ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನ ಸಮಿತಿಯಿಂದ ಪರಿಶೀಲನೆ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಬಿಎಂಐಸಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆ­ಯಲ್ಲಿ ರಚಿಸಿರುವ ಸದನ ಸಮಿತಿಯು ನೈಸ್‌ ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿರುವ ಉಪನಗರ ಯೋಜ­ನೆಯ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸದನ ಸಮಿತಿಯು ಗೋಣಿಪುರ, ತಿಪ್ಪೂರು, ಸೀಗೆಹಳ್ಳಿ, ಚಿನ್ನಕುರ್ಚಿ, ಗಂಗಸಂದ್ರ, ಕೊಡೆಯಾಲ ಕರೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿತು. ರೈತ ಮುಖಂಡರಾದ ಆರ್‌.ಲಕ್ಷ್ಮಯ್ಯ, ಮೈಲಸಂದ್ರ ಮುನಿರಾಜು, ಚನ್ನಪ್ಪ, ಬೆಟ್ಟಯ್ಯ ಮುಂತಾದ ರೈತರು ಮಾತನಾಡಿ ನೈಸ್‌ ಸಂಸ್ಥೆ ರಸ್ತೆ ನಿರ್ಮಾಣ ಮಾಡಿದರೆ ನಾವು ವಿರೋಧ ಮಾಡುವುದಿಲ್ಲ ರಸ್ತೆಗೆ ಬೇಕಾಗಿರುವಷ್ಟು ಭೂಮಿ ಬಿಟ್ಟುಕೊಡು­ತ್ತೇವೆ.

ಉಪನಗರ ಯೋಜನೆಗೆ ಭೂಮಿ­ಯನ್ನು ಕೊಡುವುದಿಲ್ಲ. ನೈಸ್‌ ರಸ್ತೆಯಿಂದ 5 ಕಿಲೋಮೀಟರ್‌ ದೂರದಲ್ಲಿ ಉಪನಗರ ಮಾಡಿದರೆ ನೂರಾರು ಎಕರೆ ಗೋಮಾಳ, ಪುರಾತನಕಾಲದ ಅಮೃತ­ನಾರಾಯಣ­ಸ್ವಾಮಿ ಬೆಟ್ಟದ ಜಾಗ ಸಿಗುತ್ತದೆ ಎಂಬ ಯೋಚನೆಯಿಂದ ಉಪ ನಗರ ನಿರ್ಮಿಸಿ ಭೂಮಿ ಕಬ್ಬಳಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬಗರ್‌ಹುಕ್ಕುಂ ಸಾಗುವಳಿ ಮಾಡುತ್ತಿದ್ದ ಜಮೀನಿಗೆ  ಭೂಸಕ್ರಮ ಸಮಿತಿಯಲ್ಲಿ ಸಾಗುವಳಿ ಚೀಟಿ ನೀಡಲು ಠರಾವು ಮಂಡಿಸಿದರೆ ಅಧಿಕಾರಿಗಳ ಮೇಲೆ ಒತ್ತಡ ತಂದು ತಡೆಹಿಡಿ­ಯಲಾಗಿದೆ. ಚಿನ್ನಕುರ್ಚಿ ಬಳಿ ಎಕರೆಗೆ ₨ 1.50 ಕೋಟಿ ಬೆಲೆಯಿದ್ದು, ₨ 88 ಸಾವಿರಕ್ಕೆ ಅವಾರ್ಡ್‌ ಮಾಡಿಸಿದ್ದಾರೆ ಎಂದು ದೂರಿದರು.

ಸದನ ಸಮಿತಿ ಅಧ್ಯಕ್ಷ ಕಾನೂನು ಸಚಿವ ಟಿ.ಬಿ.ಜಯಚಂದ್ರ, ವಿಧಾನ ಸಭೆಯಲ್ಲಿ ನೈಸ್‌ ಹಗರಣದ ಬಗ್ಗೆ ತನಿಖೆ ಮಾಡಲು ಪಕ್ಷಾತೀತವಾಗಿ ಒಕ್ಕೊರಲಿನಿಂದ  ಸದನ ಸಮಿತಿ ರಚಿಸಿದ್ದು, ನ್ಯಾಯಯುತವಾದ ವರದಿ ನೀಡಲು ಖುದ್ದಾಗಿ ರೈತರ ಮನವಿ ಸ್ವೀಕರಿಸಿ, ಫಲವತ್ತಾದ ಭೂಮಿಯನ್ನು, ಬೆಳೆಗಳನ್ನು ಪರಿಶೀಲನೆ ಮಾಡಲಾಗಿದೆ. ಸರ್ಕಾರಕ್ಕೆ ಸದನ ಸಮಿತಿಯು ವರದಿ ನೀಡಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT