ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಕ್ಕಿ ಗ್ರಾಮದ ರಾಮ ನವಮಿ

Last Updated 18 ಏಪ್ರಿಲ್ 2016, 19:33 IST
ಅಕ್ಷರ ಗಾತ್ರ

ರಾಮನವಮಿ ಬೇಸಿಗೆ ಕಾಲದ ಬಹು ಸಂಭ್ರಮದ ಹಬ್ಬ. ತೇರು, ಜಾತ್ರೆ, ಪೂಜೆ ಪುನಸ್ಕಾರದ ಧಾರ್ಮಿಕ ಆಚರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಗಳ ಸುಗ್ಗಿಯು ಹೌದು. ತಂಪಾದ ರಾತ್ರಿ ಕಳೆಯಲು ರಾಮನವಮಿ, ಶಿವರಾತ್ರಿಯ ಹಬ್ಬದಂದು ನಡೆಯುವ ಕಾರ್ಯಕ್ರಮಗಳು ಸಹಕಾರಿ.

ರಾಮನವಮಿ ಎಂದರೆ ಕೇವಲ ಧಾರ್ಮಿಕ ಆಚರಣೆಯನ್ನಾಗಿ ಮಾಡದೆ, ಸಂಗೀತ, ಕಲೆ, ನೃತ್ಯ ಹಾಗು ಜನಪದ ಕಾರ್ಯಕ್ರಮಗಳನ್ನು ನಡೆಸುತ್ತಾ, ಧಾರ್ಮಿಕತೆಯೊಂದಿಗೆ ಸಾಂಸ್ಕೃತಿವಾಗಿಯೂ ಸಮಾಜದೊಂದಿಗೆ ಭಾಗವಹಿಸುವುದು ವಿಶೇಷ ಇಂತಹ ಪ್ರಯತ್ನವನ್ನು ಎಸ್‌.ಎನ್‌. ಅಣ್ಣಯ್ಯರೆಡ್ಡಿ ಅ್ಯಂಡ್‌ ಸನ್ಸ್‌ ಸಂಸ್ಥೆ ಮಾಡುತ್ತಾ ಬಂದಿದೆ.

ಸಾರಕ್ಕಿ ಗ್ರಾಮದ ಶ್ರೀ ರಾಮ ಭಜನಾ ಮಂದಿರಕ್ಕೆ 123 ವರ್ಷಗಳ ಭವ್ಯ ಚರಿತ್ರೆ ಇದೆ. ಈ ರಾಮ ಭಜನಾ ಮಂದಿರ ಪ್ರಾರಂಭವಾಗಲು ಕಾರಣವಾದವರು ಚಿಕ್ಕ ತಿಮ್ಮಣ್ಣರೆಡ್ಡಿಯವರ ಮಕ್ಕಳಾದ ಚಿಕ್ಕ ಮುನಿ ಯಪ್ಪರೆಡ್ಡಿ, ದೊಡ್ಡವೆಂಕಟಪ್ಪರೆಡ್ಡಿ, ಚಿಕ್ಕ ವೆಂಕಟಪ್ಪರೆಡ್ಡಿ, ನ್ಯಾತಪ್ಪರೆಡ್ಡಿ, ಹನುಮಪ್ಪರೆಡ್ಡಿ, ಕೋದಂಡಪ್ಪರೆಡ್ಡಿ ಮತ್ತು ಪಾಪಣ್ಣರೆಡ್ಡಿ ಅಂದಿನಿಂದಲೂ ರಾಮನವಮಿ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಅವರ ನಂತರ ನ್ಯಾತಪ್ಪರೆಡ್ಡಿ ಮಗರಾದ ಎಸ್‌.ಎನ್‌. ಅಣ್ಣಯ್ಯರೆಡ್ಡಿ ಊರ ಹಬ್ಬದ ಮುಂದಾಳತ್ವ ತೆಗೆದುಕೊಂಡಿದ್ದಾರೆ.

ಈ ದೊಡ್ಡ ವಂಶವೃಕ್ಷ ಅಂದಿನ ಸಾರಕ್ಕಿ ಗ್ರಾಮದಲ್ಲಿ ರಾಮನವಮಿಯನ್ನು ಆಚರಿಸಿಕೊಂಡು ಬರುತ್ತಿದೆ. ಬೆಂಗಳೂರು ಬೆಳೆದಂತೆ ಬನಶಂಕರಿ ಬಳಿಯಿರುವ ಸಾರಕ್ಕಿ ಗ್ರಾಮವೂ ನಗರದೊಳಗೆ ಮರೆಯಾತ್ತು, ಆದರೆ ಸಾರಕ್ಕಿ ಗ್ರಾಮದ ಸಾಂಸ್ಕೃತಿಕ ಆಚರಣೆ ಮುಂದುವರೆದುಕೊಂಡು ಬಂದಿದೆ. ಭಜನೆ ಪೂಜೆಯೊಂದಿಗೆ ಸಾಂಸ್ಕೃತಿಕ ಅಭಿರುಚಿಯ ಬೆಳವಣಿಗೆ ದೃಷ್ಟಿಯಿಂದ ಎಸ್‌.ಎನ್‌. ಅಣ್ಣಯ್ಯರೆಡ್ಡಿ  ಮಕ್ಕಳು ತಂದೆ ಹೆಸರಿನಲ್ಲಿ ಟ್ರಸ್ಟ್‌ ಅಸ್ತಿತ್ವಕ್ಕೆ ತಂದು ಈ ಮೂಲಕ ದಶಕಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ಈ ಕುಟುಂಬಕ್ಕೆ ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್‌ ಅಳಿಯರಾದ ಮೇಲೆ ಸಾಹಿತ್ಯದ ಕಂಪು ಕೂಡ ರಾಮನವಮಿಯೊಂದಿಗೆ ಬೆರೆತಿದೆ. ರಾಮನವಮಿ ಸಂದರ್ಭದಲ್ಲಿ ಕಿ.ರಂ. ಜೊತೆ ಬೆಂಗಳೂರು ನಗರದಲ್ಲಿ ನಡೆಯುವ ಸಂಗೀತ ಕಛೇರಿಗಳಿಗೆ ಹೋಗುತ್ತಿದ್ದರಿಂದ ಭಾರತೀಯ ಹಬ್ಬ ಮತ್ತು ಅದರ ಸುತ್ತಲಿನಲ್ಲಿ ನಡೆಯುವ ಜನಪದ ಆಚರಣೆಗಳ ಬಗ್ಗೆ ವಿಶೇಷ ಆಸಕ್ತಿ ಗಳಿಸಿಕೊಂಡ ಶೂದ್ರ ಶ್ರೀನಿವಾಸ್ ಅವರು ತಮ್ಮ ಮಾವನ ಮನೆಯಲ್ಲಿ ದಶಕಗಳಿಂದ ಆಚರಣೆಯಾಗುತ್ತಿದ್ದ ರಾಮನವಮಿಯಲ್ಲಿ ಸಕ್ರಿಯರಾಗಿ ಹೊಸ ಯೋಜನೆಯೊಂದಿಗೆ ಭಾಗಿಯಾಗುತ್ತಿದ್ದರಂತೆ.

‘ಸಾರಕ್ಕಿ ರಾಮನವಮಿ ಎಂದರೆ ಯಕ್ಷಗಾನ ಬಹುಜನಪ್ರಿಯ, ಇಲ್ಲಿ ಜನರು ಇಡೀ ರಾತ್ರಿ ಪ್ರಸಂಗ ನೋಡುತ್ತಾ ತುಂಬಾ ಆನಂದಿಸಿಸುತ್ತಾರೆ, ಹಿರಿಯ ಮಹಾನ್ ಕಲಾವಿದರು ಬಂದು ಇಲ್ಲಿ ಕಛೇರಿ ನಡೆಸಿ ಹೋಗಿದ್ದಾರೆ. ಧಾರ್ಮಿಕತೆಯೊಂದಿಗೆ ಸಾಂಸ್ಕೃತಿಕ ಅಭಿರುಚಿ ಬೆಳೆಸುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಶೂದ್ರ ಶ್ರೀನಿವಾಸ.

ವಿಶೇಷ ಕಾರ್ಯಕ್ರಮಗಳು:
ಪ್ರತಿ ವರ್ಷ ರಾಮನವಮಿ ಆರಂಭದ ವಾರದಂದು ಎಂಟು ದಿನಗಳ ಕಾರ್ಯಕ್ರಮವನ್ನು ನಡೆಸುವ ಎಸ್‌.ಎನ್‌. ಅಣ್ಣಯ್ಯರೆಡ್ಡಿ ಅ್ಯಂಡ್‌ ಸನ್ಸ್‌ ಸಂಸ್ಥೆ ದೇಶದ ನಾನಾ ಕಲಾವಿದರನ್ನು ಕರೆಸಿ ಸಾರಕ್ಕಿ ಗ್ರಾಮಕ್ಕೆ  ಕಲಾ ಪರಿಚಯ ಮಾಡಿಸಿದೆ. ರಾಜಶೇಖರ ಮನಸೂರು, ನಾಗರಾಜ ಅವಲ್ದಾರ್, ನರಸಿಂಹಲು ವಡಿವಾಟಿ,  ಇನ್ನೂ ಮುಂತಾದ ಮಹಾನ್‌ ಸಂಗೀತ ಸಾಧಕರು ಸಾರಕ್ಕಿ ರಾಮನವಮಿಯಲ್ಲಿ ಕಛೇರಿ ನಡೆಸಿಕೊಟ್ಟಿದ್ದಾರೆ.

ಸಾಹಿತಿ ಎಸ್. ಎಲ್. ಬೈರಪ್ಪ ಕೂಡ ಸಾರಕ್ಕಿ ಗ್ರಾಮದ ರಾಮನವಮಿ ಸಂಗೀತ ಕಛೇರಿ ಆಲಿಸಲು ಬಂದಿದರಂತೆ. ರಾತ್ರಿ ರಾಗವನ್ನು ಕೇಳಬೇಕೆಂದು ಮಧ್ಯರಾತ್ರಿ 3 ಗಂಟೆವರೆಗೂ ಕಾದುಕೂತು ಸಂಗೀತ ಆಸ್ವಾದಿಸಿದ್ದನು ಶೂದ್ರ ಶ್ರೀನಿವಾಸ್ ಅವರು ನೆನಪು ಮಾಡಿಕೊಳ್ಳುತ್ತಾರೆ. ಜವಾಹರಲಾಲ್ ನೆಹರೂ ಅವರ ಸಹೋದರಿ ವಿಜಯ ಲಕ್ಷ್ಮಿ ಪಂಡಿತ್ ಕೂಡ ಈ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ.

ಈ ವರ್ಷ 123ನೇ ವಾರ್ಷಿಕ ರಾಮೋತ್ಸವ ಕಾರ್ಯಕ್ರಮವನ್ನು ಸಾರಕ್ಕಿಯ ರಾಮ ಸೇವಾ ಭಜನಾ ಮಂದಿರದಲ್ಲಿ ಆಚರಿಸಲಾಯಿತು. ಕಲಾ ಸರಸ್ವತಿ ಭಜನೆ ಮಂಡಳಿ, ತಬಲಾ ವಾದಕ ವೆಂಕಟೇಶ್, ಹನುಮಂತಪ್ಪ ಭದ್ರಾವತಿ, ಬಸವರಾಜ್ ಡೋಲಕ್, ಶಿರಡಿ ಸೇವಾ ಭಜನೆ ಮಂದಿರ ತಂಡ, ಜಯದೇವಿ ಜಂಗಮ ಶೆಟ್ಟಿ,  ಅರ್ಚನಾ ಉಡಪ, ಎಂ.ಡಿ. ಪಲ್ಲವಿ, ಮೇಘನ ಕುಲಕರಣಿ ಅವರಿಂದ ಸಂಗೀತ ಕಛೇರಿ ನಡೆಯಿತ್ತು. ಕಲಾ ಕದಂಬ ಯಕ್ಷಗಾನ ತಂಡದಿಂದ ‘ಪುಣ್ಯಕೋಟಿ’ ಪ್ರಸಂಗ ಸಾರಕ್ಕಿ ಗ್ರಾಮಸ್ಥರನ್ನು ರಂಜಿಸಿತು.

ನೆಟ್ಟಕಲಪ್ಪ ಸರ್ಕಲ್ ಸೀನಪ್ಪ ಅವರ ಮಕ್ಕಳಾದ ಮಂಜುನಾಥ ಮತ್ತು ಸುರೇಶ್  ತಂಡದವರಿಂದ ನಾದಸ್ವರ ಈ ಬಾರಿ ರಾಮನವಮಿಯ ವಿಶೇಷ ಕಾರ್ಯಕ್ರಮ. ರಾಮನವಮಿ ಮೆರವಣಿಗೆಯಂದು ಉತ್ಸವ ಮೂರ್ತಿಗಳ ಮೆರವಣಿಗೆಯೊಂದಿಗೆ ಜನಪದ ತಂಡಗಳ ಪ್ರದರ್ಶನವು ನಡೆಯಿತ್ತು. ಜನಪದ ಲೋಕದ ಕುರುವ ಬಸವರಾಜು ಅವರು ಬಳ್ಳಾರಿ, ಬಾಗಲಕೋಟೆ, ಕೋಲಾರ, ಮೈಸೂರು ಹೀಗೆ ಹಲವು ಜಿಲ್ಲೆಗಳಿಂದ ಡೊಳ್ಳು ಕುಣಿತ, ಕೀಲು ಕುದುರೆ, ನಂದಿಕೋಲು ತಂಡಗಳು ಕರೆಸಲು ಸಹಾಯ ಮಾಡಿದ್ದಾರೆ. ಸಾರಕ್ಕಿ ರಾಮನವಮಿ ಉತ್ಸವದಲ್ಲಿ ಈ ಜನಪದ ಕಲಾ ಪ್ರಕಾರಗಳ ಮೆರವಣಿಗೆ ನಡೆಯಿತ್ತು.

ಮಹಿಳೆಯರ ಮುಂದಾಳತ್ವ:
160ಕ್ಕೂ ಹೆಚ್ಚು ಜನರಿರುವ ಎಸ್‌.ಎನ್‌. ಅಣ್ಣಯ್ಯರೆಡ್ಡಿ ಕುಟುಂಬ ಈ ರಾಮನವಮಿಯನ್ನು ಸಾಂಸ್ಕೃತಿಕ ಹಬ್ಬವನ್ನಾಗಿ ಮಾಡುತ್ತಾ ಬಂದಿದೆ. ಈ ಕಾರ್ಯಕ್ರಗಳ ಆಯೋಜನೆ ಜವಾಬ್ದಾರಿ ಕುಟುಂಬದ ಮಹಿಳೆಯರದ್ದು ಎನ್ನುವುದು  ಮತ್ತೊಂದು ವಿಶೇಷ. ‘ರಾಮೋತ್ಸವದ ಆಯೋಜನೆ ಜವಾಬ್ದಾರಿಯನ್ನು ಮಹಿಳೆಯರು ನಿರ್ವಹಿಸುತ್ತಿರುವುದರಿಂದ ಮುಂದಿನ ಪೀಳಿಗೆ ಮಕ್ಕಳು ಹೆಚ್ಚು ಸಕ್ರಿಯವಾಗಿ ಈ ಆಚರಣೆಯಲ್ಲಿ ಭಾಗಿಯಾಗುತ್ತಾರೆ.

ಇದರಿಂದ ನಮ್ಮ ಮುಂದಿನ ತಲೆಮಾರಿನ ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡುತ್ತದೆ.’ ಎನ್ನುತ್ತಾರೆ ಶೂದ್ರ ಶ್ರೀನಿವಾಸ. ಇಂದು ರಾಮನವಮಿ ಮಜ್ಜಿಗೆ ಪಾನಕ ಕೋಸಂಬರಿಯೊಂದಿಗೆ ಮುಗಿದು ಹೋಗುವ ಹೊತ್ತಿನಲ್ಲಿ ಇಂತಹ ಸಾಂಸ್ಕೃತಿಕ ಚಿಂತನೆಯಿಂದ ಹಬ್ಬಗಳು ಹೊಸ ರೂಪ ಪಡೆಯುತ್ತಿವೆ. ಭಜನೆ, ಕೀರ್ತನೆಗಳಿಗೂ ಮೀರಿ ಜನಪದ ಕಲಾ ಪ್ರಕಾರ, ಶಾಸ್ತ್ರೀಯ ಸಂಗೀತದ ಕಂಪು ಹರಡುತ್ತಿದೆ ಸಾರಕ್ಕಿ ರಾಮನವಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT