ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಸಕ್ಕಿಟ್ಟ ಹೆಜ್ಜೆ ಕರೆದೊಯ್ತು ನೇಣಿಗೆ...

Last Updated 14 ಮೇ 2016, 19:37 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯ ಗ್ರಾಮವೊಂದರ ಘಟನೆ ಇದು. ಈ ಗ್ರಾಮದ ಮಧ್ಯಮ ಕುಟುಂಬದ 25 ವರ್ಷದ ತರುಣ ಲಿಂಗರಾಜು. ಹಿರಿಯರಿಂದ ಬಳುವಳಿಯಾಗಿ ಬಂದ ಮೂರು ಎಕರೆ ತೆಂಗಿನ ತೋಟದಲ್ಲಿ ದುಡಿದು ಬಂದ ಆದಾಯದಿಂದ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದಾತ.

ಪಕ್ಕದ ಹಳ್ಳಿಯ ಕೃಷಿ ಕುಟುಂಬದ ಹೆಣ್ಣು ಮಗಳು ಗೌರಿಯನ್ನು ಮದುವೆಯಾಗಿ ಅಪ್ಪ ಅಮ್ಮನ ಜೊತೆ ಸುಖೀ ಜೀವನ ನಡೆಸಿಕೊಂಡಿದ್ದ. ಗೌರಿ ಸ್ಫುರದ್ರೂಪಿ. ಸಂಗೀತವೆಂದರೆ ಪಂಚಪ್ರಾಣ. ಅಲ್ಪಸ್ವಲ್ಪ ಸಂಗೀತ ಅಭ್ಯಾಸ ಮಾಡಿದ್ದರೂ ಚೆನ್ನಾಗಿ ಹಾಡುತ್ತಿದ್ದರು. ಇದರಿಂದಾಗಿ ‘ಸುಶ್ರಾವ್ಯ ಹಾಡುಗಾರ್ತಿ’ ಎಂದು ಹಳ್ಳಿಯ ಜನ ಹೊಗಳುತ್ತಿದ್ದರು.

ಕೆಲಸದ ಕಡೆಗೇ ಹೆಚ್ಚು ಗಮನ ಕೊಡುತ್ತಿದ್ದ ಲಿಂಗರಾಜು ಹೆಂಡತಿಯ ಸಂಗೀತದ ಬಗ್ಗೆ ನಿರ್ಲಿಪ್ತನಾಗಿದ್ದ. ಗಂಡ ತಮ್ಮನ್ನು ಹೊಗಳಲಿ ಎಂಬ ಆಸೆ ಗೌರಿಗೆ ಇತ್ತಾದರೂ ಅವರ ಸ್ವಭಾವ ಗೊತ್ತಿದ್ದಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಬೇರೆ ಯಾರಾದರೂ ಕಂಠಸಿರಿಯನ್ನು ಹೊಗಳಿದರೆ ಸಾಕು, ಅಟ್ಟಕ್ಕೇರುತ್ತಿದ್ದರು. ಪತಿಯಿಂದ ಸಿಗದ ಹೊಗಳಿಕೆಯನ್ನು ಬೇರೆಯವರ ಬಾಯಲ್ಲಿ ಕೇಳಿ ಉಬ್ಬಿ ಹೋಗುತ್ತಿದ್ದರು.

ಲಿಂಗರಾಜು ಅವರ ಪಕ್ಕದ ಮನೆಯಲ್ಲಿ ಅಬ್ಬೆಪಾರಿ ಹುಡುಗ  ವಾಸವಾಗಿದ್ದ. ಹೆಸರು ಪರಮೇಶ. ಮಾಡಲು ಕೆಲಸವಿರಲಿಲ್ಲ. ವಾಮಮಾರ್ಗದಲ್ಲಿ ಗಳಿಕೆ ಮಾಡುತ್ತಿದ್ದ. ಕೈಯಲ್ಲಿ ಹಣದ ಓಡಾಟ ಹೆಚ್ಚಾದಂತೆ ಕಂಡ ಕಂಡ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಯಿಸುವುದು, ಕೆಟ್ಟ ದೃಷ್ಟಿಯಿಂದ ನೋಡುವುದು ಇವನಿಗೆ ಅಭ್ಯಾಸವಾಗಿತ್ತು. ಇವನ ಕಾಕದೃಷ್ಟಿ ಸುಂದರಿ ಗೌರಿ ಮೇಲೆ ಬಿತ್ತು.  ಹೇಗಾದರೂ ಗೌರಿಯನ್ನು ಒಲಿಸಿಕೊಂಡು ತನ್ನ ಕಾಮದಾಹವನ್ನು ತಣಿಸಿಕೊಳ್ಳಲು ಹೊಂಚು ಹಾಕತೊಡಗಿದ ಈತ.

ಗೌರಿಯ ಗಮನ ತನ್ನತ್ತ ಸೆಳೆಯುವಂತೆ ಮಾಡಲು ಅವನಿಗೆ ಸಿಕ್ಕ ಸುಲಭ ಉಪಾಯ ಎಂದರೆ ಅವರ ಹಾಡುಗಾರಿಕೆ. ಕಂಠಸಿರಿಯನ್ನು ಹೊಗಳಿಬಿಟ್ಟರೆ ಗೌರಿ ತಮ್ಮನ್ನು ತಾವು ಮರೆತೇ ಬಿಡುತ್ತಾರೆ ಎನ್ನುವುದು ಇವನಿಗೆ ಗೊತ್ತಾಯಿತು. ಇದಕ್ಕಾಗಿ ಸಿಕ್ಕಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳತೊಡಗಿದ.

ಗೌರಿಯ ಸಂಗೀತದ ಬಗ್ಗೆ ಸಿಕ್ಕಾಗೆಲ್ಲ ಅತಿ ರಂಜಿತವಾದ ಮಾತುಗಳನ್ನಾಡತೊಡಗಿದ.  ಪರಮೇಶನ ದುರ್ಬುದ್ಧಿಯ ಅರಿವಿಲ್ಲದ ಗೌರಿ ತಮ್ಮ ಕಂಠಸಿರಿಯ ವರ್ಣನೆ ಕೇಳಿ ಹಿಗ್ಗಿ ಹೋಗುತ್ತಿದ್ದರು. ಆದರೆ ಈ ಹೊಗಳಿಕೆಯ ಹಿಂದಿನ ದುರಂತ ಸತ್ಯ ಅವರ ಅರಿವಿಗೆ ಬರುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು.

ಅದೊಂದು ಕರಾಳದಿನ. ಲಿಂಗರಾಜು ವ್ಯಾಪಾರ ನಿಮಿತ್ತ ಊರಿಗೆ ಹೋಗಿದ್ದರು. ತಂದೆ ತಾಯಿ  ಕೂಡ ಊರಲ್ಲಿ ಇರಲಿಲ್ಲ. ಇದನ್ನೆಲ್ಲಾ ಗಮನಿಸಿದ ಪರಮೇಶ ಗೌರಿ ಅವರ ಮನೆಗೆ ಹೋದ. ಆತ ಪರಿಚಯಸ್ಥನಾದ ಕಾರಣ ಗೌರಿ ಅವನನ್ನು ಒಳಗೆ ಕರೆದರು. ಗೌರಿಯ ಸಂಗೀತದ ವರ್ಣನೆಗೆ ಶುರುವಿಟ್ಟುಕೊಂಡ ಈ ಮಹಾ ಖದೀಮ.

ಆಕೆಯ ಸೌಂದರ್ಯದ ಬಗ್ಗೆಯೂ ಪ್ರಶಂಸಿಸಿದ. ಇದರಿಂದ ಗೌರಿ ತುಂಬಾ ಸಂತೋಷಪಟ್ಟುಕೊಂಡರೇ ವಿನಾ ಇವನ ಕುತಂತ್ರ ತಿಳಿಯಲು ವಿಫಲರಾದರು. ಆತನಿಗೆ ಕಾಫಿ ಮಾಡಿಕೊಡಲೆಂದು ಒಳಗೆ ಹೋದರು. ಇದೇ ವೇಳೆಗಾಗಿ ಕಾಯುತ್ತಿದ್ದ ಪರಮೇಶ ಗೌರಿಯನ್ನು ಹಿಂಬಾಲಿಸಿ ತಬ್ಬಿಕೊಂಡ.

ಏಕಾಏಕಿ ಈ ರೀತಿ ಆಕ್ರಮಣ ಮಾಡಿದ್ದರಿಂದ ಗಾಬರಿಗೊಂಡ ಗೌರಿ ಜೋರಾಗಿ ಕಿರುಚಿಕೊಂಡರು. ಈ ಕೂಗು ಕೇಳಿದ ಅಕ್ಕಪಕ್ಕದ ಮನೆಯವರು  ಓಡಿಬಂದರು. ಅವರನ್ನೆಲ್ಲ ನೋಡಿದ ಪರಮೇಶ ಅಲ್ಲಿಂದ ಕಾಲ್ಕಿತ್ತ. ಆದರೆ ಸೇರಿದ್ದ ಜನರು ಇವನನ್ನು ಹಿಂಬಾಲಿಸಿ ಹಿಡಿದುಕೊಂಡು ಗೌರಿಯ ಮನೆಗೆ ಎಳೆದು ತಂದರು. ಏನಾಯಿತೆಂದು ಗೌರಿಯ ಬಳಿ ವಿಚಾರಿಸಿದರು. ಗೌರಿ ನಡುಗುತ್ತಾ ಎಲ್ಲರ ಮುಂದೆ ಇದ್ದ ವಿಷಯವನ್ನು ಇದ್ದಂತೆ ಹೇಳಿದರು. ಅಲ್ಲಿಂದ ಪ್ರಾರಂಭವಾಯ್ತು ಗೌರಿಯ ದಾರುಣ ಕಥೆ...

ಯಾವುದೇ ಅನ್ಯಾಯ ನಡೆದಾಗ ಹಳ್ಳಿಯ ಪಂಚಾಯ್ತಿಯಲ್ಲಿ ಬಗೆಹರಿಸುವುದು ಹಿಂದಿನಿಂದಲೂ ನಡೆದುಬಂದಿರುವ ಪದ್ಧತಿ. ಈ ಸಂಪ್ರದಾಯದಂತೆ ಊರಿನ ಯಜಮಾನರು ಅನ್ನಿಸಿಕೊಂಡವರು, ಪಂಚಾಯ್ತಿದಾರರು ಅಲ್ಲಿ ಹಾಜರು ಇರುತ್ತಾರೆ. ಕಲ್ಪಿಸಿಕೊಂಡರೆ ಅಲ್ಲೊಂದು ಆಲದ ಮರ, ಅದರ ಕೆಳಗೊಂದು ಕಟ್ಟೆ, ಅಲ್ಲಿ ಪಂಚಾಯ್ತಿ. ಅಲ್ಲಿ ಪಂಚಾಯ್ತಿದಾರರು ಆಸೀನರಾಗುತ್ತಾರೆ.

ಒಟ್ಟಿನಲ್ಲಿ ಅಲ್ಲೊಂದು ‘ಕೋರ್ಟ್‌’ ವಾತಾವರಣ. ಆದರೆ ಇಲ್ಲಿ ಪಂಚಾಯ್ತಿದಾರರು ಅರ್ಥ ಮಾಡಿಕೊಂಡಿದ್ದೇ ಸರಿ. ನಡೆದ ಘಟನೆ ಏನೇ ಆಗಿರಲಿ, ಅವರು ಅಂದುಕೊಂಡ ಮೇಲೆ ಮುಗಿಯಿತು. ಅವರು ಕೊಟ್ಟಿದ್ದೇ ನ್ಯಾಯ. ಆ ನ್ಯಾಯಕ್ಕೆ ಅಪೀಲುಗಳಿಲ್ಲ, ಪ್ರತಿನಿಧಿಸಲು ವಕೀಲರು ಇಲ್ಲವೇ ಇಲ್ಲ. ಅದೇನೇ ಇರಲಿ. ಈ ಪ್ರಕರಣಕ್ಕೆ ಬರೋಣ.

ಗ್ರಾಮಸ್ಥರು ಪರಮೇಶನನ್ನು ಎಳೆತಂದು ಪಂಚಾಯಿತಿ ನಡೆಯುವ ಸ್ಥಳದ ಸಮೀಪವಿದ್ದ ಕಂಬಕ್ಕೆ ಕಟ್ಟಿದರು. ಪರಮೇಶನಿಗೆ ಇಂಥ ಪಂಚಾಯ್ತಿಯೇನೂ ಹೊಸದಲ್ಲ.

ಅದಕ್ಕಾಗಿಯೇ ಪಂಚಾಯ್ತಿದಾರರನ್ನು ಎದುರಿಸಲು ಆತನಿಗೆ ಕಷ್ಟ ಆಗಲಿಲ್ಲ. ಇವರಿಗೆಲ್ಲಾ ಹೇಗೆ ಮೂಗುದಾರ ಹಾಕಿ ತನ್ನನ್ನು ಬಚಾವು ಮಾಡಿಕೊಳ್ಳಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಲೇ ಇದ್ದ ಆತ. ಹಾಗೆಯೇ  ಪ್ರಕರಣ ಪಂಚಾಯ್ತಿ ಕಟ್ಟೆಯಿಂದ ಪೊಲೀಸ್ ಠಾಣೆಗೆ ಹೋದರೆ ತನಗೆ ಆಗುವ ಘೋರ ಪರಿಣಾಮದ ಬಗ್ಗೆಯೂ ಆತನಿಗೆ ಅರಿವಿತ್ತು.

ಆ ದಿನ ಲಿಂಗರಾಜು ಬರುವುದು ತಡವಾಯಿತು. ವಿಚಾರಣೆ ಒಂದು ಹಂತಕ್ಕೆ ಬಂದಾಗ ಗೌರಿಯನ್ನು ಕರೆಯಬಹುದು ಎಂದುಕೊಂಡ ಪಂಚಾಯ್ತಿದಾರರು ದಂಪತಿಯ ಅನುಪಸ್ಥಿತಿಯಲ್ಲಿ ಪಂಚಾಯ್ತಿ ಆರಂಭಿಸಿದರು. ಆಗ ಪರಮೇಶನಿಗೆ ಉಪಾಯವೊಂದು ಹೊಳೆಯಿತು. ತಾನು ತುರ್ತಾಗಿ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿದ.

ಇಬ್ಬರ ಕಾವಲಿನೊಂದಿಗೆ ಅವನನ್ನು ಪಂಚಾಯ್ತಿದಾರರು ಮನೆಗೆ ಕಳುಹಿಸಿಕೊಟ್ಟರು. ಮನೆಗೆ ಹೋದ ಪರಮೇಶ ಅಲ್ಲಿಯೇ ಇದ್ದ ಹರಿತವಾದ ಮಚ್ಚೊಂದನ್ನು ತನ್ನ ಬೆನ್ನಿನೊಳಗೆ ಅಡಗಿಸಿಕೊಂಡ. ಶೌಚಾಲಯ ಕೆಲಸವನ್ನು ಪೂರೈಸಿದಂತೆ ಮಾಡಿ, ಪಂಚಾಯ್ತಿ ಕಟ್ಟೆಗೆ ಶಿಸ್ತಿನ ಸಿಪಾಯಿಯಂತೆ ಬಂದ. ಪಂಚಾಯ್ತಿ ಮುಂದುವರಿಯಿತು.

ಪಂಚಾಯ್ತಿದಾರರು, ಹಿರಿಯರು ಪರಮೇಶನಿಗೆ, ‘ನೀನು ಮಾಡಿದ್ದು ತಪ್ಪಲ್ಲವೇ?’ ಎಂದು ಕೇಳಿದಾಗ, ಪರಮೇಶ ಹಿಂದೆ ಮುಂದೆ ನೋಡದೆ ‘ನನಗೂ ಗೌರಿಗೂ ಬಹಳ ದಿನಗಳಿಂದ ಸಂಬಂಧವಿದೆ. ಅದಕ್ಕಾಗಿಯೇ ನಾನು ಅವಳ ಮನೆಗೆ ಹೋಗಿದ್ದು.

ನಮ್ಮ ಸಂಬಂಧದ ಬಗ್ಗೆ ಕೇಳಲು ಈ ಪಂಚಾಯ್ತಿಗೆ ಯಾವ ಹಕ್ಕಿದೆ? ಇದನ್ನೆಲ್ಲ ನೀವು ಪ್ರಶ್ನಿಸುವಂತಿಲ್ಲ’ ಎಂದು ಪ್ರಬಲವಾದ ವಾದವನ್ನು ವಕೀಲನಂತೆ ಮಂಡಿಸಿದ. ಪ್ರಶ್ನೆ ಮುಂದುವರಿದಾಗ, ಪರಮೇಶ, ಪಂಚಾಯ್ತಿದಾರರ ಎದುರು ಏರು ದನಿಯಲ್ಲಿ ‘ನಿಮಗೆಲ್ಲಾ ಈ ಊರಿನ ಸಭ್ಯ ಕುಟುಂಬದ ಹೆಣ್ಣು ಮಕ್ಕಳೊಂದಿಗೆ ಇರುವ ಸಂಬಂಧಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅದನ್ನು ಬೇಕಿದ್ದರೆ ನಾನು ಸಾಬೀತು ಮಾಡುತ್ತೇನೆ.

ಸುಮ್ಮನೇ ನನ್ನ ಸಂಬಂಧದ ಬಗ್ಗೆ ಕೆಣಕಲು ಬರಬೇಡಿ’ ಎಂದು ಹೇಳಿದಾಗ ಪಂಚಾಯ್ತಿದಾರರ ಆಕ್ರೋಶ ಮುಗಿಲು ಮುಟ್ಟಿತು. ಯಾರು ಏನು ಮಾಡುತ್ತಿದ್ದಾರೆಂದು ಗೊತ್ತಾಗದ ವಾತಾವರಣ ಸೃಷ್ಟಿಯಾಯಿತು. ಹೀಗೆಲ್ಲಾ ಗಲಾಟೆಯಾದರೆ ಜನರ ದಿಕ್ಕು ತಪ್ಪಿಸಿದಂತಾಗುತ್ತದೆ, ತನ್ನ ಮೇಲಿಂದ ಜನರ ದೃಷ್ಟಿ ಬೇರೆಡೆ ಹೋಗುತ್ತದೆ ಎಂಬುದನ್ನು ತಿಳಿದೇ ಇಂಥದ್ದೊಂದು ಉಪಾಯ ಮಾಡಿದ್ದ ಪರಮೇಶ. ಎಲ್ಲವೂ ಆತ ಅಂದುಕೊಂಡಂತೆಯೇ ನಡೆಯಿತು. 

ಆದರೆ ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಪರಮೇಶನ ಮಾತು ಕೇಳಿದ ಜನರು ಈತನ ವಿರುದ್ಧ ತಿರುಗಿಬಿದ್ದರು. ತನ್ನ ಮೇಲೆ ದಾಳಿ ಆರಂಭ ಆಗುತ್ತಿದೆ ಎಂದು ತಿಳಿಯುತ್ತಲೇ ಪರಮೇಶ ಬೆನ್ನಿನ ಹಿಂದೆ ಇಟ್ಟುಕೊಂಡಿದ್ದ ಮಚ್ಚನ್ನು ತೆಗೆದು ಪಂಚಾಯ್ತಿದಾರರ ಕಡೆಗೆ ಗೂಳಿಯಂತೆ ಮುನ್ನುಗ್ಗಿದ. ಅಲ್ಲಿದ್ದ ಮೂರು ಜನ ಪಂಚಾಯ್ತಿದಾರರನ್ನು ಹತ್ತಿಪ್ಪತ್ತು ಬಾರಿ ಮಚ್ಚಿನಿಂದ ತಿವಿದ.

ಇವನ ರೌದ್ರಾವತಾರ ನೋಡಿ ಜನ ದಿಕ್ಕಾಪಾಲಾಗಿ ಓಡಿ ಹೋದರು. ಅಷ್ಟರೊಳಗೆ, ಪಂಚಾಯ್ತಿದಾರರಾಗಿದ್ದ ನಂಜೇಗೌಡ್ರು, ರುದ್ರಯ್ಯನವರು ಪರಮೇಶನ ಮಚ್ಚಿನ ಏಟಿಗೆ ಶವವಾಗಿ ಬಿದ್ದರು. ನಟರಾಜ ಮಾಸ್ತರ ಎಂಬುವವರಿಗೆ ಗಂಭೀರ ಗಾಯಗಳಾಗಿ ಪ್ರಜ್ಞಾಹೀನರಾಗಿ ಕುಸಿದರು. ರಕ್ತದ ಕೋಡಿಯೇ ಹರಿಯಿತು. ಹೀಗೆ ರಕ್ತಸಿಕ್ತ ಅಧ್ಯಾಯದ ಮೊದಲನೆಯ ಅಂಕಣ ತೆರೆದಿಟ್ಟ ಪರಮೇಶ.

ಇಷ್ಟೆಲ್ಲ ಗಲಾಟೆ ನಡೆಯುತ್ತಿದ್ದಾಗಲೇ ಅಲ್ಲಿಂದ ಪರಾರಿಯಾದ ಪರಮೇಶ. ಇತ್ತ ಜನ ದಿಕ್ಕಾಪಾಲಾಗಿ ಓಡುತ್ತಿದುದ್ದನ್ನು ಗಮನಿಸಿದರು ಮನೆಯಲ್ಲಿದ್ದ ಗೌರಿ. ಅಲ್ಲಿ ಏನು ನಡೆಯಿತು ಎಂದು ಅವರಿಗೆ ತಿಳಿಯಲಾಗಲಿಲ್ಲ. ಆದ್ದರಿಂದ ಅಲ್ಲಿಯೇ ಇದ್ದ ಒಬ್ಬರನ್ನು ಪ್ರಶ್ನಿಸಿದರು.  ಆಕೆಯ ದುರಾದೃಷ್ಟ ನೋಡಿ. ಯಾರೋ ಪುಣ್ಯಾತ್ಮ, ‘ಪರಮೇಶ ನಿನ್ನ ಗಂಡ ಲಿಂಗರಾಜನನ್ನು ಕೊಲೆ ಮಾಡಿದ್ದಾನೆ’ ಎಂದುಬಿಟ್ಟರು.

ಗೌರಿಗೆ ದಿಕ್ಕೇ ತೋಚದಾಯಿತು. ತಮ್ಮಿಂದಾಗಿ ಗಂಡನ ಕೊಲೆಯಾಗಿದೆ ಎಂದುಕೊಂಡ ಅವರಿಗೆ ಕತ್ತಲು ಕವಿದಂತಾಯಿತು. ಒಂದು ಕ್ಷಣವೂ ಯೋಚನೆ ಮಾಡದ ಅವರು, ಸತ್ಯವನ್ನೂ ತಿಳಿಯುವ ಗೋಜಿಗೆ ಹೋಗದೆ ಸೀದಾ ಮನೆಯೊಳಗೆ ಹೋಗಿ ಅಲ್ಲಿದ್ದ ಹಗ್ಗವನ್ನು ಕತ್ತಿಗೆ ಬಿಗಿದು ಉರುಳು ಹಾಕಿ ನೇಣಿಗೆ ಶರಣಾದರು. ಹತ್ತಾರು ನಿಮಿಷಗಳ ಅಂತರದಲ್ಲೇ ಮೂರು ಹೆಣಗಳನ್ನು ನೋಡಬೇಕಾಯಿತು ಆ ಗ್ರಾಮ.

ವಿಷಯ ತಿಳಿದು ಸ್ಥಳಕ್ಕೆ ಬಂದರು ಪೊಲೀಸರು. ಪ್ರಜ್ಞಾಹೀನರಾಗಿ ಬಿದ್ದ ನಟರಾಜ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ನಟರಾಜ ಅವರು ಮಾತನಾಡುವ ಸ್ಥಿತಿಯಲ್ಲಿ ಇದ್ದುದರಿಂದ ಆಸ್ಪತ್ರೆಯ ವೈದ್ಯ ಡಾ. ಗೋವಿಂದೇಗೌಡರು ಘಟನೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಅವರ ಹೇಳಿಕೆ ಬರೆದುಕೊಂಡು ಅದನ್ನು ದೃಢೀಕರಿಸಿದರು.

ಕಾನೂನು ಪ್ರಕ್ರಿಯೆ ಆರಂಭವಾಯಿತು. ಗಾಯಾಳು ನಟರಾಜ ಅವರು ನೀಡಿದ ಹೇಳಿಕೆಯ ಮೇಲೆ ಪ್ರಕರಣ ದಾಖಲಾಯಿತು. ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಅವರೂ ಸಾವನ್ನಪ್ಪಿದರು (ಈ ಹೇಳಿಕೆಯನ್ನು ಕಾನೂನಿನ ಭಾಷೆಯಲ್ಲಿ ‘ಡೈಯಿಂಗ್‍ ಡಿಕ್ಲರೇಷನ್‍’ ಎನ್ನುತ್ತೇವೆ).

ಇತ್ತ ಕೇಸನ್ನು ದಾಖಲು ಮಾಡಿಕೊಂಡ ಮಂಡ್ಯ ಜಿಲ್ಲೆಯ ಪೊಲೀಸರು, ಪರಮೇಶನನ್ನು ಬಂಧಿಸಿ ಅವನಿಂದ ರಕ್ತಸಿಕ್ತ ಬಟ್ಟೆಗಳು, ಕೊಲೆ ಮಾಡಲು ಉಪಯೋಗಿಸಿದ ಮಚ್ಚನ್ನು ವಶಪಡಿಸಿಕೊಂಡರು.

ಪ್ರತ್ಯಕ್ಷದರ್ಶಿಗಳ ಹೇಳಿಕೆ, ಪರಮೇಶನ ಹಿನ್ನೆಲೆ, ನಟರಾಜ ಮಾಸ್ತರರು ಸಾಯುವ ಮುನ್ನ ನೀಡಿದ ‘ಡೈಯಿಂಗ್‍ ಡಿಕ್ಲರೇಷನ್‍’... ಹೀಗೆ ಹತ್ತು ಹಲವು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದರು. ಕೊಲೆ ಹಾಗೂ ಮತ್ತಿತರ ಕಲಮುಗಳ ಅಡಿ ದೋಷಾರೋಪ ಪಟ್ಟಿಯನ್ನು ಪೊಲೀಸರು ಮಂಡ್ಯದ ಸೆಷನ್ಸ್‍ ಕೋರ್ಟ್‌ಗೆ ಸಲ್ಲಿಸಿದರು, ಅಲ್ಲಿ ವಿಚಾರಣೆ ಪ್ರಾರಂಭವಾಯಿತು.

ವಿಚಾರಣೆ ಸಮಯದಲ್ಲಿ ಪ್ರತ್ಯಕ್ಷ ಸಾಕ್ಷಿಗಳಲ್ಲಿ ಕೆಲವರು ಪ್ರತಿಕೂಲ ಸಾಕ್ಷಿಗಳಾಗಿ (ಮೊದಲು ನೀಡಿದ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡುವುದು) ಪರಿಣಮಿಸಿದರು. ಇದರ ಜೊತೆಗೆ, ನಟರಾಜ ಮಾಸ್ತರ ಅವರು ನೀಡಿದ್ದ ‘ಡೈಯಿಂಗ್‍ ಡಿಕ್ಲರೇಷನ್‍’ನ ಮೂಲ ಪ್ರತಿ ಕಾಣೆಯಾಗಿಬಿಟ್ಟಿತು. ಆದರೆ ನ್ಯಾಯಾಧೀಶರ ಸಮಯ ಪ್ರಜ್ಞೆಯಿಂದ ಕೊನೆಗೂ ಅದು ಸಿಕ್ಕಿತೆನ್ನಿ.

ಸುದೀರ್ಘ ವಿಚಾರಣೆ ನಡೆಸಿದ ನಂತರ ನ್ಯಾಯಾಧೀಶರು ಒಟ್ಟು ನಾಲ್ಕು ಮಂದಿಯ ಸಾವಿಗೆ ಕಾರಣವಾದ ಇಂಥ ವ್ಯಕ್ತಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ ಎಂದು ಅಭಿಪ್ರಾಯಪಟ್ಟು ಗಲ್ಲು ಶಿಕ್ಷೆ ವಿಧಿಸಿದರು. ಇದೊಂದು ವಿರಳಗಳಲ್ಲಿ ಅತಿ ವಿರಳ ಪ್ರಕರಣವೆಂದೂ, ಕ್ರೌರ್ಯಕ್ಕೆ ತಕ್ಕನಾದ ಶಿಕ್ಷೆಯ ಅವಶ್ಯಕತೆ ಇಂದಿನ ಸಮಾಜಕ್ಕೆ ಅಗತ್ಯವಿದೆ ಎಂದೂ ಆದೇಶದಲ್ಲಿ ಅವರು ಉಲ್ಲೇಖಿಸಿದರು.

ಪ್ರಕರಣ  ಹೈಕೋರ್ಟ್‌ಗೆ ಬಂತು. ಆ ಸಮಯದಲ್ಲಿ ನಾನು ಸರ್ಕಾರದ ಪಬ್ಲಿಕ್‍ ಪ್ರಾಸಿಕ್ಯೂಟರ್‍ ಆಗಿದ್ದೆ. ಪ್ರಕರಣ ನ್ಯಾಯಮೂರ್ತಿ ಬಿ.ಪದ್ಮರಾಜ್ ನೇತೃತ್ವದ ಪೀಠದ ಮುಂದೆ ಬಂತು. ಇವನ ಶಿಕ್ಷೆಯನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು ಎಂದು ನಾನು ಬಲವಾಗಿ ವಾದಿಸಿದೆ. ಇಂತಹ ಸಮಾಜಘಾತುಕ ನಾಗರಿಕ ಸಮಾಜಕ್ಕೆ ಕಪ್ಪುಚುಕ್ಕೆ ಎಂದು ವಾದಿಸಿದೆ. ನನ್ನ ವಾದವನ್ನು ಪೀಠ ಮಾನ್ಯ ಮಾಡಿ ಸೆಷನ್ಸ್‍ ಕೋರ್ಟ್‍ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು  ಎತ್ತಿ ಹಿಡಿಯಿತು.

ಪರಮೇಶನಿಗೆ ಶಿಕ್ಷೆಯಾದುದಕ್ಕೆ ಹಳ್ಳಿಯ ಜನ ಪಟಾಕಿ ಸಿಡಿಸಿ ತೀರ್ಪಿಗೆ ಹರ್ಷ ವ್ಯಕ್ತಪಡಿಸಿದರು. ಆದರೇನು ಬಂತು? ಹೆಣ್ಣು ಮಗಳೊಬ್ಬಳ ಮೇಲೆ ಕಣ್ಣು ಹಾಕಿದ ನೆಪದಿಂದ ಆರಂಭಗೊಂಡ ಈ ಪ್ರಕರಣ, ನಾಲ್ಕು ಜೀವಗಳನ್ನು ಬಲಿ ಪಡೆಯಿತು. ಮನುಷ್ಯನ ಕ್ರೌರ್ಯ ಎಲ್ಲೆ ಮೀರಿದಾಗ ಕುಟುಂಬ, ಸಮಾಜ ಎಲ್ಲವೂ ಸರ್ವನಾಶವಾಗುತ್ತವೆ ಎಂಬುದನ್ನು  ಪ್ರತಿಬಿಂಬಿಸುವ ಈ ಘಟನೆ ನನ್ನ ವೃತ್ತಿ ಜೀವನದಲ್ಲಿ ನೋಡಿದ ಕ್ರೂರ ಪ್ರಕರಣಗಳಲ್ಲಿ ಒಂದಾಗಿ ಅಚ್ಚಳಿಯದೇ ಉಳಿದಿದೆ.

ಲೇಖಕ ಸರ್ಕಾರದ ಮಾಜಿ ಪಬ್ಲಿಕ್‌ ಪ್ರಾಸಿಕ್ಯೂಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT