ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ನಾಡಿನ ಕಹಿ ಚಿತ್ರಗಳು

Last Updated 25 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಳೆಸಿದ ಕಬ್ಬಿಗೆ ಬೆಂಕಿ ಇಟ್ಟು, ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ರೈತನ ದುಃಸ್ಥಿತಿ ಏನನ್ನು ಸೂಚಿಸುತ್ತದೆ? ರೈತರ ಆತ್ಮಹತ್ಯೆ ಸರಣಿ ಮುಂದುವರಿಯುತ್ತಿದ್ದರೂ ಪ್ರಾಮಾಣಿಕವಾಗಿ ಪರಿಹಾರ ಹುಡುಕುವವರು ಯಾರೂ ಇಲ್ಲ. ಜನರನ್ನು ತಲ್ಲಣಗೊಳಿಸುತ್ತಿರುವ ಆತ್ಮಹತ್ಯೆ ಸರಮಾಲೆಗೆ ಕಾರಣವೇನು? ಸಾವಿಗೀಡಾದ ರೈತರ ಕುಟುಂಬಗಳನ್ನು ಮಾತನಾಡಿಸಿದಾಗ ಕಂಡುಬಂದ ಅಂಶಗಳೇನು?

‘ಹುಟ್ಟಿದಾಗಿನಿಂದಲೇ ಕಾಲು ಊನ ಇತ್ತು. ಕೋಲು ಹಿಡಿಕೊಂಡು ಓಡಾಡ್ತಿತ್ತು.  ಅವತ್ತು ಬೆಳಗ್ಗೆ ಕಬ್ಬಿನ ಗದ್ದೆ ಕಡೆ ಕುಂಟುಕೊಂಡು ಹೋಯ್ತು. ಊಟ ಕೂಡ ಮಾಡಿರಲಿಲ್ಲ. ನಾವು ಕೂಲಿಗೆ ಹೋದ್ವಿ. 11 ಗಂಟೆ ಹೊತ್ತಿಗೆ, ಯಾರೋ ಗದ್ದೆಗೆ ಬೆಂಕಿ ಬಿದ್ಯಿತೆ ಅಂತ ಹೇಳಿದರು. ಓಡೋಡಿ ಬಂದ್ವಿ. ನೋಡಿದರೆ ಕಬ್ಬಿನ ಗದ್ದೆ ಸುಟ್ಟೋಗಿತ್ತು. ಇವರೂ ಸುಟ್ಟೋಗಿದ್ದರು...’  ಬೋರಮ್ಮ ಒಂದು ಕ್ಷಣ ಮಾತು ನಿಲ್ಲಿಸಿ ಬಿಕ್ಕಿದರು. ಇಳಿವಯಸ್ಸಿನ ಆ ಅಜ್ಜಿಯ ಕಣ್ಣಿಂದ ಹತ್ತಾರು ಹನಿ ತೊಟ್ಟಿಕ್ಕಿದವು.

ಕಬ್ಬಿನ ಗದ್ದೆಗೆ ಬೆಂಕಿಕೊಟ್ಟು, ತಾನೂ ಅದರಲ್ಲಿ ಜಿಗಿದು ಹೆಣವಾಗಿ ಹೋದ ಪಾಂಡವಪುರ ತಾಲ್ಲೂಕಿನ ಗಾಣದ ಹೊಸೂರಿನ ನಿಂಗೇಗೌಡರ ಮನೆಯ ಪುಟ್ಟ ಜಗುಲಿ ಮೇಲೆ ಕುಳಿತು ನಾವು ಮಾತನಾಡುತ್ತಿದ್ದರೆ, ಬೋರಜ್ಜಿಯ ಮಗ ಹಿರೇಗೌಡ ಗೋಡೆಗೆ ಒರಗಿ ಚಾವಣಿ ದಿಟ್ಟಿಸುತ್ತಿದ್ದರು.

ನಿಂಗೇಗೌಡರಿಗೆ ಇದ್ದಿದ್ದೇ 17 ಗುಂಟೆ ಹೊಲ– ಅಂದರೆ ಅರ್ಧ ಎಕರೆಗೂ ಕಮ್ಮಿ. ಅದರಲ್ಲಿ ಕಬ್ಬು ಬೆಳೆದುಕೊಳ್ಳುತ್ತ, ಮನೆ ನಿರ್ವಹಣೆಗೆ ಕೂಲಿ ಕೆಲಸ ಮಾಡುತ್ತಾ ದಿನ ತಳ್ಳುತ್ತಿದ್ದರು. ಪೋಲಿಯೊ ಪೀಡಿತ ಕಾಲುಗಳನ್ನು ಎಳೆದುಕೊಂಡು ನಿಂಗೇಗೌಡರು ಹಾಗೂ ಹೀಗೂ ಕೃಷಿ ಮಾಡುತ್ತಿದ್ದರು. ‘ಎಮ್ಮೆ ಇತ್ತು. ಅದರ ಮೇಲೆ ಕುಂತುಕೊಂಡು ಗದ್ದೆ ಹತ್ತಿರ ಹೋಗಿ ಇಳಿಯೋರು. ಎಮ್ಮೆ ಮೇಯಿಸಿಕೊಂಡು ವಾಪಸ್ ಬಂದು ಮತ್ತೆ ಮನೆ ಹತ್ತಿರ ಇಳಿಯೋರು. ಸಾಲ ತೀರಿಸೋಕೆ ಆ ಎಮ್ಮೆನೂ ಮಾರಿದರು. ಅವಾಗಿನಿಂದ ಕೋಲು ಹಿಡಕೊಂಡು ಓಡಾಡ್ತಿದ್ದರು’ – ಅವರದೇ ವಾರಗೆಯ ಲಕ್ಕೇಗೌಡ, ನಿಂಗೇಗೌಡರ ನೆನಪಿಗೆ ಜಾರಿದರು.

‘ತುಂಡು ಭೂಮಿ ನಂಬಿಕೊಂಡರೆ ಹೊಟ್ಟೆ ಬಟ್ಟೆಗೆ ಆಗಲ್ಲ ಅಂತ ಮಗ ಹಿರೇಗೌಡ ಬೆಂಗಳೂರಿನ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಹೋದ. ಅದೇನು ಗ್ರಹಚಾರನೋ, ಅಲ್ಲಿ ಆಕ್ಸಿಡೆಂಟ್ ಆಗಿ ಎರಡೂ ಕಾಲು ಮುರಿದವು. ಆಸ್ಪತ್ರೆಗೆ ಒಂದೂವರೆ ಲಕ್ಷ ಖರ್ಚು ಆಯಿತು. ಕಾಲು ರೆಡಿಮಾಡಿಸೋಕೆ ಕೈ ಸಾಲ ಮಾಡಿದರು. ಹೆಂಗೋ ಮೆಂಟೇನ್ ಮಾಡಿಕೊಂಡು, ಸಾಲಗಾರರಿಗೆ ತಳ್ಳುಕೊಂಡು ಬರ್ತಿದ್ದರು. ಕಬ್ಬಾದ್ರೂ ಮಾರಿ ಸಾಲ ಕೊಡೋಣ ಅಂದ್ರೆ ಆಲೆಮನೆನೋರು 700 ರೂಪಾಯಿಗೆ ಕೇಳಿದ್ರು. ಸಾಲ ತೀರಲ್ಲ; ಬಡ್ಡಿನೂ ಕಟ್ಟಾಕಗಲ್ಲ ಅಂತ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ ಅದರೊಳಗೆ ಹೋದರು...’ –ಲಕ್ಕೇಗೌಡರು ಆತ್ಮಹತ್ಯೆಯ ಹಿಂದಿನ ಕಾರಣವನ್ನು ಬಿಡಿಸಿಡುತ್ತಾರೆ.

ನಿಂಗೇಗೌಡರ ಸಾವಿನ ಒಂದು ವಾರಕ್ಕೆ ಮೊದಲು ಶ್ರೀರಂಗಪಟ್ಟಣದ ಚನ್ನೇನಹಳ್ಳಿಯ 66 ವರ್ಷದ ರಾಜೇಂದ್ರ ತಮ್ಮ ತೋಟದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ‘ನಾನು ಕಬ್ಬು, ಬಾಳೆ ಮತ್ತು ತರಕಾರಿ ಬೆಳೆದಿದ್ದೇನೆ. ಬೆಲೆ ಸಿಗದೆ ವಿಪರೀತ ನಷ್ಟವಾಯಿತು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸರ್ಕಾರಕ್ಕೆ ಮತ್ತು ರೈತ ಸಂಘಕ್ಕೆ ಪತ್ರ ಬರೆದಿಟ್ಟಿದ್ದರು. ‘ಪದವಿ ಮಾಡಿಕೊಂಡು ಬೇಸಾಯ ಮಾಡೋಕೆ ಬಂದೆ. ಭೂಮಿತಾಯಿ ಆಶೀರ್ವಾದಾನೂ ಇಲ್ಲ; ಸರ್ಕಾರಾನೂ ಅನುಕೂಲ ಮಾಡಿಲ್ಲ’ ಎಂದು ಆತ್ಮೀಯರಲ್ಲಿ ರಾಜೇಂದ್ರ ಅವಲತ್ತುಕೊಂಡಿದ್ದರು.


‘ಸಕ್ಕರೆ ನಾಡು’ ಎಂದು ಹೆಸರಾದ ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಸುತ್ತಾಡುತ್ತಾ ಹೋದರೆ ಇಂಥ ಕಣ್ಣೀರಿನ ಕತೆಗಳು ಅದೆಷ್ಟೋ ಸಿಗುತ್ತವೆ. ಕಳೆದ ಒಂದು ತಿಂಗಳಲ್ಲಿ 19 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಶರಣಾದ ಬಹುಪಾಲು ರೈತರು ಕಬ್ಬು ಬೆಳೆಗಾರರು ಮತ್ತು ಮೂರು ಎಕರೆಗೂ ಕಡಿಮೆ ಜಮೀನಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರು.

ಮಂಡ್ಯ ಎಂದರೆ ಇಂಡಿಯಾ!
ಮಂಡ್ಯ ಮೂಲತಃ ಒಣಭೂಮಿ ಪ್ರದೇಶ. ರಾಗಿಯೇ ಪ್ರಧಾನವಾದ ಕೃಷಿ ಸಂಸ್ಕೃತಿ ಇಲ್ಲಿತ್ತು. ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣವಾಗಿ, 1932ರಲ್ಲಿ ಕಾವೇರಿ ನೀರು ಹರಿದಿದ್ದೇ ಮಂಡ್ಯದ ಕೃಷಿ ಚಿತ್ರಣ ಸಂಪೂರ್ಣ ಬದಲಾಯಿತು. ಬರದಲ್ಲೇ ನಲುಗಿದ್ದ ನಾಡು ಮೈಸೂರು ಸಂಸ್ಥಾನದ ಒತ್ತಾಸೆಯಿಂದ ಹಸಿರು ಉಕ್ಕುವ ನಂದನವನವಾಯಿತು.

ವಿಶ್ವೇಶ್ವರಯ್ಯನವರು ಮಂಡ್ಯಕ್ಕೆ ನೀರು ತಂದರೆ, ಕಬ್ಬನ್ನು ಪರಿಚಯಿಸಿ, ಸಕ್ಕರೆ ಕಾರ್ಖನೆ ಆರಂಭಿಸಿದ ಕೀರ್ತಿ ಕೆನಡಾದ ಕೃಷಿ ತಜ್ಞ ಲೆಸ್ಸಿ. ಸಿ. ಕೋಲ್‌ಮನ್‌ರಿಗೆ ಸಲ್ಲುತ್ತದೆ. ಕೃಷಿ ಅಬಿವೃದ್ಧಿಗೆ ವಿ.ಸಿ. ಫಾರಂ ಆರಂಭಿಸಿದ ಕೋಲ್ಮನ್, ಲ್ಯಾಬ್‌ನ ವಿಚ್ಞಾನಿಯಾಗದೆ ತಮ್ಮ ಹಳೆಯ ಮೋಟಾರ್ ಬೈಕಿನಲ್ಲಿ ಮಂಡ್ಯದ ಹಳ್ಳಿಗಳನ್ನು ಸುತ್ತಿ ಆಧುನಿಕ ಕೃಷಿಯ ಪಾಠಗಳನ್ನು ರೈತರಿಗೆ ಹೇಳಿಕೊಟ್ಟರು. ಕಬ್ಬಿನ ಹೊಸ ತಳಿಗಳನ್ನು ಬಿಡುಗಡೆ ಮಾಡಿ 1933ರಲ್ಲಿ ‘ಮೈಸೂರು ಶುಗರ್ ಕಂಪೆನಿ’ಯನ್ನು ಮಂಡ್ಯದಲ್ಲಿ ಸ್ಥಾಪಿಸಿದರು. ಈ ಸಕ್ಕರೆ ಕಾರ್ಖಾನೆ ‘ಮೈ ಶುಗರ್’ ಎಂದೇ ಹೆಸರುವಾಸಿ.

ಕಾವೇರಿ ನೀರಿನ ಜೊತೆಗೆ ಬಂದ ಕಬ್ಬು ಹಣದ ಬೆಳೆಯಾಗಿ ರೈತರ ಹೊಲಗಳಲ್ಲಿ ನೆಲೆಯೂರಿತು. ‘ಮನೆಬಳಕೆಗೆ ಭತ್ತ– ಮಾರುಕಟ್ಟೆಗೆ ಕಬ್ಬು’ ಎಂಬಂತಾಯಿತು. ಕಳೆದ 80 ವರ್ಷಗಳಿಂದ ಮಂಡ್ಯದ ರೈತರು ಭತ್ತ ಮತ್ತು ಕಬ್ಬನ್ನಷ್ಟೇ ನೆಚ್ಚಿದ್ದಾರೆ. ನೆನಪಾದಾಗ ಒಮ್ಮೆ ಬೇಸಿಗೆಯಲ್ಲಿ ರಾಗಿ ಬೆಳೆಯುತ್ತಾರೆ.

ಕಳೆದ ದಶಕದಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಉಲ್ಬಣಿಸಿದ್ದರಿಂದ ಮತ್ತು ಭತ್ತದ ಕೃಷಿ ಖರ್ಚು ವಿಪರೀತವಾದ್ದರಿಂದ ಕಡಿಮೆ ಶ್ರಮ ಕೇಳುವ ಕಬ್ಬಿನತ್ತ ರೈತರು ಆಕರ್ಷಿತರಾದರು. ಭತ್ತದ ಗದ್ದೆಗಳು ಕಬ್ಬಿನ ತೋಟವಾಗಿ ಪರಿವರ್ತಿತವಾದವು. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ 40 ಸಾವಿರ ಎಕರೆಯಲ್ಲಿ ಮಾತ್ರ ಕಬ್ಬು ಬೆಳೆಯಲು ಅನುಮತಿ ಇದೆ. ಆದರೆ 75 ಸಾವಿರ ಎಕರೆಗಳಲ್ಲಿ ಕಬ್ಬಿನ ಕೃಷಿ ನಡೆಯುತ್ತಿದೆ. ಐದು ಸಕ್ಕರೆ ಕಾರ್ಖಾನೆಗಳು ವರ್ಷಕ್ಕೆ 26 ಲಕ್ಷ ಟನ್ (2 ಕೋಟಿ 60 ಲಕ್ಷ ಸಕ್ಕರೆ ಚೀಲಗಳು) ಸಕ್ಕರೆ ಉತ್ಪಾದನೆ ಮಾಡುತ್ತಿವೆ. 532 ಆಲೆಮನೆಗಳಿದ್ದು, 1 ಕೋಟಿ ಕ್ವಿಂಟಾಲ್ ಬೆಲ್ಲದ ಉತ್ಪಾದನೆ ನಡೆಯುತ್ತಿದೆ. ರಾಜ್ಯದಲ್ಲೇ ಅತ್ಯಂತ ಹೆಚ್ಚಿನ ಕಬ್ಬಿನ ಇಳುವರಿ (ಎಕರೆಗೆ 40ರಿಂದ 50 ಟನ್) ತೆಗೆಯುವ ಹೆಗ್ಗಳಿಕೆ ಮಂಡ್ಯ ಜಿಲ್ಲೆಯದು. ಕಬ್ಬಿನ ರೈತರ ಆತ್ಮಹತ್ಯೆ ಹೆಚ್ಚು ನಡೆವ ಕುಖ್ಯಾತಿ ಕೂಡ ಈ ಜಿಲ್ಲೆಯದೇ!

ಕಾವೇರಿ ನೀರಿನ ಜೊತೆಗೆ ಆಡಂಬರ, ದುಂದುವೆಚ್ಚ ಜೊತೆಗೂಡಿ ಬಂದವು. ‘ಮಂಡ್ಯ ಎಂದರೆ ಇಂಡಿಯಾ’ ಎಂಬ ಹುಂಬತನ, ಸದಾ ರಸ್ತೆಗಿಳಿದು ಪ್ರತಿಭಟಿಸುವ ಎದೆಗಾರಿಕೆ ಬಳುವಳಿಯಾಗಿ ಬಂತು. ಕೃಷಿಯನ್ನು ಲಾಭದಾಯಕವಾಗಿಸುವ ಜಾಣ್ಮೆ ದೂರವೇ ಉಳಿಯಿತು. ಮದುವೆ, ತಿಥಿಗಳು ಅಂತಸ್ತು ತೋರಿಸುವ ಸಾಧನಗಳಾದವು. ಇವೇ ಸಾಲದ ಕುಣಿಕೆಗಳೂ ಆದವು. ‘ಮದುವೆ ಅದ್ದೂರಿಯಾಗಿ ಮಾಡ್ತಾರೆ. ಹೆಣ್ಣು ಮಕ್ಕಳು ಇದ್ದರಂತೂ ಮುಗಿದೇ ಹೋಯಿತು. ಹೊಲ ಮಾರಾದ್ರೂ ಅದ್ದೂರಿ ಮದುವೆ ಮಾಡ್ತಾರೆ. ಸಾಲ ಮಾಡಿ ವರದಕ್ಷಿಣೆ ಕೊಡ್ತಾರೆ’ – ಆಡಂಬರದ ಮದುವೆಗಳ ಬಗ್ಗೆ ಶಿವಳ್ಳಿಯ ಬೋರೇಗೌಡರು ಬೆಳಕು ಚೆಲ್ಲುತ್ತಾರೆ.

ಸಂಕಟ ತಂದ ಕಬ್ಬು
ಕಬ್ಬಿನ ವಿಸ್ತೀರ್ಣ ಹೆಚ್ಚುತ್ತಾ ಹೋದಂತೆ, ಸಮಸ್ಯೆಗಳೂ ಹೆಚ್ಚುತ್ತ ಹೋದವು. ಅನ್ನ ಭಾಗ್ಯ ಯೋಜನೆ ದೆಸೆಯಿಂದ ಕೃಷಿ ಕೆಲಸಕ್ಕೆ ಜನ ಸಿಗುವುದೇ ದುರ್ಲಭವಾಯಿತು.  ರಾಸಾಯನಿಕ ಗೊಬ್ಬರಗಳ ಬೆಲೆ ಗಗನಕ್ಕೇರಿತು. ನೀರಿನ ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ, ಹಾಕಿದ ಗೊಬ್ಬರವೆಲ್ಲಾ ಕೆರೆಕುಂಟೆಗೆ ಸೇರಿ, ನೀರು ತಾವರೆ ಹಬ್ಬಿ ಬೆಳೆಯಿತು. ಇಂದು ಮಂಡ್ಯದ 450 ಕೆರೆಗಳು ನಿರ್ವಹಣೆ ಇಲ್ಲದೆ ಜೀವ ಬಿಡುತ್ತಿವೆ.

ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟಿಯಲ್ಲಿ ಸಕ್ಕರೆ ಬೆಲೆ ಕುಸಿದ ಪರಿಣಾಮ, ಸಕ್ಕರೆ ಕಾರ್ಖಾನೆಗಳ ಗೋದಾಮುಗಳಲ್ಲಿ ಸಕ್ಕರೆ ಮಾರಾಟವಾಗದೆ ಕೊಳೆಯುತ್ತಾ ಬಿದ್ದಿತು. ಕಬ್ಬು ಬೆಳೆಗಾರರಿಗೆ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳು ಸತಾಯಿಸತೊಡಗಿದವು.  ಮಂಡ್ಯದ 5 ಸಕ್ಕರೆ ಕಾರ್ಖಾನೆಗಳು ರೈತರ 106 ಕೋಟಿ ಸಾಲ ಬಾಕಿ ಉಳಿಸಿಕೊಂಡಿವೆ. ಇದರ ಜೊತೆಗೆ 2013-14ರ ಸಾಲಿಗೆ ಸರ್ಕಾರ ಘೋಷಿಸಿದ ಪ್ರತಿ ಟನ್‌ಗೆ 100 ರೂಪಾಯಿಗಳ ಹೆಚ್ಚುವರಿ ಹಣ ರೈತರಿಗೆ ಬರಬೇಕಿದೆ. ಇಷ್ಟು ದೊಡ್ಡ ಪ್ರಮಾಣದ ಸಾಲ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳ ಯಾವ ಮಾಲೀಕನೂ ಆತ್ಮಹತ್ಯೆ ಮಾಡಿಕೊಂಡಿಲ್ಲ!

ಹನ್ನೆರಡು ತಿಂಗಳಿಗೆ ಕಟಾವಿಗೆ ಸಿದ್ಧವಾಗುವ ಕಬ್ಬನ್ನು, ಆದಷ್ಟೂ ಬೇಗ ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಬೇಕು. ನಿಧಾನವಾದಷ್ಟೂ ಕಬ್ಬಿನ ಇಳುವರಿ ಕುಂಠಿತವಾಗುತ್ತಾ ಹೋಗುತ್ತದೆ. ಪರ್ಮಿಟ್ ರಗಳೆ ದೆಸೆಯಿಂದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಹೊತ್ತಿಗೆ 16ರಿಂದ 17 ತಿಂಗಳು ಕಳೆದಿರುತ್ತದೆ.  ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳು ಮತ್ತೆ 6–7 ತಿಂಗಳು ಸತಾಯಿಸುತ್ತವೆ. ರೈತನ ಕೈಗೆ ಹಣ ಬರುವ ಹೊತ್ತಿಗೆ ಎರಡು ವರ್ಷ ದಾಟಿರುತ್ತದೆ!.

ವರ್ಷದೊಳಗೆ ಬ್ಯಾಂಕ್ ಸಾಲ ತೀರಿಸಲಾಗದ್ದರಿಂದ, ಶೇ 4ರ ಬಡ್ಡಿ ಸಾಲ ಶೇ 12ಕ್ಕೆ ಏರಿರುತ್ತದೆ. ಅಸಲಿನ ಜೊತೆ ಬಡ್ಡಿ, ಚಕ್ರಬಡ್ಡಿ ಹನುಮನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಜೂನ್–ಜುಲೈ ತಿಂಗಳು ಮಂಡ್ಯದ ರೈತರ ಪಾಲಿಗೆ ಅತ್ಯಂತ ಸಂಕಷ್ಟದ ದಿನಗಳು. ಅತ್ತ ಹಳೆಯ ಸಾಲ ತೀರಿಸದ ಹೊರತು ಬ್ಯಾಂಕ್ ಹೊಸ ಸಾಲ ನೀಡುವುದಿಲ್ಲ. ಇತ್ತ ಬಿತ್ತನೆ ಖರ್ಚಿಗೆ ಹಣ ಇರುವುದಿಲ್ಲ.  ಹಾಗಾಗಿ ಸ್ಥಳೀಯವಾಗಿ ಸಾಕಷ್ಟು ಕೈಸಾಲ ಮಾಡಿಕೊಳ್ಳುತ್ತಾರೆ. ಸ್ವಸಹಾಯ ಸಂಘಗಳಿಂದಲೂ ಸಾಲ ತರುತ್ತಾರೆ.

ಈ ರಗಳೆಯೇ ಬೇಡವೆಂದು ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಆಲೆಮನೆಗಳಿಗೆ ಕಬ್ಬು ಸಾಗಿಸುತ್ತಾರೆ. ಕಬ್ಬು ಸರಬರಾಜು ಮಾಡಿದ ತಿಂಗಳೊಳಗೆ ಕೈಗೆ ಹಣ ಬರುವುದರಿಂದ, ಹಳೆಯ ಸಾಲ ತೀರಿಸಿ ಹೊಸ ಸಾಲಕ್ಕೆ ಕೈ ಚಾಚುತ್ತಾರೆ. ಬರುವ ಕಬ್ಬಿನ ಹಣದ ಮೇಲೆ ಇಡೀ ಸಾಲದ ಲೆಕ್ಕಾಚಾರ ನಿಂತಿರುವುದರಿಂದ, ಕೊಂಚ ಎಡವಟ್ಟಾದರೂ ರೈತ ಬೀದಿಗೆ ಬೀಳುತ್ತಾನೆ.

ಸಾಲ ದೂರ, ಸಾವು ಹತ್ತಿರ
ಈ ವರ್ಷ ಮುಂಗಾರಿನ ಆರಂಭಕ್ಕೆ ಒಳ್ಳೆಯ ಮಳೆಯಾಗಿ ಕೃಷ್ಣರಾಜಸಾಗರ ಅಣೆಕಟ್ಟು ತುಂಬಿದ್ದರೂ, ನಾಲೆಯ ದುರಸ್ತಿ ಕೆಲಸ ನಡೆಯುತ್ತಿದ್ದರಿಂದ ನೀರು ರೈತರ ಹೊಲಗಳಿಗೆ ಬರಲಿಲ್ಲ. ಒಂದೂವರೆ ತಿಂಗಳು ನೀರಿಲ್ಲದೆ ಕಬ್ಬು ಒಣಗಲು ಶುರುವಾಯಿತು. ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯಲು ಶುರುಮಾಡದ್ದರಿಂದ ರೈತರಲ್ಲಿ ಚಡಪಡಿಕೆ ಶುರುವಾಯಿತು. ಸಿಕ್ಕ ಆಲೆಮನೆಗಳಿಗೆ ಕಬ್ಬು ಸಾಗಿಸಲು ಆಲೆಮನೆಗಳ ಬಾಗಿಲು ಬಡಿದರು. ಕಳೆದ ಬಾರಿ ಟನ್ ಕಬ್ಬಿಗೆ ಎರಡು ಸಾವಿರ ಬೆಲೆ ನೀಡಿದ್ದ ಆಲೆಮನೆಯರು ಈ ವರ್ಷ 700–800 ರೂಪಾಯಿಗೆ ಕಬ್ಬು ಕೇಳಿದರು. ‘ಏನು ಮಾಡೋದು? ಬೋರ್ ಕೊರೆಸಿದ್ವಿ. ಅದೂ ಫೇಲ್ ಆಯ್ತು. ನೀರಿಲ್ಲದೆ ಕಬ್ಬು  ಒಣಗ್ತಿದೆ.

ಭತ್ತಕ್ಕೂ ರೇಟಿಲ್ಲ. ಸಾಲ ಕೊಟ್ಟೋರು ದಿನಾ ಪೀಡಿಸ್ತಾರೆ’ – ಹೆಚ್. ಮಲ್ಲಿಗರೆ ಗ್ರಾಮದ ರೈತ ಮಹಿಳೆ ನಿರ್ಮಲ ನೋವು ತೋಡಿಕೊಳ್ಳುತ್ತಾರೆ. ಈ ಗ್ರಾಮದ ನಾಲ್ಕು ಜನ ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅವರ ಪೈಕಿ ಒಬ್ಬರಾದ ಸುಗಣರ ಗಂಡ ಒಂಬತ್ತು ತಿಂಗಳ ಹಿಂದೆ ತೀರಿಕೊಂಡರು.ಅವರು ಮಾಡಿದ ಸಾಲ, ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಖರ್ಚು, ಮನೆ ಖರ್ಚು ಸುಗಣರ ಜವಾಬ್ದಾರಿಗೆ ಬಂತು. ನಾಲೆಯಲ್ಲಿ ಸಕಾಲಕ್ಕೆ ನೀರು ಬರದೆ ಕಬ್ಬು ಒಣಗಿ ನಿಂತಿತು. ‘ಸಾಯೋದು ಬಿಟ್ಟರೆ ಇನ್ನಾವ ದಾರಿ ಇದೆ ನಮಗೆ’ – ಸತ್ತ ಗಂಡನ ಪೋಟೋವನ್ನು ದಿಟ್ಟಿಸುತ್ತಾ ಸುಗುಣ ಮೌನಿಯಾಗುತ್ತಾರೆ.  ಅವರನ್ನು ಸಂತ್ಯೆಸಲು ಬಂದ ಹಳ್ಳಿಯ ಇತರ ಹೆಣ್ಣು ಮಕ್ಕಳ ಮುಖದಲ್ಲೂ ನಗು ಮಾಯವಾಗಿ ಹೋಗಿದೆ.

ಕಬ್ಬು ಬೆಳೆಗಾರರು ಇಷ್ಟೆಲ್ಲ ಪಡಿಪಾಟಲು ಬೀಳುತ್ತಿದ್ದರೂ, ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ಹಗ್ಗ ಜಗ್ಗಾಟದಲ್ಲಿ ಕಾಲಕಳೆಯುತ್ತಿವೆ. ‘ನಾವು ಕಂಟ್ರಾಕ್ಟ್‌ ಆದ ರೈತರಿಂದ ಮಾತ್ರ ಕಬ್ಬು ಕೊಳ್ಳುತ್ತೇವೆ. ಆತ್ಮಹತ್ಯೆ ಮಾಡಿಕೊಂಡ  ರೈತರು ನಮ್ಮ  ಫ್ಯಾಕ್ಟರಿಗೆ ಕಬ್ಬು ಸರಬರಾಜು ಮಾಡಿದವರಲ್ಲ. ಕಳೆದ ವರ್ಷ ಕ್ವಿಂಟಾಲ್‌ಗೆ ಮೂರು ಸಾವಿರ ರೂಪಾಯಿ ಇದ್ದ ಸಕ್ಕರೆ ಬೆಲೆ, ಈ ವರ್ಷ 1900ಕ್ಕೆ ಇಳಿದಿದೆ. 774 ಲಕ್ಷ ರೂಪಾಯಿ ಬಾಕಿ ಇದೆ. ಸರ್ಕಾರ ಕೊಟ್ಟ ಕೂಡಲೆ ನಾವು ಹಣ ಬಿಡುಗಡೆ ಮಾಡ್ತೀವಿ’ ಮಂಡ್ಯದ ಮೈಶುಗರ್ ಕಾರ್ಖಾನೆಯ ಜನರಲ್ ಮ್ಯಾನೇಜರ್ ಪ್ರೇಂಕುಮಾರ್ ಕೈಚೆಲ್ಲುತ್ತಾರೆ.

‘ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆ ಎಂಬುದು ಸುಳ್ಳು. ಕಬ್ಬಿನ ಸಿಪ್ಪೆಯಿಂದ ಉತ್ಪಾದಿಸುವ ವಿದ್ಯುತ್, ಡಿಸ್ಟಲರಿ ಘಟಕಗಳಿಂದ ಸಾಕಷ್ಟು ಲಾಭ ಬರುತ್ತದೆ. ಅವುಗಳ ವಹಿವಾಟನ್ನು ಸಕ್ಕರೆ ಕಾರ್ಖಾನೆಗಳು ತಮ್ಮ ಲೆಕ್ಕಪತ್ರದಲ್ಲಿ ತೋರಿಸುವುದೇ ಇಲ್ಲ. ಸಕ್ಕರೆ ವಹಿವಾಟಿನ ಲೆಕ್ಕ ಮಾತ್ರ ತೋರಿಸುತ್ತಾರೆ. ಲಾಭ ಇಲ್ಲದೆ ಹೋದರೆ ಹೊಸ 15 ಕಾರ್ಖಾನೆಗಳು ಯಾಕೆ ಶುರುವಾಗ್ತಿದ್ದವು?’ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯ ಅದ್ಯಕ್ಷ ನಂಜುಂಡೇಗೌಡ ಪ್ರಶ್ನಿಸುತ್ತಾರೆ.

‘ನಿಜವಾದ ಕಷ್ಟದಲ್ಲಿರೋದು ರೈತರ ಬಂಡವಾಳದ ಸಹಕಾರಿ ಸಕ್ಕರೆ ಕಾರ್ಖಾನೆಗಳು. ಸರ್ಕಾರ ವಿದ್ಯುತ್ ತಯಾರಿಕ ಘಟಕ ಸ್ಥಾಪನೆಗೆ ಬೇಕಾದ ಮೂಲಬಂಡವಾಳ ಕೊಟ್ಟು, ಎಥನಾಲ್ ಉತ್ಪಾದನೆಗೆ ಪ್ರೋತ್ಸಾಹ ಕೊಟ್ಟರೆ, ಸಹಕಾರಿ ಸಕ್ಕರೆ ಕಾರ್ಖಾನೆಗಳು ಲಾಭದ ದಾರಿಗೆ ಬರುತ್ತವೆ. ತಮಿಳುನಾಡು ಸರ್ಕಾರ ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ ಪಡಿತರ ವಿತರಣೆಗೆ ಬೇಕಾದ ಸಕ್ಕರೆಯನ್ನು ರೂ 29 ಕೊಟ್ಟು ಕೊಳ್ಳುತ್ತಾರೆ. ನಮ್ಮಲ್ಲಿ 19 ರೂಪಾಯಿ ಕೊಟ್ಟು ಕೈತೊಳೆದುಕೊಳ್ಳುತ್ತಾರೆ"  ನಂಜುಂಡೇಗೌಡರು ಸಮಸ್ಯೆಯ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತಾರೆ.

‘ಬೀಜದ ಕಬ್ಬಿಗೆ 12 ಸಾವಿರ, ಬಿತ್ತನೆಗೆ 6 ಸಾವಿರ ಅಂತ ಎಕರೆಗೆ ನಲವತ್ತು ಸಾವಿರ ಖರ್ಚು ಮಾಡಿದ್ದೇನೆ. ಕಾರ್ಖಾನೆಗಳು ಈಗ ಕಬ್ಬು ತಗೊಳ್ಳಲ್ಲ ಅಂದರೆ ಸಾವೇ ಗತಿ’ ಎಂದು ಹಿರೇಮರಳ್ಳಿಯ ರೈತ ನಾರಾಯಣಗೌಡ ಅವಲತ್ತುಕೊಳ್ಳುತ್ತಾರೆ. ಮದ್ದೂರು ತಾಲ್ಲೂಕಿನ ನಗರಗೆರೆ ಮೊದಲಾದ ಹಳ್ಳಿಗಳಲ್ಲಿ ರೊಚ್ಚಿಗೆದ್ದ ರೈತರು ಕಬ್ಬನ್ನು ಟ್ರ್ಯಾಕ್ಟರಿನಿಂದ ತುಳಿಸಿ ಮಣ್ಣಿಗೆ ಸೇರಿಸುತ್ತಾರೆ. ‘ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಕಾರ್ಖಾನೆಗಳನ್ನು ಆರಂಭಿಸಬೇಕು. ಇಲ್ಲವಾದರೆ ಮಂಡ್ಯ, ರೈತರ ಸ್ಮಶಾನವಾಗುತ್ತದೆ’ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಎಚ್ಚರಿಸುತ್ತಾರೆ. ‘ಈಗ ಬಾಯ್ಲರ್ ರಿಪೇರಿ ಕೆಲಸ ನಡೆಯುತ್ತಿದೆ.  ಆಗಸ್ಟಗೆ ಕಬ್ಬು ಅರೆಯಲು ಶುರುಮಾಡ್ತೀವಿ’ –ಮೈ ಶುಗರ್ ಕಾರ್ಖಾನೆಯ ಪ್ರೇಮಕುಮಾರ್ ತಣ್ಣಗೆ ಹೇಳುತ್ತಾರೆ.

­ಯಾರೂ ನೋಡುತ್ತಿಲ್ಲ ಪರ್ಯಾಯಗಳತ್ತ
ರೈತ ಮುಖಂಡರು, ಅಧಿಕಾರಿಗಳು, ರೈತರು ಯಾರನ್ನೇ ಕೇಳಿನೋಡಿ. ಎಲ್ಲರೂ ಪರಿಹಾರದ ಮಾತನಾಡುತ್ತಾರೆ. ಕಳೆದ ಐದಾರು ವರ್ಷಗಳಿಂದ ಸಕ್ಕರೆ ಉದ್ಯಮ ನಷ್ಟದಲ್ಲಿದ್ದರೂ, ಸಕ್ಕರೆ ಬೆಲೆ ಕುಸಿಯುತ್ತಿದ್ದರೂ ಕಬ್ಬಿನ ಪರ್ಯಾಯ ಮೌಲ್ಯವರ್ಧನೆ, ಪರ್ಯಾಯ ಬೆಳೆಗಳ ಬಗ್ಗೆ ಯಾರೂ ಗಮನ ಹರಿಸದಿರುವುದದೇ ಆಶ್ಚರ್ಯ.  ಆಲೆಮನೆಗಳ ಪುನರುಜ್ಜೀವನ, ಸಾವಯವ ಬೆಲ್ಲ, ಬ್ರೌನ್ ಶುಗರ್, ಎಥೆನಾಲ್ ತಯಾರಿಕೆ ಬಗ್ಗೆ ಯಾವ ಮಾಹಿತಿಯೂ ಸಿಗುತ್ತಿಲ್ಲ. ರೈತರ ಗುಂಪೊಂದು, ತಾವೇ ಹಣ ಹಾಕಿ, ಬಾಯ್ಲರ್ ವಿಧಾನದಲ್ಲಿ ಬೆಲ್ಲ ಮಾಡುವ ಘಟಕ ಸ್ಥಾಪನೆಗೆ ಪ್ರಯತ್ನಿಸಿದರು. ಸರ್ಕಾರದ ಬೆಂಬಲ ದೊರಕದೆ ಮತ್ತು ತಾಂತ್ರಿಕ ಮಾಹಿತಿ ಕೊರತೆಯಿಂದ ಈ ಪ್ರಯತ್ನ ಯಶಸ್ವಿಯಾಗಲಿಲ್ಲ.

‘ವಿಜ್ಞಾನಿಗಳು ಮತ್ತು ಕೃಷಿ ಇಲಾಖೆಗಳು ಹೊಸ ತಳಿ ಬಿಡುಗಡೆ ಮಾಡಲು ಮಾತ್ರ ಕಾಳಜಿ ತೋರಿಸುತ್ತಾರೆ. ಕಬ್ಬಿನ ಜೊತೆ ಬೆಳೆಯಬಹುದಾದ ಉಪಬೆಳೆಗಳ ಬಗ್ಗೆ, ನೈಸರ್ಗಿಕ ಕೃಷಿಯ ಬಗ್ಗೆ ಕಾಳಜಿ ಇಲ್ಲ’ ಎಂದು ಕುರುಗೋಡಿನ ನೈಸರ್ಗಿಕ ಕೃಷಿಕ ಅನಂತರಾವ್ ಕಿಡಿ ಕಾರುತ್ತಾರೆ. ಸಾವಯವ ಕಬ್ಬಿನ ಕೃಷಿ, ಖಂಡ ಸಾರಿ ಸಕ್ಕರೆ ಕಾರ್ಖಾನೆಗಳು, ಆಲೆಮನೆಗಳ ಉನ್ನತೀಕರಣ, ಸಿರಿಧಾನ್ಯಗಳ ಕೃಷಿಯ ಬಗ್ಗೆ ಸರ್ಕಾರ ಮತ್ತು ಕೃಷಿ ಇಲಾಖೆ ಕಣ್ಣು ಮುಚ್ಚಿ ಕುಳಿತಿವೆ. ‘ಯಾವ ಅಧಿಕಾರಿನೂ ಹಳ್ಳಿಗೆ ಬಂದು ಗೈಡೆನ್ಸು ಕೊಡ್ತಿಲ್ಲಾ. ಸಾವಾದಾಗ ಕಣ್ಣೀರು ಒರೆಸೂ ನಾಟಕ ಆಡ್ತಾರೆ’ ಎಂದು ಗಾಣದ ಹೊಸೂರಿನ ನಾಗರಾಜು ಕೃಷಿ ಇಲಾಖೆಯನ್ನು ದೂರುತ್ತಾರೆ.

ಸಾವಿಗೆ ಶರಣಾದ ಬಹುಪಾಲು ರೈತರ ಸಾಲ ಎರಡು ಲಕ್ಷಕ್ಕಿಂತ ಕಡಿಮೆ ಇದೆ. ಸರ್ಕಾರ ಬಿಡುಗಡೆ ಮಾಡಿದ 946 ಕೋಟಿಯ ಪರಿಹಾರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗಷ್ಟೇ ಲಭಿಸುತ್ತದೆ. ಆಲೆಮನೆಗೆ 700 ರೂಪಾಯಿಗೆ ಕಬ್ಬು ಕೊಟ್ಟ ರೈತನಿಗೆ ಈ ಪರಿಹಾರದಲ್ಲಿ ಪಾಲಿಲ್ಲ. ಕೊನೆ ಪಕ್ಷ ಈ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೊಂದು ಸಹಕಾರಿ ಸಕ್ಕರೆ ಕಾರ್ಖಾನೆ ಅಥವಾ ಆಲೆಮನೆ ಮಾಡಿ ಕೊಡಬೇಕೆನ್ನುವ ಕನಿಷ್ಠ ಕಾಳಜಿ ಸರ್ಕಾರಕ್ಕಿಲ್ಲ. ‘ನಾವು ಹೊಲ ಬಿಟ್ಟು ಪ್ಯಾಕ್ಟರೀ ಕೆಲಸಕ್ಕೆ ಹೋಗೊದೇ ಲಾಭ. ಅದೊಂದೇ ದಾರಿ ನಮಗೆ ಉಳಿದಿರೋದು. ಊರಲ್ಲಿ ಉಳುದ್ರೆ ಸಾವೇ ಗತಿ’ ಎಂದು ಹಿರೇಮರಳಿಯ ಹೊನ್ನೇಗೌಡ ಒಣಗಿ ನಿಂತ ಕಬ್ಬಿನ ಗದ್ದೆಯತ್ತ ನಿರಾಶೆಯಿಂದ ನೋಡುತ್ತಾ ನಿಟ್ಟುಸಿರು ಬಿಡುತ್ತಾರೆ. ಅನ್ನದಾತನ ಸಾವಿನ ಸರಣಿ ಸಾಗುತ್ತಲೇ ಇದೆ.

ಕೃಷಿ ವಿ.ವಿಯ ‘ಪ್ರದರ್ಶನದ ಗೊಂಬೆ’
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮಂಡ್ಯದ ವಿ.ಸಿ.ಫಾರಂನಲ್ಲಿ ‘ಜಾಗರಿ ಪಾರ್ಕ್‌’ ಆರಂಭಿಸಿದೆ. 2008-09ನೇ ಸಾಲಿನಲ್ಲಿ ಪ್ರಯೋಗಾತ್ಮಕವಾಗಿ ಆರಂಭಗೊಂಡರೂ, ಉದ್ಘಾಟನೆಗೊಂಡದ್ದು 2011ರಲ್ಲಿ. ವೈಜ್ಞಾನಿಕವಾಗಿ ಗುಣಮಟ್ಟದ ಬೆಲ್ಲ ಉತ್ಪಾದಿಸುವ ತಂತ್ರಜ್ಞಾನ ಅಭಿವೃದ್ದಿಗೊಳಿಸುವ ಉದ್ದೇಶದ, 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಘಟಕ ಕಳೆದ ಸಾಲಿನಲ್ಲಿ 130 ಟನ್ ಕಬ್ಬು ಅರೆದು ಬೆಲ್ಲ ತಯಾರಿಸಿದೆ! ಅಂದರೆ 3 ಎಕರೆಯಲ್ಲಿ ಉತ್ಪಾದಿಸಿದ 3 ಲಕ್ಷ ಮೌಲ್ಯದ ಕಬ್ಬನ್ನು ಅರೆದ ಕೀರ್ತಿ ಕೃಷಿ ವಿ.ವಿಯದು. ರೋಂ ನಗರ ಹತ್ತಿ ಉರಿಯುವಾಗ ನಿರೋ ಪಿಟೀಲು ಬಾರಿಸುತ್ತಿದ್ದ ಎಂಬ ನಾಣ್ನುಡಿ ಕೃಷಿ ವಿ.ವಿಗೆ ಸೂಕ್ತವಾಗಿದೆ. ಕಬ್ಬು ಬೆಳೆಗಾರ ಸಂಕಷ್ಟಕ್ಕೆ ಸಿಲುಕಿರುವಾಗ, ರೈತರಿಗೆ ಕಬ್ಬು ಅರೆಯುವ ಅವಕಾಶ ನೀಡದೆ, ಜಾಗರಿ ಪಾರ್ಕನ್ನು ಪ್ರದರ್ಶನದ ಬೊಂಬೆಯಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT