ನು ಆಮೂಲಾಗ್ರವಾಗಿ ವಿವರಿಸಲಾಗಿದೆ.

ಈ ಕಾರ್ಯಕ್ಕೆ ಮೂಲ ಸಾಮಗ್ರಿ ಸಂಪಾದಿಸುವುದು ಆಸ್ಟಿನ್‌ ಅವರಿಗೆ ಹರಸಾಹಸವೇ ಆಗಿತ್ತು. ಸಂಬಂಧಪಟ್ಟ ಕಾಗದಪತ್ರಗಳನ್ನು ನೋಡಲು ರಾಷ್ಟ್ರೀಯ ಪತ್ರಾಗಾರ ವಿಭಾಗ ಅವರಿಗೆ ಅನುಮತಿ ನೀಡಲಿಲ್ಲ. ಈ ಇಕ್ಕಟ್ಟಿನ ಸಂದರ್ಭದಲ್ಲಿ ಅವರಿಗೆ ನೆರವಾದವರು ಬಾಬು ರಾಜೇಂದ್ರ ಪ್ರಸಾದ್. ಅವರು ತಮ್ಮ ಕಡತಗಳನ್ನು ಪರಿಶೀಲಿಸಲು ಒಂದು ದಿನದ ಅವಕಾಶ ನೀಡಿದರು. ಇದಲ್ಲದೆ, ಸಾಂವಿಧಾನಿಕ ಸಭೆಯಲ್ಲಿ ಭಾಗವಹಿಸಿದ್ದ ಕೆಲವರು ಇನ್ನೂ ಜೀವಂತವಾಗಿದ್ದರು. ಅವರು ತಮ್ಮ ಅನಿಸಿಕೆಗಳು, ಸಭಾ ನಡವಳಿಕೆಯ ಬಗೆಗಿನ ಭಿನ್ನ ದೃಷ್ಟಿಕೋನಗಳನ್ನು ಆಸ್ಟಿನ್ ಅವರ ಜೊತೆ ಹಂಚಿಕೊಳ್ಳಲು ಕಾತರರಾಗಿದ್ದರು.

ಆಸ್ಟಿನ್‌ ಈ ಪ್ರೌಢ ಪ್ರಬಂಧವನ್ನು ಮಂಡಿಸಿ 1965ರಲ್ಲಿ Pಪಿಎಚ್‌.ಡಿ. ಪದವಿ ಪಡೆದರು. 1966ರಲ್ಲಿ ಆಕ್‌್ಸಫರ್ಡ್‌ ಇದನ್ನು ಗ್ರಂಥರೂಪದಲ್ಲಿ ಹೊರತಂದಿತು. ಪ್ರಕಟವಾದ  ಕೂಡಲೇ ಪಂಡಿತ ಪಾಮರರಿಬ್ಬರ ಮೆಚ್ಚುಗೆಯನ್ನೂ ಈ ಗ್ರಂಥ ಪಡೆಯಿತು. ಆದರೆ ಇಂತಹ ಸಂಶೋಧನಾ ಕೃತಿಯಲ್ಲಿ ನ್ಯೂನತೆಗಳಿಲ್ಲದೇ ಇರಲಿಲ್ಲ. ವಿಮರ್ಶಕರು ತಿಳಿಸಿರುವಂತೆ, ಕೃತಿಯ ಒಟ್ಟು ಧೋರಣೆ ಒಂದು ಭವ್ಯ ರಾಷ್ಟ್ರ ನಿರ್ಮಾಣದ ಕಲ್ಪನೆಯನ್ನು ಬಲಪಡಿಸುವಂಥದ್ದು. ಸಮಾಜದ ಅನೇಕ ಗುಂಪುಗಳು ಈ ಸಭೆಯ ಚರ್ಚೆಗಳಿಂದ ಹೊರಗಿದ್ದವು ಎನ್ನುವುದನ್ನು ಕೃತಿಯು ಗುರುತಿಸಿಲ್ಲ. ಹಾಗೆಯೇ ಮಹಿಳೆಯರು ಹಾಗೂ ಕೆಲವು ಅಲ್ಪಸಂಖ್ಯಾತರ ಕಾಣಿಕೆಯನ್ನೂ ಅದು ಕಡೆಗಣಿಸಿದೆ. ಆದರೆ ಇಂತಹ ವಿಸ್ತಾರವಾದ ಕಾರ್ಯ ಸಾಧನೆಯಲ್ಲಿ ಇಂತಹ ಲೋಪಗಳು ಉದ್ದೇಶಪೂರ್ವಕವೆಂದು ಹೇಳಲಾಗದು.

ಇದೆಲ್ಲದರ ನಡುವೆಯೂ ಜನಮನ್ನಣೆ ಗಳಿಸಿದ ‘...Cornerstone’  ಇತ್ತ ನ್ಯಾಯಾಲಯಗಳ ವಾದ ಪ್ರತಿವಾದಗಳಲ್ಲೂ ಕಾಣಿಸಿಕೊಳ್ಳತೊಡಗಿತು. ನ್ಯಾಯಮೂರ್ತಿಗಳು ಸಾಂವಿಧಾನಿಕ ಪ್ರಕರಣಗಳಲ್ಲಿ ತೀರ್ಪು ನೀಡುವಾಗ ಇದನ್ನು ಆಧಾರವಾಗಿಸಿಕೊಳ್ಳಲು ಶುರುಮಾಡಿದರು. ಸುಪ್ರೀಂಕೋರ್ಟ್‌ 1967ರ ಹೊತ್ತಿಗೆ ನೀಡಿದ ಮಹತ್ತರ ತೀರ್ಪುಗಳಲ್ಲೊಂದಾದ ಗೋಲಖ್ ನಾಥ್ ಪ್ರಕರಣದಲ್ಲಿ  ಮೊದಲ ಬಾರಿ ಆಸ್ಟಿನ್ ಅವರ ಕೃತಿಯನ್ನು ಉಲ್ಲೇಖಿಸಿತು.  ಆನಂತರದ ಹಲವು ತೀರ್ಪುಗಳಲ್ಲಿ ಈ ಕೃತಿಯ ಉಲ್ಲೇಖ ಕಾಣಸಿಗುತ್ತದೆ.

ತುರ್ತು ಪರಿಸ್ಥಿತಿಯನ್ನು ಘೋಷಿಸಲು ಕಾರಣವಾದದ್ದೆಂದು ಹೇಳಲಾದ ಕೇಶವಾನಂದ ಭಾರತಿ ಪ್ರಕರಣದಲ್ಲಿ ತೀರ್ಪು ನೀಡಿದ 13 ನ್ಯಾಯಮೂರ್ತಿಗಳಲ್ಲಿ  12 ಮಂದಿ ಆಸ್ಟಿನ್ ಅವರ ಕೃತಿಯನ್ನು ಆಧಾರವಾಗಿಸಿಕೊಂಡರು! ನ್ಯಾಯಾಲಯಗಳಲ್ಲಿ ಈ ಕೃತಿಯ ಜನಪ್ರಿಯತೆಗೆ ಬಹುಶಃ ಆಸ್ಟಿನ್ ತಮ್ಮ ಅನಿಸಿಕೆಗಳನ್ನು ಹೇರದೆ ಅದನ್ನು ವಸ್ತುನಿಷ್ಠವಾಗಿಸಿರುವುದೇ ಕಾರಣ ಆಗಿರಬೇಕು.

ಆಸ್ಟಿನ್‌ ಇಂತಹ ಮನ್ನಣೆಗೆ ಪಾತ್ರರಾಗಿದ್ದರೂ, 1966ರ ತರುವಾಯ ಅಮೆರಿಕದಲ್ಲಿನ ಯಾವುದೋ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಅಜ್ಞಾತವಾಸಕ್ಕೆ ತೆರೆಯೆಳೆದವರು ಬೆಂಗಳೂರಿನವರೇ ಆದ ರ.ಸುದರ್ಶನ್. ಆಸ್ಟಿನ್‌ರನ್ನು ಪತ್ತೆ ಮಾಡಲು ಪಟ್ಟು ಹಿಡಿದು ಕೊನೆಗೂ 1987ರಲ್ಲಿ ವಾಷಿಂಗ್ಟನ್‌ನಲ್ಲಿ ಅವರನ್ನು ಭೇಟಿ ಮಾಡಿದರು. ಆಸ್ಟಿನ್ ಅವರಿಗೆ ಸುದರ್ಶನ್ ಹೇಳಿದ್ದಿಷ್ಟು: ‘ನಮ್ಮ ಸಂವಿಧಾನ ಹೇಗೆ ರೂಪುಗೊಂಡಿತೆಂದು ತಿಳಿಸಿ ನಮಗೆ ಮಹದುಪಕಾರ ಮಾಡಿದ್ದೀರಿ. ನಾವು ಆನಂತರ ಅದನ್ನು ಹೇಗೆ ಪ್ರಯೋಗಿಸಿದ್ದೇವೆ ಎಂಬುದನ್ನೂ ನೀವು ಬರೆಯಬೇಕು’. ಇದಕ್ಕೆ ಒಪ್ಪಿದ ಆಸ್ಟಿನ್  1993ರಲ್ಲಿ ಭಾರತಕ್ಕೆ ಮರಳಿ ಸಂಶೋಧನೆ-ಸಂದರ್ಶನಗಳನ್ನು ಮಾಡತೊಡಗಿದರು. ಇದರ ಫಲವಾಗಿ ‘Working a Democratic Constitution’  ಪ್ರಕಟವಾಯಿತು. ಸ್ವಾತಂತ್ರ್ಯೋತ್ತರದ ಪ್ರಮುಖ ಸಾಂವಿಧಾನಿಕ ಬೆಳವಣಿಗೆಗಳ ಬಗೆಗಿನ ಈ ಕೃತಿಯು ಮೈಲುಗಲ್ಲುಗಳಾದ ನ್ಯಾಯಾಲಯದ ತೀರ್ಪುಗಳ ಬಗೆಗೆ ವಿವರ ನೀಡಿತು.

‘...Cornerstone’ ಕೃತಿಯೇ ಇಂತಹ ತೀರ್ಪುಗಳಲ್ಲಿ ಆಧಾರವಾಗಿ ಉಲ್ಲೇಖಿತವಾಗಿದ್ದರೂ ಒಮ್ಮೆಯೂ ಅದರ ಸೊಲ್ಲೆತ್ತದ ವಿನಯಶೀಲರು ಆಸ್ಟಿನ್.

ಈ ಕೃತಿಯ ನಂತರ, ತುರ್ತು ಪರಿಸ್ಥಿತಿಯನ್ನೇ ಕೇಂದ್ರವಾಗಿಟ್ಟುಕೊಂಡು ಸಂಶೋಧನೆ ನಡೆಸಲು ಆಸ್ಟಿನ್‌ ಮುಂದಾದರು. ಮತ್ತೆ ಹಿಂದಿನಂತೆಯೇ ಭಾರತ ಸರ್ಕಾರ ಕಾಗದ ಪತ್ರಗಳನ್ನು ವೀಕ್ಷಿಸಲು ಅನುಮತಿ ನೀಡದಿದ್ದರಿಂದ ಅವರು ಯೋಜನೆಯನ್ನು ಕೈಬಿಡಬೇಕಾಯಿತು. 2014ರ ಜುಲೈ 6ರಂದು ಆಸ್ಟಿನ್ ವಿಧಿವಶರಾದರು.

‘...Cornerstone’  ಪ್ರಕಟವಾಗಿ ಇನ್ನೇನು ಅರ್ಧ ಶತಮಾನ ಆಗಲಿದೆ. ಇತ್ತೀಚಿನ ತೀರ್ಪುಗಳಲ್ಲೂ ಆಸ್ಟಿನ್‌ರ ಕೃತಿಗಳ ಉಲ್ಲೇಖ ಕಂಡುಬರುತ್ತದೆ. ಅವರ ಋಣ ತೀರಿಸಲು ನಮಗಿರುವುದು ಒಂದೇ ಮಾರ್ಗ: ಅದು ಸಂವಿಧಾನದ ಜೊತೆ  ನಮ್ಮ ಒಡನಾಟ ಬೆಳೆಸಿಕೊಳ್ಳುವುದು.

  (ವಿಶ್ವಬ್ಯಾಂಕ್ ಕಾನೂನು ಸಲಹೆಗಾರ ವಿಕ್ರಮ ರಾಘವನ್ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ಗ್ರಾನ್ವಿಲ್ ಆಸ್ಟಿನ್ ಕುರಿತು  ನೀಡಿದ ಉಪನ್ಯಾಸಕ್ಕೆ ಲೇಖಕ ಋಣಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT