ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯ್‌ ಕೇಂದ್ರ ಸುಧಾರಣೆಗೆ 12 ಸೂತ್ರ

ಆಲಪ್ಪುಳ ಘಟನೆಯ ನಂತರ ಕ್ರಮಕ್ಕೆ ಕೇಂದ್ರ ಕ್ರೀಡಾ ಇಲಾಖೆ ಆದೇಶ
Last Updated 2 ಜೂನ್ 2015, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರತೀಯ ಕ್ರೀಡಾ ಪ್ರಾಧಿ ಕಾರದ (ಸಾಯ್‌) ಕೇರಳದ ಆಲಪ್ಪುಳ  ಕೇಂದ್ರದಲ್ಲಿ ಕಳೆದ ತಿಂಗಳು ನಡೆದ ಕ್ರೀಡಾಪಟು ಆತ್ಮಹತ್ಯೆ ಪ್ರಕರಣದ ನಂತರ ಸಾಯ್‌ ಕೇಂದ್ರಗಳ ಸರ್ವಾಂಗೀಣ ಸುಧಾರಣೆಗೆ ಮುಂದಾಗಿರುವ ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ 12 ಸೂತ್ರಗಳನ್ನು ಜಾರಿಗೆ ತರುವಂತೆ ಸಾಯ್‌ ಮಹಾ ನಿರ್ದೇಶಕರಿಗೆ ಸೂಚಿಸಿದೆ.


ಆಲಪ್ಪುಳದಲ್ಲಿರುವ ಜಲಕ್ರೀಡೆ ತರಬೇತಿ ಕೇಂದ್ರದಲ್ಲಿ ಮೇ ಆರರಂದು ವಿಷಪೂರಿತ ಹಣ್ಣು ತಿಂದು ನಾಲ್ಕು ಮಂದಿ ರಾಷ್ಟ್ರಮಟ್ಟದ ಮಹಿಳಾ ಕ್ರೀಡಾ ಪಟುಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರ ಪೈಕಿ ರಾಷ್ಟ್ರೀಯ ಜೂನಿಯರ್‌ ರೋವಿಂಗ್‌ ಚಾಂಪಿಯನ್‌ ಅಪರ್ಣಾ ರಾಮಭದ್ರ ಸಾವಿಗೀಡಾಗಿದ್ದರು. ಆಡಳಿತದವರು ಸಣ್ಣ ತಪ್ಪುಗಳಿಗೆ ಭಾರಿ ಶಿಕ್ಷೆ ಕೊಡುತ್ತಾರೆ ಮತ್ತು ಹಿರಿಯ ಅಥ್ಲೀಟ್‌ಗಳು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನಾಲ್ವರು ಬರೆದ ಜಂಟಿ ಪತ್ರದಲ್ಲಿ ಆರೋಪಿಸಿದ್ದರು.

ಈ ಘಟನೆಯ ನಂತರ ರಾಷ್ಟ್ರಮಟ್ಟದ ಹಿರಿಯ ಕ್ರೀಡಾಪಟುಗಳು ಮತ್ತು ಕ್ರೀಡಾ ಆಸಕ್ತರು ಸಾಯ್‌ ಆಡಳಿತ ವೈಖರಿಯನ್ನು ಟೀಕಿಸಿದ್ದರು. ಘಟನೆಯ ಕುರಿತು ಸಾಯ್‌ ಮಹಾನಿರ್ದೇಶಕರು ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಇಲಾಖೆ 10 ದಿನಗಳ ನಂತರ ಆದೇಶ ಹೊರಡಿಸಿದೆ. ಯೋಗ, ಆಪ್ತಸಮಾ ಲೋಚನೆ ಮೂಲಕ   ಕ್ರೀಡಾಪಟುಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕಾರ್ಯಕ್ಕೆ ಆದ್ಯತೆ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಕೇಂದ್ರ ಕ್ರೀಡಾ ಇಲಾಖೆಯ ಸೂಚನೆ ಯನ್ನು ಪಾಲಿಸುವುದರ ಭಾಗವಾಗಿ ಎಲ್ಲ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸುವಂತೆ ಸಾಯ್‌ ಮಹಾ ನಿರ್ದೇಶಕರು ಪ್ರಾದೇಶಿಕ ಕೇಂದ್ರಗಳಿಗೆ ತಿಳಿಸಿದ್ದಾರೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಒಳಗೊಂಡ ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕರು ಈಗಾಗಲೇ ಭೇಟಿ ಆರಂಭಿ ಸಿದ್ದಾರೆ. ಧಾರವಾಡ ಕೇಂದ್ರದಿಂದ ಅವರು ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

‘ಇಲಾಖೆಯ ಆದೇಶವನ್ನು ಪಾಲಿಸಲು ಮುಂದಾಗಿದ್ದೇನೆ. ಆದೇಶ ದಲ್ಲಿರುವ ಅಂಶಗಳನ್ನು ಪಾಲಿಸಲು ರೂಪುರೇಷೆ ಹಾಕಿಕೊಳ್ಳಲಾಗಿದೆ. ಎಲ್ಲ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಿದ ನಂತರ ಸುಧಾರಣಾ ಕ್ರಮಗಳಿಗೆ ಸಂಬಂಧಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಪ್ರಾದೇಶಿಕ ನಿರ್ದೇಶಕ ಶ್ಯಾಮಸುಂದರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಯ್‌ ತರಬೇತಿ ಕೇಂದ್ರಗಳಿಗೆ ಹದಿನೈದು ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಆಪ್ತಸಮಾಲೋಚಕರು ಭೇಟಿ ನೀಡುವಂತೆ ಮಾಡಬೇಕು. ಗುಂಪು ಸಮಾಲೋಚನೆ ಅಥವಾ ಅಗತ್ಯ ಬಿದ್ದಲ್ಲಿ ವೈಯಕ್ತಿಕ ಸಮಾಲೋಚನೆ ನಡೆಸಬೇಕು, ಮಹಿಳಾ ತರಬೇತಿ ಕೇಂದ್ರಗಳಲ್ಲಿ ಮಹಿಳಾ ವಾರ್ಡನ್‌ ಕಡ್ಡಾಯವಾಗಿ ಇರಬೇಕು, ಪ್ರತಿಯೊಂದು ಕೇಂದ್ರಕ್ಕೆ ಕನಿಷ್ಠ ಸಹಾಯಕ ನಿರ್ದೇಶಕ ಹುದ್ದೆಯ ಅಧಿಕಾರಿ ಮುಖ್ಯಸ್ಥರಾಗಿರ ಬೇಕು, ಉದ್ವೇಗಕ್ಕೆ ಕಡಿವಾಣ ಹಾಕಲು ತರಬೇತಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಯೋಗ ಕಲಿಸಬೇಕು ಎಂದು ಸೂಚಿಸಲಾಗಿದೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಕ್ರೀಡಾ ಮನೋಧರ್ಮದ ಕುರಿತು ತರಬೇತಿ ನೀಡಬೇಕು, ತರಬೇತಿ ಕೇಂದ್ರಗಳ ಪೋಷಕರಾಗುವಂತೆ ಹೆಸರಾಂತ ಕ್ರೀಡಾ ಪಟುಗಳನ್ನು ಕೋರಬೇಕು, ದಿನದ 24 ತಾಸು ಕಾರ್ಯನಿರ್ವಹಿಸುವ ಸಹಾಯ ವಾಣಿ ಆರಂಭಿಸಬೇಕು, ಭದ್ರತೆಯನ್ನು ಬಿಗಿಗೊಳಿಸಬೇಕು, ರಾಜ್ಯ ಕ್ರೀಡಾ ಇಲಾಖೆಯೊಂದಿಗೆ ಆಯಾ ರಾಜ್ಯಗಳ ತರಬೇತಿ ಕೇಂದ್ರಗಳು ಉತ್ತಮ ಬಾಂಧವ್ಯ ಬೆಳೆಸಲು ಯೋಜನೆ ಹಮ್ಮಿ ಕೊಳ್ಳಬೇಕು ಎಂಬ ಸೂಚನೆ ಇದೆ. ಎಲ್ಲ ಕ್ರೀಡಾಪಟುಗಳಿಗೆ ಪ್ರಧಾನಮಂತ್ರಿಗಳ ವಿಮೆ ಯೋಜನೆ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಕೂಡ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT