ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಮುಖಿ ಧೋರಣೆಯ ಸಿಜಿಕೆ

ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಬಣ್ಣನೆ
Last Updated 27 ಜೂನ್ 2016, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ಬೀದಿ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ಸಮಾಜಮುಖಿ ಧೋರಣೆ ಹೊಂದಿದ್ದರು’ ಎಂದು ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅವರು  ಹೇಳಿದರು.

ಕರ್ನಾಟಕ ಬೀದಿನಾಟಕ ಅಕಾಡೆಮಿ, ಅವಿರತ ಪುಸ್ತಕ ಹಾಗೂ ಬೆಂಗಳೂರು ಆರ್ಟ್‌ ಫೌಂಡೇಷನ್‌ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ‘ಸಿಜಿಕೆ ಬೀದಿರಂಗ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮುದಾಯ ತಂಡಕ್ಕೆಂದು ಸಿಜಿಕೆ ಅವರು ಬೆಲ್ಜಿ ಎಂಬ ಬೀದಿ ನಾಟಕ ನಾಟಕವನ್ನು ನಿರ್ದೇಶಿಸಿದ್ದರು. ಇದು ಅವರಿಗೆ ಹೆಚ್ಚು ಹೆಸರು ತಂದಿತ್ತು. ಬೀದಿ ನಾಟಕದ ಸಂಸ್ಕೃತಿಯನ್ನು ಬೆಳೆಸಿದ ಅವರು, ಜನಪರವಾದ ಹಾಗೂ ವ್ಯವಸ್ಥೆಯ ವಿರುದ್ಧದ ವಸ್ತುಗಳನ್ನು ರಂಗಕ್ಕೆ ತರುತ್ತಿದ್ದರು’ ಎಂದು ಹೇಳಿದರು.

ವಿಮರ್ಶಕಿ ಎಂ.ಎಸ್‌.ಆಶಾದೇವಿ ಮಾತನಾಡಿ, ‘ಬೀದಿ ನಾಟಕಗಳು ಹೇಳಿಕೆಗಳು ಆಗಿಬಿಡಬಹುದಾಗಿದ್ದ ಸನ್ನಿವೇಶದಲ್ಲಿ ನಾಟಕವನ್ನು ಅಪ್ಪಟ ಕಲೆಯಾಗಿ ಮಾರ್ಪಡಿಸಿದವರು ಸಿಜಿಕೆ. ಇಂದಿನ ತಲ್ಲಣಗಳು, ಮೂಲಭೂತವಾದ ತನ್ನ ಬಲ ಪ್ರದರ್ಶನದ ಕಾಲಘಟ್ಟದಲ್ಲಿ ಸಿಜಿಕೆ ಹೆಚ್ಚು ಪ್ರಸ್ತುತವಾಗುತ್ತಾರೆ’ ಎಂದರು.

ಲೇಖಕ ಶಶಿಕಾಂತ ಯಡಹಳ್ಳಿ ಅವರು, ‘ಸಿಜಿಕೆ ಆಧುನಿಕ ಕನ್ನಡ ರಂಗಭೂಮಿಯ ಕನಸುಗಾರ. ಯುವ ಕಲಾವಿದರು, ತಂತ್ರಜ್ಞರನ್ನು ಬೆಳೆಸುತ್ತಾ ರಂಗಭೂಮಿಯನ್ನು ಕಟ್ಟಲು ಶ್ರಮಿಸಿದ್ದರು’ ಎಂದು ಹೇಳಿದರು.

ಲೇಖಕ ಆರ್‌.ಜಿ.ಹಳ್ಳಿ ನಾಗರಾಜ ಅವರು ಸಿಜಿಕೆ ಅವರೊಂದಿಗಿನ ಒಡನಾಟದ ಅನುಭವಗಳನ್ನು ಹಂಚಿಕೊಂಡರು. ರಂಗ ಪುರಸ್ಕಾರ: ರಂಗಕರ್ಮಿ ಪ್ರಮೋದ್‌ ಶಿಗ್ಗಾವ್‌ ಅವರಿಗೆ ‘ಸಿಜಿಕೆ ರಂಗ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು. ಅಲ್ಲದೆ, ಸಿಜಿಕೆ ಬೀದಿರಂಗದಿನವನ್ನು ಪ್ರತಿ ಜಿಲ್ಲೆಯಲ್ಲೂ ಆಚರಿಸಿದ್ದು, ಆಯಾ ಜಿಲ್ಲೆಯ ರಂಗ ಸಾಧಕರನ್ನು ಗುರುತಿಸಿ ಸಿಜಿಕೆ ರಂಗ ಪುರಸ್ಕಾರ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT