ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೋಲನ ಅಗತ್ಯ

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ರಾಜ್ಯದ 2014–-19ನೇ ಅವಧಿಯ ಹೊಸ ಕೈಗಾರಿಕಾ ನೀತಿಯಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಒತ್ತು ಕೊಡಲಾಗಿದೆ. ನಮ್ಮಲ್ಲಿ ಬಹುಪಾಲು ಉದ್ಯಮಗಳು ಬೆಂಗಳೂರಿನ ಸುತ್ತಮುತ್ತ ಕೇಂದ್ರೀಕೃತವಾಗಿದ್ದು, ರಾಜ್ಯದ ಇತರೆಡೆಗಳಲ್ಲಿ ಸಮಾನವಾಗಿ ಹಂಚಿಕೆ­ಯಾಗಿಲ್ಲ ಎಂಬ ಅಸಮಾಧಾನ ಬಹಳ ಕಾಲದಿಂದ ಇದೆ. ಅದನ್ನು ನಿವಾರಿಸುವ ಪ್ರಯತ್ನಕ್ಕೆ ಸರ್ಕಾರ ಈಗ ಕೈಹಾಕಿದೆ. ಹೈದರಾಬಾದ್ ಕರ್ನಾ­ಟಕ­ದಲ್ಲಿ ಉದ್ಯಮ ಸ್ಥಾಪನೆಗೆ ಉತ್ತೇಜನ, ಹೊಸದಾಗಿ ಅಭಿವೃದ್ಧಿ ಪಡಿಸುವ ಕೈಗಾರಿಕಾ ವಸಾಹತಿನ ಭೂಮಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ 22.5ರಷ್ಟು ಮೀಸಲು ಸೌಲಭ್ಯವನ್ನು ಹೊಸ ನೀತಿಯಲ್ಲಿ ಕಲ್ಪಿಸಲಾಗಿದೆ.

ಮಹಿಳಾ ಉದ್ಯಮಿಗಳಿಗಾಗಿಯೇ ಎರಡು ಕೈಗಾರಿಕಾ ವಸಾಹತು ನಿರ್ಮಿ­ಸುವ ಯೋಜ­ನೆಯೂ ಇದೆ. ಕೈಗಾರಿಕಾ ಬೆಳವಣಿಗೆ ದರವನ್ನು ಶೇ 12ಕ್ಕೆ ಏರಿಸುವುದು, ರೂ 5 ಲಕ್ಷ ಕೋಟಿ  ಬಂಡವಾಳ ಆಕರ್ಷಿಸಿ 15 ಲಕ್ಷ ಹೊಸ ಉದ್ಯೋ­ಗಾವ­ಕಾಶ ಸೃಷ್ಟಿಯ ಹೆಬ್ಬಯಕೆಯನ್ನೂ ಈ ನೀತಿ ಹೊಂದಿದೆ.   ಆದರೆ ಈ ನೀತಿ­ಯನ್ನು ಸಾಕಾರಗೊಳಿಸಲು ರಸ್ತೆ, ನೀರು, ವಿದ್ಯುತ್, ರೈಲು ಮುಂತಾದ ಮೂಲಸೌಕರ್ಯಗಳಿರಬೇಕಾದುದು ಅಗತ್ಯ ಎಂಬುದನ್ನು ಸರ್ಕಾರ ಮನ­ಗಾಣಬೇಕು.

ಉದ್ಯಮಸ್ನೇಹಿ ವಾತಾವರಣ ನಿರ್ಮಿಸುವ ಹೊಣೆ ಸರ್ಕಾರದ ಮೇಲಿದೆ. ಓಬೀರಾಯನ ಕಾಲದ ಕಾಯ್ದೆಗಳ ಬದಲಾವಣೆಗೆ ಸರ್ಕಾರ ಮೊದಲು ಮುಂದಾಗಬೇಕು.  ಈಗಾಗಲೇ ಕೇಂದ್ರಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇರಿ­ಸಿದೆ. ಕೈಗಾರಿಕೆಗಳು ನೆಲಕಚ್ಚದಂತೆ ನಿಯಮಗಳನ್ನು ರೂಪಿಸುವಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಹಾಗೆಯೇ ಕೆಂಪುಪಟ್ಟಿಯ ಕಿರಿಕಿರಿ ನಿವಾರಣೆ,   ಅಡ್ಡಗಾಲು ಹಾಕುವ  ನೌಕರಶಾಹಿಗೆ ಲಗಾಮು, ತೆರಿಗೆ ಪದ್ಧತಿ ಸುಧಾರಣೆ, ದಕ್ಷವಾಗಿ ಕಾರ್ಯನಿರ್ವಹಿಸುವ ಏಕಗವಾಕ್ಷಿ ವ್ಯವಸ್ಥೆ ಇತ್ಯಾದಿ ಆದ್ಯತೆಯಾಗ­ಬೇಕು.

ಪ್ರಗತಿಗೆ ಕೈಗಾರಿಕೆಗಳು ಮುಖ್ಯ. ಆದರೆ ನಮ್ಮ ರಾಜ್ಯದಲ್ಲಿ ಕೈಗಾರಿಕೆ­ಗಳ ಸ್ಥಾಪನೆಗೆ ಪೂರಕವಾದ ವಾತಾವರಣ ಇಲ್ಲ ಎಂಬ ಭಾವನೆ ಉದ್ಯ­ಮಿಗಳಲ್ಲಿ ದಟ್ಟವಾಗಿದೆ. ಪೋಸ್ಕೊ ಭೂ ವಿವಾದ, ಕೂಡಗಿ ವಿದ್ಯುತ್ ಸ್ಥಾವರ ಭೂ ವಿವಾದ, ಸರಿಯಾದ ಉತ್ತೇಜನ ಸಿಗದೆ ಧಾರವಾಡದಿಂದ ಕಾಲ್ಕಿತ್ತ ಹೀರೊಕಾರ್ಪ್‌... ಹೀಗೆ ಇತ್ತೀಚಿನ  ವಿದ್ಯಮಾನಗಳು ಈ ಅನುಮಾನಕ್ಕೆ ಪುಷ್ಟಿ ಕೊಡುತ್ತಿವೆ.  ಆದರೆ ಹೊಸ ಕೈಗಾರಿಕಾ ನೀತಿಯ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ಅವಕಾಶ ಕಲ್ಪಿಸುವ, ಸುಸ್ಥಿರ ಮತ್ತು ಸಮತೋಲನದ ಕೈಗಾರಿಕಾ ಅಭಿವೃದ್ಧಿ ಸಾಧಿಸುವ ಕನಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ಹಂಚಿಕೊಂಡಿದ್ದಾರೆ. ತಾವು ಕೈಗಾರಿಕೆ ವಿರೋಧಿ ಅಲ್ಲ ಎಂಬಂತಹ ಸ್ಪಷ್ಟನೆ­ಯನ್ನೂ ಅವರು ನೀಡಿದ್ದಾರೆ. ಉದ್ಯಮಿಗಳಲ್ಲಿ ಭರವಸೆಯ ಭಾವನೆ ಮೂಡಲು ಇಷ್ಟೇ ಸಾಲದು. ಅವರ ಈ ಮಾತು ಕೃತಿಯಲ್ಲೂ ಇಳಿಯ­ಬೇಕು. ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡುಗಳು ಉದ್ಯಮ­­ಗಳನ್ನು ಆಕರ್ಷಿಸುವಲ್ಲಿ ನಮಗಿಂತ ಬಹಳ ಮುಂದಿವೆ. ಅವುಗಳಿಂದ ನಾವು ಕಲಿಯುವುದು ಸಾಕಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT