ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾ.ರಾ.ಗೋವಿಂದು ವಿರುದ್ಧ ದೂರು

ನಕಲಿ ದಾಖಲೆ ಪತ್ರ: ನಿವೇಶನ ಮಾರಾಟ – ವಂಚನೆ
Last Updated 14 ಸೆಪ್ಟೆಂಬರ್ 2014, 19:51 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ದಾಖಲೆಪತ್ರಗಳಿಂದ ನಿವೇಶನ ಮಾರಾಟ ಮಾಡಿ ವಂಚಿಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಸಂತೋಷ್‌ ರಾಜೇಂದ್ರರಾವ್‌ ಎಂಬುವರು ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಕ್ಕೂರು ಬಳಿಯ ಟೆಲಿಕಾಂ ಲೇಔಟ್‌ ನಿವಾಸಿಯಾದ ಸಂತೋಷ್‌ ಅವರು ನಗರದ ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ಎಂಜಿನಿಯರ್‌ ಆಗಿದ್ದಾರೆ. ಅವರು ಗೋವಿಂದು ಅವರ ಮಗಳು ತನುಜಾ ಜೈನ್‌ ಮತ್ತು ಅಳಿಯ ಅಜಿತ್‌ಪ್ರಸಾದ್‌ ಜೈನ್‌ ಅವರಿಂದ 2012ರ ಡಿಸೆಂಬರ್‌ನಲ್ಲಿ ಯಲಹಂಕ ಬಳಿಯ ಪೆನ್ನಾಫೀಲ್ಡ್‌ ಗಾರ್ಡನ್‌ ಲೇಔಟ್‌ನಲ್ಲಿ ನಿವೇಶನ ಖರೀದಿಸಿದ್ದರು. ಅಜಿತ್‌ಪ್ರಸಾದ್‌, ಸಹೋದರಿ ಅರ್ಚನಾ­ಕುಮಾರಿ ಹೆಸರಿನಲ್ಲಿದ್ದ ನಿವೇ­ಶ­ನ­ವನ್ನು ತನ್ನದೆಂದು ಹೇಳಿ­ಕೊಂಡು ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಸಂತೋಷ್‌ ಅವರಿಗೆ ಮಾರಿ  81 ಲಕ್ಷ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯನ್ನೇ ಸಹೋದರಿಯಂತೆ ಬಿಂಬಿಸಿ ಕೃತ್ಯ: ಸಹೋದರಿ ಅರ್ಚನಾಕುಮಾರಿ, ಪೆನ್ನಾಫೀಲ್ಡ್‌ ಗಾರ್ಡನ್‌ ಲೇಔಟ್‌­ನಲ್ಲಿನ ನಿವೇಶನವನ್ನು ತನಗೆ ಉಡು­ಗೊರೆಯಾಗಿ ಕೊಟ್ಟಿದ್ದಾರೆ ಎಂದು ಅಜಿತ್‌ಪ್ರಸಾದ್‌ ಅವರು ಸಂತೋಷ್‌ ಅವರಿಗೆ ಸುಳ್ಳು ಹೇಳಿದ್ದರು. ಅಲ್ಲದೇ, ನಿವೇ‌ಶನ ನೋಂದಣಿ ಸಂದರ್ಭದಲ್ಲಿ ಪತ್ನಿ ತನುಜಾ ಅವರನ್ನೇ ತನ್ನ ತಂಗಿ ಅರ್ಚನಾಕುಮಾರಿ ಎಂದು ಪರಿಚಯಿಸಿ ಈ ಕೃತ್ಯ ಎಸಗಿದ್ದರು.

ಜತೆಗೆ ನಿವೇಶನದ ನೋಂದಣಿ ದಾಖಲೆಪತ್ರಗಳಲ್ಲಿ ಅರ್ಚನಾಕುಮಾರಿ ಅವರ ಭಾವಚಿತ್ರಕ್ಕೆ ಬದಲಾಗಿ ತನುಜಾ ಅವರ ಭಾವಚಿತ್ರಗಳನ್ನು ಅಂಟಿಸಿದ್ದರು. ಅರ್ಚನಾ­ಕುಮಾರಿ ಅವರ ಹೆಸರಿನಲ್ಲಿ ತನುಜಾ ಅವರು ದಾಖಲೆಪತ್ರಗಳಿಗೆ ನಕಲಿ ಸಹಿ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮನೆ ಕಟ್ಟಲು ಮುಂದಾದಾಗ ಪ್ರಕರಣ ಬೆಳಕಿಗೆ: ಸಂತೋಷ್‌ ಆ ನಿವೇಶನದಲ್ಲಿ ಇತ್ತೀಚೆಗೆ ಮನೆ ಕಟ್ಟಿಸಲು ಮುಂದಾ­ದಾಗ ಅರ್ಚನಾಕುಮಾರಿ ಅವರು ನಿವೇ­ಶನವು ತನ್ನದೆಂದು ತಗಾದೆ ತೆಗೆದಿದ್ದಾರೆ. ಈ ಸಂಬಂಧ ಸಂತೋಷ್‌, ಸಾ.ರಾ.­ಗೋವಿಂದು ಅವರನ್ನು ಸಂಪರ್ಕಿಸಿ ನಿವೇಶನ ವಿವಾದವನ್ನು ಬಗೆಹರಿಸಿ­ಕೊಡುವಂತೆ ಕೇಳಿದ್ದಾರೆ. ಆಗ ಗೋವಿಂದು ಅವರು, ಹೆಚ್ಚುವರಿಯಾಗಿ 20 ಲಕ್ಷ ಕೊಟ್ಟು ಸಮಸ್ಯೆ ಬಗೆಹರಿಸಿಕೊ. ನಿವೇಶನದ ಹಣ ವಾಪಸ್‌ ಕೇಳಿದರೆ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತೋಷ್‌ ಅವರ ದೂರಿನ ಸಂಬಂಧ ಸಂಪಿಗೆಹಳ್ಳಿ ಠಾಣೆ ಪೊಲೀಸರು ಸಾ.ರಾ.­ಗೋವಿಂದು, ತನುಜಾ, ಅಜಿತ್‌­ಪ್ರಸಾದ್‌, ಅವರ ತಂದೆ ಯುವರಾಜ್ ಹೆಗಡೆ, ಅರ್ಚನಾಕುಮಾರಿ ಮತ್ತು ಅವರ ಪತಿ ಅವಿನಾಶ್ ಅಕ್ಷಯ್ ವಿರುದ್ಧ ವಂಚನೆ, ಕೊಲೆ ಬೆದರಿಕೆ, ದೌರ್ಜನ್ಯ ಹಾಗೂ ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆಪತ್ರಗಳ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT