ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನಗಳಲ್ಲಿ ಕೋಲಾಹಲ

ಕಾಶಪ್ಪನವರ ಪ್ರಕರಣ ಸಿಸಿಬಿಗೆ ವರ್ಗಾವಣೆ
Last Updated 4 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶ­ಪ್ಪ­­ನವರ ಪ್ರಕರಣ ವಿಧಾನ­ಮಂಡ­ಲದ ಉಭಯ ಸದನಗಳಲ್ಲಿ ಶುಕ್ರವಾರ ಭಾರೀ ಕೋಲಾಹಲಕ್ಕೆ ಕಾರಣವಾಯಿತು.

ಆಡಳಿತರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರು ಆರೋಪ– ಪ್ರತ್ಯಾರೋಪದಲ್ಲಿ ತೊಡಗಿದರು. ಸರ್ಕಾ­ರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಧರಣಿ ನಡೆಸಿದರೆ, ಪರಿಷತ್‌ನಲ್ಲಿ ಸಭಾತ್ಯಾಗ ಮಾಡಿದರು.

ವಿಧಾನಸಭೆಯಲ್ಲಿ ಕಲಾಪ ಆರಂಭ­ವಾದ ತಕ್ಷಣ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಅವರು ಕಾಶಪ್ಪನವರ ಪ್ರಕರಣ­ವನ್ನು ಪ್ರಸ್ತಾಪಿಸಿದರು. ‘ಇದೊಂದು ತಲೆ­ತಗ್ಗಿಸುವ ಘಟನೆ. ಆದರೆ ಸರ್ಕಾರ ಅವ­ರನ್ನು ರಕ್ಷಿಸಲು ಪ್ರಯತ್ನ ನಡೆಸಿದೆ.  ಇಡೀ ಘಟನೆ ಸಂಬಂಧ ಗೃಹ ಸಚಿವರು ಹೇಳಿಕೆ ನೀಡಬೇಕು’ ಎಂದು ಆಗ್ರಹಿಸಿದರು.

ಶೆಟ್ಟರ್‌ ಅವರು ವಿಷಯ ಪ್ರಸ್ತಾಪಿಸು­ವಾಗ ಸರ್ಕಾರದ ಕಡೆಯಿಂದ ಇಬ್ಬರು ಸಚಿವರು (ಶ್ರೀನಿವಾಸಪ್ರಸಾದ್‌ ಮತ್ತು ಮಹದೇವಪ್ರಸಾದ್‌), ಬೆರಳೆಣಿಕೆ­ಯಷ್ಟು ಶಾಸಕರು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಇದನ್ನೇ ದಾಳವಾಗಿ ಉಪಯೋಗಿಸಿದ ಬಿಜೆಪಿ ಸದಸ್ಯರು ಸರ್ಕಾ­­­ರವನ್ನು ತರಾಟೆಗೆ ತೆಗೆದುಕೊಂಡರು.

ಏಟು– ತಿರುಗೇಟು: ಪ್ರಶ್ನೋತ್ತರ ಕಲಾಪ ನಂತರ ಶೂನ್ಯ ವೇಳೆಯನ್ನು ಕೈಗೆತ್ತಿಕೊಳ್ಳುತ್ತಿದ್ದು, ಆ ಸಂದರ್ಭದಲ್ಲಿ ಸರ್ಕಾರದಿಂದ ಉತ್ತರ ಕೊಡಿಸಲಾ­ಗುವುದು ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿ ಬಿಜೆಪಿ ಸದಸ್ಯರನ್ನು ಸಮಾ­ಧಾನಪಡಿಸಲು ಯತ್ನಿಸಿದರು. ಅದಕ್ಕೆ ಬಿಜೆಪಿ ಸದಸ್ಯರು ಒಪ್ಪಲಿಲ್ಲ. ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು.

‘ಎಲ್ಲಿ, ಎಲ್ಲಿ ಕಾಶಪ್ಪನವರ ಎಲ್ಲಿ?, ‘ಇಲ್ಲ, ಇಲ್ಲ ಕಾಶಪ್ಪನವರ ಇಲ್ಲ’... ಎಂದು  ಘೋಷಣೆ ಕೂಗಿದರು. ಅತ್ತ ಕಾಂಗ್ರೆಸ್‌ ಸದಸ್ಯರಿಂದಲೂ ಘೋಷ­ಣೆ­ಗಳು   ಮೊಳಗಿದವು. ‘ಹೋದರು ಹೋದರು ಹಾಲಪ್ಪ ಹೋದರು’, ‘ನೋಡಿ­ದರು, ನೋಡಿ­ದರು ಸದನದಲ್ಲೇ ಬ್ಲೂಫಿಲಂ’... ಎಂದು ತಿರುಗೇಟು ನೀಡಿದರು.

ಹೀಗೆ ವಾಗ್ವಾದ ನಡೆಯುತ್ತಿದ್ದಾಗಲೇ ಗೃಹ ಸಚಿವ ಕೆ.ಜೆ.ಜಾರ್ಜ್‌, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವರು ಸದನಕ್ಕೆ ಬಂದರು.

ಸಭಾಧ್ಯಕ್ಷರು ಸಚಿವರನ್ನು ಉದ್ದೇಶಿಸಿ, ‘ಉತ್ತರ ನೀಡಲು ನಿಮಗೇನು ಕಷ್ಟ. ಉತ್ತರ ಕೊಟ್ಟುಬಿಡಿ’ ಎಂದರು. ಬಳಿಕ ಧರಣಿ ನಿರತ ಬಿಜೆಪಿ ಸದಸ್ಯರು ಉತ್ತರದ ನಿರೀಕ್ಷೆಯಲ್ಲೇ ಆಸನಗಳತ್ತ ತೆರಳಿದರು.

ಸಚಿವ ಜಾರ್ಜ್‌ ಮಾತನಾಡಿ, ‘ಶೂನ್ಯ ವೇಳೆಯಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರ ನೀಡಲು 3 ದಿನ ಸಮಯಾವಕಾಶ ಇರು­ತ್ತದೆ. ನಿಯಮ ಗಾಳಿಗೆ ತೂರಿ, ಇವರು ಹೇಳಿದ ಹಾಗೆ ಉತ್ತರ ನೀಡಲು ಆಗು­ವುದಿಲ್ಲ. ಪ್ರಶ್ನೋತ್ತರ ಕಲಾಪ ನಂತರವೇ ಉತ್ತರ ಕೊಡುತ್ತೇನೆ’ ಎಂದರು.

‘ಉತ್ತರ ಕೊಡಿ’ ಎನ್ನುತ್ತಿದ್ದ ಸಭಾ­ಧ್ಯಕ್ಷರು, ಸಚಿವರ ಹೇಳಿಕೆ ನಂತರ ‘ಈಗಲೇ ಉತ್ತರ ಹೇಳಿ ಅಂತ ಸೂಚಿಸಲು ಸಾಧ್ಯ ಇಲ್ಲ. ಅವರು ಪ್ರಶ್ನೋತ್ತರ ನಂತರವೇ ಉತ್ತರ ಕೊಡುತ್ತಾರೆ. ಧರಣಿ ಕೈಬಿಡಿ’ ಎಂದು ಮನವಿ ಮಾಡಿದರು.

ಈ ಬೆಳವಣಿಗೆಯಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಮತ್ತೆ ಪೀಠದ ಮುಂದೆ ಧರಣಿ ನಡೆಸಿದರು. ಎಷ್ಟೇ ಪ್ರಯತ್ನ ಪಟ್ಟರೂ ಗಲಾಟೆ ನಿಲ್ಲಲಿಲ್ಲ. ಸ್ಪೀಕರ್‌ ಸದನವನ್ನು ಅರ್ಧಗಂಟೆ ಮುಂದೂ­ಡಿದರು. ಬಳಿಕ ಸದನ ಸೇರಿದಾ­ಗಲೂ ಧರಣಿ ಮುಂದುವರಿಯಿತು.

ನಿಯಮ ಉಲ್ಲಂಘನೆಗೆ ತಯಾರಿಲ್ಲ: ಆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸದನಕ್ಕೆ ಬಂದಿದ್ದರು.  ‘ವಿಧಾನ­ಮಂಡಲ ಇತಿಹಾಸದಲ್ಲಿ ಪ್ರಶ್ನೋ­ತ್ತರ ಕಲಾಪ ರದ್ದುಪಡಿಸಿ, ಶೂನ್ಯ­ವೇಳೆಯನ್ನು ಕೈಗೆತ್ತಿಕೊಂಡ ನಿದರ್ಶನ ಇಲ್ಲ. ನಾನು ಕೂಡ 30 ವರ್ಷದಿಂದ ಸದನಕ್ಕೆ ಬರುತ್ತಿದ್ದೇನೆ. ಬಿಜೆಪಿಯವರು ಹಟ ಮಾಡಬಾರದು. ಪ್ರಶ್ನೋತ್ತರ ಕಲಾಪ ನಂತರ ಉತ್ತರ ನೀಡುತ್ತೇವೆ’ ಎಂದು ಸಿದ್ದರಾಮಯ್ಯ ಸಮಾಧಾನಪಡಿಸಲು ಯತ್ನಿಸಿದರು.

ಗದ್ದಲ, ಕೋಲಾಹಲದ ನಡುವೆಯೇ ಸಭಾ­ಧ್ಯಕ್ಷರು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಕೆಲವು ಪ್ರಶ್ನೆಗಳಿಗೆ ಉತ್ತರ ಕೂಡ ಕೊಡಿಸಿದರು. ಕಾಂಗ್ರೆಸ್‌ನ ರಮೇಶಕುಮಾರ್‌ ಅವರು ‘ಗಲಾಟೆ ಮಧ್ಯೆ ಪ್ರಶ್ನೋತ್ತರ ಕೈಗೆತ್ತಿಕೊಳ್ಳುವುದು ಬೇಡ’ ಎಂದು ಸಲಹೆ ನೀಡಿದರು. ಅದನ್ನು ಮನ್ನಿಸಿದ ಸಭಾಧ್ಯಕ್ಷರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಮೇಲ್ಮನೆಯಲ್ಲಿ ಸಭಾತ್ಯಾಗ: ‘ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿ   ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಸಚಿವ ಜಾರ್ಜ್‌ ಪರಿಷತ್‌ನಲ್ಲಿ ಹೇಳಿಕೆ ನೀಡಿದರು.

ಈ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಉತ್ತರದ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

‘ಘಟನೆ ನಡೆದು ಮೂರು ದಿನಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ. ಇದು ಗೂಂಡಾಗಳನ್ನು ರಕ್ಷಿಸುವ ಸರ್ಕಾರ. ಜನವಿರೋಧಿ ಸರ್ಕಾರ. ಕಾಂಗ್ರೆಸ್‌ ಗೂಂಡಾಗಳಿಗೆ ಧಿಕ್ಕಾರ’ ಎಂದು ಅವರು ಘೋಷಣೆ ಕೂಗಿದರು. ಅದಕ್ಕೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು.

ಎರಡೂ ಕಡೆಗಳಿಂದ ಆರೋಪ–ಪ್ರತ್ಯಾ­ರೋಪಗಳ ವಿನಿಮಯದ ಅಬ್ಬರ ಜೋರಾಯಿತು. ಶಾಸಕರನ್ನು ಬಂಧಿಸದ ಕ್ರಮ ವಿರೋಧಿಸಿ ಈಶ್ವರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಹಾಕಿ ಸಭಾತ್ಯಾಗ ಮಾಡಿದರು.
ಸಭಾಪತಿ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದರು.

ಗೃಹ ಸಚಿವರ ಉತ್ತರ
ಪ್ರಶ್ನೋತ್ತರ ಅವಧಿ ಬಳಿಕ ಸಚಿವ ಜಾರ್ಜ್‌, ಸದನದಲ್ಲಿ ಲಿಖಿತ ಉತ್ತರವನ್ನು ಮಂಡಿಸಿದರು. ‘ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಜುಲೈ 2ರಂದು ಐಪಿಸಿ ಕಲಂ 143, 149, 323, 353, 504ರ ಅಡಿಯಲ್ಲಿ ಪ್ರಕರಣ (ಸಂಖ್ಯೆ: 147/2014) ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕಮಿಷನರ್‌ಗೆ ಸೂಚನೆ ನೀಡಲಾಗಿದೆ’ ಎಂದು ವಿವರಿಸಿದರು.

‘ಇದೆಂತಹ ಉತ್ತರ’ ಎಂದು ಈಶ್ವರಪ್ಪ ಅವರು ಆಕ್ಷೇಪ ವ್ಯಕ್ತಪಡಿಸಿದಾಗ, ‘ನೀವು ಬಯಸಿದಂತಹ ಉತ್ತರ ನೀಡಲು ಆಗುವುದಿಲ್ಲ’ ಎಂದು ಗೃಹ ಸಚಿವರು ತಿರುಗೇಟು ನೀಡಿದರು. ‘ರಕ್ಷಣೆ ನೀಡಬೇಕಾದ ಪೊಲೀಸರೇ ಹಲ್ಲೆಗೊಳಗಾದರೆ ಸಾಮಾನ್ಯರ ಗತಿ ಏನು’ ಎಂದು ಪ್ರಶ್ನಿಸಿದ ವಿರೋಧ ಪಕ್ಷದ ಸದಸ್ಯರು, ‘ಸರ್ಕಾರ ಆರೋಪಿಗಳಿಗೆ ರಕ್ಷಣೆ ನೀಡುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT