ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದಲೇ ಪ್ರಾಥಮಿಕ ಶಿಕ್ಷಣ: ದೇವನೂರ ಆಗ್ರಹ

Last Updated 9 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಶಾಲೆಗಳೆಂದರೆ ಈಗ ಯಾರೂ ಹೇಳುವವರು, ಕೇಳುವವರೇ ಇಲ್ಲವಾಗಿದೆ. ಕಾಟಾಚಾ­ರಕ್ಕೆ ನಡೆಯು­ತ್ತಿರುವ ಈ ಶಾಲೆಗಳು ಸಂಪೂರ್ಣ ಉಪೇಕ್ಷೆಗೆ ಒಳಗಾಗಿವೆ. ವಾತಾವರಣ ಹೀಗಿರುವಾಗ ಶಿಕ್ಷಣದ ಗುಣಮಟ್ಟ ಕುಸಿಯದೆ ಇನ್ನೇನು ಆಗುತ್ತದೆ’ ಎಂದು ಹಿರಿಯ ಸಾಹಿತಿ ದೇವ­ನೂರ ಮಹಾದೇವ  ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಸಂಘಟಿಸ­ಲಾ­ಗಿದ್ದ ಸಮಾನ ಶಿಕ್ಷಣಕ್ಕಾಗಿ ರಾಜ್ಯ­ಮಟ್ಟದ ಹಕ್ಕೊತ್ತಾಯ ಸಮಾವೇಶ­ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೆ ಗ್ರಾಮದ ಶಾಲೆಗಳಲ್ಲಿ ಪಟೇಲರ ಮಕ್ಕಳು, ಶಾನುಬೋಗರ ಮಕ್ಕಳು, ಜೀತಗಾರರ ಮಕ್ಕಳು, ನಗರ ಶಾಲೆ­ಗಳಲ್ಲಿ ನ್ಯಾಯಾಧೀಶರ ಮಕ್ಕಳು, ವ್ಯಾಪಾ­ರಿಗಳ ಮಕ್ಕಳು, ಬಡವರ ಮಕ್ಕಳು ಒಂದೇ ಕಡೆ ಕಲಿಯುತ್ತಿದ್ದರು. ಆಗ ಹೇಳುವವರು, ಕೇಳುವವರು ಇರುತ್ತಿದ್ದರು’ ಎಂದರು.

‘ಎಳೆಯ ಮಕ್ಕಳಿಗೆ ನೀಡುವ ಶಿಕ್ಷಣ ಪದ್ಧತಿಯಲ್ಲಿ ತಾರತಮ್ಯ, ಅಂತಸ್ತು, ವಂಚನೆ ತುಂಬಿರುವಾಗ ಈ ಶಿಕ್ಷಣ ಪಡೆದು ನಾಳೆ ದೇಶವನ್ನು ಕಟ್ಟಬೇಕಾ­ದ­ವರು ನಮ್ಮ ಸಂವಿಧಾನದ ಮೂಲ ಆಶ­ಯಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ಹೇಗೆ’ ಎಂಬ ಪ್ರಶ್ನೆ ಮುಂದಿಟ್ಟರು.

‘ಭಾರತಕ್ಕೆ ಬಲು ಬೆಲೆಯುಳ್ಳ ಶಿಕ್ಷಣ ಎಂದರೆ, ದೇಶದ ವಿವಿಧ ಜಾತಿ, ಕುಲ, ವರ್ಗಗಳ ಮಕ್ಕಳು ಒಂದೇ ಕಡೆ ಬೆರೆತು ಒಡನಾಡುವುದೇ ಆಗಿದೆ. 14 ವರ್ಷದವರೆಗಿನ ಮಕ್ಕಳ ಶಿಕ್ಷಣವನ್ನು ಸರ್ಕಾರವೇ ಸಂಪೂರ್ಣವಾಗಿ ವಹಿಸಿ­ಕೊಂಡು ಸಮಾನ ಹಾಗೂ ಉಚಿತ ಶಿಕ್ಷಣ ನೀಡಬೇಕು. ವಾಸವಾಗಿರುವ ಪ್ರದೇಶದ ಅಕ್ಕ–ಪಕ್ಕದ ಶಾಲೆಗೆ ಮಾತ್ರ ಪ್ರವೇಶಾವಕಾಶ ಕೊಡಬೇಕು’ ಎಂದು ಒತ್ತಾಯಿಸಿದರು.

‘ಹುಟ್ಟಿಗೂ ಶಿಕ್ಷಣಕ್ಕೂ ಗಂಟು­ಹಾಕಿದ್ದ ವರ್ಣ ವ್ಯವಸ್ಥೆಯ ಸಾಮಾಜಿಕ ಗುಲಾಮ­ಗಿರಿ ಕೊಳಕಿನಿಂದ ಇತ್ತೀಚೆ­ಗಷ್ಟೇ ಭಾರತ ಹೊರಕ್ಕೆ ಕಾಲಿಟ್ಟಿದೆ. ಈಗಲೂ ಬ್ರಿಟಿಷ್‌ ವಸಾಹತು­ಶಾಹಿಯ ಆ ಗುಲಾಮಗಿರಿ ಶಿಕ್ಷಣ ಪದ್ಧ­ತಿಯೇ ನಮ್ಮನ್ನು ಆವರಿಸಿದೆ. ನಮ್ಮ ದೇಹ ಗುಲಾಮಗಿರಿಯಿಂದ ಬಿಡು­ಗಡೆ­­ಗೊಂಡರೂ ಮನಸ್ಸನ್ನು ಮಾತ್ರ ಈಗಲೂ ಅದೇ ನಿಯಂತ್ರಿ­ಸು­ತ್ತಿದೆ’ ಎಂದು ಹೇಳಿದರು.

‘ವಿಶ್ವಬ್ಯಾಂಕ್‌ ಈಗ ಎಲ್ಲರ ದೊಡ್ಡಪ್ಪ. ಕಾಂಚಾಣಕ್ಕೆ ಕಣ್ಣು ಎಲ್ಲಿದೆ? ಶಿಕ್ಷಣಕ್ಕೆ ವ್ಯಯ ಮಾಡು­ವು­ದೆಂದರೆ ವಿಶ್ವಬ್ಯಾಂಕ್‌ಗೆ ಅದು ಲಾಭ­ರಹಿತ ಕ್ಷೇತ್ರವಂತೆ. ಶಿಕ್ಷಣವನ್ನು ಖಾಸಗಿ­ಗೊಳಿಸಿ, ಅದನ್ನು ವ್ಯಾಪಾರ ಮಾಡಿ, ಲಾಭದ ಕ್ಷೇತ್ರವಾಗಿಸಬೇಕಷ್ಟೇ. ಹೀಗಿದೆ ವ್ಯಾಪಾರ, ವ್ಯವಹಾರ. ಸಮಾನ ಶಿಕ್ಷಣ ಕುತ್ತಿ­ಗೆಗೆ ನಾವು ನೇಣುಬಿಗಿದ ಬಗೆ ಇದು’ ಎಂದು ವಿಷಾದಿಸಿದರು.

ಕುಂವೀ ಹೇಳಿಕೆ ಸರಿಯಲ್ಲ
‘ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರೆಲ್ಲ ದೊಡ್ಡವರೇ ಆಗಿದ್ದಾರೆ. ಕುಂ.ವೀರ­ಭದ್ರಪ್ಪ ಈ ಪ್ರಶಸ್ತಿಯ ಕುರಿತು ಲಘುವಾಗಿ ಮಾತನಾಡುವ ಅಗತ್ಯ ಇರಲಿಲ್ಲ’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಪ್ರತಿಕ್ರಿಯಿ­ಸಿದರು.

ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ‘ಲಂಕೇಶ್‌ ಸೇರಿದಂತೆ ಇನ್ನೂ ಹಲವು ಜನ ಅರ್ಹ ಸಾಹಿತಿಗಳಿಗೆ ಈ ಪ್ರಶಸ್ತಿ ಬಂದಿಲ್ಲ ಎನ್ನುವುದನ್ನು ನಾನೂ ಒಪ್ಪುತ್ತೇನೆ. ಇದೊಂದು ಕಾರಣಕ್ಕೆ ಪ್ರಶಸ್ತಿಗೆ ಭಾಜನರಾದವರನ್ನು ಉಪೇಕ್ಷೆ ಮಾಡುವುದು ಸಲ್ಲ’ ಎಂದರು. ‘ಜ್ಞಾನಪೀಠ­ದಂತಹ ಪ್ರಶಸ್ತಿಯನ್ನು ಸಾಹಿತಿಯೊಬ್ಬನ ಸಾಹಿತ್ಯಿಕ ಕೃಷಿ, ವಿದ್ವತ್‌ ಪ್ರೌಢಿಮೆ ಎಲ್ಲವನ್ನೂ ಗಮನಿಸಿ ಕೊಡಲಾಗುತ್ತದೆ. ಇಂತಹ ಪ್ರಶಸ್ತಿಗಳ ವಿಷಯದಲ್ಲಿ ಲಾಬಿಯೊಂದೇ ಸಂಪೂರ್ಣವಾಗಿ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT