ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಸೂಚನೆಗೂ ಕಿಮ್ಮ ತ್ತಿಲ್ಲ!

ಏಪ್ರಿಲ್ 1 ಸಮೀಪಿಸಿದರೂ ಮುಗಿಯದ ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿ
Last Updated 28 ಮಾರ್ಚ್ 2016, 5:09 IST
ಅಕ್ಷರ ಗಾತ್ರ

ವಿಜಯಪುರ: ‘ನಮ್ಮೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಗೂ ಕಿಮ್ಮತ್ತಿಲ್ಲದ ಪರಿಸ್ಥಿತಿ. ಸಚಿವರ ಆದೇಶ ಪ್ರಕಟಣೆಗಳಿಗೆ ಸೀಮಿತವಾಗುತ್ತಿವೆ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ...

ಇದಕ್ಕೆ ತಾಜಾ ಉದಾಹರಣೆ... ಮಾರ್ಚ್‌ 31ರೊಳಗೆ ವಿಜಯಪುರ ನಗರದಲ್ಲಿ ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿಯಡಿ ಕೈಗೆತ್ತಿಕೊಂಡಿರುವ ಮೂರು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡು, ಸುಸಜ್ಜಿತ ರಸ್ತೆ ಏಪ್ರಿಲ್ 1ರಂದು ಲೋಕಾರ್ಪಣೆಗೊಳ್ಳಬೇಕು.

ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಎಲ್ಲ ಅಡೆತಡೆ ನಿವಾರಿಸಿಕೊಂಡು, ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸಬೇಕು...
ಇದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಜಿಲ್ಲಾಡಳಿತ, ಮಹಾನಗರ ಪಾಲಿಕೆಗೆ ತಿಂಗಳುಗಳ ಹಿಂದೆ ನೀಡಿದ್ದ ಖಡಕ್‌ ಸೂಚನೆಯಿದು.
ಆದರೆ ನಾಲ್ಕು ದಿನ ಕಳೆದರೆ ಸಚಿವರು ನೀಡಿದ್ದ ಗಡುವು ಮುಗಿಯ ಲಿದೆ. ಗಾಂಧಿಚೌಕ್‌ನ ಪ್ರಸ್ತುತ ಚಿತ್ರಣ ಗಮನಿಸಿದರೆ ಈ ಒಂದು ರಸ್ತೆ ಲೋಕಾರ್ಪಣೆಗೊಳ್ಳಲು ಮತ್ತಷ್ಟು ವಾರಗಳು ಗತಿಸಬೇಕು ಎಂಬಂತಹ ಸ್ಥಿತಿಯಿದೆ.

ಉಳಿದ ಎರಡು ರಸ್ತೆಗಳ ಅಭಿವೃದ್ಧಿ ಅಲ್ಲಲ್ಲಿಗೆ ನಿಂತಿದೆ. ಇದಕ್ಕೆ ಯಾರನ್ನೂ ದೂರಬೇಕು ಎಂಬುದೇ ತೋಚದಾಗಿದೆ’ ಎಂದು ನಗರದ ನಿವಾಸಿ ರೆಹಮತುನ್ನೀಸಾ ‘ಪ್ರಜಾವಾಣಿ’ ಬಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದು ಇವರೊಬ್ಬರ ಆಕ್ರೋಶವಲ್ಲ. ಇವರ ಧ್ವನಿಗೆ ಗಾಂಧಿಚೌಕ್‌ ವೃತ್ತದ ಆಸುಪಾಸು ವಹಿವಾಟು ನಡೆಸುವ ವರ್ತಕ ಸಮೂಹ, ಮಹಾತ್ಮಗಾಂಧಿ ರಸ್ತೆ ಬದಿ ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ವರ್ತಕರು ಸಹಮತ ವ್ಯಕ್ತಪಡಿಸುತ್ತಾರೆ.

ಒಂದೂವರೆ ವರ್ಷ ಗತಿಸಿತು. ಲೋಕಾರ್ಪಣೆಯ ದಿನ ಆಗಾಗ್ಗೆ ಬದಲಾಗುತ್ತಾ ಘೋಷಣೆಯಾಗುತ್ತಿದೆ ವಿನಾಃ ಅನುಷ್ಠಾನಗೊಳ್ಳುತ್ತಿಲ್ಲ...
ನಗರದಲ್ಲಿ ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿ ಚಾಲನೆ ನಡೆದ ದಿನದಿಂದ ನಮ್ಮ ಬದುಕೇ ಮೂರಾಬಟ್ಟೆಯಾಗಿದೆ. ಕಂಡ ಕನಸು ಕಮರಿವೆ. ಬದುಕಿನ ಚಿತ್ರಣ ಅಯೋಮಯವಾಗಿದೆ...

ಬಿಸಿಲ ಝಳ ಹೆಚ್ಚಳ. ಇದರ ಜತೆಗೆ ಬೋನಸ್‌ ರೂಪದಲ್ಲಿ ದೂಳು. ಗಾಂಧಿ ಚೌಕ್‌ ಸುತ್ತ ಇದೀಗ ಸಂಚರಿಸಲು ಸಾಧ್ಯವಿಲ್ಲದ ಸ್ಥಿತಿ. ಎರಡ್ಮೂರು ತಿಂಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿ ಯಲ್ಲಿ ಸಾಗುತ್ತಿದ್ದು, ನಗರದ ಜನತೆ ನಿತ್ಯ ಹೈರಾಣ...

ಇದು ಗಾಂಧಿಚೌಕ್‌ ವೃತ್ತದಲ್ಲಿ ಮಾಸ್ಟರ್ ಪ್ಲ್ಯಾನ್‌ಗೆ ಸಂಬಂಧಿಸಿದಂತೆ ಕೇಳಿ ಬರುವ ಸಾಮಾನ್ಯ ಜನತೆಯ ದೂರು.

ಗಾಂಧಿಚೌಕ್‌ ಪೊಲೀಸ್‌ ಠಾಣೆ ಬಳಿ ಈ ಹಿಂದೆ ಮೇಲ್ಸೆತುವೆ ನಿರ್ಮಿಸಲಾಗಿತ್ತು. ರಸ್ತೆ ದಾಟುವ ಬಹುತೇಕ ಪ್ರಯಾಣಿಕರು ಇದನ್ನು ಬಳಸುತ್ತಿದ್ದರು. ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿ ಹೆಸರಿನಲ್ಲಿ ಮೇಲ್ಸೆತುವೆಗೆ ಹತ್ತುವ ಮೆಟ್ಟಿಲುಗಳನ್ನು ತೆರವುಗೊಳಿಸಿ ಒಂದೂವರೆ ವರ್ಷ ಉರುಳಿತು.

ಇದುವರೆಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ವಾಹನ ದಟ್ಟಣೆಯ ನಡುವೆ ರಸ್ತೆ ದಾಟಲು ನಮ್ಮ ಪರದಾಟ ಯಾರಿಗೂ ಹೇಳತೀರದಾಗಿದೆ ಎಂದು ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿನ ಅಂಗಡಿಯೊಂದಕ್ಕೆ ಕೆಲಸಕ್ಕೆ ತೆರಳುವ ಪ್ರಕಾಶ ಹಡಪದ ಅಸಮಾಧಾನ ವ್ಯಕ್ತಪಡಿಸಿದರು.

‘ಮಹಾನಗರ ಪಾಲಿಕೆ ಆಡಳಿತ ಜೀವಂತವಿದೆಯೋ ? ಇಲ್ಲವೋ ? ಎಂಬುದು ಯಾರಿಗೂ ತಿಳಿಯದಾಗಿದೆ. ಯಾವೊಬ್ಬ ಸದಸ್ಯರಿಗೂ ನಗರದ ಸಮಸ್ಯೆ ಪರಿಗಣನೆಗೆ ಬರುತ್ತಿಲ್ಲ. ಪಾಲಿಕೆಯ ಸಭೆಯಲ್ಲಿ ಚರ್ಚೆಯಾಗುತ್ತಿಲ್ಲ.

ಇವರ ಆಡಳಿತದ ಅವಧಿಯಲ್ಲಿ ನಗರದಲ್ಲಿ ಮಾಸ್ಟರ್‌ ಪ್ಲ್ಯಾನ್‌ ಸಮರ್ಪಕವಾಗಿ ಅನುಷ್ಠಾನಗೊಳ್ಳುವ ಯಾವ ವಿಶ್ವಾಸ, ನಂಬಿಕೆ ನಮ್ಮಗಿಲ್ಲದಾಗಿದೆ.
ಇದಕ್ಕೆ ಜೀವಂತ ನಿದರ್ಶನ ಎಂದರೇ ಗಾಂಧಿಚೌಕ್‌ ವೃತ್ತದಲ್ಲೇ ಇರುವ ಮಹಾನಗರ ಪಾಲಿಕೆಯ ಕಚೇರಿ.

ಒಂದೂವರೆ ವರ್ಷದ ಹಿಂದೆ ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿಗೆ ಚಾಲನೆ ನೀಡಿದ್ದೇ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಶತಮಾನದ ಐತಿಹಾಸಿಕ ಪಾಲಿಕೆಯ ಕಟ್ಟಡದಿಂದ.

ವರ್ಷ ಗತಿಸಿತು. ಮೇಯರ್‌ ಬದಲಾ ದರು. ಆದರೂ ಈ ಕಟ್ಟಡದ ನವೀಕರಣ ಇಂದಿಗೂ ನಡೆದಿಲ್ಲ. ತನ್ನ ಕಟ್ಟಡವನ್ನೇ ನವೀಕರಣಗೊಳಿಸದ ಪಾಲಿಕೆ ಆಡಳಿತ ನಗರದಲ್ಲಿ ಇನ್ಯಾವ ಮಟ್ಟಿಗೆ ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿ ಪೂರ್ಣಗೊಳಿಸಬಲ್ಲದು ಎಂಬುದಕ್ಕೆ ನೀವೇ ಉತ್ತರಿಸಿ’ ಎಂದು ಹಡಪದ ಪ್ರಶ್ನೆಗಳ ಸುರಿಮಳೆಗೈದರು.

‘ಆರಂಭದ ದಿನಗಳಲ್ಲಿ ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ತೋರುತ್ತಿದ್ದ ಉತ್ಸಾಹ, ಕಾಳಜಿ ಈಗ ಪ್ರದರ್ಶಿಸುತ್ತಿಲ್ಲ.
ಇನ್ನೂ ಮಾಸ್ಟರ್‌ಪ್ಲ್ಯಾನ್‌ ಕಾಮಗಾರಿ ಸೇರಿದಂತೆ ನಗರದ ಅಭಿವೃದ್ಧಿಗಾಗಿ ₨ 300 ಕೋಟಿ ಮೊತ್ತವನ್ನು ಬಜೆಟ್‌ನಲ್ಲಿ ಕೊಡಿಸುವುದಾಗಿ ಪ್ರಕಟಣೆ ನೀಡಿದ್ದ ವಿಜಯಪುರ ನಗರ ಶಾಸಕ, ನಗರಾಭಿವೃದ್ಧಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ.ಮಕ್ಬೂಲ್‌ ಬಾಗವಾನ ಇದೀಗ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

ನಗರದ ಅಭಿವೃದ್ಧಿಗಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಪಾಲಿಕೆ, ಜಿಲ್ಲಾಡಳಿತ, ಸಚಿವರಿಗೆ ಇನ್ನಾದರೂ ಸಾಥ್‌ ನೀಡಲಿ’ ಎನ್ನುತ್ತಾರೆ ಹೆಸರು ಬಹಿರಂಗಗೊಳಿಸಲಿಚ್ಚಿಸದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು.

*

ಐತಿಹಾಸಿಕ ನಗರಿ ವಿಜಯಪುರ ಇದೀಗ ದೂಳಾಪುರವಾಗಿದೆ. ಬಾರಾ ಕಮಾನ್‌ಗಳ ಸಂಖ್ಯೆ ಹೆಚ್ಚಿದೆ. ನಗರದ ಸೌಂದರ್ಯ ಹಾಳಾಗಿದೆ
ಮಲ್ಲಿಕಾರ್ಜುನ ಬಿರಾದಾರ
ವಿಜಯಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT