ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನದ ಊರಲ್ಲಿ ಶಾಸನಗಳೇ ಅನಾಥ !

Last Updated 17 ಫೆಬ್ರುವರಿ 2013, 4:14 IST
ಅಕ್ಷರ ಗಾತ್ರ

ಯಳಂದೂರು: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಣಿಗೊಳ್ಳುತ್ತಿರುವ ಯಳಂದೂರಿನ  ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾದ ಶಾಸನಗಳು ಎಣ್ಣೆ ಬಳಿದುಕೊಂಡು ಮುಕ್ಕಾಗಿವೆ. ನೆಲದ ಹಿರಿಮೆ ಸಾರಿದ ಕವಿಗಳ ಆವಾಸ ಜನ ಮಾನಸದಿಂದ ಮರೆಯಾಗುತ್ತಿದೆ.

ಆಳರಸರಿಂದ ತಲೆಎತ್ತಿ ನಿಂತ ಶಿಲ್ಪಕಲೆಗಳು  ನೋಡುಗರ ಕಣ್ಣೋಟಕ್ಕೆ ನಿಲುಕದಂತೆ ಮರೆಯಾಗಿವೆ. ಜೈನಧರ್ಮದ ಕುರುಹುಗಳು ಇನ್ನಿಲ್ಲದಂತೆ ನೆಲಕಚ್ಚಿವೆ.

ಜೈನಧರ್ಮದ ಕೇಂದ್ರವಾಗಿದ್ದ ಇಲ್ಲಿ ಬಾಲ ಚಂದ್ರಮುನಿಗಳು ಜೀವಿಸಿದ್ದರು. ನೇಮಿಚಂದ್ರನ `ಲೀಲಾವತಿ ಪ್ರಬಂಧ', ಷಡಕ್ಷರರ `ರಾಜಶೇಖರ ವಿಳಾಸ', ಮೊದಲಾದ ಕೃತಿಗಳು ಇಲ್ಲಿ ರಚಿಸಲ್ಪ ಟ್ಟಿವೆ. ಚಿಕ್ಕದೇವರಾಜರ ಮಂತ್ರಿ ವಿಶಾಲಾಕ್ಷ ಪಂಡಿತ ಇಲ್ಲಿನವರು. ಕವಯತ್ರಿ ಸಂಚಿಹೊನ್ನಮ್ಮ `ಹದಿಬದೆಯ ಧರ್ಮ' ರಚಿಸಿದ್ದಳು. ಮುಂದೆ ಈಕೆ ಅರಸರ ಊಳಿಗದಲ್ಲಿ ಗುರುತಿಸಿಕೊಂಡು ಅರಮನೆ ಸೇರಿ ಅನೇಕ ಕಾವ್ಯ ಕಟ್ಟಿದವಳು.

`ತಿರುಕರ್ವನೂರ ಮುಂದೆ, ಮುರುಕು ಧರ್ಮಶಾಲೆಯಲ್ಲಿ, ಒರಗಿರುತ್ತಲೊಂದು ಕನಸ ಕಂಡನೆಂತನೆ' ಎಂಬ ಜನಪ್ರಿಯ ತತ್ವಪದ ರಚಿಸಿದ ಮುಪ್ಪಿನ ಷಡಕ್ಷರರು ನೆಲೆ ಯರಗಂಬಳ್ಳಿ. 1500ರ ಸುಮಾರಿಗೆ ಜೀವಿಸಿದ್ದರು. ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ತಪಸ್ಸು ಮಾಡಿದರು ಎನ್ನಲಾಗಿದೆ. ಇಲ್ಲಿ ಇವರ ಗದ್ದುಗೆ ಇದೆ. ಇದು ಕಾಶಿ ಲಿಂಗೇಶ್ವರ ದೇಗುಲದ ಆವರಣದಲ್ಲಿ ಇದೆ. ಆದರೆ ಇವರ ಬಗ್ಗೆ ಯಾವುದೇ ಮಾಹಿತಿ ಇಲ್ಲಿ ಸಿಗುವುದಿಲ್ಲ. ಇವರು ನೆಲೆಸಿದ ಸ್ಥಳದಲ್ಲಿ ನಾಗರ ಶಿಲೆಗಳಿವೆ. ನಡುವೆ ಕನ್ನಡ ಶಾಸನವೂ ಇದೆ. ಇದಕ್ಕೆ ಹರಿಸಿನ, ಕುಂಕುಮ, ಎಣ್ಣೆ ಹಚ್ಚಿ ಅಂದಗೆಡಿಸಲಾಗಿದೆ. ಆದರೆ ಇವರು ರಚಿಸಿದ ಕಾವ್ಯಗಳನ್ನು ಪರಿಚಯಿಸಿ ಇವರ ಹಿರಿಮೆ ಸಾರುವ ಪ್ರಯತ್ನ ಮಾತ್ರ ಇನ್ನೂ ಮಾಡಿಲ್ಲ. ಊರಿನ ನಡುವೆ ಕೆಲವು ಶಿಲೆಗಳು ಗಲ್ಲಿಯ ನಡುವೆ ಸೇರಿಹೋಗಿವೆ ಇವುಗಳ ಮಹತ್ವ ಸಾರುವ ಕೆಲಸವಾಗಬೇಕು.

ಗೌರೀಶ್ವರ ದೇವಾಲಯದ ವಿಶಿಷ್ಟತೆಯನ್ನು ಸಾರುವ ಶಿಲಾಶಾಸನ ಇಲ್ಲಿದೆ. ಸಿಂಗದೇವಭೂಪ ಹಾಗೂ ಮುದ್ದುರಾಜರ ಆಳ್ವಿಕೆಯಲ್ಲಿ ಮುಖಮಂಟಪ, ಪಂಚಲಿಂಗಗುಡಿ ನಿರ್ಮಿಸಲಾಗಿದೆ. ಹಂಪಿಯ ಕಲ್ಲಿನ ರಥ ಹೋಲುವ ಕಗ್ಗಲಿನಲ್ಲಿ ಮುಖಮಂಟಪವನ್ನೂ ಮನೋಹರವಾಗಿ ನಿರ್ಮಿಸಲಾಗಿದೆ. ಆದರೆ ಕಳೆದ ಬಾರಿ ಸುರಿದ ಮಳೆಗಾಳಿಗೆ ಕೆಲ ಭಾಗ ಉದುರಿದೆ. ಶೈವಪುರಾಣ, ರಾಮಾಯಣ, ಮಹಾಭಾರತದ ದೃಶ್ಯಾವಳಿಗಳು ಚರಿತ್ರೆ ಹಾಗೂ ಕನ್ನಡ ಅಧ್ಯಯನ ಕೈಗೊಳ್ಳುವವರಿಗೆ ಮಾಹಿತಿ ಕಣಜವನ್ನೇ ನೀಡುತ್ತದೆ. ಇದನ್ನು ತಿಳಿಸುವ ಕೆಲಸವಾಗಬೇಕು ಎನ್ನುತ್ತಾರೆ ಫೈರೋಜ್‌ಖಾನ್ ಅವರು.

ಹಳೇಗನ್ನಡದ ಶಾಸನಗಳು ಬಳೇಮಂಟಪದ ಪ್ರಾಂಗಣದಲ್ಲಿವೆ. ಬಸವನ ಮೂರ್ತಿಯ ಪುಟ್ಟ ಗುಹೆಯಲ್ಲಿ ಇವು ಮಸುಕಾಗಿವೆ. ಇವುಗಳ ಮಹತ್ವವನ್ನು ಬಿಂಬಿಸುವ ಕಾಯಕ ಇನ್ನೂ ಆರಂಭವಾಗಿಲ್ಲ. ಇದರ ಸಮೀಪದಲ್ಲಿ ಪಂಚ ಶಿವಲಿಂಗಗಳಿವೆ. ಸುಂದರ ಬಸವನ ಮೂರ್ತಿಯೂ ಆಕರ್ಷಕವಾಗಿದೆ. ಆದರೆ ಇವಕ್ಕೆ ಹೊಂದಿಕೊಂಡಂತೆ ಇರುವ ಸುತ್ತುಗೋಡೆ ಅರ್ಧಕ್ಕೆ ನಿಂತಿದೆ. ಈಗಾಗಿ ಐತಿಹಾಸಿಕ ಪ್ರದೇಶದ ಸುಂದರ ನೋಟಕ್ಕೆ ಧಕ್ಕೆಯಾಗಿದೆ. ಅಲ್ಲಲ್ಲಿ ಚದುರಿದಂತೆ ಬೆಳೆದ ಕಳೆಗಿಡಗಳನ್ನು ನಿವಾರಿಸಬೇಕು ಎಂಬುದು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರವಿಕುಮಾರ್ ಅವರ ನೋವಿನ ನುಡಿ.

ಅಪರೂಪದ ಪಗಡೆ ಮರಗಳು ಬಳೇಮಂಟಪದ ತಾಣವನ್ನು ತಂಪಾಗಿಸಿವೆ. ಸನಿಹದಲ್ಲಿಯೇ ಜಿಲ್ಲಾ ವಸ್ತು ಸಂಗ್ರಾಹಾಲಯವೂ ತಲೆ ಎತ್ತುತ್ತಿದೆ. ಜಿಲ್ಲೆಯ ಹಿರಿಮೆ ಸಾರುವ ಈ ಮಣ್ಣಿನ ಚಾರಿತ್ರಿಕ ನೆಲೆಯನ್ನು ರಾಜ್ಯದಲ್ಲಿ ಗುರುತಿಸುವ ಕಾಯಕಕ್ಕೆ ಕಾಯಕಲ್ಪ ಕಲ್ಪಿಸಬೇಕು ಎನ್ನುತ್ತಾರೆ ಪಟ್ಟಣದ ಜನತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT