ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನಿ ಕೊನೆಗೂ ಬಂದರೆನ್ನಿ!

Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

ಆಗ ಸಮಯ ಸಂಜೆ 6.30. ಯಶವಂತರಪುರ ಇಂಡಸ್ಟ್ರಿಯಲ್ಲಿರುವ ತಾಜ್‌ ವಿವಾಂತ ಹೋಟೆಲ್‌ನಲ್ಲಿರುವ ಭವ್ಯ ಸಭಾಂಗಣದಲ್ಲಿ ಸಾವಿರಾರು ಜನ ಸೇರಿದ್ದರು. ಅಲ್ಲಿದ್ದ ಪುರುಷರು, ಮಹಿಳೆಯರೆಲ್ಲರೂ ಚೆಂದವಾಗಿ ರೆಡಿಯಾಗಿ ಬಂದಿದ್ದರು. ಅವರು ಲೋಕಾಭಿರಾಮವಾಗಿ ಹರಟುತ್ತಿದ್ದರು ಕೂಡ ಅವರೆಲ್ಲರ ಕಣ್ಣುಗಳು ಯಾರದ್ದೋ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದವು. ಅಲ್ಲಿದ್ದ ಪಡ್ಡೆಗಳ ಮನಸ್ಸು ಮಾತ್ರ ಹೆಮ್ಮರದ ಮೇಲಿನ ಹೆಜ್ಜೇನಿಗಾಗಿ ಕೆಳಗೆ ಶತಪಥ ಸುತ್ತುವ ಕರಡಿಯಂತೆ  ತಳಮಳಗುಟ್ಟುತ್ತಿತ್ತು. ಗಂಟೆ ಏಳು ಗಂಟೆ ಆಯ್ತು. ಆದರೂ ಬರಬೇಕಾದವರು ಬರಲಿಲ್ಲ. ಏಳೂ ಮುಕ್ಕಾಲು ಆಯ್ತು, ಆದರೂ ಅವರ ಸುಳಿವಿಲ್ಲ. ಕಾದು ಕಾದು ಬಸವಳಿದಿದ್ದ ಜನರ ಮೊಗದಲ್ಲಿ ಕೊನೆಗೂ ನಗು ಅರಳಿದ್ದು ಎಂಟು ಗಂಟೆಯ ನಂತರವೇ...

ಅಂದಹಾಗೆ, ಅದು ಹೊಸ ಎನರ್ಜಿ ಡ್ರಿಂಕ್‌ ಗೋಲ್ಡ್‌ ಫಾಗ್‌ನ ಬಿಡುಗಡೆ ಸಮಾರಂಭ. ಈ ಹೊಸ ಉತ್ಪನ್ನದ ಪ್ರಚಾರ ರಾಯಭಾರಿ ನಟಿ ಸನ್ನಿ ಲಿಯೋನ್‌. ಎನರ್ಜಿ ಡ್ರಿಂಕ್‌ ಬಿಡುಗಡೆ ಮಾಡಲು ನೀಲಿಚಿತ್ರ ತಾರೆ, ಅಡಲ್ಟ್‌ ಕಾಮಿಡಿ ಸಿನಿಮಾಗಳ ಮಹಾರಾಣಿ ಸನ್ನಿ ಲಿಯೋನ್‌ ಬರುತ್ತಿದ್ದಾರೆ ಎಂಬುದನ್ನು ತಿಳಿದು ಅಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಜನ ಸೇರಿದ್ದರು. ಅದರಲ್ಲಿ ಯುವಕರೇ ಜಾಸ್ತಿ ಇದ್ದರು. ಆಭಿನಯಕ್ಕಿಂತಲೂ ತಮ್ಮ ಆಕರ್ಷಕ ಅಂಗಸೌಷ್ಟವದಿಂದಲೇ
ಬಿ–ಟೌನ್‌ ಓಣಿಯಲ್ಲಿ ಮಿಂಚುತ್ತಿರುವ ನಟಿ ಸನ್ನಿ ಲಿಯೋನ್‌, ಆ ದಿನ ಅಲ್ಲಿ ಸೇರಿದ್ದ ಜನರನ್ನು ಸಮೂಹ ಸನ್ನಿಗೆ ಒಳಪಡಿಸಿದ್ದರು.

ಸನ್ನಿ ವೇದಿಕೆಗೆ ಆಗಮಿಸುತ್ತಿದ್ದಾರೆ ಎಂಬುದನ್ನು ನಿರೂಪಕಿ ಪ್ರಕಟಿಸಿದ ಸಂದರ್ಭದಲ್ಲಿ ಅಭಿಮಾನಿಗಳ ಉತ್ಸಾಹ ಮೇರೆ ಮೀರಿತ್ತು. ಮಳೆ ಬರುವ ಮುನ್ನ ಮಿಂಚು–ಗುಡುಗು ಬರುವಂತೆ, ಸನ್ನಿ ವೇದಿಕೆಗೂ ಬರುವುದಕ್ಕೂ ಮುನ್ನ ಅಲ್ಲಿ ಕೃತಕ ಪಟಾಕಿಗಳು ಸಿಡಿದವು. ಅವುಗಳ ನಡುವಿನಿಂದ ಸನ್ನಿ ಲಿಯೋನ್‌ ವೇದಿಕೆ ಮೇಲೆ ಕಾಣಿಸಿಕೊಂಡರು. ಪರದೆ ಮೇಲಷ್ಟೇ ಸನ್ನಿಯನ್ನು ನೋಡಿದ್ದ ಹುಡುಗರು ಆಕೆಯನ್ನು ಹತ್ತಿರದಿಂದ ನೋಡಿ ಶಿಳ್ಳೆ ಹೊಡೆದರು. ಇನ್ನು ಕೆಲವರು ‘ಸನ್ನಿ.. ಸನ್ನಿ... ಸನ್ನಿ’ ಎಂದು ಕೂಗುತ್ತ ಖುಷಿ ಪಟ್ಟರು.

ಸನ್ನಿ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆ ಕಿಸೆಯಲ್ಲಿದ್ದ ಎಲ್ಲರ ಮೊಬೈಲ್‌ಗಳು ಕೈಗೆ ಬಂದವು. ಸನ್ನಿಯ ಪ್ರತಿಯೊಂದು ಸಣ್ಣ ಚಲನೆಯನ್ನೂ ಕ್ಯಾಮೆರಾಗಳು ಸೆರೆಹಿಡಿಯುತ್ತಿದ್ದವು. ಅಭಿಮಾನಿಗಳ ಪುಳಕ ಕಂಡು ಬೆರಗಾದ ಸನ್ನಿ, ಎಲ್ಲರಿಗೂ ಹಾಯ್‌ ಹೇಳಿ, ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರಿ ಕಣ್ಣು ಮಿಟುಕಿಸಿ, ಒಂದು ಹೂ ನಗು ತೇಲಿಬಿಟ್ಟರು. ಕಳೆದ ಒಂದೂವರೆ ಗಂಟೆಯಿಂದ ಎಲ್ಲರನ್ನೂ ಕಾಡುತ್ತಿದ್ದ ಅಸಹನೆಯನ್ನು ಆ ನಗು ನುಚ್ಚುನೂರು ಮಾಡಿತು. ಎಲ್ಲರ ಮನದಲ್ಲೂ ಹೊಸ ಉತ್ಸಾಹ ತುಂಬಿತು. ಆನಂತರ ಸನ್ನಿ ಆರ್‌ಝಿ ಇಂಟರ್‌ನ್ಯಾಷನಲ್ ಪ್ರೈ. ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ವಿನಾಕಿಯ ಅವರೊಂದಿಗೆ ಒಂದು ಸುತ್ತು ರ್‌್ಯಾಂಪ್‌ವಾಕ್‌ ಮಾಡಿ ಎನರ್ಜಿ ಡ್ರಿಂಕ್‌ ಬಿಡುಗಡೆ ಮಾಡಿದರು.

‘ಗೋಲ್ಡ್ ಫಾಗ್‌ ಜೊತೆಗೆ ಗುರುತಿಸಿಕೊಳ್ಳುವುದು ಖುಷಿ ತಂದಿದೆ. ಈ ಪಾನೀಯದ ಪ್ರತಿಯೊಂದು ಗುಟುಕನ್ನೂ ನಾನು ಆಸ್ವಾದಿಸಿದ್ದೇನೆ. ನನ್ನ ದಿನ ಆರಂಭಗೊಳ್ಳುವುದೇ ಗೋಲ್ಡ್ ಫಾಗ್‌ನ ತಾಜಾತನದ ಮೂಲಕ. ಇದು ನನಗೆ ಹೊಸ ಶಕ್ತಿ  ತುಂಬುತ್ತದೆ. ದಿನವಿಡೀ ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಇದು ಆಲ್ಕೋಹಾಲ್ ಮುಕ್ತ ತಂಪು ಪಾನೀಯವಾಗಿದ್ದು ಯುವಜನರು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ವೃತ್ತಿಪರರು, ಜಿಮ್ ಪ್ರಿಯರು, ಆರೋಗ್ಯಕಾರಿ ಜೀವನಶೈಲಿ ಇಷ್ಟಪಡುವ ಎಲ್ಲರೂ ಬಳಸಬಹುದು’ ಎನ್ನುತ್ತಾ ಕೈಯಲ್ಲಿದ್ದ ಗೋಲ್ಡ್‌ ಫಾಗ್‌ ಟಿನ್‌ ಓಪನ್‌ ಮಾಡಿ ತುಟಿಗಿಟ್ಟು ಡ್ರಿಂಕ್‌ ಅನ್ನು ಗುಟುಕರಿಸಿ ಮತ್ತೊಮ್ಮೆ ನಗು ತುಳುಕಿಸಿದರು.

ವೇದಿಕೆ ಕಾರ್ಯಕ್ರಮ ಮುಗಿದ ನಂತರ ಗಂಡ ಡೇನಿಯಲ್‌ ವೆಬರ್‌ ಜೊತೆ ಕಾಣಿಸಿಕೊಂಡ ಸನ್ನಿ ಚುಟುಕಾಗಿ ತಮ್ಮ ಚಿತ್ರಜೀವನ ಕುರಿತು ಮಾತನಾಡಿದರು. ‘ಬಾಲಿವುಡ್‌ನಲ್ಲಿ ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಬೇಸರವಿಲ್ಲ. ಸಿಕ್ಕ ಪಾತ್ರಗಳನ್ನೆಲ್ಲ ಖುಷಿಯಿಂದ ಮಾಡುತ್ತೇನೆ. ಹಿಂದಿ ಸಿನಿಮಾಗಳ ಜೊತೆಗೆ ದಕ್ಷಿಣ ಭಾರತದ ಕೆಲವು ಸಿನಿಮಾಗಳಲ್ಲಿ ಐಟಂ ಡಾನ್ಸ್‌ ಮಾಡಿದ್ದೇನೆ. ಉತ್ತಮ ಅವಕಾಶಗಳು ಸಿಕ್ಕರೆ ಕನ್ನಡ ಸಿನಿಮಾಗಳಲ್ಲೂ ಅಭಿನಯಿಸುತ್ತೇನೆ’ ಎಂದರು.

ಅಷ್ಟರಲ್ಲಿ ಸನ್ನಿ ಲಿಯೋನ್‌ ಪತಿ ವೆಬರ್‌ ಆಕೆಯ ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿದರು. ಆಕೆ ಅಲ್ಲಿಗೆ ಮಾತು ನಿಲ್ಲಿಸಿ ಎಲ್ಲರಿಗೂ ಥ್ಯಾಂಕ್ಸ್‌ ಹೇಳಿ ಹೊರಟರು. ಆದರೆ, ಕ್ಯಾಮೆರಾಗಳ ಫ್ಲಾಷ್‌ಲೈಟ್‌ಗಳು ಮಾತ್ರ ಆಕೆಯ ಬೆನ್ನನ್ನು ಮುದ್ದಿಸುತ್ತಲೇ ಇದ್ದವು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT