ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾ ರಾಜ್ಯೋತ್ಸವ

Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇಲ್ಲಿ ಕನ್ನಡದ ಅಭಿಮಾನ ನಿರಂತರ. ಬೇರೆ ಭಾಷೆಗಳ ಪ್ರಭಾವವಿದ್ದರೂ ಇಲ್ಲಿ ಕನ್ನಡದ ಡಿಂಡಿಮ ಸದಾ ಮೊಳಗುತ್ತಿರುತ್ತದೆ. ಇದು, ಚಿನ್ನದ ಬೀಡು ಎಂದೇ  ಖ್ಯಾತವಾಗಿರುವ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕಂಡುಬರುವ ದೃಶ್ಯ. ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳ ಜತೆ ಗಡಿ ಹಂಚಿಕೊಂಡಿದೆ ಬಂಗಾರಪೇಟೆ.

ಕನ್ನಡ ರಾಜ್ಯೋತ್ಸವ ಆಚರಣೆ ಒಂದು ದಿನ ಅಥವಾ ಒಂದು ತಿಂಗಳಿಗೆ ಮಾತ್ರ ಸೀಮಿತವಾಗಬಾರದು, ಅದು ನಿರಂತರವಾಗಿರಬೇಕು ಎನ್ನುವುದು ಬಂಗಾರಪೇಟೆ ಕನ್ನಡ ಸಂಘದ ಆಶಯ. ಹೀಗಾಗಿಯೇ ಈ ಸಂಘ ಪ್ರತಿ ತಿಂಗಳ ಒಂದನೇ ತಾರೀಕಿನಂದು ಇಲ್ಲಿ ಕನ್ನಡಕ್ಕೆ ಉತ್ಸವ ನಡೆಸುತ್ತದೆ. ಇದು 65 ತಿಂಗಳಿನಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ಬಂಗಾರಪೇಟೆ ವಾಣಿಜ್ಯ ಚಟುವಟಿಕೆಗಳಿಗೆ ಹೆಸರುವಾಸಿಯಾದಂತೆ, ಕಲೆ, ಸಾಹಿತ್ಯದ ವಿಚಾರದಲ್ಲೂ ಶ್ರೀಮಂತ ಪರಂಪರೆ ಹೊಂದಿದೆ. ಈ ನೆಲದಲ್ಲಿ ಕಳೆದ ಐದು ದಶಕಗಳಿಂದ ನೆಲ, ಜಲ, ಕನ್ನಡಪರ ಹೋರಾಟಗಳು ಮತ್ತು ಸಾಹಿತ್ಯ ಚಳವಳಿಗಳ ಜತೆ ‘ಬಂಗಾರಪೇಟೆ ಕನ್ನಡ ಸಂಘ’ ಗುರುತಿಸಿಕೊಂಡಿದೆ.

ಸಂಘದ ಹಿನ್ನೆಲೆ
ಬಂಗಾರಪೇಟೆ ಕನ್ನಡ ಸಂಘ ಜನ್ಮ ತಾಳಿದ್ದು 1968ರಲ್ಲಿ. ಹಿರಿಯ ವಕೀಲರಾದ ಕುಸುಮ ಮುನಿರಾಜು ಇದರ ಸಂಸ್ಥಾಪಕರು. ಅಂದು ವರನಟ ಡಾ.ರಾಜ್‌ಕುಮಾರ್‌ ಈ ಸಂಘವನ್ನು ಉದ್ಘಾಟಿಸಿದ್ದರು ಎನ್ನುವುದು ವಿಶೇಷ. ಗೋಕಾಕ್‌ ಚಳವಳಿಯಲ್ಲೂ ಕನ್ನಡ ಸಂಘ ಸಕ್ರಿಯವಾಗಿ ಭಾಗವಹಿಸಿತ್ತು. ಆಗಿನಿಂದ ನಿರಂತರವಾಗಿ ಕವಿ ಗೋಷ್ಠಿಗಳು, ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿದೆ.

ಒಂದು ಸಣ್ಣ ಕಟ್ಟಡದಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದೆ. ಸಂಘದಲ್ಲಿ ಸಾವಿರಕ್ಕೂ ಹೆಚ್ಚು ಜನರು ಶಾಶ್ವತ ಸದಸ್ಯತ್ವ ಪಡೆದಿದ್ದಾರೆ. ಸರ್ಕಾರಿ ನೌಕರರು, ಶಿಕ್ಷಕರು, ಉಪನ್ಯಾಸಕರು, ಎಂಜಿನಿಯರ್‌ಗಳು, ವೈದ್ಯರು, ಕೆಎಎಸ್‌ ಮತ್ತು ಐಎಎಸ್‌ ಅಧಿಕಾರಿಗಳು, ವಕೀಲರು, ನಿವೃತ್ತ ನೌಕರರು, ವ್ಯಾಪಾರಸ್ಥರು, ಉದ್ಯಮಿಗಳು, ರೈತರು, ಯುವಕರು, ವಿದ್ಯಾರ್ಥಿಗಳು ಹೀಗೆ ಹಲವು ರಂಗದ ಜನರು ಕನ್ನಡದ ಏಳಿಗೆಗೆ ತಮ್ಮನ್ನು ತೊಡಗಿಸಿ­ಕೊಂಡಿದ್ದಾರೆ.

ಇಲ್ಲಿ ತಿಂಗಳ ಮೊದಲ ದಿನ ಕನ್ನಡದ ಕಹಳೆ ಮೊಳಗುವ ಜೊತೆಗೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯು­ತ್ತವೆ. ತಿಂಗಳ ಕಾರ್ಯಕ್ರಮದಲ್ಲಿ ಜನಪದ ಹಾಡು, ಗೀತಗಾಯನ, ವಿಚಾರ ಸಂಕಿರಣ, ನೃತ್ಯ, ನಾಟಕ, ನಗೆಕೂಟಗಳಿಗೂ ಸ್ಥಾನ ಇದೆ. ಸಮಾರಂಭಕ್ಕೆ ಹಿರಿಯ ಸಾಹಿತಿಗಳು, ಕಲಾವಿದರು, ಚಿತ್ರನಟರು, ಚಿಂತಕರು, ಸಮಾಜ ಸೇವಕರು, ನ್ಯಾಯಾಧೀಶರು ಪ್ರಗತಿಪರ ರಾಜಕಾರಣಿಗಳು  ಮುಖ್ಯ ಅತಿಥಿಗಳಾಗಿರುತ್ತಾರೆ.

ಕರ್ನಾಟಕ ಏಕೀಕರಣಕ್ಕೆ 50 ವರ್ಷಗಳು ತುಂಬಿದ ಸಂದರ್ಭದಲ್ಲಿ ಸಂಘದ ವತಿಯಿಂದ ಏಳು ದಿನ ನಿರಂತರವಾಗಿ ವಿಶೇಷ ಕನ್ನಡ ಕಾರ್ಯಕ್ರಮ ನಡೆಸಿದ್ದು ಮಹತ್ವದ ಅಂಶ. ಮೊದಲ ದಿನ ಹೆಲಿಕಾಫ್ಟರ್‌ ಮೂಲಕ ನಾಡ ದೇವಿಗೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಆನೆಯ ಮೇಲೆ ಮೆರವಣಿಗೆ ಮಾಡಲಾಯಿತು. ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಸೇರಿದಂತೆ ಹಿರಿಯ ಸಾಹಿತಿಗಳು ಭಾಗವಹಿಸಿದ್ದರು.

ಪ್ರತಿ ವರ್ಷ ನವೆಂಬರ್‌ ಒಂದರಂದು ಬಂಗಾರಪೇಟೆಯಲ್ಲಿ ಮಿನಿ ದಸರಾ ನಡೆದಂತೆ ಇರುತ್ತದೆ. ರಾಜ್ಯದ ನಾನಾ ಭಾಗಗಳಿಂದ ಬರುವ ವೀರಗಾಸೆ,  ಚಂಡಮದ್ದಳೆ, ಕರಡಿಮೇಳ, ಡೊಳ್ಳುಕುಣಿತ, ತಮಟೆ ವಾದನ, ಯಕ್ಷಗಾನ ಹೀಗೆ ಹತ್ತಾರು ಜಾನಪದ ಕಲಾ ತಂಡಗಳು ನೃತ್ಯ ಪ್ರದರ್ಶನ ನೀಡುತ್ತವೆ. ಜಿಲ್ಲೆ ಹಾಗೂ ತಾಲ್ಲೂಕನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರಗಳ ಮೆರವಣಿಗೆಯೂ ನಡೆಯುತ್ತದೆ. ಅತ್ಯುತ್ತಮ ಪ್ರದರ್ಶನ ನೀಡಿದ ಕಲಾ ತಂಡಗಳಿಗೆ ಹಾಗೂ ಉತ್ತಮ ಸ್ತಬ್ಧ ಚಿತ್ರಗಳಿಗೆ ನಗದು ಬಹುಮಾನ ನೀಡಲಾಗುತ್ತದೆ.

ಸಮಾಜಮುಖಿ ಕಾರ್ಯಗಳು...
ಇಲ್ಲಿನ ಕನ್ನಡ ಸಂಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಗಮನ ಸೆಳೆದಿದೆ. ಪ್ರತಿವರ್ಷ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಸಮವಸ್ತ್ರ, ಪಠ್ಯಪುಸ್ತಕಗಳನ್ನು ನೀಡಲಾಗುತ್ತದೆ. ಸ್ಥಳೀಯ ಲಯನ್ಸ್‌ ಕ್ಲಬ್‌ ನೆರವಿನೊಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ರಾಷ್ಟ್ರಮಟ್ಟದ ವಾಲಿಬಾಲ್‌, ಥ್ರೋಬಾಲ್‌, ಕ್ರಿಕೆಟ್‌, ಫುಟ್‌ಬಾಲ್‌ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ಸಂಘದ ವತಿಯಿಂದ ವಾಲಿಬಾಲ್‌ ತರಬೇತಿಯನ್ನು ನೀಡಲಾಗುತ್ತಿದೆ.  ಕನ್ನಡ ಸಂಘ ನಡೆಸಿ ಕೊಡುವ ಎಲ್ಲಾ ಕಾರ್ಯಕ್ರಮ ಗಳಿಗೂ ಜನ ಜಾತ್ರೆಯಂತೆ ಸೇರುತ್ತಾರೆ. ಸದಾ ತೆಲುಗು ಮತ್ತು ತಮಿಳು ಭಾಷೆಯಲ್ಲೇ ವ್ಯವಹರಿಸುವ ಬಂಗಾರಪೇಟೆ ಜನ ಪ್ರತಿ ತಿಂಗಳು ಒಂದರಂದು ಕನ್ನಡ ಕಸ್ತೂರಿಯಲ್ಲಿ ಮಿಂದೇಳುತ್ತಾರೆ.
-ಪೃಥ್ವಿರಾಜ್ ಎಂ.ಎಚ್

ಕನ್ನಡ ನುಡಿಗೆ ಬಸ್‌ ಸೇವೆ
ಪ್ರಯಾಣದ ವೇಳೆ ಪತ್ರಿಕೆಯೋ, ಪುಸ್ತಕವೋ ಇದ್ದರೆ ಪ್ರಯಾಣ ಪ್ರಯಾಸವಾಗಲಾರದು. ಆದರೆ ಪ್ರಯಾಣ ಮಾಡುವಾಗ ಇವನ್ನೆಲ್ಲ ಹೊತ್ತುಕೊಂಡು ಸಾಗುವುದು ಹಲವರಿಗೆ ತಲೆನೋವಿನ ಕೆಲಸ.

ಕನ್ನಡ ಉಳಿಯಬೇಕು...

ಪಲ್ಲವಿಮಣಿ ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷರು. ಇವರು ಕಳೆದ 15 ವರ್ಷಗಳಿಂದ ಸಂಘದ ಚುಕ್ಕಾಣಿ ಹಿಡಿಯುವ ಮೂಲಕ ಹೊಸ ಆಯಾಮ ನೀಡಿದ್ದಾರೆ.
‘ಬೇರೆ ಭಾಷೆಗಳ ಪ್ರಭಾವದಿಂದ ಇಲ್ಲಿನ ಜನರಲ್ಲಿ ಕನ್ನಡ ಪ್ರೀತಿ ಮಂಕಾದಂತೆ ಕಾಣುತ್ತಿದೆ. ಇಂದಿನ ಪೀಳಿಗೆಯ ಬಹುತೇಕ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಮನೆಯಲ್ಲಿ ತೆಲುಗು ಅಥವಾ ತಮಿಳಿನಲ್ಲಿ ಮಾತನಾಡುತ್ತಾರೆ. ಇಂತಹ ವಾತಾವರಣದಲ್ಲಿ ಕನ್ನಡ ಉಳಿಯುವುದಾದರೂ ಹೇಗೆ ’ಎಂಬುದು ಪಲ್ಲವಿಮಣಿ ಅವರ ಪ್ರಶ್ನೆ? 

‘ಈ ಜನವರ್ಗವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕನ್ನಡ ಕಲಿಸುವ, ಬೆಳೆಸುವ ಮತ್ತು ಉಳಿಸುವ ಕಾಯಕದಲ್ಲಿ ಕನ್ನಡ ಸಂಘ ತೊಡಗಿದೆ. ಸಂಘದ ಸದಸ್ಯರ ಸಾಮೂಹಿಕ ಹೊಣೆಗಾರಿಕೆ­ಯಿಂದ ಕನ್ನಡ ಕಾರ್ಯಕ್ರಮ
ಗಳನ್ನು ಯಶಸ್ವಿ­ಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಸಂಘ­ವನ್ನು ರಾಜ್ಯದಲ್ಲೇ ಮಾದರಿ ಸಂಘವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ. ಈಗಿರುವ ಕಟ್ಟಡವನ್ನು ನವೀಕರಿಸಿ ದೊಡ್ಡ ಸಭಾಂಗಣ ನಿರ್ಮಿಸಲು ಯೋಜನೆ ಸಿದ್ಧಪಡಿಸಿದ್ದೇವೆ. ಕನ್ನಡ ಭಾಷೆ, ನಡೆ ನುಡಿ ಇಲ್ಲಿನ ಜನರ ಉಸಿರಾಗಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ’ ಎನ್ನುತ್ತಾರೆ ಪಲ್ಲವಿ ಮಣಿ.

ಇಂಥವರಿಗೆಲ್ಲ ಇಲ್ಲೊಂದು ಬಸ್‌ ಪುಕ್ಕಟೆಯಾಗಿ ಪುಸ್ತಕ ಸೇವೆ ನೀಡುತ್ತಿದೆ. ಬಸ್ಸಿನಲ್ಲಿಯೇ ಒಂದಿಷ್ಟು ಪುಸ್ತಕಗಳನ್ನಿಟ್ಟು, ಪ್ರಯಾಣಿಕರಿಗೆ ಪುಸ್ತಕ ಪ್ರೇಮದ ಹುಚ್ಚು ಹಿಡಿಸುವ ಪ್ರಯತ್ನ ಕೂಡ ಇದು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ವಿಭಾಗದ ಹಗರಿಬೊಮ್ಮನಹಳ್ಳಿ ಘಟಕದ ಕೆ.ಎ35 ಎಫ್115 ಸಂಖ್ಯೆಯ ವಾಹನದಲ್ಲಿ ಇಂಥದ್ದೊಂದು ಸೌಲಭ್ಯವಿದೆ. ಈ ಬಸ್ ಹೆಚ್ಚಾಗಿ ಹೊಸಪೇಟೆ ದಾವಣಗೆರೆ ಮಾರ್ಗದಲ್ಲಿ ಸಂಚರಿಸುತ್ತದೆ. ಈ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ದಿನಪತ್ರಿಕೆಗಳು, ವಾರಪತ್ರಿಕೆಗಳು, ಕೆಲವು ಸಾಹಿತ್ಯಿಕ ಪುಸ್ತಕಗಳು ಪುಕ್ಕಟೆಯಾಗಿ ಓದಲು ಸಿಗುತ್ತವೆ. ಅಷ್ಟೇ ಅಲ್ಲ, ವಾಹನದ ಒಳಭಾಗದಲ್ಲಿ ಕನ್ನಡ ನಾಡಿನ ಕೀರ್ತಿ ಬೆಳಗಿದ ಪ್ರಮುಖ ಸಾಹಿತಿಗಳ ಭಾವಚಿತ್ರಗಳೂ ಸಹ ಇವೆ. ಪ್ರಯಾಣದ ವೇಳೆ ಸಾಹಿತ್ಯಿಕ ವಿಚಾರಗಳನ್ನು ಮತ್ತು ನಿತ್ಯದ ಸುದ್ದಿಗಳನ್ನು ಮೆಲುಕು ಹಾಕಬಹುದು.

‘ಇಂದು ಬಹುತೇಕ ಮಂದಿಗೆ ಬಸ್‌ ಎಂದರೆ ಅಲರ್ಜಿ. ಅದಕ್ಕಾಗಿಯೇ ಹಲವು ಬಸ್‌ಗಳಲ್ಲಿ ಆಡಿಯೊ, ವಿಡಿಯೊ ಸೌಲಭ್ಯ ನೀಡಿ ಪ್ರಯಾಣಿಕರನ್ನು ಆಕರ್ಷಿಸುವ ಯತ್ನ ನಡೆಯುತ್ತಿದೆ. ಒಂದರ್ಥದಲ್ಲಿ ಪ್ರಯಾಣಿಕರನ್ನು ಆಕರ್ಷಿಸಲು ಸ್ಪರ್ಧೆ ಏರ್ಪಡುತ್ತಿದೆ ಎಂದೇ ಹೇಳಬೇಕು. ಆದರೆ ಆಡಿಯೊ, ವಿಡಿಯೊ ಬದಲಾಗಿ ಪತ್ರಿಕೆ- ಪುಸ್ತಕಗಳು, ಅದರಲ್ಲೂ ಹೆಚ್ಚಾಗಿ ಕನ್ನಡ ಭಾಷೆಯ ಪುಸ್ತಕಗಳನ್ನು ಇಟ್ಟರೆ ಹೇಗೆ ಎಂಬ ಯೋಚನೆ ಬಂತು. ಆ ಮೂಲಕವಾದರೂ ಪ್ರಯಾಣಿಕರಲ್ಲಿ ಕನ್ನಡಾಭಿಮಾನ ಬೆಳೆಯಲಿ ಎಂಬುದು ನಮ್ಮ ಆಶಯ’ ಎನ್ನುತ್ತಾರೆ ಈ ಘಟಕದ ನಿರ್ವಾಹಕ ಎಂ.ಗೌರಿಶಂಕರ. ಇದರ ಉಸ್ತುವಾರಿಯನ್ನು ಶಿವಣ್ಣ ಎಂಬ ನಿರ್ವಾಹಕರು ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಪುಸ್ತಕ/ಪತ್ರಿಕೆ ಇಡಲು ನೇತುಹಾಕಿದ ಟ್ರೇ ಮೇಲೆ ಪುಸ್ತಕ ಮತ್ತು ಪತ್ರಿಕೆಗಳನ್ನು ಓದಿದ ನಂತರ ಇದರಲ್ಲಿಯೇ ಇಡಿ ಎಂಬ ವಿನಂತಿಯನ್ನು ಅಂಟಿಸಲಾಗಿದೆ. ನೀವೊಮ್ಮೆ ಈ ಬಸ್‌ನಲ್ಲಿ ಪ್ರಯಾಣಿಸಿದರೆ ನೀವು ಖರೀದಿಸಿದ ಪತ್ರಿಕೆ/ಪುಸ್ತಕಗಳನ್ನು ಇದರಲ್ಲಿ ಹಾಕಿ. ಅದು ಇತರೆ ಪ್ರಯಾಣಿಕರಿಗೆ ಓದಲು ಸಹಾಯವಾಗುತ್ತದೆ. ಆ ಮೂಲಕವಾದರೂ ನಾಡು-ನುಡಿಗೆ ಸೇವೆ ಸಲ್ಲಿಸಿದಂತಾಗುತ್ತದೆ ಎಂಬುದು ಇಲ್ಲಿ ಬರುವ ಸಾಹಿತ್ಯಾಭಿಮಾನಿಗಳ ನುಡಿ.
-ಆರ್.ಬಿ.ಗುರುಬಸವರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT