ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನಡತೆ: ಕೈದಿಗಳ ಬಿಡುಗಡೆಗೆ ಹೊಸ ಮಾರ್ಗಸೂಚಿ

Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನ  ಬಿಡುಗಡೆ ಮಾಡುವುದಕ್ಕೆ  ಸಂಬಂಧಿಸಿದ ನೂತನ ಮಾರ್ಗಸೂಚಿಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ   ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ವಿವರಿಸಿದರು.

ಹೊಸ ಮಾರ್ಗಸೂಚಿಯ ಅನುಸಾರ, ಕೇಂದ್ರ ಸರ್ಕಾರದ ಕಾನೂನುಗಳ ಅನ್ವಯ ಹಾಗೂ ಸಿಬಿಐ, ಎನ್‌ಐಎ ತನಿಖೆಯಲ್ಲಿ ಶಿಕ್ಷೆಗೊಳಗಾದ ಕೈದಿಗಳ ಜೊತೆಗೆ ಭಯೋತ್ಪಾದನೆ, ರಾಜದ್ರೋಹ, ಎರಡಕ್ಕಿಂತ ಮೂರು ಕೊಲೆ ಪ್ರಕರಣಗಳಲ್ಲಿ ಅಪರಾಧಿಯಾ ದವರು, ಶಸ್ತ್ರಸಜ್ಜಿತ ದರೋಡೆಕೋರರು, ಸುಪಾರಿ ಕೊಲೆಗಾರರು, ಕಳ್ಳಸಾಗಣೆ ದಾರರು, ಮಾದಕ ದ್ರವ್ಯ ಸಾಗಣೆ ಮತ್ತು ಮಾರಾಟ ಕೃತ್ಯಗಳ ಅಪರಾಧಿಗಳು, ಅತ್ಯಾಚಾರ, ದರೋಡೆ, ಕೊಲೆ ಹಾಗೂ ಜೈಲು ಸಿಬ್ಬಂದಿ ಕೊಲೆ ಅಪರಾಧಿಗಳನ್ನು ವ್ಯಾಪ್ತಿಯಿಂದ  ಹೊರಗಿಡಲಾಗಿದೆ.

14 ವರ್ಷ ಕಡ್ಡಾಯ: ಸಿಆರ್‌ಪಿಸಿ (ದಂಡ ಪ್ರಕ್ರಿಯಾ ಸಂಹಿತೆ) ಕಲಂ 433 ಎ ಅನುಸಾರ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರೆ ಮಾತ್ರ ಅವರಿಗೆ ಹೊಸ ಮಾರ್ಗಸೂಚಿ ಅನ್ವಯವಾಗುತ್ತದೆ.

ಜೀವಾವಾಧಿ ಶಿಕ್ಷೆಗೆ ಒಳಪಟ್ಟಿರುವ ಪುರುಷ ಕೈದಿಯು ತನ್ನ ಶಿಕ್ಷಾ ಅವಧಿಯಲ್ಲಿ ಯಾವುದೇ ಕಡಿತವಿಲ್ಲದೆ 10 ವರ್ಷ ಜೈಲು ಶಿಕ್ಷೆ ಪೂರೈಸಿದ್ದು 65 ವರ್ಷ ದಾಟಿದ್ದರೆ, ಇದೇ ರೀತಿಯಲ್ಲಿ  ಏಳು ವರ್ಷ ಸತತವಾಗಿ ಶಿಕ್ಷೆಗೊಳಗಾದ 60 ವರ್ಷ ದಾಟಿದ ಮಹಿಳಾ ಕೈದಿಗಳು ವಿನಾಯ್ತಿಗೆ ಒಳಪಡಲಿದ್ದಾರೆ.

433ಎ ಏನು ಹೇಳುತ್ತದೆ?: ಸಿಆರ್‌ಪಿಸಿ 433 ಎ ಅನುಸಾರ ಮರದಂಡನೆಗೆ ಒಳ ಗಾದವರು ರಾಷ್ಟ್ರಪತಿಗಳಿಂದ ಕ್ಷಮಾದಾನ ಪಡೆದಿದ್ದರೆ ಅಥವಾ ಉಚ್ಚ ನ್ಯಾಯಾಲಯಗಳ ತೀರ್ಪಿನ ಅನುಸಾರ ಮರಣದಂಡನೆಯಿಂದ ಜೀವಾವಾಧಿ ಶಿಕ್ಷೆಗೆ ಪರಿವರ್ತನೆ ಹೊಂದಿದ್ದರೆ ಅಂತಹವರು  14 ವರ್ಷ ಶಿಕ್ಷೆ ಅನುಭವಿಸಲೇ ಬೇಕು. ಇವರನ್ನು ಯಾವುದೇ ವಿನಾಯ್ತಿ ಅನುಸಾರ 14 ವರ್ಷಕ್ಕೂ ಮುನ್ನ ಬಿಡುಗಡೆಗೆ ಪರಿಗಣಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT