ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿತಾ ಸಾವಿನಿಂದ ಪಾಠ ಕಲಿಯದ ಐರ್ಲೆಂಡ್!

Last Updated 28 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಳಗಾವಿ ಮೂಲದ ದಂತವೈದ್ಯೆ ‌ಸವಿತಾ ಹಾಲಪ್ಪನವರ ಸಾವು ತನ್ನ ರಾಷ್ಟ್ರದ ಕಾನೂನು ತಿದ್ದುಪಡಿಗೆ ಕಾರಣವಾಗಿದ್ದರೂ ಐರ್ಲೆಂಡ್‌  ಇನ್ನೂ ಪಾಠ ಕಲಿತಂತೆ ಕಾಣುತ್ತಿಲ್ಲ. ಈಚೆಗೆ ಅಂತಹುದೇ ಮತ್ತೊಂದು ಘಟನೆ   ಅಲ್ಲಿ ಮರುಕಳಿಸಿದೆ.   ಆದರೆ, ಈ ಬಾರಿ ಅದೃಷ್ಟವಶಾತ್ ತಾಯಿ ಮಗು ಇಬ್ಬರೂ ಬದುಕುಳಿದಿದ್ದಾರೆ.

17 ವಾರಗಳ ಗರ್ಭಿಣಿಯಾಗಿದ್ದ ಸವಿತಾ ಹಾಲಪ್ಪ­ನವರ ನಂಜಾಗಿ ಸಾವನ್ನಪ್ಪಿದ ಘಟನೆ ಅಂತರ­ರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಗರ್ಭಿಣಿಯರ ನರಕ­ಯಾತನೆ ಮತ್ತು ಸಾವಿಗೆ ಕಾರಣವಾಗುತ್ತಿರುವ ಗರ್ಭಪಾತ ನಿಷೇಧ ಕಾನೂನಿನ ವಿರುದ್ಧ ದೊಡ್ಡ ದನಿ ಎದ್ದಿತ್ತು. ಗರ್ಭಪಾತಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂಬ ಒಕ್ಕೊರಲ ದನಿ ಕೇಳಿಬಂದಿತ್ತು. ಅದಕ್ಕಿಂತ ಹೆಚ್ಚಾಗಿ ಐರ್ಲೆಂಡ್ನ ಕುರುಡು ಕಾನೂನಿನ ಅಮಾನವೀಯ ಮುಖವನ್ನು ವಿಶ್ವದ ಮುಂದೆ ತೆರೆದಿಡುವಲ್ಲಿ ಯಶಸ್ವಿಯಾಗಿತ್ತು.

ಜಾಗತಿಕವಾಗಿ ತೀವ್ರ ಆಕ್ರೋಶಕ್ಕೆ  ಕಾರಣ­ವಾ­ಗಿದ್ದ ಈ ಅಮಾನವೀಯ ಘಟನೆಯ ನಂತರ ಎಚ್ಚೆ­ತ್ತುಕೊಂಡ ಐರ್‍ಲೆಂಡ್‌  ಸರ್ಕಾರ, ಸಂಪ್ರ­ದಾ­ಯ­ವಾದಿಗಳ   ವಿರೋಧದ ಮಧ್ಯೆಯೂ 2013­ರ ಜುಲೈನಲ್ಲಿ ಅಮಾನುಷ ಗರ್ಭಪಾತ ಕಾನೂ­ನಿಗೆ ಕೆಲವು ಮಿತಿಗಳನ್ನು ಒಳಗೊಂಡ ತಿದ್ದುಪಡಿ ತಂದಿತ್ತು. ತಾಯಿಯ ಜೀವಕ್ಕೆ ಅಪಾಯ ಒದಗಿದ ಸಂದರ್ಭಗಳಲ್ಲಿ ಗರ್ಭ­ಪಾತಕ್ಕೆ ಹೊಸ ಕಾನೂನು ಅವಕಾಶ ಒದಗಿಸಿತ್ತು. ಕ್ಯಾಥೊಲಿಕ್  ರಾಷ್ಟ್ರದಲ್ಲಿ  ಇಂತಹದ್ದೊಂದು ಐತಿ­ಹಾಸಿಕ  ಬದಲಾವಣೆ  ಹೊಸದೊಂದು ಕ್ರಾಂತಿಗೆ ನಾಂದಿ ಹಾಡಬಹುದು ಎಂದು ಭಾವಿಸಲಾಗಿತ್ತು.

ಪರಿಪರಿಯಾಗಿ ಕೇಳಿದ್ದಳು!: ಆದರೆ, ನಾಲ್ಕೈದು  ತಿಂಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಬಸುರಿ­ಯಾದ ಯುವತಿಯೊಬ್ಬಳು  ಬೇಡದ ಗರ್ಭ ತೆಗೆ­ಸಲು ವೈದ್ಯರ ಬಳಿ ತೆರಳಿದ್ದಳು. ಆದರೆ, ಕಾನೂ­ನಿನಲ್ಲಿ  ಇದಕ್ಕೆ ಅವಕಾಶ ಇಲ್ಲ ಎಂದು ಹೇಳಿ ಮತ್ತೆ  ವೈದ್ಯರು ಕೈಚೆಲ್ಲಿದರು.

‘ನಾನು ಐರ್ಲೆಂಡ್‌ ಪ್ರಜೆ ಅಲ್ಲ. ದಯಮಾಡಿ ಮಗುವನ್ನು ಹೊರತೆಗೆದುಬಿಡಿ’ ಎಂದು ಆ ಯುವತಿ   ಪರಿಪರಿಯಾಗಿ ಬೇಡಿಕೊಂಡರೂ,  ‘ಭ್ರೂಣದ ಎದೆಬಡಿತ ಕೇಳುತ್ತಿದೆ.  ಹೀಗಾಗಿ ನಾವು ಏನೂ ಮಾಡುವ ಹಾಗಿಲ್ಲ’ ಎಂದು ವೈದ್ಯರು ನಿರಾಕರಿಸಿದರು.  ಮಾನಸಿಕವಾಗಿ ಕುಗ್ಗಿ ಹೋಗಿದ್ದ ಯುವತಿಯ ತಲೆಯಲ್ಲಿ ಆತ್ಮ­ಹತ್ಯೆಯ   ವಿಚಾರವೂ ಮೊಳಕೆಯೊಡೆದಿತ್ತು.  ಅನ್ನ, ನೀರು ಬಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದಳು.  ಐರಿಶ್‌ ಹೊಸ ಕಾನೂನಿನ ಅಡಿ  ಭ್ರೂಣವನ್ನು ತೆಗೆದು ಹಾಕುವಂತೆ ಪಟ್ಟು ಹಿಡಿದಳು.

ವೈದ್ಯರು ಆರು ತಿಂಗಳ ಗರ್ಭಿಣಿಯಾದ ಆಕೆಯ ಮುಂದೆ ಶಸ್ತ್ರಚಿಕಿತ್ಸೆ (ಸಿಸೇರಿಯನ್‌) ಮೂಲಕ ಮಗುವನ್ನು ಹೊರತೆಗೆಯುವ ಪ್ರಸ್ತಾಪ ಇಟ್ಟರು. ವಿಧಿ ಇಲ್ಲದೆ ಯುವತಿ  ಒಪ್ಪಿಗೆ ನೀಡಿದಳು. ಈ ನಡುವೆ ಪ್ರಕರಣವನ್ನು ಮೂವರು ತಜ್ಞರನ್ನು ಒಳಗೊಂಡ ಸಮಿತಿಗೆ ಒಪ್ಪಿಸಲಾಗಿತ್ತು. ಸಮಿತಿಯಲ್ಲಿದ್ದ ಇಬ್ಬರು ಮನೋರೋಗ ತಜ್ಞರು ‘ಯುವತಿ  ಖಿನ್ನತೆಗೆ ಜಾರಿದ್ದು  ಆತ್ಮಹತ್ಯೆಯ ಯೋಚ­ನೆಯಲ್ಲಿದ್ದಾಳೆ’ ಎಂದು ವರದಿ ನೀಡಿ­ದರು. ಪ್ರಸೂತಿ ಹಾಗೂ ಮಹಿಳಾ ವೈದ್ಯೆ, ‘ಭ್ರೂಣ ಬೆಳೆದು ದೊಡ್ಡದಾಗಿದ್ದು ಗರ್ಭಪಾತ  ಬೇಡ, ಹೆರಿಗೆಯೇ ಸೂಕ್ತ’ ಎಂಬ ಸಲಹೆ ನೀಡಿದರು.

ಸಮಿತಿಯ ವರದಿ ಆಧಾರದ ಮೇಲೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರ ತೆಗೆದಿ­ದ್ದಾರೆ. ಸದ್ಯ ತಾಯಿ ಹಾಗೂ ಮಗು ಆರೋಗ್ಯ­ವಾಗಿದ್ದು, ಮಗುವನ್ನು ಸರ್ಕಾರ ವಶಕ್ಕೆ ಪಡೆ­ದಿದೆ. ಮೂರ್‍್ನಾಲ್ಕು ತಿಂಗಳಿನಿಂದ ಈ ಪ್ರಕರಣ ಐರ್ಲೆಂಡ್ನಲ್ಲಿ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾಗಿದೆ. ಧರ್ಮ ಮುಖ್ಯವೋ ಅಥವಾ ಜೀವ ಮುಖ್ಯವೋ ಎಂಬ ಪ್ರಶ್ನೆ ಮತ್ತೆ ಎದ್ದು ನಿಂತಿದೆ.    
ಜನವರಿಯಿಂದ ಹೊಸ ಕಾನೂನು ಜಾರಿಯಾ­ದರೂ ವೈದ್ಯರು ಗರ್ಭಪಾತ ಮಾಡಲು ಹಿಂದೇಟು ಹಾಕುತ್ತಿರುವುದು ಯಾಕೆ ಎನ್ನು­ವುದು  ಮಹಿಳಾ ಆಯೋಗ ಹಾಗೂ ಗರ್ಭಪಾತ ನಿಷೇಧ ಕಾಯ್ದೆ ಸುಧಾರಣೆ ಪರವಾದ ಹೋರಾಟಗಾರರ ಪ್ರಶ್ನೆ.

ಮೂಲತಃ ಐರ್‍ಲೆಂಡ್‌ನವಳಲ್ಲದ ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದು ಸತ್ಯ ಎಂದು ಸ್ಥಳೀಯ ಮಾಧ್ಯಮಗಳು ಆಕೆಯ ಬೆಂಬಲಕ್ಕೆ ನಿಂತಿವೆ. ಇನ್ನು ಕೆಲವು ಮಾಧ್ಯಮಗಳು   ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾ­ಗಿಲ್ಲ ಎಂದು ಹೇಳಿವೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ಪಾಟೀ ಸವಾಲಿನ ವೇಳೆ ಯುವತಿ ನೀಡಿದ ಕೆಲವು ಮಾಹಿತಿಗಳನ್ನು ಆಧರಿಸಿ ನೋಡಿ­ದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರು­ವುದು ದೃಢಪಟ್ಟಿದೆ. ಯುವತಿಯ ಗರ್ಭಪಾತಕ್ಕೆ ನಿರಾಕರಿಸಿದ ವೈದ್ಯರ ನಿರ್ಧಾರವನ್ನು  ಅಮಾ­ನುಷ ಎಂದು ಐರ್ಲೆಂಡ್ ರಾಷ್ಟ್ರೀಯ ಮಹಿಳಾ ಆಯೋಗ ಜರಿದಿದೆ.

ಐರ್ಲೆಂಡ್ನಲ್ಲಿ ಇಂತಹ ಬಿಕ್ಕಟ್ಟು ಎದುರಾಗು­ತ್ತಿ­ರುವುದು ಇದೇ ಮೊದಲಲ್ಲ. 1992ರಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯೊಬ್ಬಳ ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದಾಗ ಅಲ್ಲಿಯ ಗರ್ಭಪಾತ ಕಾನೂನಿನ ಕುರಿತು  ತಕ­ರಾರು ಎದ್ದಿತ್ತು. 

ಇಲ್ಲ ವಿನಾಯ್ತಿ: ಅತ್ಯಾಚಾರ, ಮದುವೆಗೆ ಮುಂಚಿನ ಅಕ್ರಮ ಸಂಬಂಧದ  ಗರ್ಭ  ಹಾಗೂ ಭ್ರೂಣದಲ್ಲಿ ಗಂಭೀರ ಸಮಸ್ಯೆಗಳಿದ್ದ ಸಂದರ್ಭ­ದಲ್ಲಿ ಹೊಸ ಕಾನೂನಿನಲ್ಲಿ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿಲ್ಲ.

ಅತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿದ ಕಾರಣಕ್ಕೆ ಆತ್ಮಹತ್ಯಾ ಪ್ರವೃತ್ತಿ ತೋರುವ ದುರ್ಬಲ ಮನಸ್ಸಿನವರ ಗರ್ಭಪಾತಕ್ಕೂ ಅವ­ಕಾಶ ನಿರಾಕರಿಸುವ ಸರ್ಕಾರದ ನಿರ್ದಯಿ ಮಾರ್ಗ­ಸೂಚಿಯಿಂದಾಗಿ, ಗರ್ಭಪಾತಕ್ಕಾಗಿ ವಿದೇಶ­ಗಳಿಗೆ ಹೋಗುವ ಮಹಿಳೆಯರ ಸಂಖ್ಯೆ­ಯಲ್ಲಿ ಕಡಿಮೆಯಾಗಿಲ್ಲ.  ಆತ್ಮಹತ್ಯಾ ಪ್ರವೃತ್ತಿ ತೋರು­ವವರ ಚಿಕಿತ್ಸೆಗೊಂದು ಸ್ವತಂತ್ರ ಸಮಿತಿ ರಚಿಸಬೇಕು ಎಂಬ  ಗರ್ಭಪಾತ ಕಾಯ್ದೆ ಸುಧಾ­ರಣೆ ಪರ ಹೋರಾಟಗಾರರ ಪ್ರಮುಖ ಬೇಡಿಕೆ­ಯನ್ನು ಸರ್ಕಾರ ಮನ್ನಿಸಿಲ್ಲ.

ಮೂಲಗಳ ಪ್ರಕಾರ, ಐರ್ಲೆಂಡ್ನ 11 ಮಹಿಳೆ­ಯರು ಪ್ರತಿ ದಿನ ಗರ್ಭಪಾತಕ್ಕಾಗಿ ಬ್ರಿಟನ್‌ಗೆ ಹೋಗುತ್ತಿದ್ದಾರೆ. ಪ್ರತಿ ವರ್ಷ ನಾಲ್ಕು ಸಾವಿ­ರಕ್ಕೂ ಹೆಚ್ಚು ಐರಿಷ್ ಮಹಿಳೆಯರು ಬೇರೆ ದೇಶಗಳಿಗೆ ಹೋಗಿ ಗರ್ಭಪಾತ ಮಾಡಿಸಿ­ಕೊಳ್ಳುವ ಪರಿಸ್ಥಿತಿ  ಇದೆ. ಹೊಸ ಕಾನೂನು ಜಾರಿಯಾದ ನಂತರವೂ ಪರಿಸ್ಥಿತಿ ಸುಧಾರಿಸಿಲ್ಲ.ಕಳೆದ ವರ್ಷ ಐರ್ಲೆಂಡ್ನ 1,481 ಮಹಿಳೆ­ಯರು ಇಂಗ್ಲೆಂಡ್‌ನಲ್ಲಿ ಗರ್ಭಪಾತ ಮಾಡಿಸಿ­ಕೊಂಡಿರುವುದನ್ನು ಬ್ರಿಟನ್‌ ಆರೋಗ್ಯ ಇಲಾಖೆ  ದೃಢಪಡಿಸಿದೆ.

ಶತಮಾನದ ಇತಿಹಾಸ: 1861ರ ಕಾಯ್ದೆ ಪ್ರಕಾರ, ಐರ್ಲೆಂಡ್ನಲ್ಲಿ ಗರ್ಭಪಾತಕ್ಕೆ ನಿಷೇಧ­ವಿದೆ. ಭ್ರೂಣ ಸತ್ತಿದೆ ಎಂದು ಖಚಿತವಾ­ಗುವ­ವರೆಗೂ ಶಸ್ತ್ರಚಿಕಿತ್ಸೆ ನಡೆಸುವ ಹಾಗಿಲ್ಲ. ಸಂಪ್ರ­ದಾಯವಾದಿ ಕ್ಯಾಥೊಲಿಕ್ ಧಾರ್ಮಿಕ ನಂಬಿಕೆ­ಯನ್ನು ಆಧರಿಸಿದ ಈ ಕಾನೂನಿಗೆ ತಿದ್ದುಪಡಿ ತರಬೇಕೆಂಬ ಕೂಗು ಹಿಂದಿನಿಂದಲೂ ಇದೆ.

1983ರಲ್ಲಿಯೇ ಐರ್ಲೆಂಡ್ನಲ್ಲಿ ಭ್ರೂಣಹತ್ಯೆ ನಿಷೇಧ ಶಾಸನಕ್ಕೆ ತಿದ್ದುಪಡಿ ಶಾಸನ ಮಂಡಿ­ಸ­ಲಾಗಿತ್ತು.  ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಧಾರ್ಮಿಕ ನಂಬಿಕೆಗಳ ಅಂಧ ಅನುಕ­ರಣೆ­ಯಿಂದಾಗಿ ದಶಕಗಳ ಕಾಲ ಅದನ್ನು ಜಾರಿಗೊಳಿಸಲಾಗಿರಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರತಿ ವರ್ಷ ೪.೫ ಕೋಟಿ ಗರ್ಭ­ಪಾತ­ಗಳು ವಿಶ್ವದಾದ್ಯಂತ ನಡೆಯುತ್ತಿದ್ದು ೬೭,೦೦೦ ಮಹಿಳೆಯರು ಅಸುರಕ್ಷಿತ ಗರ್ಭಪಾತದ ತೊಂದರೆಗಳಿಂದ ಸಾವಿಗೀಡಾಗುತ್ತಿದ್ದಾರೆ.

ಕಾನೂನುಬದ್ಧ ಗರ್ಭಪಾತ ಪ್ರತಿ ಮಹಿಳೆಯ ಮೂಲಭೂತ ಹಕ್ಕು. ಅಸುರಕ್ಷಿತ ಗರ್ಭಪಾತ ಸದ್ದಿಲ್ಲದೆ ಮಹಿಳೆಯನ್ನು ಕೊಲ್ಲುತ್ತಿರುವ ವಿಶ್ವದ ದೊಡ್ಡ ಪಿಡುಗು ಎಂದು  ವಿಶ್ವ ಆರೋಗ್ಯ ಸಂಸ್ಥೆಯು ಬಣ್ಣಿಸಿದೆ. ೨೦೦೮ರಲ್ಲಿ ಗರ್ಭಪಾತವನ್ನು ಅಪರಾಧವಲ್ಲ ಎಂದು ಅಂಗೀಕರಿಸುವಂತೆ ಯೂರೋಪ್ ಒಕ್ಕೂಟ ದೇಶಗಳ ಸಂಸತ್ ಸದಸ್ಯರು ನಿರ್ಣ­ಯವನ್ನು ಮಂಡಿಸಿದ್ದರು.  ಆದರೆ, ಈಗಲೂ ಗರ್ಭ­ಪಾತವನ್ನು ಪ್ರಜನನ ಹಕ್ಕುಗಳಲ್ಲಿ ಸೇರಿ­ಸುವ ಬಗ್ಗೆ ಹಲವು ಮುಂದುವರಿದ ದೇಶಗಳಲ್ಲಿ ತೀವ್ರ ವಿರೋಧವಿದೆ. ಅದರಲ್ಲಿ ಐರ್ಲೆಂಡ್ ಕೂಡ ಒಂದು.

ಯೂರೋಪ್‌ ಕೋರ್ಟ್ ಕೂಡ ಗರ್ಭಪಾತ ಮಾನವ ಹಕ್ಕುಗಳ ವ್ಯಾಪ್ತಿಯೊಳಗೆ ಬರದು ಎಂದು ಸ್ಪಷ್ಟವಾಗಿ ಹೇಳಿದೆ.  ‘ಸವಿತಾ, ದ ಟ್ರಾಜಿಡಿ ದಟ್ ಶೂಕ್ ಎ ನೇಷನ್’ ಎಂಬ ಪುಸ್ತಕ ಬರೆದಿರುವ  ಐರಿಷ್ ಟೈಮ್ಸ್‌  ಪತ್ರಕರ್ತೆ ಕಿಟ್ಟಿ ಹಾಲೆಂಡ್, ‘ಸವಿತಾ ಸಾವು ಐರಿಶ್‌ರ ಪಾಲಿಗೆ ಒಂದು ದೊಡ್ಡ ಪಾಠ­ವಾಗಬೇಕು’ ಎಂದು  ಕಿವಿಮಾತು ಹೇಳಿದ್ದರು. ಜಾತಿ, ಧರ್ಮದ ಗೊಡ್ಡು ಸಂಪ್ರದಾಯಗಳು ಮಾನವೀಯತೆಯ ಮೇರೆ ಮೀರಿದಾಗ, ಧರ್ಮ ಮತ್ತು ಕಾನೂನು ಪರಸ್ಪರ ತಳಕು ಹಾಕಿ­ಕೊಂಡಾಗ ಏನೆಲ್ಲಾ ಅನಾಹುತ ಸಂಭವಿಸುತ್ತದೆ  ಎನ್ನಲು ಐರ್ಲೆಂಡ್  ಘಟನೆಗಳೇ ಸಾಕ್ಷಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT