ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷ್ಯ ಸಂಗ್ರಹಿಸಲು ‘ಮೊಬೈಲ್ ಆ್ಯಪ್’

ಅಪರಾಧ ಕೃತ್ಯ ತನಿಖೆ ಚುರುಕುಗೊಳಿಸಲು ಪೊಲೀಸರಿಗೆ ನೆರವು
Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯ ಕಲೆ ಹಾಕುವುದು ಸೇರಿದಂತೆ  ಅನುಸರಿಸಬೇಕಾದ ಕೆಲ ಪ್ರಾಥಮಿಕ ವಿಧಾನಗಳ ಬಗ್ಗೆ ಪೊಲೀಸರು ಇನ್ನು ಮುಂದೆ ಮೊಬೈಲ್‌ನಲ್ಲೇ ಮಾಹಿತಿ ಪಡೆಯಬಹುದು. 

ಟಾರ್ಗೆಟ್ ಕಾರ್ಪೊರೇಷನ್ ಹಾಗೂ ಇಂಡಿಯಾನ ವಿಶ್ವವಿದ್ಯಾಲಯವು ಜಂಟಿಯಾಗಿ ಅಂಥದೊಂದು ಮೊಬೈಲ್ ಆ್ಯಪ್‌ ಅಭಿವೃದ್ಧಿಪಡಿಸಿವೆ. ಅಪರಾಧ ಕೃತ್ಯ ನಡೆದಾಗ ಮೊದಲು ಘಟನಾ ಸ್ಥಳಕ್ಕೆ ತೆರಳುವವರು ಕಾನ್‌ಸ್ಟೆಬಲ್‌ಗಳು. ಹೀಗಾಗಿ ಅವರಿಗಾಗಿಯೇ ಅಭಿವೃದ್ಧಿಪಡಿಸಿರುವ ‘ಫಸ್ಟ್‌ ರೆಸ್ಪಾಂಡರ್ ಮೊಬೈಲ್ ಟ್ರೈನಿಂಗ್’ ಎಂಬ ಆ್ಯಪ್‌ಗೆ ಗೃಹಸಚಿವ ಕೆ.ಜೆ.ಜಾರ್ಜ್‌ ಅವರು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಚಾಲನೆ ನೀಡಿದರು.

‘ಕೊಲೆ, ಅತ್ಯಾಚಾರ, ಸರಗಳವು, ಕಳ್ಳತನ ಸೇರಿದಂತೆ ಯಾವುದೇ ಅಪರಾಧ ಕೃತ್ಯ ನಡೆದಾಗ ಘಟನಾ ಸ್ಥಳದಲ್ಲಿ ದೊರೆಯುವ ಸಾಕ್ಷ್ಯಗಳು ಹಾಗೂ ಸಂತ್ರಸ್ತರು– ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ತನಿಖೆಗೆ ಪೂರಕವಾಗುತ್ತವೆ. ಹೀಗಾಗಿ ಇವುಗಳ ಸಂಗ್ರಹ ಕಾರ್ಯ ಶಿಸ್ತುಬದ್ಧವಾಗಿರಬೇಕು. ಇದರಲ್ಲಿ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ನಿಜವಾದ ಆರೋಪಿ ಆರೋಪ ಮುಕ್ತನಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಯಾವ ಮಾದರಿಯ ಅಪರಾಧಕ್ಕೆ ಯಾವ ರೀತಿಯಲ್ಲಿ ಸಾಕ್ಷ್ಯಗಳನ್ನು ಕಲೆ ಹಾಕಬೇಕು ಎಂಬ ಮಾಹಿತಿಯುಳ್ಳ ಆ್ಯಪ್‌ ರಚಿಸಲಾಗಿದೆ’ ಎಂದು ಟಾರ್ಗೆಟ್ ಇಂಡಿಯಾದ ಮುಖ್ಯಸ್ಥ ಅರವಿಂದ್ ವರ್ಮಾ ಹೇಳಿದರು.

‘ಸಿಬ್ಬಂದಿ ಮೊದಲು ಘಟನೆಯ ವಿವರ, ಲಭ್ಯವಾದ ಸಾಕ್ಷ್ಯಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿಕೊಂಡು ಹಿರಿಯ ಅಧಿಕಾರಿಗಳಿಗೆ ತಲುಪಿಸುತ್ತಿದ್ದರು. ಈಗ ಮೊಬೈಲ್ ಆ್ಯಪ್‌ನಲ್ಲೇ ವಿವರಗಳನ್ನು ದಾಖಲು ಮಾಡಬಹುದು. ಅಧಿಕಾರಿಗಳು ಸಹ ಆ್ಯಪ್‌ ಬಳಸುವುದರಿಂದ ಶೀಘ್ರವೇ ಘಟನೆಯ ಸಂಪೂರ್ಣ ಮಾಹಿತಿ ಅವರನ್ನು ತಲುಪುತ್ತದೆ. ತನಿಖೆ ಕೂಡ ಚುರುಕು ಪಡೆದುಕೊಳ್ಳುತ್ತದೆ’ ಎಂದು ವಿವರಿಸಿದರು.

ಡೌನ್‌ಲೋಡ್ ಹೇಗೆ?: ರಾಜ್ಯ ಪೊಲೀಸ್ ಇಲಾಖೆಗೆ ಮಾತ್ರ ಸೀಮಿತವಾದ ಆ್ಯಪ್ ಇದಾಗಿದ್ದು, ಕಾನ್‌ಸ್ಟೆಬಲ್‌ಗಳು ತಮ್ಮ ಆ್ಯಂಡ್ರಾಯ್ಡ್‌ ಮೊಬೈಲ್‌ನಲ್ಲಿ ‘ಪ್ಲೇಸ್ಟೋರ್‌’ಗೆ ಹೋಗಿ ಡೌನ್‌ಲೋಡ್ ಮಾಡಬೇಕು. ನಂತರ ತಮ್ಮ ಹೆಸರು, ಹುದ್ದೆ, ಯಾವ ಬ್ಯಾಚ್, ಬ್ಯಾಡ್ಜ್‌ ಸಂಖ್ಯೆ ಹಾಗೂ ಇಲಾಖೆಯಿಂದ ನೀಡುವ ರಹಸ್ಯ ಸಂಖ್ಯೆಯನ್ನು ದಾಖಲಿಸಿ ‘ಲಾಗ್‌ ಇನ್‌’ ಆದಾಗ ಆ್ಯಪ್‌ನ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಅಪರಾಧ ಸ್ವರೂಪಗಳ ಪಟ್ಟಿ ಇರುತ್ತದೆ. ಅತ್ಯಾಚಾರ ನಡೆದಿದ್ದರೆ ಸಿಬ್ಬಂದಿ ಆ ಪಟ್ಟಿಯಲ್ಲಿ ‘ಅತ್ಯಾಚಾರ’ ಪ್ರಕರಣವನ್ನು ಆಯ್ಕೆ ಮಾಡಬೇಕು. ಆಗ ಆ ಪ್ರಕರಣಕ್ಕೆ ಸಾಕ್ಷ್ಯಗಳನ್ನು ಹೇಗೆ ಕಲೆ ಹಾಕಬೇಕು, ಯಾರ ವಿಚಾರಣೆ ನಡೆಸಬೇಕು, ಯಾವ ಕ್ರಮಗಳನ್ನು ಅನುಸರಿಸಬೇಕು, ಗಮನಿಸಬೇಕಾದ ಸೂಕ್ಷ್ಮತೆಗಳೇನು ಸೇರಿದಂತೆ ಪೂರಕ ಮಾರ್ಗಸೂಚಿಗಳು ಆ್ಯಪ್‌ನಲ್ಲಿ ಗೋಚರವಾಗುತ್ತವೆ. ಸಿಬ್ಬಂದಿ ಆ ಹಂತಗಳನ್ನು ಪಾಲಿಸಿದರೆ ಸಾಕು.

ಆ್ಯಪ್‌ನಲ್ಲಿ ವಿವರಗಳನ್ನು ತುಂಬಿದ ಬಳಿಕ ಸಿಬ್ಬಂದಿ ‘ಸಬ್‌ಮಿಟ್’ ಗುಂಡಿ ಅದುಮಬೇಕು. ಆಗ ಆ ಎಲ್ಲ ವಿವರಗಳು ‘ಪೊಲೀಸ್ ಐಟಿ’ ವೆಬ್‌ಸೈಟ್‌ಗೆ ಹೋಗುತ್ತವೆ. ಇದರಿಂದ ಪ್ರಕರಣದ ಬಗ್ಗೆ ರಾಜ್ಯದ ಎಲ್ಲ ಪೊಲೀಸರಿಗೂ ತಕ್ಷಣಕ್ಕೆ ಮಾಹಿತಿ ರವಾನೆಯಾಗುತ್ತದೆ. ಆ್ಯಪ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ದಾಖಲೆಗಳನ್ನು ನಮೂದಿಸಬಹುದು. ತಮ್ಮ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಿದ್ದಾರೆ, ಯಾವ ವಿಚಾರಗಳಲ್ಲಿ ಅವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬು ದನ್ನು ತಿಳಿಯಲು ಹಿರಿಯ ಅಧಿಕಾರಿಗಳಿಗೆ ನೆರವಾಗುತ್ತದೆ.

ಸ್ಮಾರ್ಟ್‌ಫೋನ್ ಪೂರೈಕೆಗೆ ಚಿಂತನೆ
‘ತಂತ್ರಜ್ಞಾನ ಬಳಕೆಯಲ್ಲಿ ಇತರೆ ರಾಜ್ಯಗಳಿಗಿಂತ ನಮ್ಮ ಪೊಲೀಸರು ಮುಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಂತ್ರಜ್ಞಾನದ ಬಳಕೆ ಬಗ್ಗೆ ಈಗಾಗಲೇ 14 ಸಾವಿರ ಪೊಲೀಸರಿಗೆ ತರಬೇತಿ ಕೊಡಲಾಗಿದೆ. ಈ ಆ್ಯಪ್‌ ಮೂಲಕ ತನಿಖೆ ವಿಷಯದಲ್ಲಿ ಸಿಬ್ಬಂದಿ ಮತ್ತಷ್ಟು ಚುರುಕಾಗಲಿದ್ದಾರೆ’ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟರು.

‘ಬಹುತೇಕ ಕಾನ್‌ಸ್ಟೆಬಲ್‌ಗಳು ಈಗಾಗಲೇ ಸ್ಮಾರ್ಟ್‌ ಫೋನ್‌ ಬಳಸುತ್ತಿದ್ದಾರೆ. ಅವರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕಾರ್ಯ ನಿರ್ವಹಿಸಲಿದ್ದಾರೆ. ಎಲ್ಲ ಸಿಬ್ಬಂದಿಗೂ ಸ್ಮಾರ್ಟ್‌ ಫೋನ್ ಪೂರೈಸುವ ಬಗ್ಗೆ ಮುಖ್ಯಮಂತ್ರಿ ಅವರ ಜತೆ ಚರ್ಚಿಸಲಾಗುವುದು’ ಎಂದರು.

ಮೂರು ತಿಂಗಳ ಕಾಲ ಅಧ್ಯಯನ ನಡೆಸಿ ಈ ಆ್ಯಪ್ ಅಭಿವೃದ್ಧಿಪಡಿಸ ಲಾಗಿದೆ. ಇದು ಸಿಬ್ಬಂದಿಯ ಒತ್ತಡ ಕಡಿಮೆ ಮಾಡುವುದರ ಜತೆಗೆ, ಪಾರ ದರ್ಶಕ ತನಿಖೆಗೆ ಪೂರಕವಾಗುತ್ತದೆ
ನವನೀತ್ ಕಪೂರ್
ವ್ಯವಸ್ಥಾಪಕ ನಿರ್ದೇಶಕ, ಟಾರ್ಗೆಟ್ ಇಂಡಿಯಾ

ಮುಖ್ಯಾಂಶಗಳು
*ಸಂಗ್ರಹಿಸಿದ ಮಾಹಿತಿ ಪೊಲೀಸ್‌ ಐ.ಟಿ. ಜಾಲತಾಣಕ್ಕೆ ರವಾನೆ
* ಟಾರ್ಗೆಟ್ ಕಾರ್ಪೊರೇಷನ್,   ಇಂಡಿಯಾನ ವಿ.ವಿಯಿಂದ ಆ್ಯಪ್‌ ಅಭಿವೃದ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT