ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಯಲ್ಲಿ ಕಂಡ ಸತ್ಯ ಹೇಳುವುದು ಅಗತ್ಯ

ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಡಾ.ಎಸ್.ವೈ.ಸೋಮಶೇಖರ್‌
Last Updated 10 ಅಕ್ಟೋಬರ್ 2015, 8:34 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸಂಶೋಧನೆಯಲ್ಲಿ ಪರಿಪೂರ್ಣ ಸತ್ಯ ಹೇಳಲು ಸಾಧ್ಯವಿಲ್ಲ. ಕಂಡ ಸತ್ಯವನ್ನು ಹೇಳಬೇಕಾಗುತ್ತದೆ ಎಂಬ ಸಂಶೋಧಕ ದಿ.ಡಾ.ಎಂ.ಎಂ. ಕಲಬುರ್ಗಿ ಅವರ ಅಭಿಪ್ರಾಯ ಸರ್ವಕಾಲಕ್ಕೂ ಪ್ರಸ್ತುತ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್‌.ವೈ. ಸೋಮಶೇಖರ್ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಆದಿತ್ಯ ಪ್ರಕಾಶನ ಪ್ರಕಟಿತ ಡಾ.ಎನ್.ಎಸ್‌.ಮಹಂತೇಶ ಅವರ ‘ಇತಿಹಾಸ ಮತ್ತು..., (ಡಾ.ಎಂ.ಎಂ. ಕಲಬುರ್ಗಿ ಅವರ ಇತಿಹಾಸ ಸಂಶೋಧನಾ ಲೇಖನ ಸಂಪುಟ)’ ಹಾಗೂ ಚಿತ್ರದುರ್ಗ ಕೋಟೆ ಪರಿಸರದ ದೇವಾಲಯಗಳು– ಒಂದು ಸಾಂಸ್ಕೃತಿಕ ಅಧ್ಯಯನ, ಲೇಖಕಿ ಡಾ. ಜಿ.ಕಾವ್ಯಶ್ರೀ ಅವರ ಸಂಶೋಧನಾ ಕೃತಿ ‘ವಚನಕಾರ್ತಿ ಯರು ಮತ್ತು ವೈಜ್ಞಾನಿಕ ಪ್ರಜ್ಞೆ’ ಕೃತಿಗಳನ್ನು ಬಿಡುಗಡೆ ಮಾಡಿ, ಎಂ.ಎಂ.ಕಲಬುರ್ಗಿ ಅವರ ಇತಿಹಾಸ ಮತ್ತು ಸಂಶೋಧನಾ ಲೇಖನಗಳ ಕುರಿತು ಮಾತನಾಡಿದರು.

ಕಲಬುರ್ಗಿಯವರು ‘ನಾನು ಹುಟ್ಟಿದ್ದು ಸಾಯಲಿಕ್ಕಲ್ಲ, ಸೂರ್ಯ ಚಂದ್ರ ಇರುವ ತನಕ ಸಾಹಿತ್ಯವನ್ನು ಸೃಷ್ಟಿ ಮಾಡುವುದಕ್ಕಾಗಿ, ಸಾಹಿತ್ಯದ ಮೂಲಕ ಬುದುವುದಕ್ಕಾಗಿ ಜೀವಿಸಿದ್ದೇನೆ’ ಎಂದು ಬರೆದರು. ಅವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ 300 ಸಂಶೋಧನಾ ಕೃತಿಗಳನ್ನು ಬರೆಸಿ ದ್ದರು. ಅಂಥ ವಿದ್ವಾಂಸರು ದುರಂತದ ಸಾವಿಗೀಡಾಗಿದ್ದು ಅಘಾತಕಾರಿ ವಿಷಯ. ಅವರು ನಮ್ಮ ನಡುವೆ ಭೌತಿಕವಾಗಿ ಇಲ್ಲದಿದ್ದರೂ, ಸಾಹಿತ್ಯ, ಸಂಶೋಧನಾ ಕೃತಿಗಳ ಮೂಲಕ ಜೀವಂತವಾಗಿದ್ದಾರೆ’ ಎಂದು ನೆನಪಿಸಿಕೊಂಡರು.

ಚಿತ್ರದುರ್ಗ ಬರಗಾಲದ ಜಿಲ್ಲೆ ಯಾಗಿದ್ದರೂ, ಇಲ್ಲಿನ ಪರಿಸರ, ದೇವಾಲಯಗಳು, ಬುಡಕಟ್ಟು ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು, ಇತಿಹಾಸ ಸಂಶೋಧಕರಿಗೆ ಸಂಶೋಧನೆ ನಡೆಸಲು ಉತ್ತಮ ತಾಣವಾಗಿದೆ. ಇಲ್ಲಿನ ಸಂಪಿಗೆ ಸಿದ್ದೇಶ್ವರ ದೇಗುಲದಂತಹ ಗುಹಾ ದೇವಾಲಯಗಳು, ರಾಮದುರ್ಗದ (ನಾಯಕನಹಟ್ಟಿ ಸಮೀಪದ ಹೊಸಗುಡ್ಡ) ಗುಹಾಂತರ ದೇವಾಲಯ ಗಳು ಅನೇಕ ಸಂಶೋದನೆಗೆ ಅವಕಾಶ ನೀಡುತ್ತವೆ’ ಎಂದರು.

‘ಈ ಪ್ರದೇಶದಲ್ಲಿ ಇತಿಹಾಸಕ್ಕೆ ಮಹತ್ವದ ನೀಡುವ ಡಾ.ಬಿ. ರಾಜಶೇಖರಪ್ಪ ಅವರಂತಹ ಅನೇಕ ಸಂಶೋಧಕರಿದ್ದಾರೆ. ಸಂಶೋಧಕರು ಇರುವವರೆಗೂ ಇತಿಹಾಸ ಬೆಳಕಿಗೆ ಬರುತ್ತಲೇ ಇರುತ್ತದೆ’ ಎಂದರು.

ಡಾ.ಜಿ.ಕಾವ್ಯಶ್ರೀ ಅವರ ‘ವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಞೆ’ ಕೃತಿ ಕುರಿತು ಮಾತನಾಡಿದ ಹಂಪಿ ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ವಿಭಾಗದ ಡಾ. ಶಿವಾನಂದ ವಿರಕ್ತಮಠ ಅವರು ‘ವಚನಕಾರ್ಯರ್ತಿಯರು ‘ದೇಶಿ’ಯತೆಯನ್ನು ಮರುಸೃಷ್ಟಿ ಮಾಡಿದರು. ಇಲ್ಲಿವರೆಗೂ 33 ವಚನಾಗಾರ್ತಿಯರನ್ನು ಗುರುತಿಸಲಾ ಗಿತ್ತು. ಲೇಖಕಿ ಕಾವ್ಯ ಅವರು ‘ಪುಣ್ಯಸ್ತ್ರೀ’ ಎಂಬ 34ನೇ ವಚನಕಾರ್ತಿಯನ್ನು ಈ ಕೃತಿಯಲ್ಲಿ ಪರಿಚಯಿಸಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಬಿ. ಕಲಿವಾಳ್, ‘ಚಿತ್ರದುರ್ಗ ಜಿಲ್ಲೆಯಲ್ಲಿ ಇತಿಹಾಸ ಸಂಶೋಧನೆ ವಿಪುಲ ಅವಕಾಶಗಳಿವೆ. ಅಂಥ ಅವಕಾಶಗಳನ್ನು ನಮ್ಮ ದಾವಣಗೆರೆ ವಿ.ವಿ.ಯ ಇಬ್ಬರು ಲೇಖಕರು ಉಪಯೋಗಿಸಿಕೊಂಡು ಕೃತಿ ರಚಿಸಿರುವುದು ಉತ್ತಮ ಕೆಲಸ’ ಎಂದರು.

ಕಾರ್ಯಕ್ರಮದಲ್ಲಿ ಇತಿಹಾಸ ಉಪನ್ಯಾಸಕ ಬಿ.ಕೃಷ್ಣಪ್ಪ, ಪ್ರೊ.ಜೆ.ಕೆ. ರಾಜು, ಕೃತಿಗಳ ಲೇಖಕರಾದ ಡಾ.ಎನ್‌. ಎಸ್.ಮಹಾಂತೇಶ್, ಡಾ.ಜಿ.ಕಾವ್ಯಶ್ರೀ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಧರಣಿ ಸಂಸ್ಥೆಯ ರಮಾನಾಗರಾಜ್, ಪ್ರಕಾಶನ ಸಂಸ್ಥೆಯ ಶಿವಣ್ಣ ಮತ್ತು ರೇಣುಕಮ್ಮ ದಂಪತಿ ಹಾಜರಿದ್ದರು.

***
ಬರದ ಜಿಲ್ಲೆಯಲ್ಲಿ ಇತಿಹಾಸ, ಸಂಶೋಧನೆ ಸಾಹಿತ್ಯಕ್ಕೆ ಬರವಿಲ್ಲ. ಸಂಶೋಧಕರಿದ್ದ ಸ್ಥಳದಲ್ಲಿ ಇತಿಹಾಸ ಕುರಿತ ಹೊಸ ಹೊಸ ಮಾಹಿತಿಗಳು ಅನಾವರಣಗೊಳ್ಳುತ್ತವೆ.
-ಡಾ.ಎಸ್.ವೈ.ಸೋಮಶೇಖರ್,
ಸಹಾಯಕ ಪ್ರಾಧ್ಯಾಪಕ, ಕನ್ನಡ ವಿ.ವಿ, ಹಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT