ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಿಷ್ಣು ಶಕ್ತಿಯ ವಜ್ರಾಸನ

Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ಹಕ್ಕಿ ಸ್ವಚ್ಛಂದವಾಗಿ ಹಾರಲು ಎರಡು ರೆಕ್ಕೆಗಳು ಬೇಕು. ಮನುಷ್ಯ ಜೀವಿಯೂ ಸಾಧನೆಯ ಮೆಟ್ಟಿಲುಗಳನ್ನೇರಲು ಹಾಗೂ ಜೀವನದಲ್ಲಿ ಸಾರ್ಥಕ ಸಾಫಲ್ಯಗಳ ಗಳಿಕೆಗೆ ಇಹ-ಪರ ಎಂಬ ಎರಡು ರೆಕ್ಕೆಗಳು ಅವಶ್ಯ. ಇವೆರಡರಲ್ಲಿ ಒಂದಿಲ್ಲದಿದ್ದರೆ ಇನ್ನೊಂದು ನಿಸ್ಸಹಾಯಕ, ನಿರರ್ಥಕ. ಇವೆರಡರ ಸಾಧನೆಗೆ ಶರೀರವೊಂದೇ ನಮಗಿರುವ ಸಾಧನ. ಆದುದರಿಂದ ಸ್ವಸ್ಥ, ಸಾತ್ವಿಕ ಶರೀರ ಹೊಂದುವುದೇಗೆ ಎಂಬುದು ನಮ್ಮ ಮುಂದಿರುವ ಸವಾಲು. ಅತ್ಯಂತ ಕಠಿಣ ವಸ್ತು ಎಂದಾಕ್ಷಣ ನಮ್ಮ ಕಣ್ಮುಂದೆ ಬರುವುದು ‘ವಜ್ರ’. ವಜ್ರಾಸನ ಅಭ್ಯಾಸದ ಮೂಲಕ ದೇಹವು ರೋಗ ನಿರೋಧಕ ಹಾಗೂ ಕಷ್ಟಸಹಿಷ್ಣು ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ..

ವಜ್ರಾಸನ ಅಭ್ಯಾಸ
ಸಮತಟ್ಟಾದ ನೆಲದ ಮೇಲೆ, ಅಗತ್ಯ ನೆಲಹಾಸುಗಳನ್ನು ಹಾಕಿಕೊಂಡು ಅಭ್ಯಾಸ ಅರಂಭಿಸಿ. ನೆಲದ ಮೇಲೆ ಮಂಡಿಯೂರಿ ಕುಳಿತು ಎರಡೂ ಮಂಡಿಗಳನ್ನು ಕೂಡಿಸಿ. ಅಂಗಾಲುಗಳು ಮೇಲ್ಮುಖವಾಗಿರಲಿ. ಹೆಜ್ಜೆಯ ತುದಿಗಳನ್ನು ಒಂದರ ಮೇಲೊಂದು ಇರಿಸಿ. ಪೃಷ್ಠಗಳನ್ನು ಮೀನುಖಂಡದ ತುದಿ ಹಾಗೂ ಹಿಮ್ಮಡಿಯ ಮಧ್ಯೆ ಬರುವ ಹಾಗೆ ಕುಳಿತುಕೊಳ್ಳಿ. ಸೊಂಟ, ಬೆನ್ನು, ಕುತ್ತಿಗೆ, ತಲೆ ಒಂದೇ
ನೇರಕ್ಕೆ ಬರುವಂತೆ ನೋಡಿಕೊಳ್ಳಿ. ಕೈಗಳ ತೋರುಬೆರಳು ಮತ್ತು ಹೆಬ್ಬೆರಳ ತುದಿಗಳನ್ನು ಕೂಡಿಸಿ ಉಳಿದ ಮೂರು ಬೆರಳುಗಳನ್ನು ನೇರವಾಗಿ ಬಿಟ್ಟು ‘ಚಿನ್ಮುದ್ರೆ’ ಮಾಡಿ ಕೈಗಳನ್ನು ನೀಳವಾಗಿ ಚಾಚಿ ಮಂಡಿಗಳ ಮೇಲೆ ಇರಿಸಿ. ಕಣ್ಮುಚ್ಚಿ ಸಾಧ್ಯವಾದಷ್ಟು ಕಾಲ ಕುಳಿತುಕೊಳ್ಳಿ. ಈ ವೇಳೆ ಸರಾಗವಾದ ಉಸಿರಾಟ ನಡೆಯುತ್ತಿರಲಿ. ವಜ್ರಾಸನ ಮತ್ತು ವೀರಾಸನಗಳಲ್ಲಿ ಒಂದೇ ಸಾಮ್ಯತೆಯಿದ್ದು, ಇವೆರಡರ ಅಭ್ಯಾಸದಿಂದ ದೊರಕುವ ಫಲಗಳು ಒಂದೇ ಆಗಿವೆ. ಇಲ್ಲಿ ಗೊಂದಲ ಬೇಡ. ಕ್ರಮಬದ್ಧ ಅಭ್ಯಾಸ ಮುಖ್ಯ. ವಜ್ರಾಸನದ ಸಾಧನೆಯ ಬಳಿಕ ಸುಪ್ತವಜ್ರಾಸನದ ಎರಡು ಹಂತಗಳನ್ನು ಜಾಗರೂಕತೆಯಿಂದ ಮುಂದು ವರಿಸಬೇಕು. ಇಲ್ಲಿ ಪ್ರಯೋಜನಗಳು ಹೆಚ್ಚಾಗುತ್ತವೆ.

ಸುಪ್ತ ವಜ್ರಾಸನ– 1
ಸುಪ್ತ ಎಂದರೆ ನೆಲದ ಮೇಲೊರಗುವುದು. ವ್ರಜಾಸನ ಹಾಕಿ ಅದೇ ಸ್ಥಿತಿಯಿಂದ ಹಿಂದಕ್ಕೆ ನಿಧಾನವಾಗಿ ನೆಲಕ್ಕೊರಗಬೇಕು. ಭುಜದ ಕೆಳಭಾಗ ತಲೆಯ ಹಿಂಭಾಗವನ್ನು ನೆಲಕ್ಕೊರಗಿಸಿ, ಎರಡೂ ಕೈಗಳನ್ನು ಎದೆಯ ಮೇಲೆ ತಂದು ಆಕಾಶದತ್ತ ಬೆರಳುಗಳನ್ನು ಮಾಡಿ ಕೈ ಮುಗಿದ ಸ್ಥಿತಿಯಲ್ಲಿರಿಸಿ. ಕೆಲ ಹೊತ್ತು ಹಾಗೆಯೆ ಇದ್ದು, ಸರಾಗವಾದ ಉಸಿರಾಟ ನಡೆಸಿ.

ಸುಪ್ತ ವಜ್ರಾಸನ –2
ನೇರವಾಗಿ ಕುಳಿತು ಪದ್ಮಾಸನ ಹಾಕಿ, ಎರಡೂ ಕೈಗಳನ್ನು ವಿರುದ್ಧ ದಿಕ್ಕಿನಲ್ಲಿ ಹಿಂಬದಿಯಿಂದ ತಂದು ಪಾದದ ಹೆಬ್ಬೆರಳನ್ನು ಬಿಗಿಯಾಗಿ ಹಿಡಿದು(ಬದ್ಧ ಪದ್ಮಾಸನ ಸ್ಥಿತಿ) ನಿಧಾನವಾಗಿ ಹಿಂದಕ್ಕೆ ನೆಲಕ್ಕೊರಗಬೇಕು. ನಡು ನೆತ್ತಿಯನ್ನು ನೆಲಕ್ಕಿಟ್ಟು ಕೆಲಹೊತ್ತು ವಿರಮಿಸಬೇಕು. ಸರಾಗವಾದ ಉಸಿರಾಟ ನಡೆಯುತ್ತಿರುವಂತೆ ಗಮನ ವಿರಿಸಿ. ಕೈಗಳನ್ನು ನಿಧಾನವಾಗಿ ಬಿಡಿಸಿ, ಕೈ ಸಹಾಯ ದಿಂದ ಮೇಲೆದ್ದು, ಕಾಲುಗಳನ್ನು ನೀಳವಾಗಿ ಚಾಚಿ ದೀರ್ಘ ಉಸಿರಾಟ ನಡೆಸಿ, ಪದ್ಮಾಸನದಲ್ಲಿ ಕಾಲುಗಳ ಅದಲುಬದಲು ಮಾಡಿ ಮತ್ತೆ ಅಭ್ಯಾಸ ಪುನರಾವರ್ತಿಸಿ.

ಪ್ರಯೋಜನಗಳು
* ತೊಡೆಗಳಲ್ಲಿ ದೃಢತೆ ಹೆಚ್ಚುತ್ತದೆ. ಸಂಧಿವಾತ, ಕೈಕಾಲು ಹಿಡಿತ, ಕಾಲು ನಾಳಗಳಲ್ಲಿನ ರಕ್ತ ಹೆಪ್ಪುಗಟ್ಟುವಿಕೆ ತಡೆ. ಹಿಮ್ಮಡಿ ನೋವು, ಹಿಮ್ಮಡಿ ಮೂಳೆ ಮೇರೆ ಮೀರಿ ಬೆಳೆದಿದ್ದರೆ ನೋವು ನಿವಾರಣೆ. ಅಂಗಾಲು ಸೆಳೆತ, ಮಂಡಿ ಇಲ್ಲವೆ ಮೊಳಕಾಲುಗಳ ದೋಷ ಹಾಗೂ ನೋವು, ತೊಡೆ, ಮೀನುಖಂಡದಲ್ಲಿನ ಸ್ನಾಯು ಸೆಳೆತ ನಿವಾರಣೆ. ಪಾದಗಳ ಕಾಲ್ಗಿಣ್ಣು ಹಿಗ್ಗಲು ಸಹಕಾರಿ.

* ವಾತರೋಗ ನಿವಾರಣೆ. ಬೆನ್ನುಮೂಳೆಯಲ್ಲಿನ ಸ್ಥಾನ ಪಲ್ಲಟ, ಬೆನ್ನುಹುರಿ ತಳಭಾಗದಲ್ಲಿರುವ ತ್ರಿಕೋನಾ ಕಾರದ ಮೂಳೆ, ಪೃಷ್ಠವಂಶಾಧಾರದಲ್ಲಿ ನೋವು ಮತ್ತು ಅದರ ಸ್ಥಾನ ಪಲ್ಲಟ ನಿವಾರಣೆ.

* ಸೊಂಟಭಾಗ, ಕಿಬ್ಬೊಟ್ಟೆ, ಎದೆಭಾಗ ಪೂರ ಹಿಗ್ಗಲು ಸಹಕಾರಿ. ಕತ್ತು ಎಳೆಯುವುದರಿಂದ ಗೋಮಾಳ ಭಾಗಕ್ಕೆ ಉತ್ತಮ ವ್ಯಾಯಾಮ.

* ಶ್ವಾಸಕೋಶ ಸಂಬಂಧಿ ಗೂರಲು, ಉಬ್ಬಸ, ದಮ್ಮು ರೋಗ, ಶ್ವಾಸನಾಳ ಒಳಚರ್ಮ ಊತ, ಶ್ವಾಸಕೋಶಗಳ ಮತ್ತು ಕಂಠಗ್ರಂಥಿ ಉರಿಯೂತ ದೂರ.

* ಹೊಟ್ಟೆಶೂಲೆ, ಹೊಟ್ಟೆನುಲಿ, ದೊಡ್ಡ ಕರುಳಿನ ಊತ ತಡೆ. ಹೊಟ್ಟೆಯಲ್ಲಿ ಗಡ್ಡೆ, ಊತ, ಬಾವು ದುರ್ಮಾಂಸ ಬೆಳವಣಿಗೆ (ಆರಂಭ ಹಂತದಲ್ಲಿದ್ದರೆ ಅಭ್ಯಾಸದಿಂದ ನಿವಾರಣೆ, ಇಲ್ಲದಿದ್ದರೆ ವೈದ್ಯರ ಸಲಹೆ ಅವಶ್ಯ)

* ಬಹುಮೂತ್ರ-ಮಧುಮೂತ್ರ ವ್ಯಾಧಿ (ಸಕ್ಕರೆ ರೋಗ) ನಿಯಂತ್ರಣ.

* ವಾತಮೈ ವಾಯುತುಂಬಿದ ಸ್ಥಿತಿ.

* ಪಿತ್ತಕೋಶ ಮತ್ತು ಪಿತ್ತಜನಕಾಂಗ ಹಾಗೂ ಯಕೃತ್ತು ಇವುಗಳಿಗೆ ವ್ಯಾಯಾಮ.

* ಜೀರ್ಣಕ್ರಿಯೆಗೆ ಸಹಕಾರಿ, ಜಠರ ಚರ್ಮ ಊತ ತಡೆ.

* ಕಠಿಣ ಅರೆ ತಲೆನೋವು. ವೇಗವಾದ ಎದೆ ಬಡಿತ ನಿವಾರಣೆ.

* ಗಳಗ್ರಂಥಿ ಅಥವಾ ಮಂಡಿಕೆಗಳ ಉರಿಯೂತ.

* ಜಡತ್ವ, ಆಲಸ್ಯ ದೂರಾಗಿ ಮನಸ್ಸಿಗೆ ಶಾಂತಿ ಲಭ್ಯ.

* ಊಟ ಸೇವಿಸಿದ ಬಳಿಕವೂ ಅಭ್ಯಾಸ ಮಾಡಬಹುದು. ಇದರಿಂದ ಹೊಟ್ಟೆಯ ಭಾರ ಕಡಿಮೆಯಾದಂತಾಗುತ್ತದೆ. (ಸುಪ್ತ ವಜ್ರಾಸನ ಬೇಡ)

* ಹೆಚ್ಚುಹೊತ್ತು ನಿಂತು ಕೆಲಸ ಮಾಡುವ ಪೊಲೀಸ್, ಭದ್ರತಾ ಸಿಬ್ಬಂದಿ, ಕ್ರೀಡಾಪಟುಗಳು ಹಾಗೂ ಬಹುದೂರದ ಪ್ರಯಾಣ (ನಡಿಗೆ) ಮಾಡಿದಾಗ ಕಾಲುಗಳಿಗೆ ಆದ ಆಯಾಸವನ್ನು ದೂರ ಮಾಡಿ ವಿಶ್ರಾಂತಿ ನೀಡುತ್ತದೆ.  

ಮಹಿಳೆಯರ ಸಮಸ್ಯೆ
* ಪ್ರಸವ ವೇದನೆ/ಆಮನಸ್ಯ ದೂರ ಮಾಡುತ್ತದೆ.

* ಋತುಸ್ರಾವ ತೊಂದರೆ ನಿವಾರಣೆ.

* ಸ್ತ್ರೀಯರಲ್ಲಿನ ಅಂಡಕೋಶಗಳ ಸಮಸ್ಯೆಗೆ ಪರಿಹಾರ ದೊರಕಿಸುತ್ತದೆ.

* ಸ್ತ್ರೀಯರಲ್ಲಿನ ಪ್ರಸವ, ಋತುಸ್ರಾವ, ಅಂಡಕೋಶಗಳ ತೊಂದರೆ ನಿವಾರಣೆಗೆ ಸಹಕಾರಿಯಾಗುವ ವಜ್ರಾಸನ; ಹೆಚ್ಚಿನ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ ನಿವಾರಿಸಿ, ದೇಹ ಹಾಗೂ ಮೂಲಾಧಾರ ಸ್ಥಾನ(ಗುಪ್ತಾಂಗಗಳ ಭಾಗ)ದಲ್ಲಿ ಸರಾಗವಾದ ರಕ್ತ ಪರಿಚಲನೆಗೆ ಸಹಕಾರಿಯಾಗುತ್ತದೆ. ಪುರುಷರ ಜನನೇಂದ್ರಿಯ ಸಂಬಂಧಿ (ಮೂತ್ರಕೋಶ ಬಳಸಿಕೊಂಡಿರುವ) ಹಾಗೂ ಸ್ತ್ರೀ-ಪುರುಷರ ಲೈಂಗಿಕ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸಿ, ದೇಹ ಉದ್ದೀಪನಗೊಳ್ಳುವ ಮೂಲಕ ಲೈಂಗಿಕ ಆಸಕ್ತಿಗೆ ಪೂರಕ ‘ಟೆಸ್ಟೊಸ್ಟರಾನ್’ ಹಾರ್ಮೋನ್ ಬಿಡುಗಡೆ ಮಾಡಲು ಸಹಕಾರಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT