ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ವೇಗಕ್ಕೆ ಸಹಜ ಸ್ಪಂದನೆ

ಬೆಳದಿಂಗಳು
Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ಪ್ರಕೃತಿಯಲ್ಲಿ ಎಲ್ಲದಕ್ಕೂ ಅದರದ್ದೇ ಆದ ಒಂದು ಗತಿಯಿದೆ. ಬೀಜವೊಂದು ಮೊಳಕೆಯೊಡೆದು ಗಿಡವಾಗಿ ಮರವಾಗುವ ವೇಗ ಬೇರೆ. ಬ್ಯಾಕ್ಟೀರಿಯಾ ಒಂದು ತನ್ನ ಸಂತತಿಯನ್ನು ವೃದ್ಧಿಸಿಕೊಳ್ಳುವ ವೇಗ ಬೇರೆ. ಮರವಾಗಬಲ್ಲ ಬೀಜವೊಂದು ಮೊಳಕೆಯೊಡೆದು, ಗಿಡವಾಗಿ ಮತ್ತೆ ಮರವಾಗುವುದಕ್ಕೆ ಹಲವು ವರ್ಷಗಳೇ ಬೇಕು. ಇದೇ ವೇಳೆ ಬ್ಯಾಕ್ಟೀರಿಯಾದಂಥ ಏಕಕೋಶ ಜೀವಿಯೊಂದು ತನ್ನ ಪ್ರತಿರೂಪಗಳನ್ನು ಸೃಷ್ಟಿಸುತ್ತಾ ಹೋಗುವುದಕ್ಕೆ ಕೆಲವು ಕ್ಷಣಗಳು ಸಾಕು. ಒಂದು ಬ್ಯಾಕ್ಟೀರಿಯಾದ ಆಯಸ್ಸು ಕೆಲವೇ ಕ್ಷಣಗಳಷ್ಟು. ಅದು ತನ್ನ ಶಕ್ತಿಯನ್ನು ತೋರಿಸುವುದು ಅದರ ಸಂತತಿಯನ್ನು ಸೃಷ್ಟಿಸುವ ವೇಗದಲ್ಲಿ.

ಮರದ ಆಯಸ್ಸು ದೊಡ್ಡದು. ಹಾಗಾಗಿಯೇ ಅದು ಬೆಳೆಯುವುದಕ್ಕೆ ಬೇಕಿರುವ ಅವಧಿ ದೀರ್ಘವಾದುದು. ಬ್ಯಾಕ್ಟೀರಿಯಾದ ವೇಗ ಮರವೊಂದಕ್ಕೆ ಒದಗಿದರೆ ಅದರಿಂದ ಆಗಬಹುದಾದ ಅನಾಹುತಗಳನ್ನು ಒಮ್ಮೆ ಯೋಚಿಸಿ. ನಾವೆಲ್ಲಾ ಬೇಕು ಭಾವಿಸುವ ಮರಗಳನ್ನು ನಾಶ ಮಾಡುವ ಉಪಾಯಗಳನ್ನು ಹುಡುಕಲಾರಂಭಿಸುತ್ತೇವೆ. ಹಾಗೆಯೇ ಬ್ಯಾಕ್ಟೀರಿಯಾದ ಸಂತಾನ ಶಕ್ತಿ ಕುಸಿದರೆ ಅದರ ಅಸ್ತಿತ್ವವೇ ಇಲ್ಲವಾಗುತ್ತದೆ.

ಇದು ಕೇವಲ ಜೀವಕ್ಕೆ ಮಾತ್ರ ಸಂಬಂಧಿಸಿದ ವಿಚಾರವಲ್ಲ. ಇದು ಬದುಕಿನ ಪ್ರತಿಯೊಂದು ಆಯಾಮಕ್ಕೂ ಸಂಬಂಧಿಸಿದ ವಿಚಾರ. ನಮ್ಮ ಬದುಕಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆಯಾಮಗಳೆಲ್ಲವೂ ಈ ಬಗೆಯ ಭಿನ್ನವೇಗದ ಪ್ರಕ್ರಿಯೆಗಳಿಂದ ತುಂಬಿಕೊಂಡಿರುತ್ತವೆ. ಈ ವೇಗವನ್ನು ಗ್ರಹಿಸಿ ಪ್ರತಿಕ್ರಿಯಿಸಲು ಕಲಿತರೆ ನಮ್ಮ ಅನೇಕ ಕಷ್ಟಗಳು ನಿವಾರಣೆಯಾಗುತ್ತದೆ. ಮಗುವೊಂದು ಮಾತು ಕಲಿತು ಶಾಲೆಗೆ ಹೋಗುವ ತನಕವೂ ನಮಗಿರುವ ಸಹನೆ ಆಮೇಲೆ ಇರುವುದಿಲ್ಲ. ಶಾಲೆಗೆ ಹೋದ ತಕ್ಷಣ ಮಗು ಎಲ್ಲವನ್ನೂ ಕಲಿತುಬಿಡಬೇಕೆಂದು ನಾವು ನಿರೀಕ್ಷಿಸುತ್ತೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಇತರ ಮಕ್ಕಳ ಜೊತೆ ಹೋಲಿಸುತ್ತಾ ನಮ್ಮ ಮಗುವಿನ ಕಲಿಕೆಯ ಗತಿಯನ್ನು ಅರ್ಥ ಮಾಡಿಕೊಳ್ಳಲು ಹೊರಡುತ್ತವೆ. ಈ ಪ್ರಕ್ರಿಯೆಯಲ್ಲಿ ನಮ್ಮ ಮಗು ಕಲಿಯುವ ವೇಗ ಯಾವುದೆಂಬುದನ್ನು ಅರ್ಥ ಮಾಡಿಕೊಳ್ಳುವುದನ್ನು ಮರೆತುಬಿಡುತ್ತೇವೆ.

ವೃತ್ತಿಯ ವಿಚಾರಕ್ಕೆ ಬಂದರೂ ಹೀಗೆಯೇ. ನಾವು ಇಷ್ಟಪಡುವ, ತೃಪ್ತಿ ತರುವ ಕೆಲಸವನ್ನು ನಮಗೆ ಅರಿವಿಲ್ಲದೆಯೇ ಶ್ರದ್ಧೆಯಿಂದ ಮಾಡುತ್ತಿರುತ್ತೇವೆ. ಅದರಲ್ಲಿ ಎದುರಾಗುವ ವೈಫಲ್ಯವನ್ನು ಧನಾತ್ಮಕವಾಗಿ ಗ್ರಹಿಸಿ ಮುಂದುವರಿಯುತ್ತಿರುತ್ತೇವೆ. ಒಂದು ವೇಳೆ ನಮಗೆ ಆ ಕೆಲಸದಲ್ಲಿ ಆಸಕ್ತಿ ಇಲ್ಲದಿದ್ದರೆ ಅದರ ಗತಿಯ ಬಗ್ಗೆಯೇ ನಮ್ಮಲ್ಲೊಂದು ಅಸಹನೆ ಇರುತ್ತದೆ. ಈ ಅಸಹನೆಯಿಂದಾಗಿ ತಪ್ಪುಗಳೂ ಹೆಚ್ಚಾಗುತ್ತವೆ. ಹೆಚ್ಚಿದ ತಪ್ಪುಗಳು ನಮ್ಮ ಅಸಹನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೊನೆಗೆ ಆ ಕೆಲಸಕ್ಕೆ ನಾವು ಸೂಕ್ತರಲ್ಲ ಎಂಬ ಭಾವನೆಯೊಂದನ್ನು ನಮ್ಮ ಸುತ್ತ ಇರುವವರಲ್ಲಿ ನಾವೇ ಮೂಡಿಸಿಬಿಡುತ್ತೇವೆ. ನಮ್ಮನ್ನು ಎಲ್ಲರೂ ಟೀಕಿಸುತ್ತಿದ್ದಾರೆಂದು ನೊಂದುಕೊಂಡು ಅಡ್ಡಾಡುತ್ತೇವೆ.

ಎಲ್ಲದರಲ್ಲಿಯೂ ಎಲ್ಲರಿಗೂ ಆಸಕ್ತಿ ಇರಬೇಕೆಂದು ಭಾವಿಸುವುದು ಅತಾರ್ಕಿಕ. ಆದರೆ ಒಂದು ನಿರ್ದಿಷ್ಟ ಕೆಲಸ ನಮ್ಮ ಅನಿವಾರ್ಯ ಕರ್ತವ್ಯವಾದಾಗ ಅದರಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಕಷ್ಟವೇನಲ್ಲ. ಅನೇಕ ಸಂದರ್ಭಗಳಲ್ಲಿ ಕೆಲವು ಕೆಲಸಗಳ ಕುರಿತಂತೆ ನಮ್ಮ ಭಾವನೆ ಹೇಗಿರುತ್ತದೆ ಎಂದರೆ ‘ಗಣಿತ ಕಷ್ಟ’ ಎಂಬ ಮಕ್ಕಳ ನಿರ್ಧಾರದಂತೆ ಇರುತ್ತದೆ. ಈ ಬಗೆಯ ಪೂರ್ವಗ್ರಹಗಳಿಂದ ಮುಕ್ತರಾಗುವುದೇ ನಮಗೆ ಅನೇಕ ಸಂದರ್ಭಗಳಲ್ಲಿ ಬಿಡುಗಡೆಯನ್ನು ನೀಡುತ್ತದೆ. ಆಗ ಕೆಲಸದ ಸಹಜ ಗತಿ ಏನೆಂಬುದು ಅರ್ಥವಾಗುತ್ತದೆ. ಒಂದು ಪ್ರಕ್ರಿಯೆಯ ಸಹಜ ಗತಿ ಅರ್ಥವಾಗುವುದರೊಂದಿಗೆ ಉಳಿದೆಲ್ಲವೂ ಸರಳವಾಗುತ್ತದೆ.

ಸಹಜ ಗತಿಯ ತತ್ವವನ್ನು ನಮ್ಮ ದೈನಂದಿನ ಎಲ್ಲಾ ಚಟುವಟಿಕೆಗಳಿಗೂ ಅನ್ವಯಿಸಿ ನೋಡಿಕೊಳ್ಳಬಹುದು. ಸಹಜ ಗತಿ ಎಂಬುದು ನಾವು ಉದ್ದೇಶ ಪೂರ್ವಕವಾಗಿ ನಿಧಾನಗೊಳಿಸಿದ ಪ್ರಕ್ರಿಯೆಯಲ್ಲ ಎಂಬುದನ್ನೂ ನಾವು ಮರೆಯಬಾರದು. ಹೀಗೆ ಮಾಡಿದಾಗಲೂ ಸಹಜ ಗತಿಯ ತತ್ವ ತಾಳ ತಪ್ಪುತ್ತದೆ. ಸಹಜ ಗತಿ ಅಥವಾ ಸಹಜ ವೇಗ ಎಂಬುದು ಒಂದು ಪ್ರಕ್ರಿಯೆ ಜರುಗಬೇಕಾದ ಸಾಮಾನ್ಯ ವೇಗ. ಇದನ್ನು ಕಂಡುಕೊಂಡು ಪ್ರತಿಕ್ರಿಯಿಸುವುದನ್ನು ನಾವು ಸಹನೆ ಎಂದೂ ಗುರುತಿಸಬಹುದು. ಎಲೆ ಉದುರಿದ ಮರವೊಂದು ವಸಂತ ಋತುವಿಗಾಗಿ ಕಾಯುತ್ತದೆಯೇ ಹೊರತು ಅಸಹಜವಾದ ಯಾವುದೋ ಒಂದರ ಮೂಲಕ ಚಿಗುರಲು ಪ್ರಯತ್ನಿಸುವುದಿಲ್ಲ. ಎಲ್ಲಾ ಕಾಯಿಗಳೂ ಸಹಜವಾಗಿಯೇ ಹಣ್ಣಾಗಬೇಕು. ಇಲ್ಲವಾದರೆ ಅವು ರುಚಿ ಕಳೆದುಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT