ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾರಾತ್ಮಕ ಬೆಳವಣಿಗೆ

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಜಮ್ಮು– ಕಾಶ್ಮೀರ ವಿಧಾನಸಭೆಗೆ ನಡೆದ ಮೊದಲ ಹಂತದ ಚುನಾ­ವ­ಣೆಯಲ್ಲಿ ದಾಖಲೆ ಮತದಾನವಾಗಿದೆ. ಜಮ್ಮು– ಕಾಶ್ಮೀರದ ಒಟ್ಟು 87 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತ­ದಾನದಲ್ಲಿ ಶೇಕಡ 71ರಷ್ಟು ಮತದಾನವಾಗಿರುವುದು ದಾಖಲೆ. ಈ ಪ್ರಮಾಣದ ಮತದಾನವಾಗಿರುವುದು ಕಳೆದ 25 ವರ್ಷಗಳಲ್ಲಿ ಇದೇ ಮೊದಲು.

ಜೆಕೆ­ಎಲ್ಎಫ್ ಹಾಗೂ ಹುರಿಯತ್ ಕಾನ್ಫೆರೆನ್ಸ್‌ನ ಎಲ್ಲಾ ಬಣ­ಗಳ ಪ್ರತ್ಯೇಕ­ತಾ­ವಾದಿಗಳ ಗುಂಪು ಮತದಾನವನ್ನು ಬಹಿಷ್ಕರಿಸಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದವು. ಆದರೆ ಈ ಕರೆಯನ್ನು ಧಿಕ್ಕರಿಸಿ ಕೊರೆಯುವ ಚಳಿಯಲ್ಲಿ ಮತ­ಗಟ್ಟೆಗಳಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನ ಮತ­ದಾನ ಮಾಡಿದ್ದಾರೆ. ಹಾಗೆಯೇ ಜಾರ್ಖಂಡ್‌ನಲ್ಲೂ 13 ವಿಧಾನ­ಸಭಾ ಕ್ಷೇತ್ರ­­ಗಳಿಗೆ ಶೇ 62ರಷ್ಟು ಮತದಾನವಾಗಿದೆ. ಮಾವೊವಾದಿ­ಗಳಿಂದಾಗಿ ಸಣ್ಣ­ಪುಟ್ಟ ಘರ್ಷಣೆಗಳ ನಡುವೆಯೂ ಈ ಮಟ್ಟದ ಮತದಾನ ಆಗಿರುವುದು ವಿಶೇಷ.

ಸೂಕ್ತ ಭದ್ರತೆ, ವಿಶ್ವಾಸವರ್ಧನೆ ಹಾಗೂ ಮತದಾರರ ಉತ್ಸಾಹ­ದಿಂದ ಇದು ಸಾಧ್ಯ­ವಾ­ಗಿದೆ. ಈ ಎರಡೂ ರಾಜ್ಯಗಳಿಗೆ ಐದು ಹಂತಗಳಲ್ಲಿ ಚುನಾ­ವಣೆಗಳು ನಡೆ­ಯ­ಲಿದ್ದು ಮುಂದಿನ ನಾಲ್ಕು ಹಂತಗಳಲ್ಲೂ ಉತ್ಸಾ­ಹ­ದಾಯಕ ಮತದಾನಕ್ಕೆ ಇದು ಪ್ರೇರಣೆ, ಸ್ಫೂರ್ತಿ ನೀಡುವಂತ­ಹದ್ದು. ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗಲು ಜನರಿಗಿರುವ ವಿಶ್ವಾಸಕ್ಕೆ ಇದು ದ್ಯೋತಕ.

ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಶ್ಮೀರದ ಈಗಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅವರ ನ್ಯಾಷನಲ್ ಕಾನ್ಫೆ­ರೆನ್ಸ್ (ಎನ್‌ಸಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಈ  ಸ್ಪರ್ಧೆ ಉಂಟಾಗಿದೆ. ಕಾಶ್ಮೀರದಲ್ಲಿ ಈ ಹಿಂದೆ ಬಿಜೆಪಿ ಎಂದೂ ಮುಖ್ಯ ಪಕ್ಷವಾಗಿರಲಿಲ್ಲ. ಆದರೆ ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ. ಜಮ್ಮು –ಕಾಶ್ಮೀರದ 6 ಲೋಕಸಭಾ ಸ್ಥಾನ­ಗ­ಳಲ್ಲಿ 3ರಲ್ಲಿ ಬಿಜೆಪಿ ಗೆದ್ದಿದ್ದು ವಿಶೇಷ. ಇತರ 3 ಸ್ಥಾನಗಳನ್ನು ಪಿಡಿಪಿ ಗೆದ್ದು­ಕೊಂಡಿದೆ. ಕಾಂಗ್ರೆಸ್– ನ್ಯಾಷನಲ್ ಕಾನ್ಫೆರೆನ್ಸ್ ಮೈತ್ರಿಕೂಟಕ್ಕೆ ಒಂದೂ ಸ್ಥಾನ ಗೆಲ್ಲಲಾಗದಿದ್ದುದು ವಿಪರ್ಯಾಸ.

ಕಳೆದ ವಿಧಾನಸಭಾ ಚುನಾ­ವಣೆ­ಯಲ್ಲಿ ರಾಜ್ಯದಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫೆ­ರೆನ್ಸ್ ಈ ವರ್ಷ ಜುಲೈ ತಿಂಗಳವರೆಗೂ ಮಿತ್ರಪಕ್ಷಗಳಾಗಿದ್ದವು. ಆದರೆ ಈಗ ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿವೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಹಾಗೂ ಹರಿಯಾಣ­ಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಗೆಲುವು ಕಾಶ್ಮೀರದಲ್ಲೂ ಪುನರಾವರ್ತನೆ­ಯಾಗ­ಬಹು­ದೆಂಬ ನಿರೀಕ್ಷೆ ಬಿಜೆಪಿಯದು.

ಪ್ರವಾಹದಿಂದಾಗಿ ಜಮ್ಮು– ಕಾಶ್ಮೀರ ನಲುಗಿರುವ ಸಂದರ್ಭ ಇದು. ಸುಮಾರು 15 ಲಕ್ಷ ಜನರಿಗೆ ತೊಂದರೆ­ಯಾ­ಗಿದ್ದು ಹಲ­ವರು ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿದ್ದಾರೆ. ಗಡಿ­ಯಾಚೆಗಿನ ಘರ್ಷಣೆ­ಗಳಿಂದ ಅನೇಕ ಗ್ರಾಮಸ್ಥರು ನೆಲೆ ಕಳೆದು­ಕೊಂಡಿ­ದ್ದಾರೆ. ಇಂತಹ ಸನ್ನಿವೇಶ­ದಲ್ಲಿ ಪ್ರತ್ಯೇಕತಾವಾದ, ಹಿಂಸಾಚಾರದ ರಾಜ­ಕಾರಣ­ಕ್ಕಿಂತ ಅಭಿ­ವೃದ್ಧಿಯ ರಾಜಕಾರಣವನ್ನು ಜನ ಬಯಸುತ್ತಿರುವುದು ಸ್ಪಷ್ಟ. ಈ ಆಶ­ಯಕ್ಕೆ ಪೂರಕ­ವಾಗಿ ಪ್ರಜಾತಂತ್ರ ಪ್ರಕ್ರಿಯೆಯಲ್ಲಿ ಮತದಾ­ರರು ಸಕ್ರಿಯವಾಗಿ ಪಾಲ್ಗೊಂಡಿ­ರುವುದು ಸಕಾರಾತ್ಮಕ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT