ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಉಳಿವಿಗೆ ಜಯ ಅನಿವಾರ್ಯ

ಕ್ರಿಕೆಟ್‌: ಶ್ರೀಲಂಕಾ ವಿರುದ್ಧದ ಎರಡನೇ ಟ್ವೆಂಟಿ–20 ಪಂದ್ಯ ಇಂದು; ಒತ್ತಡದಲ್ಲಿ ಆತಿಥೇಯರು
Last Updated 11 ಫೆಬ್ರುವರಿ 2016, 19:49 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ಮೊದಲ ಪಂದ್ಯದಲ್ಲಿ  ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಸೋತಿ ರುವ ಭಾರತ ತಂಡಕ್ಕೆ ಶ್ರೀಲಂಕಾ ಎದು ರಿನ ಟ್ವೆಂಟಿ–20 ಸರಣಿಯಲ್ಲಿ ಜಯದ ಅವಕಾಶ ಉಳಿಯಬೇಕಾದರೆ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಈ ಪಂದ್ಯ ಕ್ಕಾಗಿ  ಶುಕ್ರವಾರ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ತವರಿನಲ್ಲಿ ವೇದಿಕೆ ಸಿದ್ಧಗೊಂಡಿದೆ.

ಮುಂಬರುವ ಏಷ್ಯಾಕಪ್‌ ಮತ್ತು ವಿಶ್ವ ಟ್ವೆಂಟಿ–20 ಟೂರ್ನಿಗೆ ಸಜ್ಜಾಗಲು ಉಭಯ ತಂಡಗಳಿಗೂ ಈ ಸರಣಿ ವೇದಿಕೆ ಎನಿಸಿದೆ. ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡ ಐದು ವಿಕೆಟ್‌ಗಳ ಗೆಲುವು ಪಡೆದು ಮೂರು ಪಂದ್ಯಗಳ ಸರಣಿಯಲ್ಲಿ 1–0 ರಲ್ಲಿ ಮುನ್ನಡೆ ಪಡೆದುಕೊಂಡಿದೆ.

ಅನನುಭವಿ ಆಟಗಾರರನ್ನು ಹೊಂದಿರುವ ದಿನೇಶ್‌ ಚಾಂಡಿಮಾಲ್‌ ನಾಯಕತ್ವದ ಸಿಂಹಳೀಯ ನಾಡಿನ ತಂಡ  ಮೊದಲ ಪಂದ್ಯದಲ್ಲಿ ಬೌಲಿಂಗ್‌ ನಲ್ಲಿ ಪ್ರಾಬಲ್ಯ ಮೆರೆದಿತ್ತು. ಆತಿಥೇಯ ರನ್ನು 101 ರನ್‌ಗೆ ಆಲೌಟ್‌ ಮಾಡಿತ್ತು.

ವಿಶ್ವ ಚುಟುಕು ಟೂರ್ನಿ ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿದೆ. ಈ ಟೂರ್ನಿಗೆ ಮೊದಲ ಬಾರಿಗೆ ಆತಿಥ್ಯ ವಹಿಸಿರುವ ಭಾರತಕ್ಕೆ ತವರಿನಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವ ಗುರಿಯಿದೆ. ಆದ್ದರಿಂದ ಲಂಕಾ ಎದುರಿನ ಸರಣಿ ಮಹತ್ವ ಪಡೆದುಕೊಂಡಿದೆ.

ವೈಫಲ್ಯದ ಭೀತಿ: ಭಾರತ ತಂಡದ ಉಪನಾಯಕ ವಿರಾಟ್‌ ಕೊಹ್ಲಿ ಅವರಿಗೆ ಈ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಆದ್ದರಿಂದ ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ಗಳಾದ ಸುರೇಶ್ ರೈನಾ ಮತ್ತು ಯುವರಾಜ್‌ ಸಿಂಗ್  ಅವರ ಮೇಲೆ ಹೆಚ್ಚು ಜವಾಬ್ದಾರಿಯಿದೆ.

ಮೊದಲ ಪಂದ್ಯದಲ್ಲಿ ಭಾರತ 58 ರನ್‌ ಗಳಿಸುವಷ್ಟರಲ್ಲಿ ಏಳು ವಿಕೆಟ್‌ ಕಳೆದುಕೊಂಡಿತ್ತು. ನಂತರ ಅಶ್ವಿನ್ ಆಸರೆಯಾಗಿ ತಂಡದ ಮೊತ್ತವನ್ನು ಮೂರಂಕಿಯ ಗಡಿ ದಾಟಿಸಿದ್ದರು.  ಈ ಸರಣಿಗೂ ಮೊದಲು ದೋನಿ ಪಡೆ ಆಸ್ಟ್ರೇಲಿಯಾ ನೆಲದಲ್ಲಿ ಟ್ವೆಂಟಿ–20 ಸರಣಿ ಜಯಿಸಿತ್ತು. ಆದರೆ ಈಗ ತವರಿನಲ್ಲಿಯೇ ರನ್‌ ಗಳಿಸಲು ಪರದಾಡುತ್ತಿದೆ.

ವಿಶ್ವಾಸದಲ್ಲಿ: ಐಸಿಸಿ ಟ್ವೆಂಟಿ–20 ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಲಂಕಾ ತಂಡ ಮೊದಲ ಪಂದ್ಯದಲ್ಲಿ ಪಡೆದ ಗೆಲುವಿನಿಂದ ವಿಶ್ವಾಸ ಹೆಚ್ಚಿಸಿಕೊಂಡಿದ್ದು, ಈಗ ಸರಣಿ ಜಯದ ಮೇಲೆ ಕಣ್ಣು ಇಟ್ಟಿದೆ.

ಪುಣೆ ಪಂದ್ಯದಲ್ಲಿ ಈ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳುವಿಫಲರಾಗಿದ್ದರು. ಆದರೆ ಚಾಂಡಿಮಲ್‌ (35) ಮತ್ತು ಚಾಮರಾ ಕಪುಗೆದರಾ (25) ಜವಾಬ್ದಾರಿಯುತ ಆಟವಾಡಿ ಗೆಲುವು ತಂದುಕೊಟ್ಟಿದ್ದರು.

ವೇಗಿಗಳಾದ ಕಸುನಾ ರಜಿತಾ ಮತ್ತು  ದಸುನಾ  ಶನಕಾ  ತಲಾ ಮೂರು ವಿಕೆಟ್‌ ಪಡೆದು ಭಾರತ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣರಾಗಿದ್ದರು.  
ಅವಕಾಶ: ನಿಗದಿತ ವೇಳಾಪಟ್ಟಿಯಂತೆ ಎರಡನೇ ಪಂದ್ಯ ದೆಹಲಿಯಲ್ಲಿ ನಡೆಯಬೇಕಿತ್ತು.

ವಿವಾದಕ್ಕೆ ಸಿಲುಕಿರುವ  ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ ‘ಪಂದ್ಯ ಆಯೋಜಿಸಲು ನಮ್ಮಿಂದ ಆಗುವುದಿಲ್ಲ’ ಎಂದು ಬಿಸಿಸಿಐಗೆ ಹೇಳಿದೆ. ಆದ್ದರಿಂದ ಪಂದ್ಯವನ್ನು ರಾಂಚಿಗೆ ಸ್ಥಳಾಂತರಿಸಲಾಗಿದೆ.

ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆಯ ಇಲ್ಲಿನ ಕ್ರೀಡಾಂಗಣ ಆತಿಥೇಯರಿಗೆ ಅದೃಷ್ಟದ ತಾಣವೆನಿಸಿದೆ. ಭಾರತ ಇಲ್ಲಿ ಮೂರು ಏಕದಿನ ಪಂದ್ಯಗಳನ್ನಾಡಿದ್ದು ಒಂದೂ ಸೋತಿಲ್ಲ.

ಇಂಗ್ಲೆಂಡ್‌ ಮತ್ತು ಲಂಕಾ ಎದುರಿನ ಪಂದ್ಯಗಳಲ್ಲಿ ಗೆಲುವು ಪಡೆದಿತ್ತು. ಆಸ್ಟ್ರೇಲಿಯಾ ವಿರುದ್ಧದ ಹೋರಾಟಕ್ಕೆ ಮಳೆ ಅಡ್ಡಿಯಾಗಿತ್ತು. ಆದ್ದರಿಂದ ಹಿಂದಿನ ಜಯದ ದಾಖಲೆ ಈ ಬಾರಿಯೂ ಮುಂದುವರಿಯುವುದೇ ಎನ್ನುವ ಕುತೂಹಲ ಮೂಡಿದೆ.

ತಂಡಗಳು ಇಂತಿವೆ
ಭಾರತ
ಮಹೇಂದ್ರ ಸಿಂಗ್ ದೋನಿ (ನಾಯಕ), ಶಿಖರ್‌ ಧವನ್‌, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಸುರೇಶ್‌ ರೈನಾ, ಯವರಾಜ್‌ ಸಿಂಗ್‌, ರವೀಂದ್ರ ಜಡೇಜ, ಆರ್‌. ಅಶ್ವಿನ್‌, ಜಸ್‌ಪ್ರೀತ್‌ ಬೂಮ್ರಾ, ಪವನ್‌ ನೇಗಿ, ಆಶಿಶ್‌ ನೆಹ್ರಾ, ಮನೀಷ್‌ ಪಾಂಡೆ, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌ ಮತ್ತು ಹರಭಜನ್‌ ಸಿಂಗ್‌.

ಶ್ರೀಲಂಕಾ
ದಿನೇಶ್‌ ಚಾಂಡಿಮಲ್‌ (ನಾಯಕ), ದುಷ್ಮಂತಾ ಚಾಮೀರಾ, ನಿರೋಷನ್‌ ಡಿಕ್ವೆಲ್ಲಾ, ತಿಲಕರತ್ನೆ ದಿಲ್ಶಾನ್‌, ಬಿನುರಾ ಫೆರ್ನಾಂಡೊ, ದಿಲ್‌ಹಾರಾ ಫೆರ್ನಾಂಡೊ, ಅಸೆಲಾ ಗುಣರತ್ನೆ, ಧನುಷ್ಕಾ ಗುಣತಿಲಕಾ, ಚಾಮರಾ ಕಪುಗೆದರಾ, ತಿಸಾರ ಪೆರೆರಾ, ಸಿಕುಗೆ ಪ್ರಸನ್ನ, ಕಸುನ್‌ ರಜಿತಾ, ಸಚಿತ್ರಾ ಸೇನಾನಾಯಕೆ, ದಸುನಾ  ಶನಕಾ, ಮಿಲಿಂದ ಸಿರಿವರ್ಧನಾ ಮತ್ತು  ಜೆಫ್ರಿ ವಾಂಡರ್ಸೆ.
ಪಂದ್ಯ ಆರಂಭ: ರಾತ್ರಿ 7.30ಕ್ಕೆ.
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ಮುಖ್ಯಾಂಶಗಳು
* ರಾಂಚಿ ಅಂಗಳದಲ್ಲಿ ಭಾರತ ಒಂದೂ ಪಂದ್ಯ ಸೋತಿಲ್ಲ

*  ಮೊದಲ ಪಂದ್ಯದಲ್ಲಿ ಆತಿಥೇಯರಿಗೆ ಬ್ಯಾಟಿಂಗ್ ವೈಫಲ್ಯ ಕಾಡಿತ್ತು
* ಮೂರು ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಲಂಕಾ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT