ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗಳ್ಳರ ಅಟ್ಟಹಾಸ; ಹೆಚ್ಚಿದ ಪೊಲೀಸ್ ವೈಫಲ್ಯದ ಕೂಗು

1984ರಲ್ಲಿ ಮೊದಲ ಸರಗಳ್ಳರನ್ನು ಬಂಧಿಸಿದ್ದ ‘ಆಪರೇಷನ್ ಟೈಗರ್’ ತಂಡ
Last Updated 30 ಜೂನ್ 2015, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಸರಣಿ ಸರಗಳವು’ ಪ್ರವೃತ್ತಿ ಆರಂಭವಾಗಿದ್ದು 1983ರಲ್ಲಿ. ಬೈಕ್‌ನಲ್ಲಿ ಬರುತ್ತಿದ್ದ ಸೋದರರಿಬ್ಬರು, ಒಂದೇ ದಿನ ಏಳೆಂಟು ಕಡೆ ಸರ ದೋಚುತ್ತಿದ್ದರು. ಪೊಲೀಸರು ಸಂಘಟಿತರಾಗಿ ಆ ಕಳ್ಳರ  ಬೇಟೆಗೆ  ಇಳಿಯುವ ಕಾರ್ಯತಂತ್ರ ರೂಪಿಸಿದರು. ಅದಕ್ಕೆ ಆಗಿನ ನಗರ ಪೊಲೀಸ್ ಕಮಿಷನರ್ ಪಿ.ಜಿ ಹರ್ಲಂಕರ್ ಇಟ್ಟ ಹೆಸರು ‘ಆಪರೇಷನ್ ಟೈಗರ್’.

ನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚುತ್ತಿರುವುದರಿಂದ ಪೊಲೀಸರ ವೈಫಲ್ಯದ ಕೂಗು ಕೇಳಿ ಬರುತ್ತಿದೆ. ‘ಮೂರು ದಶಕಗಳ ಹಿಂದೆ ‘ಆಪರೇಷನ್ ಟೈಗರ್‌’ ಮೂಲಕ ಕುಖ್ಯಾತ ಸರಗಳ್ಳರನ್ನು ಬಂಧಿಸಲಾಗಿತ್ತು. ಅದೇ ಮಾದರಿಯಲ್ಲಿ ಈಗಲೂ ವಿಶೇಷ ಕಾರ್ಯಾಚರಣೆಗಳು ನಡೆಯಬೇಕಿದೆ’ ಎಂದು ನಿವೃತ್ತ ಎಸಿಪಿ ಬಿ.ಬಿ.ಅಶೋಕ್‌ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲ ಸರಣಿ ಸರಗಳ್ಳರನ್ನು ಬಂಧಿಸಿದ ಖ್ಯಾತಿ ಹೊಂದಿರುವ ಅಶೋಕ್‌ಕುಮಾರ್, ಅಂದಿನ ವಿಶೇಷ ಕಾರ್ಯಾಚರಣೆ ಬಗ್ಗೆ ‘ಪ್ರಜಾವಾಣಿ’ಗೆ ವಿವರಿಸಿದರು. ಮೊದಲು ಸರಗಳ್ಳರು ನಡೆದುಕೊಂಡು ಅಥವಾ ಸೈಕಲ್‌ನಲ್ಲಿ ಹಿಂಬಾಲಿಸಿ ಬಂದು ಸರ ಕಿತ್ತುಕೊಂಡು ಹೋಗುತ್ತಿದ್ದರು.

1983ರಲ್ಲಿ ಅಪರಾಧ ಜಗತ್ತಿಗೆ ಕಾಲಿಟ್ಟ ಇಬ್ಬರು ಸೋದರರು, ಬೈಕ್‌ನಲ್ಲಿ ಬಂದು ಸರಣಿ ಸರಗಳವು ಮಾಡುವ ಪ್ರವೃತ್ತಿಗೆ ಮುನ್ನುಡಿ ಇಟ್ಟರು. 30ರಿಂದ 40 ದಿನಗಳಿಗೆ ಒಮ್ಮೆ ಇದ್ದಕ್ಕಿದ್ದಂತೆ ಒಂದು ದಿನ ಕಾಣಿಸಿಕೊಳ್ಳುತ್ತಿದ್ದ ಇವರು, ನಾಲ್ಕೈದು ಬಡಾವಣೆಗಳಲ್ಲಿ ಮಿಂಚಿನಂತೆ ಸಂಚರಿಸಿ ಮಾಂಗಲ್ಯ ಕೀಳುತ್ತಿದ್ದರು.

ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಈ ಸರಗಳ್ಳರ ದಾಳಿಗೆ ಸಿಲುಕಿ ನೆಲಕ್ಕುರುಳಿದ್ದರು. ಇದರಿಂದ ತಲೆಗೆ ಪೆಟ್ಟು ಬಿದ್ದು ಮೂರು ತಿಂಗಳು ಅವರು ಜೀವನ್ಮರಣ ಹೋರಾಟ ನಡೆಸಬೇಕಾಯಿತು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

ಆಗ ಪೊಲೀಸ್ ವೈಫಲ್ಯದ ವಿರುದ್ಧ ಜನದನಿ ಮೊಳಗಲಾರಂಭಿಸಿತು. ಅಂದಿನ ಮುಖ್ಯಮಂತ್ರಿ ರಾಮಕಷ್ಣ ಹೆಗಡೆ ಅವರು ಕಮಿಷನರ್‌ ಹರ್ಲಂಕರ್ ಅವರನ್ನು ಕರೆಸಿಕೊಂಡು ಪ್ರಕರಣ ಭೇದಿಸುವಂತೆ ತಾಕೀತು ಮಾಡಿ ಕಳಿಸಿದ್ದರು. ಇದರಿಂದ ವಿಚಲಿತರಾಗಿದ್ದ ಹರ್ಲಂಕರ್, ಕೂಡಲೇ ಎಲ್ಲ ಪೊಲೀಸ್ ಅಧಿಕಾರಿಗಳ ಸಭೆ ಕರೆದರು. ‘ಇಷ್ಟೊಂದು ಪೊಲೀಸ್ ಅಧಿಕಾರಿಗಳಿದ್ದೀರಿ. 

ಇಬ್ಬರು ಸರಗಳ್ಳರನ್ನು ಹಿಡಿಯುವ ತಾಕತ್ತು ನಿಮಗಿಲ್ಲವೇ’ ಎಂದು ಆಕ್ರೋಶದಿಂದ ನುಡಿದಿದ್ದರು. ನಂತರ 2–3 ರಸ್ತೆಗಳು ಸೇರುವ ಜಂಕ್ಷನ್‌ಗಳನ್ನು ಗುರುತಿಸಿ, ಅಲ್ಲಿ ನಿಗಾ ಇಡಲು ಎಸ್‌ಐಯಿಂದ ಡಿಸಿಪಿವರೆಗೆ ಸೂಚಿಸಿದ್ದರು. ಈ ಕಾರ್ಯಾಚರಣೆಗೆ ‘ಆಪರೇಷನ್ ಟೈಗರ್’ ಎಂಬ ಹೆಸರನ್ನು ಅವರೇ ಇಟ್ಟರು.

ಕಾರ್ಯಾಚರಣೆ ಪ್ರಕಾರ ಮೊದಲ ಸರಗಳವು ನಡೆಯುತ್ತಿದ್ದಂತೆಯೇ ನಿಯಂತ್ರಣ ಕೊಠಡಿಯ ಸಿಬ್ಬಂದಿ ಎಲ್ಲ ಠಾಣೆಗಳಿಗೂ ಸಂದೇಶ ಕೊಡುತ್ತಿದ್ದರು. ಕೂಡಲೇ ಎಲ್ಲ ಠಾಣೆಯ ಸಿಬ್ಬಂದಿ ತಮ್ಮ ವ್ಯಾಪ್ತಿಯ ಜಂಕ್ಷನ್‌ಗಳಲ್ಲಿ ನಾಕಾಬಂದಿ ಹಾಕಿ, ಬೈಕ್‌ ಸವಾರರನ್ನು ತಪಾಸಣೆ ನಡೆಸುತ್ತಿದ್ದರು. ಈಗಲೂ ಮೊದಲ ಸರಗಳವು ನಡೆದ ಕೂಡಲೇ ಎಲ್ಲ ಠಾಣೆಗಳಿಗೆ ಎಚ್ಚರಿಸಿದರೆ ಸರಣಿ ಕೃತ್ಯಗಳನ್ನು ತಡೆಯಬಹುದು. ಆಗ ಹಲಸೂರು ಸಂಚಾರ ಠಾಣೆಯಲ್ಲಿ ಎಸ್‌ಐ ಆಗಿದ್ದೆ. 

ಅಪರಾಧ ದಾಖಲಾತಿ ಘಟಕಕ್ಕೆ ತೆರಳಿ ಸರಗಳ್ಳರು ಯಾವ ಮಾದರಿಯಲ್ಲಿ ಕೃತ್ಯ ಎಸಗುತ್ತಿದ್ದಾರೆ ಎಂಬುದನ್ನು ಅಧ್ಯಯನ ನಡೆಸಿದೆ. ಆಗ ಅಮಾವಾಸ್ಯೆ ಅಥವಾ ಹಬ್ಬದ ದಿನದಂದೇ ಅವರು ಕೃತ್ಯಕ್ಕೆ ಇಳಿಯುತ್ತಾರೆ. ನಗರದ ಪೂರ್ವ ವಿಭಾಗದಿಂದ ಕಳವು ಕಾರ್ಯಾಚರಣೆ ಪ್ರಾರಂಭಿಸುತ್ತಾರೆ ಎಂಬ ಸಂಗತಿ ಗೊತ್ತಾಯಿತು.

ಆ ದಿನ ಬಂತು: 1984ರ ಅ.24ರಂದು ನರಕ ಚತುರ್ದಶಿ. 40 ದಿನಗಳ ಹಿಂದೆ ಆ ಸರಗಳ್ಳರು ಏಳು ಕಡೆ ಸರ ಕಿತ್ತು ಭೀತಿ ಮೂಡಿಸಿದ್ದರು. ಹಬ್ಬದ ದಿನವಾದ್ದರಿಂದ ಮಹಿಳೆಯರು ಆಭರಣ ಧರಿಸಿ ಓಡಾಡುವುದು ಸಹಜ. ಹಾಗಾಗಿ ‌ ಪಾತಕಿಗಳು ಬಂದೇ ಬರುತ್ತಾರೆ ಎಂಬುದು ಖಚಿತವಾಗಿತ್ತು. ನಿರೀಕ್ಷೆ ಹುಸಿಯಾಗಲಿಲ್ಲ. ಬೆಳಿಗ್ಗೆ 9.30ಕ್ಕೆ ದುಷ್ಕರ್ಮಿಗಳು ಹಲಸೂರಿನ ಕೇಂಬ್ರಿಡ್ಜ್‌ ಲೇಔಟ್‌ನಲ್ಲಿ ಮಹಿಳೆಯ ಸರ ಕಿತ್ತ ಬಗ್ಗೆ ವೈರ್‌ಲೆಸ್‌ನಲ್ಲಿ ಸಂದೇಶ ಬಂತು.   

‘ಕಪ್ಪು ಬಣ್ಣದ ಬೈಕ್‌ನಲ್ಲಿ ಇಬ್ಬರು ದುಷ್ಕರ್ಮಿಗಳಿದ್ದಾರೆ. ಸವಾರ ಕೆಂಪು ಟಿ-–ಶರ್ಟ್ ಧರಿಸಿದ್ದು, ನೀಲಿ ಬಣ್ಣದ ಹೆಲ್ಮೆಟ್ ಹಾಕಿದ್ದಾನೆ. ಬೈಕ್‌ನ ನೋಂದಣಿ ಸಂಖ್ಯೆ ಸಿಎನ್‌ಟಿಯಿಂದ ಆರಂಭವಾಗುತ್ತದೆ’ ಎಂದು ಸುಳಿವು ಕೊಟ್ಟಿದ್ದರು. ಈ ಹಿಂದೆ ಅವರು ಯಾವ ಯಾವ ಮಾರ್ಗಗಳ ಮೂಲಕ ಸಾಗಿ ಕೃತ್ಯ ಎಸಗಿದ್ದರು ಎಂಬುದು ನನ್ನ ತಲೆಯಲ್ಲಿತ್ತು. ಕಾನ್‌ಸ್ಟೆಬಲ್‌ ಅಲ್ಲಾ ಬಕ್ಷ್‌ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಆ ರಸ್ತೆಗಳಲ್ಲೇ ಹುಡುಕಿ ಹೊರಟೆ.

ವಿಕ್ಟೋರಿಯಾ ರಸ್ತೆ, ಜಾನ್ಸನ್‌ ಮಾರ್ಕೆಟ್, ತಿಲಕ್‌ನಗರ, ಜೆ.ಪಿ.ನಗರದ ರಾಗಿಗುಡ್ಡ ಅಲ್ಲಿಂದ ಕೋರಮಂಗಲ ಹೀಗೆ ಹಿಂದೆ ಸರಗಳ್ಳತನ ನಡೆದಿದ್ದ ದಾರಿಗಳಲ್ಲೆಲ್ಲ ಸುತ್ತಾಡಿದ್ದೆ. ಆಗ ಕೋರಮಂಗಲದ ಕುದುರೆಮುಖ ಅದಿರು ಕಾರ್ಖಾನೆಯ ಮುಖ್ಯ ಕಚೇರಿ ಬಳಿ  ನಿಯಂತ್ರಣ ಕೊಠಡಿ ಕೊಟ್ಟಿದ್ದ ಸುಳಿವನ್ನು ಹೋಲುವ ಯುವಕರಿಬ್ಬರು ವೇಗವಾಗಿ ಬೈಕ್‌ನಲ್ಲಿ ಹೋದರು. ಅವರನ್ನು ಹಿಂಬಾಲಿಸಿದಾಗ ಅವರೇ ಸರಗಳ್ಳರು ಎಂಬುದು ಗೊತ್ತಾಯಿತು.

49 ಮಾಂಗಲ್ಯ ಸರ: ಸಂಚಾರ ಠಾಣೆ ಎಸ್‌ಐ ಆಗಿದ್ದರೂ ಸರಗಳ್ಳರನ್ನು ಹಿಡಿಯುವ ಉದ್ದೇಶಕ್ಕಾಗಿಯೇ ಸ್ವಂತ ರಿವಾಲ್ವಾರ್ ಇಟ್ಟುಕೊಂಡಿದ್ದೆ. ಜೀವಂತವಾಗಿ ಹಿಡಿಯಬೇಕೆಂಬ ಕಾರಣಕ್ಕೆ ಅವರತ್ತ ಗುಂಡು ಹಾರಿಸಿರಲಿಲ್ಲ. ಕೊನೆಗೂ ಈಗಿನ ಮಡಿವಾಳ ಠಾಣೆ ಎದುರು ಅವರ ಬೈಕ್‌ಗೆ ನನ್ನ ಬೈಕ್‌ ಗುದ್ದಿಸಿಬಿಟ್ಟೆ. ನಂತರ ನೆಲಕ್ಕೆ ಬಿದ್ದ ಅವರಿಬ್ಬರನ್ನು ವಶಕ್ಕೆ ಪಡೆಯಲಾಯಿತು. ಆ ಸೋದರರ ಬಂಧನದಿಂದ 52 ಸರಗಳವು ಪ್ರಕರಣ ಬೆಳಕಿಗೆ ಬಂದವು. ಅದರಲ್ಲಿ 49 ಮಾಂಗಲ್ಯ ಸರಗಳಿದ್ದವು.
*
ತಮಿಳು ಸಿನಿಮಾ ಪ್ರಭಾವ
‘ಜನರಲ್ಲಿ ಅಷ್ಟೊಂದು ಭೀತಿ ಹುಟ್ಟಿಸಿದ್ದ ಆ ಸರಗಳ್ಳರು ನರೇಂದ್ರ ಮತ್ತು ಚಿನ್ನಪ್ಪ ಅಲಿಯಾಸ್ ಗೋಪಾಲ. ಇವರು ರಾಜಕಾರಣಿಯೊಬ್ಬರ ಸೋದರರು. 1983ರಲ್ಲಿ ತೆರೆಕಂಡ ತಮಿಳು ಸಿನಿಮಾದ ಪ್ರಭಾವಕ್ಕೆ ಒಳಗಾಗಿ ಈ ಕೃತ್ಯ ಎಸಗಿದ್ದಾಗಿ ಹೇಳಿಕೆ ಕೊಟ್ಟರು. ಚಿತ್ತೂರಿನಲ್ಲಿ ನೆಲೆಸಿದ್ದ ಅವರು, ತಿಂಗಳಿಗೊಮ್ಮೆ ನಗರಕ್ಕೆ ಬಂದು ಕೆ.ಆರ್.ಪುರದಲ್ಲಿ ಇರುತ್ತಿದ್ದರು.

ಹೀಗಾಗಿ ಪೂರ್ವ ವಿಭಾಗದಿಂದಲೇ ಕೃತ್ಯ ಆರಂಭವಾಗುತ್ತಿತ್ತು’ ಎಂದು ಅಶೋಕ್‌ ಕುಮಾರ್ ಮಾಹಿತಿ ನೀಡಿದರು. ‘ಈ ಸರಗಳ್ಳರಿಗೆ ಒಂದು ಪ್ರಕರಣದಲ್ಲಿ ಮಾತ್ರ ಮೂರು ವರ್ಷ ಜೈಲು ಶಿಕ್ಷೆ ಆಯಿತು. ಉಳಿದ ಪ್ರಕರಣಗಳಲ್ಲಿ ಸರಗಳ್ಳರ ಬಗ್ಗೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಲು ಮಹಿಳೆಯರು ಹಿಂದೇಟು ಹಾಕಿದ್ದರಿಂದ ಅವರು ಆರೋಪ ಮುಕ್ತರಾದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT