ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿಸಿದರೂ ಕಠಿಣ ಶಿಕ್ಷೆ ನೀಡದ ಕಾನೂನು!

145 ವರ್ಷಗಳಿಂದ ತಿದ್ದುಪಡಿಯಾಗದ ಐಪಿಸಿ ‘304ಎ’ ಕಲಂ * ವೈದ್ಯರ ನಿರ್ಲಕ್ಷ್ಯ ಪ್ರಕರಣಗಳಲ್ಲೂ ಶಿಕ್ಷೆಯಾಗುತ್ತಿಲ್ಲ
Last Updated 11 ಡಿಸೆಂಬರ್ 2015, 19:43 IST
ಅಕ್ಷರ ಗಾತ್ರ

ಬೆಂಗಳೂರು: ಕಳಪೆ ಗುಣಮಟ್ಟದ  ಕಾಮಗಾರಿಯಿಂದಾಗಿ ಕಟ್ಟುತ್ತಿರುವ ಕಟ್ಟಡ ಕುಸಿದು ಪ್ರಾಣ ಕಳೆದುಕೊಳ್ಳುತ್ತಿರುವ ಅಸಂಖ್ಯ ಕಾರ್ಮಿಕರ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಪಾರ್ಟಿ, ಫಂಕ್ಷನ್ ಎಂದುಕೊಂಡು ಕಂಠಪೂರ್ತಿ ಕುಡಿದು ಯದ್ವಾತದ್ವಾ ವಾಹನ ಓಡಿಸಿ ದಾರಿಹೋಕರ ಪ್ರಾಣ ತೆಗೆಯುತ್ತಿರುವವರ ಪಟ್ಟಿಯಲ್ಲಿ ಪ್ರತಿಷ್ಠಿತ ವ್ಯಕ್ತಿಗಳ ಹೆಸರೂ ದಾಖಲಾಗುತ್ತಿವೆ.

ಅದೇ ರೀತಿ, ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಗಳು ಸಾವನ್ನುಪ್ಪುತ್ತಿರುವ ಕೆಲವು ಘಟನೆಗಳೂ ನಡೆಯುತ್ತಿವೆ. ಆದರೆ ಇಂಥ ಅಪರಾಧಿಗಳಿಗೆಲ್ಲಾ ನಮ್ಮ ಈಗಿರುವ ಕಾನೂನು ಶ್ರೀರಕ್ಷೆಯಾಗಿ ಕುಳಿತಂತಿದೆ!

ಇಂಥ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ‘304ಎ’ ಕಲಮಿನ ಅಡಿ ದಾಖಲು ಮಾಡಲಾಗುತ್ತದೆ. ‘ಒಬ್ಬರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದಾಗಿ ಇನ್ನೊಬ್ಬ ವ್ಯಕ್ತಿ ಸಾವನ್ನಪ್ಪಿದರೆ ಅದು ಉದ್ದೇಶಪೂರ್ವಕವಾಗಿ ನಡೆದ ಕೃತ್ಯವಲ್ಲ’ ಎಂದು ಈ ಕಲಮಿನಲ್ಲಿ ತಿಳಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ನಡೆಯದೇ ಇರುವ ಕಾರಣ, ಅದಕ್ಕೆ ವಿಧಿಸಿರುವ ಶಿಕ್ಷೆ ಗರಿಷ್ಠ ಎರಡು ವರ್ಷ  ಇಲ್ಲವೇ ಅದರ ಬದಲು ದಂಡ ಅಥವಾ ಶಿಕ್ಷೆ ಹಾಗೂ ದಂಡ.

1860ರಲ್ಲಿ ಜಾರಿಗೊಂಡಿರುವ ಭಾರತೀಯ ದಂಡ ಸಂಹಿತೆಯಲ್ಲಿದ್ದ 304ನೇ ಕಲಮಿಗೆ 1870ರಲ್ಲಿ ‘ಎ’ ಸೇರಿಸಲಾಗಿದೆ.  ಅಲ್ಲಿಂದ ಇಲ್ಲಿಯವರೆಗೂ ಇದು ತಿದ್ದುಪಡಿ ಕಂಡಿಲ್ಲ.

‘ಒಂದು ಕೊಲೆ ಮಾಡಿದರೂ ಅಷ್ಟೇ ಶಿಕ್ಷೆ, ನೂರು ಮಾಡಿದರೂ ಅಷ್ಟೇ ಶಿಕ್ಷೆ’ ಎನ್ನುವ ಮಾತು ಈ ಕಲಮಿಗೂ ಅನ್ವಯ ಆಗುತ್ತಿದೆ. ‘ನಿರ್ಲಕ್ಷ್ಯ’ದಿಂದ ಸತ್ತವರು ಒಬ್ಬರೇ ಇರಲಿ, ಸಾವಿರಾರು ಮಂದಿಯೇ ಇರಲಿ, ಅವರಿಗೆ ಗರಿಷ್ಠ ಶಿಕ್ಷೆ ಕೇವಲ ಎರಡು ವರ್ಷ. 1984 ಡಿಸೆಂಬರ್‌ನಲ್ಲಿ ಸುಮಾರು 10ಸಾವಿರ ಮಂದಿಯನ್ನು ಬಲಿ ಪಡೆದ ಭೋಪಾಲ್  ಅನಿಲ ದುರಂತಕ್ಕಿಂತ ಬೇರೆ ಸಾಕ್ಷಿ ಬೇಕೆ? ಇಷ್ಟೆಲ್ಲಾ ಜನರು ಸತ್ತರೂ ಅಪರಾಧಿಗಳನ್ನು ಇದೇ ಕಲಮಿನ ಅಡಿ ಶಿಕ್ಷೆಗೆ ಗುರಿಪಡಿಸಲಾಯಿತು. ಅವರಿಗೆ ಆದದ್ದು ಕೇವಲ 2ವರ್ಷ ಶಿಕ್ಷೆ. ಈ ಶಿಕ್ಷೆಯನ್ನು ಹೆಚ್ಚು ಮಾಡುವಂತೆ ಕೋರಿದ್ದ ಸಿಬಿಐ ಅರ್ಜಿಯನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿತು.

ಈ ಕಲಮು ಈಗ ಬಹು ಚರ್ಚೆಗೆ ಒಳಗಾಗುತ್ತಿರುವುದಕ್ಕೆ ಕಾರಣ, ‘ಹಿಟ್ ಅಂಡ್ ರನ್’ ಪ್ರಕರಣಗಳಲ್ಲಿ ಪ್ರತಿಷ್ಠಿತರ ಹೆಸರು ತಳಕು  ಹಾಕಿಕೊಂಡಿರುವುದು. ನೌಕಾ ಪಡೆಯ ಮುಖ್ಯಸ್ಥರಾಗಿದ್ದ ಅಡ್ಮಿರಲ್ ಎಸ್.ಎಂ. ನಂದಾ ಅವರ ಮೊಮ್ಮಗ ಸಂಜೀವ ನಂದಾ ಅವರ 1999ರ ‘ಹಿಟ್ ಅಂಡ್ ರನ್’ ಪ್ರಕರಣದ ಉದಾಹರಣೆ ತೆಗೆದುಕೊಳ್ಳೋಣ. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಅವರು ಚೆಕ್‌ಪೋಸ್ಟ್‌  ಬಳಿ ಪೊಲೀಸರು ಹೇಳಿದರೂ ಕಾರು ನಿಲ್ಲಿಸದೆಯೇ ಅವರ ಮೇಲೆಯೇ ಕಾರು ಹರಿಸಿ ಇಬ್ಬರು ಕಾನ್ಸ್‌ಟೆಬಲ್ ಸೇರಿದಂತೆ ನಾಲ್ವರ ಸಾವಿಗೆ ಕಾರಣರಾದರು. ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕುವ ಅವರ ಪ್ರಯತ್ನಗಳು ಸಫಲವಾಗಿದ್ದ ಬೆನ್ನಲ್ಲೇ ಎನ್‌ಡಿಟಿವಿ ನಡೆಸಿದ್ದ ರಹಸ್ಯ ಕಾರ್ಯಾಚರಣೆ ಮೂಲಕ ಅವರ ತಪ್ಪು  ಜಗಜ್ಜಾಹೀರವಾಯಿತು.

ಇಂಥ ಹೀನಾಯ ಕೃತ್ಯ ನಡೆಸಿದ್ದ ಅವರ ಪ್ರಕರಣ ಸುದೀರ್ಘವಾಗಿ ನಡೆದು 2008ರಲ್ಲಿ ದೆಹಲಿಯ ಸೆಷನ್ಸ್ ಕೋರ್ಟ್ ಐದು ವರ್ಷ ಶಿಕ್ಷೆ ನೀಡಿತು. ಆದರೆ 2009ರಲ್ಲಿ ಬಾಂಬೆ ಹೈಕೋರ್ಟ್ ಈ ಶಿಕ್ಷೆಯನ್ನು ಎರಡು ವರ್ಷಕ್ಕೆ ಇಳಿಸಿತು. 2012ರಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್‌ ತೀರ್ಪನ್ನು ಎತ್ತಿಹಿಡಿಯಿತು. ಏಕೆಂದರೆ ಸಂಜೀವ್ ಅವರದ್ದು ಕಾನೂನಿನ ಪ್ರಕಾರ ‘ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆ’. ಇದಕ್ಕೆ ಐಪಿಸಿಯ ‘304ಎ’ ಕಲಮಿನ ಅಡಿ ಇರುವುದು ಎರಡು ವರ್ಷ ಶಿಕ್ಷೆ ಮಾತ್ರ.

ಅದಾದ ನಂತರ ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರಕರಣ, ನಂತರ ಬೆಂಗಳೂರಿನ ಕಾರ್ತೀಕ್ ಸೋಮಯ್ಯ ಪ್ರಕರಣ ಭಾರಿ ಸುದ್ದಿ ಮಾಡಿದವು. 2002ರಲ್ಲಿ ಪಾನಮತ್ತನಾಗಿ ವಾಹನ ಓಡಿಸಿ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರನ್ನು ಸಾಯಿಸಿ ನಾಲ್ವರು ಗಂಭೀರ ಸ್ವರೂಪದಲ್ಲಿ ಗಾಯಗೊಳ್ಳಲು ಕಾರಣವಾಗಿದ್ದ ಸಲ್ಮಾನ್ ಖಾನ್ ಅವರ ವಿರುದ್ಧ ಮೊದಲು ಐಪಿಸಿಯ ‘304ಎ’ ಕಲಮಿನ ಅಡಿಯೇ ಕೇಸು ದಾಖಲಾಗಿತ್ತು. ನಂತರ ಪ್ರಕರಣದ ಗಂಭೀರತೆ ಅರಿತ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಚಾರ್ಜ್‌ಷೀಟ್‌ ಬದಲಿಸಿ ಐಪಿಸಿಯ 304 (ಪಾರ್ಟ್ II) ಅಡಿ ಪ್ರಕರಣ ದಾಖಲಿಸುವಂತೆ ಸೂಚಿಸಿತು. ಈ ಕಲಮಿನ ಅಡಿ ಇರುವ ಗರಿಷ್ಠ ಶಿಕ್ಷೆ 10 ವರ್ಷ. ಈ ಆದೇಶ ಸುಪ್ರೀಂಕೋರ್ಟ್‌ವರೆಗೂ ಹೋಯಿತು.

2003ರಲ್ಲಿ ಸುಪ್ರೀಂಕೋರ್ಟ್‌, ಮ್ಯಾಜಿಸ್ಟ್ರೇಟ್‌ ಆದೇಶ ಎತ್ತಿಹಿಡಿದರೂ ಈ ಚಾರ್ಜ್‌ಷೀಟ್‌ ಪ್ರಶ್ನಿಸುವ ಹಕ್ಕನ್ನು ಸಲ್ಮಾನ್‌ ಪರ ವಕೀಲರಿಗೆ ನೀಡಿತು. ನಂತರ ಸುದೀರ್ಘ ವಿಚಾರಣೆ ನಡೆದು ಐದ ವರ್ಷ ಶಿಕ್ಷೆಯಾದರೂ ಅವರಿಗೆ ಜಾಮೀನು ಸಿಕ್ಕಿತ್ತು. ಈಗ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಅವರನ್ನು ಖುಲಾಸೆಗೊಳಿಸಿದೆ. 2009ರಲ್ಲಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ನಾಲ್ವರನ್ನು ಸಾಯಿಸಿರುವ ಕಾರ್ತಿಕ್ ಅವರಿಗೆ ಆಗಿರುವುದು ಮೂರು ಸಾವಿರ ರೂಪಾಯಿ ದಂಡ. ಅವರಿಗೂ ಜಾಮೀನು ದೊರೆತಿದೆ. ಸಂಜೀವ್ ಅವರ ಪ್ರಕರಣವನ್ನೇ ಉದಾಹರಣೆಯಾಗಿಟ್ಟುಕೊಂಡು ಈ ಎರಡೂ ಪ್ರಕರಣದಲ್ಲಿ ಅಪರಾಧಿಗಳಿಗೆ ‘304ಎ’ ಅಡಿಯೇ ಕನಿಷ್ಠ ಶಿಕ್ಷೆಯಾಗುವ ಹಾಗೆ ಮಾಡುವಲ್ಲಿ ವಕೀಲರು ನಿರತರಾಗಿದ್ದಾರೆ.

ಇದು ಭಾರತೀಯ ದಂಡ ಸಂಹಿತೆಯ ಮಾತಾಯಿತು. 1988ರ ಮೋಟಾರು ವಾಹನ ಕಾಯ್ದೆಯ ಬಗ್ಗೆ ಹೇಳುವುದಾದರೆ ಈ ಕಾಯ್ದೆಯ 185ನೇ ಕಲಮಿನ ಪ್ರಕಾರ ಪ್ರತಿ 100 ಮಿ.ಲೀ. ರಕ್ತದಲ್ಲಿ ಅಲ್ಕೋಹಾಲ್ ಮಟ್ಟವು 30 ಮಿಲಿ ಗ್ರಾಂಗಿಂತ ಹೆಚ್ಚಿಗೆ ಇದ್ದಲ್ಲಿ ಚಾಲಕರಿಗೆ ಆರು ತಿಂಗಳ ಜೈಲು ವಾಸ ಅಥವಾ ಗರಿಷ್ಠ 2 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ. ಇದು ಕೂಡ ಜಾಮೀನು ನೀಡಬಹುದಾದ ಅಪರಾಧ. ಆದರೆ ಮದ್ಯ ಸೇವಿಸಿ ಜೈಲು ಶಿಕ್ಷೆಯಾದ ಉದಾಹರಣೆಗಳು ಇಲ್ಲವೆಂದೇ ಹೇಳಬಹುದು. ಇಂಥವರಿಗೆ ಎರಡು ಸಾವಿರ ರೂಪಾಯಿ ದಂಡ ಕೂಡ ದೊಡ್ಡದು ಎನಿಸುವುದೇ ಇಲ್ಲ. ಆದರೆ ಅದೇ ವ್ಯಕ್ತಿ ಯಾರದ್ದೋ ಅಮಾಯಕರ ಮೇಲೆ ವಾಹನ ಚಲಾಯಿಸಿ ಸಾಯಿಸಿದರೂ, ಅದು ಸಾಬೀತಾದರೂ ಅವರಿಗೆ ಆಗುವುದು ಕನಿಷ್ಠ ಶಿಕ್ಷೆ.

ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಹಾಕಿ ಕಟ್ಟಡ ನಿರ್ಮಿಸುವುದೂ ಸೇರಿದಂತೆ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಸಾವುನೋವಿಗೆ ಕಾರಣವಾಗುವ ಎಲ್ಲಾ ಪ್ರಕರಣಗಳಲ್ಲೂ ಇದೇ ಕಲಮು ಅಪರಾಧಿಗಳನ್ನು ಕಾಪಾಡುತ್ತಲೇ ಇದೆ. ತಮ್ಮವರನ್ನು ಕಳೆದುಕೊಂಡಿರುವ ನೋವಿನ ಜೊತೆಗೆ ಕೋರ್ಟ್‌ಗೆ ಅಲೆದಾಡುವ ಕುಟುಂಬ ವರ್ಗದವರ ಪಾಡು ಹೇಳತೀರದು. ಇನ್ನೊಂದೆಡೆ ದಶಕ ಕಳೆದರೂ ಮುಗಿಯದ ಪ್ರಕರಣಗಳು. ಅಲ್ಲಿಯವರೆಗೆ ಒಂದು ಕೋರ್ಟ್‌ನಿಂದ ಇನ್ನೊಂದು ಕೋರ್ಟ್‌ಗೆ ಅಲೆಯುವ ಶಕ್ತಿ ಎಷ್ಟು ಜನಕ್ಕಿದೆ? ಇದ್ದರೂ ಕಾನೂನೇ ಕನಿಷ್ಠ ಶಿಕ್ಷೆ ವಿಧಿಸುವಾಗ ಏನೂ ಮಾಡದ ಅಸಹಾಯಕರಾಗಿ ಕುಳಿತುಕೊಳ್ಳಬೇಕಿರುವ ಪರಿಸ್ಥಿತಿ ಕುಟುಂಬ ವರ್ಗದ್ದು.

ವೈದ್ಯರ ‘ನಿರ್ಲಕ್ಷ್ಯ’ದ ಪ್ರಕರಣಗಳ ಕುರಿತು ಹೇಳುವುದಾದರೆ, ಯಾವುದೋ ಔಷಧ ಅಥವಾ ಇಂಜೆಕ್ಷನ್‌ ನೀಡುವ ಬದಲು ಇನ್ನಾವುದೋ ನೀಡುವುದು, ನುರಿತರಲ್ಲದ ನರ್ಸ್‌ಗಳಿಂದ ಚಿಕಿತ್ಸೆ ಕೊಡಿಸುವುದು, ಆಪರೇಷನ್‌ ವೇಳೆ ನಿರ್ಲಕ್ಷ್ಯದಿಂದ ರೋಗಿಯನ್ನು ಸಾಯಿಸುವುದು... ಇತ್ಯಾದಿ ಪ್ರಕರಣಗಳು ಆಗ್ಗಾಗ್ಗೆ ವರದಿಯಾಗುತ್ತಿವೆ. ಹೆಚ್ಚಿನ ಪ್ರಕರಣಗಳಲ್ಲಿ ವೈದ್ಯರ ನಿರ್ಲಕ್ಷ್ಯ ಇರದಿದ್ದರೂ, ಕೆಲವು ಪ್ರಕರಣಗಳಲ್ಲಿ ನಿರ್ಲಕ್ಷ್ಯ ಇರುವುದು ಸತ್ಯ. ‘ಖಾಸಗಿ ವ್ಯಕ್ತಿಗಳು ದೂರು ನೀಡಿದರು ಎಂಬ ಮಾತ್ರಕ್ಕೆ ಅದರಲ್ಲಿ ವೈದ್ಯರ ನಿರ್ಲಕ್ಷ್ಯ ಇದೆ ಎನ್ನಲಾಗದು.

ಅದು ನಿರ್ಲಕ್ಷ್ಯ ಎಂಬುದನ್ನು ಇನ್ನೊಬ್ಬ ತಜ್ಞ ವೈದ್ಯರು ಪರೀಕ್ಷಿಸಿ ಹೇಳಬೇಕು’ ಎಂದು ಸುಪ್ರೀಂಕೋರ್ಟ್ ಎನ್.ಜಾಕೋಬ್ ಮ್ಯಾಥ್ಯೂ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ ಸೂಚಿಸಿದೆ. ರೋಗಿಗಳು ಸತ್ತ ತಕ್ಷಣ ವೈದ್ಯರದ್ದೇ ಬೇಜವಾಬ್ದಾರಿ ಎನ್ನುವ ಆರೋಪ ತಪ್ಪಿಸುವ ಸಲುವಾಗಿ ಇಂಥ ಆದೇಶ ಹೊರಡಿಸಿರುವುದರಿಂದ ನಿಪರಾಧಿಗಳಾಗಿರುವ ವೈದ್ಯರಿಗೆ ಶಿಕ್ಷೆ ಆಗುತ್ತಿಲ್ಲ. ಆದರೆ ಅವರ ನಿರ್ಲಕ್ಷ್ಯ ಇರುವ ಪ್ರಕರಣಗಳಲ್ಲೂ ‘ವೈದ್ಯರಿಗೆ ರೋಗಿಯನ್ನು ಸಾಯಿಸುವ ಉದ್ದೇಶವಿರಲಿಲ್ಲ’ ಎಂಬ ಕಾರಣಕ್ಕೆ ಈ ಕಲಮಿನ ಅಡಿ ಕೇಸು ದಾಖಲಾಗುತ್ತದೆ.

ಸೂಚನೆ ಇದ್ದರೂ... ಹಾಗೆಂದು ಸುಪ್ರೀಂಕೋರ್ಟ್‌ ಇಂಥ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವೆಂದೇನಲ್ಲ. ಸುಮಾರು ಮೂರು ವರ್ಷಗಳ ಹಿಂದೆ ಪ್ರಕರಣವೊಂದರ ವಿಚಾರಣೆ ವೇಳೆ ಅಪರಾಧಿಕ ನಿರ್ಲಕ್ಷ್ಯ (ಕ್ರಿಮಿನಲ್‌ ನೆಗ್ಲಿಜೆನ್ಸ್‌) ಕಂಡುಬಂದಲ್ಲಿ ಅಂಥವರ ವಿರುದ್ಧ ಐಪಿಸಿಯ ‘304ಎ’ ಬದಲಾಗಿ ‘304’ನೇ ಕಲಮಿನ ಅಡಿ ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದೆ. ‘ಪಾನಮತ್ತರಾಗಿ ವಾಹನ ಚಲಿಸುವುದು, ವೈದ್ಯರು ಚಿಕಿತ್ಸೆ ವೇಳೆಗೆ ನಿರ್ಲಕ್ಷ್ಯ ವಹಿಸುವುದು, ಕಳಪೆ ಕಾಮಗಾರಿ... ಇವೆಲ್ಲವೂ ‘304ಎ’ ಕಲಮಿನಲ್ಲಿ ಉಲ್ಲೇಖಿತವಾಗಿರುವಂತೆ ‘ಉದ್ದೇಶಪೂರ್ವಕವಾಗಿ ನಡೆದ ಕೃತ್ಯವಲ್ಲ’ವಾದರೂ ಇಂಥ ಕೃತ್ಯ ಮಾಡಿದರೆ ಅದು ಸಾವಿಗೆ ಕಾರಣ ಆಗಬಹುದು ಎಂದು ತಪ್ಪಿಸ್ಥರಿಗೆ ತಿಳಿದಿರುತ್ತದೆ. ಆದ್ದರಿಂದ ಅಂಥ ಪ್ರಕರಣಗಳನ್ನೆಲ್ಲಾ ಐಪಿಸಿಯ ‘304’ರ ಅಡಿ ತರಬೇಕು’ ಎಂದು ಕೋರ್ಟ್‌ ಸೂಚಿಸಿದೆ. ಈ ಅಪರಾಧಕ್ಕೆ ಗರಿಷ್ಠ 10 ವರ್ಷ ಶಿಕ್ಷೆ ಇದೆ. ಆದರೆ ಇದಿನ್ನೂ ಕಾನೂನು ಆಗಿಲ್ಲ. ಆದ್ದರಿಂದ ‘ನಿರ್ಲಕ್ಷ್ಯದ ಹಾಗೂ ಅಜಾಗರೂಕತೆ’ ಎಂದು ಬಂದಾಗಲೆಲ್ಲಾ ‘304ಎ’ ಅಡಿಯೇ ಪ್ರಕರಣ ದಾಖಲಾಗುತ್ತಿವೆ.

ಸುಪ್ರೀಂಕೋರ್ಟ್‌ ನೀಡಿರುವ ಸೂಚನೆ ತಿಳಿದಿರುವವರು ಐಪಿಸಿಯ ‘304ಎ’ ಕಲಮಿನ ಅಡಿ ದಾಖಲಾದ ಪ್ರಕರಣಗಳನ್ನು ‘304ಎ’ ಎಂದು ತಿದ್ದುಪಡಿ ಮಾಡಿಸಿಕೊಂಡು ಕೋರ್ಟ್‌ಗೆ ಪುನಃ ಅರ್ಜಿ ಸಲ್ಲಿಸುತ್ತಿದ್ದಾರೆ. ನ್ಯಾಯಾಲಯಗಳು ಕೂಡ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅದಕ್ಕೆ ಅನುಮತಿ ನೀಡುತ್ತಿದೆ, ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ಆಗುತ್ತಿದೆ. ಆದರೆ ದುರದೃಷ್ಟ ಎಂದರೆ ಇದಕ್ಕಾಗಿ ಸತ್ತ ವ್ಯಕ್ತಿಗಳ ಕುಟುಂಬದವರು ಪುನಃ ಕಾನೂನಿನ ಹೋರಾಟ ನಡೆಸಬೇಕು!

ಈ ಕುರಿತು ಹೈಕೋರ್ಟ್‌ನ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯರು ಹೇಳುವುದು ಹೀಗೆ: “ಸುಪ್ರೀಂಕೋರ್ಟ್‌  ನೀಡಿರುವ ಸೂಚನೆಯನ್ನು ‘ಜಡ್ಜ್‌ ಮೇಡ್‌ ಲಾ’ ಎನ್ನುತ್ತೇವೆ. ಈ ಸೂಚನೆಯನ್ನು ಎಲ್ಲಾ ರಾಜ್ಯ ಸರ್ಕಾರಗಳಿಗೂ ರವಾನಿಸಿ ಸಂಬಂಧಿತ ಪೊಲೀಸ್‌ ಠಾಣೆಗಳಿಗೆ ಸೂಚನೆ ನೀಡುವಂತೆ  ಸುಪ್ರೀಂಕೋರ್ಟ್‌ ಹೇಳಿದೆ. ಆದರೆ ದುರದೃಷ್ಟ ಎಂದರೆ ಈ ಕುರಿತಾಗಿ ಹೆಚ್ಚಿನ ಪೊಲೀಸರಿಗೆ ಮಾಹಿತಿಯೇ ಇಲ್ಲ. ಇದರಿಂದ ಇಂಥ ಪ್ರಕರಣ ಬಂದಾಗಲೆಲ್ಲಾ ‘304ಎ’ ಅಡಿಯೇ ಕೇಸು ದಾಖಲಾಗುತ್ತಿದೆ. ಕೆಲವು ಪೊಲೀಸರಿಗೆ ಮಾಹಿತಿ ಇದ್ದರೂ ಅವರು, ಅಪರಾಧಿಗಳ ಜೊತೆ ಶಾಮೀಲಾಗಿಯೋ ಅಥವಾ ಮೇಲ್ನೋಟಕ್ಕಷ್ಟೇ ಪ್ರಕರಣ ನೋಡಿ ಅದರ ಆಳಕ್ಕೆ ಹೋಗದೆ ಘಟನೆ ನಿರ್ಲಕ್ಷ್ಯದಿಂದ ಸಂಭವಿಸಿರುವುದು ಎಂದುಕೊಂಡು ‘304ಎ’ ಅಡಿ ಕೇಸು ದಾಖಲಿಸಿಕೊಳ್ಳುತ್ತಾರೆ.

‘ಹಾಗೆಂದು ಎಲ್ಲಾ ಪ್ರಕರಣಗಳಲ್ಲಿ ಪೊಲೀಸರದ್ದೇ ತಪ್ಪು ಎನ್ನಲಾಗದು. ಒಂದು ಅಪಘಾತ ಸಂಭವಿಸಿದಾಗ ಅದು ಹೇಗೆ ಘಟಿಸಿದೆ ಎಂದು ಕನಿಷ್ಠ ಒಂದು ಗಂಟೆ ಇದ್ದು ತನಿಖೆ ನಡೆಸುವ ಪರಿಸ್ಥಿತಿಯಲ್ಲಿ ನಮ್ಮ ಈಗಿನ ಪೊಲೀಸರು ಇಲ್ಲ. ಏಕೆಂದರೆ ಆ ತನಿಖೆ ವೇಳೆಗೆ ಮೇಲಧಿಕಾರಿಗಳಿಂದ ಅಥವಾ ಕಮಿಷನರ್‌ ಕಚೇರಿಯಿಂದ ಹತ್ತಾರು ಬಾರಿ ಕರೆ ಬಂದಿರುತ್ತದೆ. ಅವರಿಗೆ ಬೇರೆ ಬೇರೆ ಕೆಲಸ ವಹಿಸಲಾಗುತ್ತದೆ ಅಥವಾ ಬೇರೆ ಪ್ರಕರಣಗಳ ಚರ್ಚೆಗೆ ಅವರನ್ನು ಕರೆಸಿಕೊಳ್ಳಲಾಗುತ್ತದೆ. ಜೊತೆಗೆ, ಪೊಲಿಸ್‌ ಸಿಬ್ಬಂದಿ ಕೊರತೆ ಬೇರೆ. ಇವೆಲ್ಲಾ ಕಾರಣಗಳಿಂದ ಘಟನೆಯ ಆಳಕ್ಕೆ ಹೋಗದೆ ಏನೋ ಒಂದು ಕೇಸು ದಾಖಲಾಗುತ್ತಿದೆ. ಆದ್ದರಿಂದ ಸುಪ್ರೀಂಕೋರ್ಟ್‌ ನೀಡಿರುವ ಸೂಚನೆ ಕಾನೂನು ಆಗಬೇಕಿದೆ. ಜೊತೆಗೆ, ಪೊಲೀಸರಿಗೆ ತರಬೇತಿ ಶಿಬಿರ ನಡೆಸುವ ಮೂಲಕ ಯಾವ ಪ್ರಕರಣಗಳಲ್ಲಿ ಯಾವ ಕಲಮಿನ ಅಡಿ ಕೇಸು ದಾಖಲು ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಬೇಕಿದೆ”.

ವೈದ್ಯರ ನಿರ್ಲಕ್ಷ್ಯದ ಕುರಿತಂತೆ ತಿದ್ದುಪಡಿ ತರುವುದಕ್ಕೆ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಡಾ.ವೀರಣ್ಣ ಬಸೇಗೌಡ  ಆಕ್ಷೇಪ ವ್ಯಕ್ತಪಡಿಸುತ್ತಾರೆ. ‘ರೋಗಿಯನ್ನು ರಕ್ಷಿಸಲು ವೈದ್ಯರು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸತ್ತುಬಿಟ್ಟರೆ ಈಗ ವೈದ್ಯರ ಮೇಲೆಯೇ ಆರೋಪ ಹೊರಿಸುವುದು ಮಾಮೂಲಿಯಾಗಿಬಿಟ್ಟಿದೆ. ಮೃತ ರೋಗಿಯ ಸಂಬಂಧಿಗಳಿಂದ ಪ್ರತಿಭಟನೆ, ವೈದ್ಯರ ಮೇಲೆ ಹಲ್ಲೆ ಇತ್ಯಾದಿ ಘಟನೆಗಳು ನಡೆಯುತ್ತಲೇ ಇವೆ.

ಇಂಥ ಸನ್ನಿವೇಶ ಬಂದಾಗ ಮೊದಲು ಪೊಲೀಸರು ವೈದ್ಯರಿಗೆ ಭದ್ರತೆ ನೀಡುವಂಥ ಕಾನೂನು ರೂಪಿತಗೊಳ್ಳಬೇಕು. ವೈದ್ಯರಿಗೆ ಭದ್ರತೆ ಒದಗಿಸುವ ಸಂಬಂಧ 2009ನಲ್ಲಿ ನಿಯಮ ಜಾರಿಗೆ ಬಂದಿದ್ದರೂ, ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಪಾಲನೆಯಾಗಿಲ್ಲ.  ಹಾಗೆಯೇ, ಅಪರೂಪದ ಪ್ರಕರಣಗಳಲ್ಲಿ ವೈದ್ಯರ  ನಿರ್ಲಕ್ಷ್ಯದಿಂದ ಸಾವು ಸಂಭವಿಸುವ ಸತ್ಯವನ್ನೂ ಅಲ್ಲಗಳೆಯುವಂತಿಲ್ಲ. ಅಂಥ ಸಂದರ್ಭಗಳಲ್ಲಿ ಈಗಿರುವ ಎರಡು ವರ್ಷಗಳ ಶಿಕ್ಷೆಯೇ ವೈದ್ಯರಿಗೆ ಸಾಕು. ಅದರಿಂದಲೇ ಅವರು ಸಾಕಷ್ಟು ಪಾಠ ಕಲಿಯುತ್ತಾರೆ’ ಎನ್ನುತ್ತಾರೆ ಡಾ.ವೀರಣ್ಣ.

ಯಾವುದೇ ರೋಗಿ ಸಾವನ್ನಪ್ಪಿದ ತಕ್ಷಣ, ಅದು ವೈದ್ಯರದ್ದೇ ನಿರ್ಲಕ್ಷ್ಯ ಎಂಬಂತೆ ಬಿಂಬಿಸಿ ಮೃತರ ಸಂಬಂಧಿಗಳು ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದೂ ವೈದ್ಯರನ್ನು ಹಾಗೂ ಆಸ್ಪತ್ರೆಗಳನ್ನು ಸಂಕಷ್ಟಕ್ಕೆ ಈಡು ಮಾಡುತ್ತಿವೆ. ಸಾಲದು ಎಂಬುದಕ್ಕೆ ಟಿ.ವಿಯಲ್ಲಿ ಇದು ದಿನಪೂರ್ತಿ ಚರ್ಚೆಯ ವಿಷಯವಾಗಿ ವೈದ್ಯರ ಹಾಗೂ ಆಸ್ಪತ್ರೆಗಳ ಮಾನವನ್ನು ಹರಾಜು ಹಾಕಲಾಗುತ್ತದೆ. ರೋಗಿ ಸಾವನ್ನಪ್ಪಲು ವೈದ್ಯರ ನಿರ್ಲಕ್ಷ್ಯ ಇಲ್ಲ ಎಂದು ಆನಂತರದಲ್ಲಿ ಸಾಬೀತಾದರೂ, ಆ ಬಗ್ಗೆ ವರದಿಯಾಗುವುದೇ ಇಲ್ಲ. ಈ ನಿಟ್ಟಿನಲ್ಲಿಯೂ ಕಠಿಣ ಕಾನೂನು ಜಾರಿಯಾಗುವ ಅವಶ್ಯಕತೆ ಇದೆ ಎನ್ನುವುದು ವೈದ್ಯರ ಅಭಿಮತ. ಈ ಎಲ್ಲಾ ಅಂಶಗಳನ್ನು ಮನಗಂಡು  ‘ನಿರ್ಲಕ್ಷ್ಯ’ದ ಕುರಿತಂತೆ ಕಾನೂನಿಗೆ ಸೂಕ್ತ ತಿದ್ದುಪಡಿ ತರುವ ಅಗತ್ಯ ಇಂದಿನದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT