ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೋಸಾ ರಾಜ

ರಸಾಸ್ವಾದ
Last Updated 28 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಆರ್.ಟಿ.ನಗರದ ಮುಖ್ಯರಸ್ತೆಯಲ್ಲಿ (ಅಂಚೆ ಕಚೇರಿಯಿಂದ ಪೊಲೀಸ್ ಠಾಣೆಯತ್ತ) ಒಂದು ಸಂಜೆ ಸುಮ್ಮನೆ ಹೆಜ್ಜೆ ಹಾಕುತ್ತಿದ್ದರೆ ಬಿಸಿ ಬಿಸಿ ಸಮೋಸಾ, ಸ್ವೀಟ್ ಕಚೋರಿಯ ಘಮ ಕ್ಷಣ ತಡೆದು ನಿಲ್ಲಿಸುತ್ತದೆ. ತನ್ನತ್ತ ಸೆಳೆದು ನಾಲಿಗೆಯಲ್ಲಿ ನೀರು ಹರಿಸುತ್ತದೆ.

ಫುಟ್‌ಪಾತ್ ಬದಿಯಲ್ಲಿರುವ ಈ ಪುಟ್ಟ ಚಾಟ್‌ ಸೆಂಟರ್‌ನಲ್ಲಿ ವಿಶಿಷ್ಟ ರುಚಿಯ ಸಮೋಸಾ/ಕಚೋರಿ ನಾಲೆಗೆಗೂ ರುಚಿ, ಹೊಟ್ಟೆಗೂ ಖುಷಿ. ಆದರೆ ಜೇಬಿಗೇನೂ ಭಾರವಲ್ಲ. ಅದರ ಬೆಲೆ ಕೇವಲ ₨ 10.

ನಾಲಿಗೆ ಚುರ್ರ್ ಎನ್ನುವಂಥ ಖಾರ, ಗಂಟಲಿಗೆ ಹರಡುತ್ತ ಸಿಹಿಯಾಗುವ ಗುಣ, ಜೊತೆಗೆ ಒಂದಷ್ಟು ಹುಳಿ, ಮತ್ತಷ್ಟು ಒಗರಿನ ಮಿಶ್ರ ರುಚಿಯಿಂದ ಹೊಟ್ಟೆಗೆ ಇಳಿಯುವ ಪುದಿನಾ ಚಟ್ನಿ. ಇದು ಪ್ಲೇನ್ ಸಮೋಸಾದ ಸೊಗಸುಗಾರಿಕೆ.

ಇನ್ನು ಮಸಾಲಾ ಸಮೋಸಾ ಅಂದರೆ ಈ ಮೇಲೆ ಹೇಳಿದ ಗುಣಗಳೊಂದಿಗೆ ಮತ್ತೊಂದಿಷ್ಟು ಮಸಾಲೆ, ಸೇವ್, ಈರುಳ್ಳಿ, ಕೊತ್ತಂಬರಿ ಸೊಪ್ಪು ಬಂದು ಬೀಳುತ್ತದೆ. ಮೇಲೆ ಒಂದೆರಡು ಹನಿ ನಿಂಬೆ ಹುಳಿ ಹಿಂಡಿ ಕೈಗಿಟ್ಟರೆ... ಮಾಂತ್ರಿಕ ರುಚಿ. ಕಚೋರಿಯಲ್ಲಿಯೂ ಅಷ್ಟೇ. ಸಾದಾ ಅಂದರೂ ಸರಿ, ಸ್ಪೈಸಿ ಅಂದರೂ ಸೈ. ತುಸು ರುಚಿ ಹೆಚ್ಚು ಬೇಕೆಂದರೂ ಆದೀತು. ನೀವು ಹೇಳುತ್ತಿದ್ದಂತೆಯೇ ನಿಮ್ಮ ಕಣ್ಣ ಮುಂದೆಯೇ ಭಿನ್ನ ಭಿನ್ನ ರೂಪ ಪಡೆದು ಬರುತ್ತದೆ ಸಮೋಸಾ/ಕಚೋರಿ.

ಅಷ್ಟಕ್ಕೂ ಇಂಥ ಸಿಹಿ, ಖಾರ, ಹುಳಿಯ ಎಲ್ಲಾ ಗುಣಗಳನ್ನು ತನ್ನ ಅಂಗೈ ಅಗಲದ ಒಡಲಿನಲ್ಲಿ ಇಟ್ಟುಕೊಂಡ ಸಮೋಸಾ ಮಾಡುವುದನ್ನು ಈತ ಯಾವಾಗ, ಎಲ್ಲಿಂದ ಕಲಿತ?

ಅತ್ತ ಮೆಕ್ ಡೊನಾಲ್ಡ್, ಇತ್ತ ಪಿಜ್ಜಾ ಹಟ್. ನಟ್ಟ ನಡುವೆ
ಘಮ್ ಎನ್ನುವ ಸಮೋಸಾ–ಕಚೋರಿಯ ಪರಿಮಳ ಸೂಸುತ್ತ ನಿಂತ ಸಣ್ಣದೊಂದು ಗೂಡಂಗಡಿ. ಇವುಗಳ ನಡುವೆ ಅದ್ಹೇಗೆ ನಿಮ್ಮ ಚಾಟ್‌ ಸೆಂಟರ್ ಜಾಗ ಪಡೆಯಿತು? ಹೇಗೆ ಗ್ರಾಹಕರನ್ನು ಸೆಳೆಯುತ್ತೀರಿ? ಎಂದರೆ ಆಕಾಶದತ್ತ ಶೂನ್ಯ ನೋಟ ಹರಿಸುತ್ತಾರೆ.
‘ಮೇಮ್‌ ಸಾಬ್, ಇಲ್ಲಿ ಅವರವರ ಹೆಸರಿಗೆ ಅಷ್ಟಷ್ಟು ಅನ್ನದ ಅಗುಳು ಬರೆದಿರುತ್ತೆ. ನಾವು ಎಷ್ಟೇ ಪ್ರಯತ್ನ ಮಾಡಿದರೂ ಇನ್ನೊಬ್ಬರ ತುತ್ತನ್ನು ಕಿತ್ತುಕೊಳ್ಳಲಾರೆವು. ಡೊನಾಲ್ಡ್‌ವಾಲಾ ಬರಲಿ, ಪಿಜ್ಜಾ ಭಾಯ್ ಇರಲಿ, ನನ್ನ ನಸೀಬ್‌ನಲ್ಲಿ ಇರೋದರಲ್ಲಿ ಅವರಿಗೆ ಪಾಲು ಸಿಗದು’  ಎನ್ನುವ ಖಾತ್ರಿ ಅವರದು.
‘ಇನ್ನೊಂದು ಮಾತು ಹೇಳುತ್ತೇನೆ, ನಾನು ಮಾಡುವ ರುಚಿ–ಶುಚಿಯಲ್ಲಿ, ನಾನು ಕೊಡುವ ಬೆಲೆಯಲ್ಲಿ ಅವರು ಕೊಡಬಲ್ಲರೇ?’ ಎನ್ನುತ್ತ ಮತ್ತೊಮ್ಮೆ ನಗು ಸೂಸಿ ಸಮೋಸಾ ಕರಿಯಲು ಅಣಿಯಾದರು.


ಅಲ್ಲಿಗೇ ಚಾಟ್ ಸೆಂಟರ್‌ನ ಇಂದ್ರಮಣಿಯ ಕಥೆ ಬಿಚ್ಚಿಕೊಳ್ಳುತ್ತದೆ.
‘ನಮ್ಮೂರು ಗಿರುವಾಡಿ. ಗೊತ್ತಿಲ್ಲವಾ? ಉತ್ತರ ಪ್ರದೇಶದ ಅಲಹಾಬಾದ್‌ನ ಖಾನಾಮೊಂಡಾ ಹತ್ತಿರ ಬರುವ ಊರದು. ಪಾನಿ ಪೂರಿ ನಮ್ಮ ವಂಶದ ಕಸುಬು. ನನ್ನೀ ‘ಚಾಟ್’ ಪ್ರೀತಿ ಅಲ್ಲಿಂದ ಇಲ್ಲಿಗೆ ಬಂದು ಮುಟ್ಟಿದ್ದು ಹೆಂಗೆ ಅಂಬುದನ್ನೂ ಹೇಳ್ತೇನೆ ಇರಿ’ ಎನ್ನುತ್ತಾ ಎದುರು ನಿಂತ ಗಿರಾಕಿಗಳನ್ನು ವಿಚಾರಿಸಿಕೊಳ್ಳುತ್ತಾರೆ ಇಂದ್ರಮಣಿ ಗುಪ್ತಾ.

‘ಎಸ್ಸೆಸೆಲ್ಸಿ ಎರಡು ಸಲ ಫೇಲಾದೆ. ಅತ್ತ ಶಾಲೆನೂ ಇಲ್ಲ, ಇತ್ತ ಕೆಲಸವೂ ಇಲ್ಲ, ಅದೆಂಥ ಮಗನಪ್ಪ ಅಂತ ಊರ ಮಂದಿ ಉಗಿದರು ನನ್ನ. ಬ್ಯಾಸರ ಆತು ಮನಸ್ಸಿಗೆ. ಒಂದಿನ ಬೆಳ್ಳಂಬೆಳಿಗ್ಗೆ ಅಪ್ಪನ ಕಿಸೆಯಿಂದ ದುಡ್ಡು ಕದ್ದು ದೆಹಲಿಯತ್ತ ಓಡಿದೆ. ಅಲ್ಲಿ ಎರಡು ತಿಂಗಳಿದ್ದೆ. ಮತ್ತೆ ಊರು ನೆನಪಾಯ್ತು.  ಮರಳಿದೆ. ಮತ್ತೆ ಶಾಲೆಗೆ ಸೇರಿಸಿದರು. ಹೂಂ ಹೂಂ... ಎಷ್ಟೇ ಆದರೂ ಮನ ಹತ್ತಲಿಲ್ಲ. ಮತ್ತೆ ಊರಿಂದ ಕಾಲ್ಕಿತ್ತಿದೆ. ಆದರೆ ಈ ಬಾರಿ ಚತ್ತಿಸಗಡದ ರೈಲು ಹತ್ತಿದ್ದು ಅಂತ ಆಮೇಲೆ ತಿಳಿತು’ ಹೀಗೆ ಓಡುತ್ತದೆ ಇಂದ್ರಮಣಿಯ ನೆನಪಿನ ಬಂಡಿ.
ಅಲ್ಲಿ ಕೆಲ ತಿಂಗಳು ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದ ಇಂದ್ರಮಣಿ ಒಂದಿನ ಸಂಬಂಧಿಯೊಬ್ಬರ ಬೆನ್ನು ಹತ್ತಿ ಬೆಂಗಳೂರು ಸುತ್ತೋಕೆ ಬಂದರು. ಯಾಕೊ ಇಲ್ಲಿನ ವಾತಾವರಣ ತುಂಬ ಹಿಡಿಸಿತು. ಬೆಂಗಳೂರಿನ ಮೇಲೆ ಪ್ರೀತಿ ಮೊಳಗಿತು. ಇಂದ್ರಮಣಿ ತಮ್ಮೂರ ದಾರಿಯನ್ನೇ ಮರೆತರು. ಬೆಂಗಳೂರನ್ನೇ ನೆಚ್ಚಿಕೊಂಡರು.

ಪಾನಿಪೂರಿ ವ್ಯಾಪಾರವನ್ನೇ ಮಾಡಿಕೊಂಡಿದ್ದ ಅವರು, ಒಂದಿನ ಚೇಂಜ್ ಇರಲಿ ಅಂತ ಹತ್ತು ಸಮೋಸಾ ಮಾಡಿಟ್ಟರು. ಅರ್ಧ ಗಂಟೆಯಲ್ಲಿ ಖಾಲಿಯಾದವು. ಮಾರನೇ ದಿನ 50 ಮಾಡಿದರೂ ಒಂದೂ ಉಳಿಯಲಿಲ್ಲ. ನಂತರ ಪಾನಿಪೂರಿ ವ್ಯಾಪಾರವನ್ನು ತಮ್ಮನಿಗೆ ಬಿಟ್ಟುಕೊಟ್ಟು ತಾವು ಸಮೋಸಾ ಸ್ಪೆಷಲ್ ಇಂದ್ರಮಣಿ ಆದರು.

ನಾನೇ ಆಲ್ ರೌಂಡರ್
ಎಷ್ಟು ಜನ ಇದ್ದೀರಿ? ಎಂದರೆ ಇಂದ್ರಮಣಿಯ ಮುಖದ ಮೇಲೆ ಸಣ್ಣದೊಂದು ನಗು ಹಾಯ್ದು ಹೋಗುತ್ತದೆ.

‘ಇಲ್ಲಿ ಶೆಫ್ ಅಂದ್ರೂ ನಾನೇ, ವೇಟರ್ ಅಂದ್ರೂ, ಕ್ಲೀನರ್ ಅಂದ್ರೂ ನಾನೇ, ಮತ್ತೆ ಮಾಲೀಕನೂ...’ ಮನೆಯಲ್ಲಿ ಹೆಂಡತಿ ಸಹಾಯ ಮಾಡುತ್ತಾಳೆ. ಹಸಿ ಸಮೋಸಾ ಮನೆಯಲ್ಲಿಯೇ ಇಬ್ಬರೂ ಸೇರಿ ತಯಾರು ಮಾಡುತ್ತೇವೆ. ಇಲ್ಲಿ ಬಂದು ಕರಿದಿಡುತ್ತೇನೆ. ಮತ್ತೆ ಬೇಕಾದಾಗ ಬೇಕಾದಷ್ಟನ್ನು ಇಲ್ಲಿಯೇ ತಯಾರಿಸಿಕೊಳ್ಳುತ್ತೇನೆ. ಬರ್ತ್ ಡೇ, ಕಿಟ್ಟಿ ಪಾರ್ಟಿಯಂತಹ ಸಣ್ಣ ಪುಟ್ಟ ಸಂತಸದ ಗಳಿಗೆಯಲ್ಲಿ ಜನ ನನ್ನ ನೆನೆಸಿಕೊಳ್ಳುತ್ತಾರೆ. ಒಂದಿನ ಮೊದಲು ಹೇಳಿದರೆ ಸಾಕು. ಸಮಯಕ್ಕೆ ಸರಿಯಾಗಿ ಅವರ ಮನೆಗೆ ಮುಟ್ಟುತ್ತದೆ ಬಿಸಿ ಬಿಸಿ ಸಮೋಸಾ/ಕಚೋರಿ’

ದಿನಕ್ಕೆ 200 ಮೇಲ್ಪಟ್ಟು ಸಮೋಸಾ ಮಾರಾಟ ಆಗುತ್ತವೆ. ದಿನಕ್ಕೆ ಎರಡ್ಮೂರು ಸಾವಿರ ವಹಿವಾಟು ನಡೆಯುತ್ತದೆ. ಊರಿಗೆ 15ರಿಂದ 20 ಸಾವಿರ ರೂಪಾಯಿ ಕಳಿಸುತ್ತೇನೆ. ಇಬ್ಬರು ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಖರ್ಚು ಎಲ್ಲಾ ತೆಗೆದರೂ ಸಾವಿರಾರು ರೂಪಾಯಿ ಬ್ಯಾಲನ್ಸ್ ಉಳಿಯುತ್ತದೆ ಎನ್ನುತ್ತಾರೆ.

‘ಎಂಥವರು, ಎಲ್ಲಿಂದ ಬಂದರೂ ಬೆಂಗ್ಳೂರು ಬದುಕು ಕಟ್ಟಿಕೊಡುತ್ತೆ. ರಟ್ಟೆ ಗಟ್ಟಿ ಇರಬೇಕಷ್ಟೇ’ ಎನ್ನುವ ಇಂದ್ರಮಣಿ, ದಿನಕ್ಕೆ 12ರಿಂದ 15 ತಾಸು ದುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT