ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ನೆರಳಿನಲಿ...

Last Updated 2 ಸೆಪ್ಟೆಂಬರ್ 2015, 19:46 IST
ಅಕ್ಷರ ಗಾತ್ರ

ತೇಜಸ್‌ ಮೆಹ್ತಾ ಮತ್ತು ತಂಡ
ನಾವು ಶಾಂಪು ಅಥವಾ ಸಾಬೂನು ಬಳಸಿ ಶುಭ್ರವಾಗಿ ಸ್ನಾನ ಮಾಡಿದ ಬಳಿಕ ಪೌಡರ್‌ ಅಥವಾ ಸೆಂಟ್‌ ಹಾಕಿಕೊಳ್ಳುವ ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ. ಇದು ಚರ್ಮದ ಆರೈಕೆ ಮತ್ತು ಸೌಂದರ್ಯಕ್ಕೆ ಇರುವ ಮಹತ್ವವನ್ನು ತೋರಿಸುತ್ತದೆ. ದೇಶದ ಚರ್ಮದ ಆರೈಕೆ ಉತ್ಪನ್ನಗಳು ಮತ್ತು ಪ್ರಸಾಧನಗಳ ಮಾರುಕಟ್ಟೆ ಬೃಹತ್ತಾಗಿ ಬೆಳೆಯುತ್ತಿದೆ. 2018ರ ವೇಳೆಗೆ ಈ ಮಾರುಕಟ್ಟೆಯಲ್ಲಿ ಸುಮಾರು 70 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ.  ಈ ಅಂಕಿ ಅಂಶದಿಂದ ಸ್ಫೂರ್ತಿ ಪಡೆದ ಅರ್ಥಶಾಸ್ತ್ರ ಪದವೀಧರರೊಬ್ಬರು ಈ ಪ್ರಸಾಧನ ಕ್ಷೇತ್ರದಲ್ಲಿ ಉನ್ನತವಾದದ್ದನ್ನು ಸಾಧಿಸಲು ಹೊರಟಿದ್ದಾರೆ.

ಇದು ಅಹಮದಾಬಾದ್‌ ಮೂಲದ ತೇಜಸ್‌ ಮೆಹ್ತಾ ಅವರ ಸಾಧನೆಯ ಕಥೆ. ತೆೇಜಸ್‌ ತನ್ನ ಗೆಳೆಯರೊಂದಿಗೆ ಸೇರಿ ಪ್ರಸಾಧನ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 2012ರಲ್ಲಿ ಸ್ಕಿನ್‌ಸೀಕ್ರೆಟ್ಸ್‌ ಎಂಬ ವೆಬ್‌ ಪೋರ್ಟಲ್‌ ಆರಂಭಿಸಿದರು. ಇದು ಪ್ರಸಾಧನಗಳನ್ನು ಬಳಸುವ ಬಗ್ಗೆ ಮಾರ್ಗದರ್ಶನ ನೀಡುವ ವೆಬ್‌ಸೈಟ್‌ ಆಗಿದೆ. ಗ್ರಾಹಕರು ಈ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಪ್ರಸಾಧನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಇದೇ ವೆಬ್‌ ಜಾಲದಲ್ಲಿ  ಹೊಸ ಉತ್ಪನ್ನಗಳ ಬಗ್ಗೆಯೂ ಪರಿಚಯಿಸಲಾಗುವುದು. ಇಲ್ಲಿ ತೇಜಸ್‌ ತಂಡ ಪ್ರಸಾಧನಗಳ ಕುರಿತಾದ ಮಾಹಿತಿಯನ್ನು ಸ್ಕಿನ್‌ಸೀಕ್ರೆಟ್ಸ್‌ ವೆಬ್‌ಸೈಟ್‌ನಲ್ಲಿ ವಿವರವಾಗಿ ಬರೆದು ಬಿತ್ತರಿಸಲಾಗುತ್ತದೆ.

ಗ್ರಾಹಕರು ಈ ಮಾಹಿತಿಯನ್ನು ಪಡೆದು ಪ್ರಸಾಧನಗಳನ್ನು ಕೊಂಡುಕೊಳ್ಳಲು ಸುಲಭವಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ 26 ಸಾವಿರ ಜನರು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ ಎನ್ನುತ್ತಾರೆ ತೇಜಸ್‌. ನಮ್ಮ ತಂಡದಲ್ಲಿ ನುರಿತ ಚರ್ಮ ವೈದ್ಯರಿದ್ದು ಕಾಸ್ಮೆಟಿಕ್‌ಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಿದ ಬಳಿಕವೇ ಗ್ರಾಹಕರಿಗೆ ಉಪಯೋಗಿಸಲು ತಿಳಿಸಲಾಗುತ್ತದೆ. ಅಡ್ಡ ಪರಿಣಾಮ ಉಂಟುಮಾಡುವ ಅಥವಾ ರಾಸಾಯನಿಕಗಳು ಹೆಚ್ಚಿರುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುವುದಿಲ್ಲ. ನಮ್ಮ ಕಂಪೆನಿ ವಾರ್ಷಿಕ 15 ರಿಂದ 20 ಲಕ್ಷ ರೂಪಾಯಿ ಆದಾಯಗಳಿಸುತ್ತಿದೆ ಎನ್ನುತ್ತಾರೆ ತೇಜಸ್‌.
www.skinsecrets.in

ವಿಶ್ವನಾಥ್‌ ಚಕ್ರವರ್ತಿ ಮತ್ತು ಜೋಶಿ

ಪಶ್ಚಿಮ ಬಂಗಾಳದ ವಿಶ್ವನಾಥ್‌ ಚಕ್ರವರ್ತಿ ಮತ್ತು ಗೋವಾದ ಜೋಶಿ ಕೆಲಸ ಹುಡುಕಿಕೊಂಡು ಪುಣೆ ತಲುಪಿದವರು. ಅಪರಿಚಿತರಾಗಿದ್ದ ಇವರು ಭೇಟಿಯಾಗಿದ್ದು ರೈಲು ನಿಲ್ದಾಣದಲ್ಲಿ. ಅವರಿಗೆ ಪುಣೆ ಎಂಬ ಮಹಾನಗರದಲ್ಲಿ ತಮ್ಮವರು ಅಂತ ಯಾರು ಇರಲಿಲ್ಲ! ರೈಲು ನಿಲ್ದಾಣದಲ್ಲೇ ತಂಗಿದ್ದರು. ಒಬ್ಬರ ಮುಖ ಒಬ್ಬರು ನೋಡುತ್ತಿದ್ದರೇ ವಿನಾ ಮಾತನಾಡುತ್ತಿರಲಿಲ್ಲ! ರೈಲು ನಿಲ್ದಾಣದ ಹೊಟೇಲ್‌ನಲ್ಲಿ ಊಟ ಮಾಡಿ, ಯಾವುದಾದರೂ ಒಂದು ಖಾಲಿ ಪ್ಲಾಟ್‌ಫಾರಂನಲ್ಲಿ ಮಲಗುತ್ತಿದ್ದರು. ಎರಡು ದಿನಗಳನ್ನು ಹೀಗೇ ಕಳೆದರು. ಕೈಯಲ್ಲಿದ್ದ ಹಣ ಕರಗುತ್ತಾ ಬಂತು! ಮುಂದೆ ಅನಿವಾರ್ಯವಾಗಿ ಅದೇ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದರು. ಆ ರೈಲು ನಿಲ್ದಾಣದಲ್ಲಿ ಪರಿಚಿತರಾಗಿ ಗೆಳೆಯರಾದ ಚಕ್ರವರ್ತಿ ಮತ್ತು ಜೋಶಿ ಆರು ವರ್ಷಗಳಲ್ಲಿ ಸಿದ್ಧ ಆಹಾರ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಸ್ಥಾಪಿಸುವ ಮಟ್ಟಕ್ಕೆ ಬೆಳೆದರು.

  ಈ ರೈಲು ನಿಲ್ದಾಣದ ಗೆಳೆಯರು ಸ್ಥಾಪಿಸಿದ ‘ಈಟ್‌ಸಮ್‌’ ಕಂಪೆನಿ ಇಂದು ಪುಣೆಯಲ್ಲಿ ಭಾರೀ ಜನಪ್ರಿಯತೆ ಪಡೆದಿದೆ. ಪ್ರತಿನಿತ್ಯ 7000ಕ್ಕೂ ಹೆಚ್ಚು ಆರ್ಡರ್‌ಗಳು ಬರುತ್ತಿವೆ ಎನ್ನುತ್ತಾರೆ ಚಕ್ರವರ್ತಿ. ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿದ ಅನುಭವದಿಂದಲೇ ಇದನ್ನು ಆರಂಭಿಸಲು ಸಾಧ್ಯವಾಯಿತು.

ನಾವು ಉಳಿತಾಯ ಮಾಡಿದ ಹಣ ಮತ್ತು ಸ್ವಲ್ಪ ಸಾಲ ಮಾಡಿ ಈಟ್‌ಸಮ್‌ ಆರಂಭ ಮಾಡಿದ್ದೇವೆ. ಪುಣೆಯ ಬಹುತೇಕ ಹೊಟೇಲ್‌, ರೆಸ್ಟೋರೆಂಟ್, ಕ್ಯಾಂಟೀನ್‌ ಹಾಗೂ ಕಾಲೇಜು ಹಾಸ್ಟೆಲ್‌ಗಳಿಗೆ ಸಿದ್ಧ ಆಹಾರವನ್ನು ಪೂರೈಸುತ್ತಿದ್ದೇವೆ. ತಿಂಗಳಿಗೆ ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಲಾಭ ಬರುತ್ತಿದೆ ಎನ್ನುತ್ತಾರೆ ಜೋಶಿ. ನಮ್ಮಂತೆ ಕೆಲಸ ಹುಡುಕಿಕೊಂಡು ಲಕ್ಷಾಂತರ ಜನರು ಮಹಾನಗರಗಳಿಗೆ ವಲಸೆ ಬರುತ್ತಾರೆ ಇವರಲ್ಲಿ ಕೆಲವರು ಮಾತ್ರ ಯಶಸ್ವಿ ಬದುಕು ಕಟ್ಟಿಕೊಳ್ಳುತ್ತಾರೆ. ಕಠಿಣ ಪರಿಶ್ರಮ ಮತ್ತು ಇಚ್ಛಾ ಶಕ್ತಿ ಇದ್ದವರು ಮಾತ್ರ ಮೇಲೆ ಬರುತ್ತಾರೆ ಎಂದು ಚಕ್ರವರ್ತಿ ಹೇಳುತ್ತಾರೆ.
facebook/eatsome.

ಸಿದ್ಧಾರ್ಥ ಶರ್ಮಾ ಮತ್ತು ತಂಡ

ಇಂದು ಸಾರಿಗೆ ಉದ್ಯಮ ಹೆಚ್ಚು ಆದಾಯ ತಂದುಕೊಡುವ ಉದ್ಯಮವಾಗಿದೆ. ಶೂನ್ಯ ಅಥವಾ ಅತಿ ಕಡಿಮೆ ಬಂಡವಾಳದ ಮೂಲಕ ಈ ಉದ್ಯಮದಲ್ಲಿ ಯಶಸ್ವಿಯಾದ ಹಲವರು ನಮಗೆ ಸಿಗುತ್ತಾರೆ. ತಂತ್ರಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಇಂದು 25 ಬಸ್‌ಗಳ ಮಾಲೀಕರಾಗಿರುವ ‘ಆರ್‌ಬಸ್‌’ ಸಂಸ್ಥೆಯ ಸಿದ್ಧಾರ್ಥ ಶರ್ಮಾ ಅವರ ಸಾಧನೆಯ ಕಥೆ ಇದು. ಮೂಲತಃ ಮುಂಬೈನವರಾದ ಸಿದ್ಧಾರ್ಥ ಬೆಂಗಳೂರಿನ ಐಐಎಂನಲ್ಲಿ ಪದವಿ ಪಡೆದವರು.

ಇವರು ಉದ್ಯೋಗಕ್ಕೆ ಸೇರುವ ಬದಲು ಉದ್ಯಮಪತಿಯಾಗುವ ಕನಸು ಕಂಡವರು. ಕನಸು ಕಾಣುವುದೇನೋ ಸುಲಭ ಆದರೆ ಅದನ್ನು ನನಸು ಮಾಡಲು ಹಣ, ಪರಿಶ್ರಮ, ತಂತ್ರಜ್ಞಾನ ಬೇಕಲ್ಲ? ಸಿದ್ಧಾರ್ಥ ಬಳಿ ಹಣವನ್ನು ಬಿಟ್ಟು ಉಳಿದೆಲ್ಲ ಅರ್ಹತೆಗಳು ಇದ್ದವು. ಹಣವಿಲ್ಲದೆ ಭಿನ್ನ ಆಲೋಚನೆಯಿಂದ ಹುಟ್ಟಿಕೊಂಡಿದ್ದೆ ಆರ್‌ಬಸ್‌ ಸಂಸ್ಥೆ.

ಮುಂಬೈನಲ್ಲಿ ಕ್ಯಾಬ್‌ ಅಥವಾ ಟ್ಯಾಕ್ಸಿ ಸೇವೆ ದುಬಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗೇ ಸ್ಥಳೀಯ ರೈಲು ಅಥವಾ ಸಿಟಿ ಬಸ್‌ಗಳಲ್ಲಿ ಪ್ರಯಾಣಿಸುವುದು ನರಕಯಾತನೆ. ಕೆಳ ಮಧ್ಯಮ ವರ್ಗದ ಜನರಿಗೆ ಹೊರೆಯಾಗದಂತೆ ಮತ್ತು ಅವರು ನರಕ ಯಾತನೆ ಅನುಭವಿಸದಂತೆ ಆರಾಮದಾಯಕ ಪ್ರಯಾಣ ಮಾಡುವ ಯೋಜನೆಯನ್ನು ಸಿದ್ಧಾರ್ಥ ಶರ್ಮಾ ರೂಪಿಸಿದರು. ಇದಕ್ಕೆ ಗೆಳೆಯರು ಕೂಡ ಸಾಥ್‌ ನೀಡಿದರು.

ಮೊದಲು ಒಂದು ಬಸ್‌ ಅನ್ನು ಗುತ್ತಿಗೆ ಪಡೆದು,  ಒಂದು ಮಾರ್ಗವನ್ನು ಆಯ್ದುಕೊಂಡರು. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ಪರಿಚಯಿಸಿಕೊಂಡು ಮೊಬೈಲ್‌ ಆ್ಯಪ್‌ ಅನ್ನು ರೂಪಿಸಿ ಪ್ರಯಾಣಿಕರು ಸೀಟು ಕಾಯ್ದಿರಿಸುವ ಮತ್ತು ಪಿಕಪ್‌ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿದರು. ಈ ಯೋಜನೆ ಪ್ರಯಾಣಿಕರಿಗೆ ಇಷ್ಟವಾಯಿತು. ಇಂದು 12 ಮಾರ್ಗಗಳಲ್ಲಿ 25 ಬಸ್‌ಗಳು ಸಂಚರಿಸುತ್ತಿವೆ. ಕ್ಯಾಬ್‌ ಸೇವೆ ಮಾದರಿಯಲ್ಲೇ ಆರ್‌ಬಸ್‌ ಕಾರ್ಯನಿರ್ವಹಿಸುತ್ತಿದೆ. ಸಿದ್ಧಾರ್ಥ ಬಳಿ ಹಣ ಇರಲಿಲ್ಲ, ಆದರೆ ತಂತ್ರಜ್ಞಾನ, ಪರಿಶ್ರಮ ಮತ್ತು ಬುದ್ಧಿವಂತಿಕೆ ಇತ್ತು. ಹಾಗಾಗಿ ಈ  ಕ್ಷೇತ್ರದಲ್ಲಿ ಅವರು ಯಶಸ್ವಿಯಾಗಲು ಸಾಧ್ಯವಾಯಿತು. http://www.rbus.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT