ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಭಾಷೆಗಳ ಕತ್ತು ಹಿಸುಕುವ ರಾಜಕಾರಣ

Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರುವ ಭಾಷೆಗಳ ಸಂಖ್ಯೆ 22. ಈ ಪಟ್ಟಿಗೆ ಸೇರಲು ಪ್ರಸ್ತುತ 38 ಭಾಷೆಗಳು ಹೋರಾಟ ನಡೆಸುತ್ತಿವೆ. ಈ ಹೋರಾಟಗಳನ್ನು ಸವಾಲಾಗಿ ಸ್ವೀಕರಿಸಲು ಸಿದ್ಧವಿಲ್ಲದ ಕೇಂದ್ರ ಸರ್ಕಾರವು ಎಂಟನೇ ಪರಿಚ್ಛೇದದ ಕೆಲವು ಸವಲತ್ತುಗಳನ್ನು ಕಡಿತಗೊಳಿಸಲು ಆರಂಭಿಸಿದೆ.

ಉದಾಹರಣೆಗೆ, ಕೇಂದ್ರ ಲೋಕಸೇವಾ ಆಯೋಗವು ಎಂಟನೇ ಪರಿಚ್ಛೇದದಲ್ಲಿ  ಹೊಸದಾಗಿ ಸೇರುವ ಭಾಷೆಗಳಲ್ಲಿ ಇದೀಗ ಪರೀಕ್ಷೆಗಳನ್ನು ನಡೆಸಬೇಕಾಗಿಲ್ಲ. ನೋಟುಗಳಲ್ಲಿ ಈ ಭಾಷೆಗಳು ಕಾಣಿಸಿಕೊಳ್ಳಬೇಕಿಲ್ಲ. ಸರ್ಕಾರ ಸಣ್ಣ ಭಾಷೆಗಳ ಸಬಲೀಕರಣ ಪ್ರಕ್ರಿಯೆಯ ಕತ್ತುಹಿಸುಕುವ ಕೆಲಸದಲ್ಲಿ ತೊಡಗಿದೆ.

ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಆಳುವ ಶಕ್ತಿಶಾಲಿ ಭಾಷೆಯಾಗಿ ಇಂಗ್ಲಿಷ್ ಹೊರಹೊಮ್ಮಿದೆ. ಇಂಗ್ಲಿಷ್ ಭಾಷೆ ಕಲಿತರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಜಗತ್ತಿನ ಅನೇಕ ದೇಶಗಳು ಈ ಬೆಳವಣಿಗೆಯನ್ನು ಒಪ್ಪಿಕೊಂಡಿದ್ದಾರೆ. ಸರಿಯೋ ತಪ್ಪೋ ಬೇರೆ, ಆದರೆ ಹೊಸ ತಲೆಮಾರಿನ ಜನರು ಇಂಗ್ಲಿಷ್‌ ಅನ್ನು ಅನ್ನದ ಭಾಷೆಯಾಗಿ ಗ್ರಹಿಸಿದ್ದಾರೆ.

ಚೀನಾ, ಜಪಾನ್, ಜರ್ಮನಿ, ರಷಿಯಾ ಮೊದಲಾದ ದೇಶಗಳಲ್ಲಿ ಇಂಗ್ಲಿಷ್ ಕಲಿಕಾ ಕೇಂದ್ರಗಳು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ವಸಾಹತು ಆಡಳಿತಕ್ಕೆ ಒಳಪಟ್ಟ ದೇಶಗಳಲ್ಲಿ ಇಂಗ್ಲಿಷಿನ ಬಗೆಗಿನ ಮೋಹ ಇಮ್ಮಡಿಸುತ್ತಿದೆ. ಅದೇನೇ ಇರಲಿ, ಇಂಗ್ಲಿಷ್‌ನ ಸದ್ಯದ ಪಾರಮ್ಯವನ್ನು ಶಾಶ್ವತವಾದ ಒಂದು ಪ್ರಕ್ರಿಯೆಯೆಂದು ಭಾವಿಸಬೇಕಾಗಿಲ್ಲ.

ಒಂದು ಕಾಲದಲ್ಲಿ ಅತೀವ ಶಕ್ತಿಶಾಲಿಯಾಗಿದ್ದ ಸಂಸ್ಕೃತ, ಲ್ಯಾಟಿನ್, ಗ್ರೀಕ್, ಮೊದಲಾದ ಭಾಷೆಗಳು ಇಂದು ತಮ್ಮ ಉಳಿಯುವಿಕೆಗಾಗಿ ಒದ್ದಾಡುತ್ತಿರುವುದನ್ನು ನಾವು ಮರೆಯಬಾರದು.

ಇಂಗ್ಲಿಷ್‌ಗೂ ಅಂಥ ಗತಿ ಒಂದು ದಿನ ಬರಬಾರದೆಂದಿಲ್ಲ. ಆದರೆ ವರ್ತಮಾನ ಕಾಲದಲ್ಲಿ ಅದರ ಪಾರಮ್ಯವನ್ನು ಒಪ್ಪಿಕೊಳ್ಳದಿದ್ದರೆ ಇತಿಹಾಸ ನಮ್ಮನ್ನು ಕ್ಷಮಿಸದು. ಹಾಗೆ ಒಪ್ಪಿಕೊಂಡಾಗ ಮಾತ್ರ ಅದು ಉಂಟುಮಾಡುವ ಅನಾಹುತಗಳ ಬಗ್ಗೆ ನಮಗೆ ವಿಸ್ತಾರವಾಗಿ ಚರ್ಚಿಸಲು ಸಾಧ್ಯ, ಮತ್ತು ಅದರ ವಿರುದ್ಧ ಕೆಲವು ಬಗೆಯ ನಿರ್ಧಾರಗಳನ್ನು ತೆಗೆದುಕೊಳ್ಳಲೂ ಸಾಧ್ಯ. ಆದರೆ ಭಾರತದ ಭಾಷಾ ರಾಜಕೀಯವು ಅಂಥ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. 

ಮುಖ್ಯವಾಗಿ, ಇಂಗ್ಲಿಷ್‌ನ ಪ್ರಾಬಲ್ಯವು ಜಗತ್ತಿನಾದ್ಯಂತ ಸಜೀವವಾಗಿರುವ ಸಾವಿರಾರು ಸಣ್ಣ ಭಾಷೆಗಳನ್ನು ಸಾಯಿಸುತ್ತಿರುವುದರ ಬಗ್ಗೆ ಆಯಾ ದೇಶಗಳ ಸರ್ಕಾರಗಳು ಏನೂ ಕ್ರಮ ಕೈಗೊಳ್ಳದಿರುವುದೇ ಅವುಗಳ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ.

ಅಧಿಕಾರಿಗಳು ಮತ್ತು ಸರ್ಕಾರಗಳು ಸಣ್ಣ ಭಾಷೆಗಳ ಕುರಿತು ತೋರುತ್ತಿರುವ ನಿರ್ಲಕ್ಷ್ಯವು ಅವುಗಳನ್ನು ಜಗತ್ತಿನಾದ್ಯಂತ ಅವಸಾನದ ಅಂಚಿಗೆ ತಂದು ನಿಲ್ಲಿಸಿವೆ ಮಾತ್ರವಲ್ಲ, ಇಂಗ್ಲಿಷ್‌ನ ಅಧಿಪತ್ಯವನ್ನು ಸುಲಭವಾಗಿ ಒಪ್ಪಿಕೊಳ್ಳುವಂತೆ ಮಾಡಿವೆ. ಮಾತೃಭಾಷೆಯಲ್ಲಿ ಎಲ್ಲವನ್ನೂ ಸಾಧಿಸಿದ ದೇಶಗಳು ಕೂಡಾ ಇಂದು ಇಂಗ್ಲಿಷ್‌ಗಾಗಿ ಹಪಹಪಿಸುತ್ತಾ ತಮ್ಮದೇ ದೇಶದ ಅನೇಕ ಭಾಷೆಗಳ ಸಾವಿಗೆ ಕಾರಣವಾಗುತ್ತಿವೆ. 

ಭಾರತದಲ್ಲಿ ಈ ಸಮಸ್ಯೆ ಇನ್ನೂ ತೀವ್ರತರವಾಗಿದ್ದರೂ, ಅವಸಾನದ ಅಂಚಿನಲ್ಲಿರುವ ಸಣ್ಣ ಭಾಷೆಗಳ ಉಳಿಯುವಿಕೆಯ ಕುರಿತು ಸಂವಾದ ನಡೆಯುತ್ತಿಲ್ಲ. ಇಂದು ಈ ದೇಶದಲ್ಲಿ ಬಹಳ ಪ್ರಭಾವಶಾಲಿಯಾಗಿರುವ ಮಾಧ್ಯಮಗಳಿಗೂ ಈ ಕುರಿತು ಆಸಕ್ತಿಯಿಲ್ಲ. ಭಾಷೆಯ ಅವನತಿಯ ಅಪಾಯಗಳ ಕುರಿತು ತಿಳಿವಳಿಕೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. 

ಇಂದು ಜಗತ್ತಿನಾದ್ಯಂತ ಸುಮಾರು 7,000 ಭಾಷೆಗಳನ್ನು ಜೀವಂತವಿರುವ ಸಣ್ಣ ಭಾಷೆಗಳೆಂದು ಗುರುತಿಸಲಾಗಿದೆ. ಇದರಲ್ಲಿ ಸುಮಾರು 3,700ರಷ್ಟು ಭಾಷೆಗಳು ಭಾರತದಲ್ಲಿಯೇ ಇವೆ. ಈ ಎಲ್ಲ ಭಾಷೆಗಳು ಇಂದು ಅಪಾಯದಲ್ಲಿವೆ. ದ್ರಾವಿಡ ಭಾಷಾ ವರ್ಗದ ಸ್ವತಂತ್ರ ಭಾಷೆಗಳಲ್ಲೊಂದಾದ, ಕೊರಗ ಭಾಷೆಯನ್ನಾಡುವ ಜನ ಇಂದು ಬೆರಳೆಣಿಕೆಯಲ್ಲಿದ್ದಾರೆ. ಈ ಭಾಷೆಯ ಜಾಗವನ್ನು ತುಳು ಪೂರ್ತಿಯಾಗಿ ಆಕ್ರಮಿಸಿಕೊಂಡಿದೆ.

ಸಾವಿರಾರು ಭಾಷೆಗಳಿರುವ ಭಾರತದಲ್ಲಿ ಇದೀಗ ಕೇವಲ 22 ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಿ ಅವುಗಳನ್ನು ಸಬಲೀಕರಣಗೊಳಿಸಲು ಯತ್ನಿಸಲಾಗಿದೆ.

ಈಚಿನ ದಿನಗಳಲ್ಲಿ ತುಳು, ಕೊಡವ, ಶೌರಸೇನೀ, ಅಂಗಿಕಾ, ಬಂಜಾರಾ, ಬಾಜಿಕಾ, ಭೋಟಿಯಾ, ಬುಂದೇಲಖಂಡೀ, ಛತ್ತೀಸ್ ಘರಿ, ಗೋಂಡೀ, ಗರ್ವಾಲಿ, ಖಾಸೀ  ಭೋಜಪುರಿ, ರಾಜಸ್ತಾನಿ, ಕುರುಕ್, ಮಿಜೋ ಮೊದಲಾದ 38 ಭಾಷೆಗಳು ಈ ಪಟ್ಟಿಗೆ ಸೇರಲು ಹೋರಾಟ ನಡೆಸುತ್ತಿವೆ. ಪ್ರಖ್ಯಾತ ಭಾಷಾತಜ್ಞ ಪ್ರೊ. ಬ್ರಜ್‌ಕಚ್ರೂ ಅವರ ಪ್ರಕಾರ, ಭಾರತದ 72 ಭಾಷೆಗಳು ಎಂಟನೇ ಪರಿಚ್ಛೇದಕ್ಕೆ ಸೇರಲು ಅರ್ಹವಾಗಿವೆ.

ಈ ಹೋರಾಟಗಳನ್ನು ಸವಾಲಾಗಿ ಸ್ವೀಕರಿಸಲು ಸಿದ್ಧವಿಲ್ಲದ ಕೇಂದ್ರ ಸರ್ಕಾರವು ಎಂಟನೇ ಪರಿಚ್ಛೇದದ ಕೆಲವು ಸವಲತ್ತುಗಳನ್ನು ಕಡಿತಗೊಳಿಸಲು ಆರಂಭಿಸಿದೆ. ಉದಾಹರಣೆಗೆ, ಕೇಂದ್ರ ಲೋಕಸೇವಾ ಆಯೋಗವು ಎಂಟನೇ ಪರಿಚ್ಛೇದದಲ್ಲಿ  ಹೊಸದಾಗಿ ಸೇರುವ ಭಾಷೆಗಳಲ್ಲಿ ಇದೀಗ ಪರೀಕ್ಷೆಗಳನ್ನು ನಡೆಸಬೇಕಾಗಿಲ್ಲ. ನೋಟುಗಳಲ್ಲಿ ಈ ಭಾಷೆಗಳು ಕಾಣಿಸಿಕೊಳ್ಳಬೇಕಿಲ್ಲ.

ಹೀಗೇ ಸರ್ಕಾರವೇ ಸಣ್ಣ ಭಾಷೆಗಳ ಸಬಲೀಕರಣ ಪ್ರಕ್ರಿಯೆಯ ಕತ್ತುಹಿಸುಕುವ ಕೆಲಸದಲ್ಲಿ ತೊಡಗಿದೆ. ಅದಕ್ಷ ಅಧಿಕಾರಿಗಳ ಮತ್ತು ಮುನ್ನೋಟವಿಲ್ಲದ ರಾಜಕಾರಣಿಗಳ ಸಂಲಗ್ನದಲ್ಲಿ ಅನೇಕ ಭಾಷೆಗಳು ಅವಸಾನದಂಚಿಗೆ ಚಲಿಸುತ್ತಿವೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಾದೇಶಿಕ ಭಾಷೆಗಳಿಗೇನೋ ಮಹತ್ವ ಬಂದಿತು.

ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದುವು. ಇದನ್ನು ಇನ್ನಷ್ಟು ವಿವರವಾಗಿ ಗಮನಿಸಿದರೆ ಭಾಷಾ ರಾಜಕೀಯದ ಬಗೆಗೆ ಕೆಲವು ಒಳನೋಟಗಳು ದೊರೆಯುತ್ತವೆ.

ಭಾಷೆಯೊಂದು ಯಾವುದೇ ರಾಜ್ಯದ ಅಧಿಕೃತವಾದ ಭಾಷೆಯೆಂದು ಘೋಷಣೆಗೆ ಒಳಗಾದಾಗ ಅದು ಸಹಜವಾಗಿ ಎಂಟನೇ ಪರಿಚ್ಛೇದಕ್ಕೆ ಸೇರುತ್ತದೆ. ಕಾರಣ ಸಂವಿಧಾನ ಅಸ್ತಿತ್ವಕ್ಕೆ ಬಂದಾಗ 14 ಭಾಷೆಗಳನ್ನು ಪಟ್ಟಿಗೆ ಸೇರಿಸಲಾಯಿತು. ಮುಂದೆ 1967ರಲ್ಲಿ ಸಿಂಧಿ, 1992ರಲ್ಲಿ ಕೊಂಕಣಿ, ಮಣಿಪುರಿ ಮತ್ತು ನೇಪಾಲಿ ಭಾಷೆಗಳನ್ನು ಸೇರಿಸಲಾಯಿತು.

ಆದರೆ 2003ರಲ್ಲಿ ಭಾರತದ ಸಂವಿಧಾನದಲ್ಲಿ 92ನೇ ಬದಲಾವಣೆ ಮಾಡಿ, ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಬೋಡೋ, ಡೋಗ್ರಿ, ಸಂತಾಲಿ ಮತ್ತು ಮೈಥಿಲಿ ಭಾಷೆಗಳನ್ನು ಸೇರಿಸಲಾಯಿತು. ಸರ್ಕಾರದ ಅಧಿಕೃತ ಕಡತಗಳು ಏನೇ ಹೇಳಲಿ– ಈ ನಾಲ್ಕು ಭಾಷೆಗಳು ಕೇವಲ ಅರ್ಹತೆಯಿಂದ ಸೇರಿವೆ ಎಂದೇನೂ ಭಾವಿಸಬೇಕಾಗಿಲ್ಲ.

ಡೋಗ್ರಿ ಭಾಷೆಯ ಹಿಂದೆ ಮಹಾರಾಜಾ ಕರಣ್ ಸಿಂಗ್ ಮತ್ತು ಹೊತ್ತಿ ಉರಿಯುತ್ತಿರುವ ಕಾಶ್ಮೀರ ಸಮಸ್ಯೆ ಸೇರಿಕೊಂಡಿತ್ತು. ಅಸ್ಸಾಂಗೆ ಭೇಟಿ ನೀಡಿದ್ದ ಆಗಣ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತ್ಯೇಕ ಬೋಡೋಲ್ಯಾಂಡ್ ಕೇಳುತ್ತಿರುವ ಬೋಡೋ ಬುಡಕಟ್ಟಿನ ಜನರನ್ನು ಮೆಚ್ಚಿಸಲು ಅವರ ಭಾಷೆಗೆ ಮನ್ನಣೆ ನೀಡುವ ಕೆಲಸ ಮಾಡಿದರು.

ಮೈಥಿಲಿ ಭಾಷೆಯ ಹಿಂದೆ ಅಂದಿನ ಗೃಹಸಚಿವ ಎಲ್.ಕೆ. ಅಡ್ವಾಣಿ ಅವರ ಆಸಕ್ತಿಯಿತ್ತು ಮತ್ತು ಸಂತಾಲಿ ಭಾಷೆಯ ಹಿಂದೆ ಪಶ್ಚಿಮಬಂಗಾಳ ಸರ್ಕಾರದ ಒತ್ತಡವಿತ್ತು. ತುಳು ಮತ್ತು ಕೊಡವ ಭಾಷೆಗಳಿಗೆ ಈ ಮಟ್ಟದ ಹೋರಾಟಗಾರರು ಸಿಗಲಿಲ್ಲವಾದ್ದರಿಂದ ಕನಸು ಹಾಗೆಯೇ ಉಳಿಯಿತು. ಒಂದು ಭಾಷೆಯು ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಾಗ ಕೇಂದ್ರ ಸರ್ಕಾರ ಆ ಭಾಷೆಯ ಬಗ್ಗೆ ಯೋಚಿಸಲಾರಂಭಿಸುತ್ತದೆ ಎಂಬ ಅಂಶ ಅಷ್ಟೇನೂ ಆಹ್ಲಾದಕರವಾದುದಲ್ಲ.

ಒಟ್ಟಾರೆಯಾಗಿ ಇದೀಗ ಉತ್ತರ ಭಾರತದ 18 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿವೆ. ಆದರೆ ದಕ್ಷಿಣ ಭಾರತದ ಕೇವಲ 4 ಭಾಷೆಗಳಿಗೆ ಅಲ್ಲಿ ಸ್ಥಾನ ಸಿಕ್ಕಿದೆ. ಈಗ ಸೀತಾಕಾಂತ ಮಹಾಪಾತ್ರ ಸಮಿತಿಯ ಮುಂದಿರುವ 38 ಭಾಷೆಗಳಲ್ಲಿ ದಕ್ಷಿಣ ಭಾರತದ್ದು ಕೇವಲ ಎರಡು ಭಾಷೆಗಳಿವೆ, ಉತ್ತರ ಭಾರತದ್ದು 36 ಭಾಷೆಗಳು. ಇದೊಂದು ಅಪಾಯಕಾರೀ ಪ್ರಾದೇಶಿಕ ಅಸಮತೋಲನ. ದಕ್ಷಿಣ ಭಾರತದ ರಾಜಕಾರಣಿಗಳಿಗೆ ಈ ಬಗ್ಗೆ ನಾವೆಲ್ಲ ತಿಳಿಸಿ ಹೇಳಬೇಕಾಗಿದೆ.

ತುಳು–ಕೊಡವದಂಥ ನೂರಾರು ಸಣ್ಣ ಭಾಷೆಗಳ ಮುಂದೆ ಇಂದು ಹಲವು ಸವಾಲುಗಳಿವೆ. ಈ ಸಣ್ಣ ಭಾಷೆಗಳನ್ನು ಆಯಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಅಧಿಕೃತ ಭಾಷೆಯೆಂದು ಇದುವರೆಗೂ ಘೋಷಿಸಿಲ್ಲ.

ಆಂಧ್ರಪ್ರದೇಶವು ತೆಲುಗು  ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು, ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು, ದೆಹಲಿ ಸರ್ಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. 

ಇದು ಹೌದಾದರೆ, ಕರ್ನಾಟಕವು ಕೊಡವ ಮತ್ತು ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಯಾಕೆ ಮಾನ್ಯ ಮಾಡಬಾರದು? ಹಾಗೆ ಮಾನ್ಯ ಮಾಡದೇ ಇರುವುದರಿಂದ ಕೇಂದ್ರ ಸರ್ಕಾರಕ್ಕೆ ಸುಲಭವಾಗಿ ನುಣುಚಿಕೊಳ್ಳಲು ಸಾಧ್ಯವಾಗಿದೆ.

ಈ ನಡುವೆ ಭಾಷೆಯ ಕುರಿತು ಹೆಚ್ಚು ತಿಳಿವಳಿಕೆ ಮೂಡುತ್ತಿದ್ದಂತೆ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಬೇಡಿಕೆ ಇಟ್ಟ ಭಾಷೆಗಳ ಪಟ್ಟಿ ಉದ್ದವಾಗುತ್ತಿದೆ. ಕೇಂದ್ರ ಸರ್ಕಾರ ಇದಕ್ಕೆ ಇವತ್ತಲ್ಲ ನಾಳೆ ಉತ್ತರಿಸಲೇಬೇಕಾಗುತ್ತದೆ. ಸರ್ಕಾರದ ದಿವ್ಯ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತಗಳನ್ನು ಉಂಟುಮಾಡಲಿದೆ.

ಸಣ್ಣ ಭಾಷೆಗಳು ಸಬಲೀಕರಣಗೊಳ್ಳಲು ಅವುಗಳನ್ನು ಶಿಕ್ಷಣ, ಅಭಿವೃದ್ಧಿ, ಧಾರ್ಮಿಕ ಚಟುವಟಿಕೆಗಳು ಮತ್ತು ಮಾಧ್ಯಮಗಳಲ್ಲಿ ಸರ್ಕಾರ ಮತ್ತು ಜನತೆ ಹೇರಳವಾಗಿ ಬಳಸುವಂತಾಗಬೇಕು. ಈ ಭಾಷೆಗಳಲ್ಲಿ ಪಠ್ಯಪುಸ್ತಕಗಳು ರಚನೆಯಾಗಿ, ಆ ಭಾಷೆಯನ್ನಾಡುವ ಜನರು ಮೂಲಭೂತ ಶಿಕ್ಷಣವನ್ನು ಅದರಲ್ಲಿ ಪಡೆಯಬೇಕು.

ಅವರ ಧಾರ್ಮಿಕ ಆಚರಣೆಗಳಿಗೆ ಸಂಸ್ಕೃತದ ಪ್ರವೇಶ ನಿಲ್ಲಬೇಕು. ಕೇಂದ್ರ ಸರ್ಕಾರವು ಸಣ್ಣ ಭಾಷೆಗಳಿಗೆ ಪ್ರತ್ಯೇಕ ಚಾನಲ್‌ಗಳನ್ನು ಆರಂಭಿಸಬೇಕು. ಈ ಚಟುವಟಿಕೆಗಳು ಆಯಾ ಭಾಷೆಗಳ ಪ್ರಾದೇಶಿಕ ಸತ್ವಕ್ಕೆ ಮನ್ನಣೆ ನೀಡಬೇಕು. ನೈಜೀರಿಯಾದ ಭಾಷಾಶಾಸ್ತ್ರಜ್ಞ ಉವಾಜೆ ಅವರು ವಾದಿಸಿದಂತೆ, ಮೊದಲು ಸಣ್ಣ ಭಾಷೆಗಳಲ್ಲಿ ಬೌದ್ಧಿಕ ಚಟುವಟಿಗೆಳು ಹೆಚ್ಚು ಹೆಚ್ಚು ನಡೆಯಬೇಕು.

ಇಂದು ಆಫ್ರಿಕಾದ ಯೊರುಬಾದಂಥ ಭಾಷೆಯು ಮತ್ತೆ ಶಕ್ತಿಶಾಲಿಯಾಗಿ ಬೆಳೆಯಲು ಆ ಭಾಷೆಯ ಮೊದಲ ಪ್ರಾಧ್ಯಾಪಕ ಅಕಿನ್ವುಮಿ ಇಸೋಲಾ ಮಾಡಿದ ಕೆಲಸಗಳು ಕಾರಣ. ಆದರೆ ನಮ್ಮಲ್ಲಿ ತುಳು–ಕೊಡವದಂಥ ಭಾಷೆಗಳಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಾಧ್ಯಾಪಕರೇ ಇಲ್ಲ. ಕನ್ನಡದ ಅಧ್ಯಾಪಕರೇ ಈ ಭಾಷೆಗಳ ಉದ್ಧಾರದ ಕೆಲಸಗಳನ್ನೂ ಮಾಡಬೇಕಾಗಿದೆ.

ದ್ರಾವಿಡ ಭಾಷಾ ವರ್ಗದಲ್ಲಿ ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಮಾತ್ರ ಸಾವಿರಾರು ಅಧ್ಯಾಪಕರಿದ್ದಾರೆ. ಉಳಿದ ಸುಮಾರು 24 ಸ್ವತಂತ್ರ ಭಾಷೆಗಳಲ್ಲಿ ಪ್ರಾಧ್ಯಾಪಕರು ಏಕಿಲ್ಲ? ಈ ವಿಷಯದಲ್ಲಿ  ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾಕೆ ಮೌನವಾಗಿವೆ?

ಇಂದು ಸಣ್ಣ ಭಾಷೆಗಳ ಅಭಿವೃದ್ಧಿಯ ಕುರಿತು ರಾಜ್ಯ ಸರ್ಕಾರವಾಗಲೀ ಕೇಂದ್ರ ಸರ್ಕಾರವಾಗಲೀ ಗಂಭೀರವಾಗಿ ಯೋಚಿಸುತ್ತಿಲ್ಲ. ಜನರು ತಾವಾಗಿಯೇ ಧ್ವನಿ ಎತ್ತರಿಸಿದರೆ, ಅದನ್ನು ಜಾಣತನದಿಂದ ಅಡಗಿಸಲಾಗುತ್ತಿದೆ. ರಾಜಕೀಯವಾಗಿ ಪ್ರಬಲವಾಗಿರುವ ಜನರ ಭಾಷೆಗಳು ಎಲ್ಲ ಸವಲತ್ತುಗಳನ್ನೂ ಪಡೆದುಕೊಳ್ಳುತ್ತಿವೆ. ದುರ್ಬಲರ ಭಾಷೆಗಳು ವಿನಾಶದತ್ತ ಚಲಿಸುತ್ತಿವೆ. ಅದೊಂದು ಅನಾಹುತಕಾರೀ ಬೆಳವಣಿಗೆಯಾಗಿ ಕಾಣುವ ದಿನಗಳು ಹತ್ತಿರ ಬರುತ್ತಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT