ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿ ಎಂದುಬಿಟ್ಟರಾಯಿತೆ ?

ಬೋರ್ಡ್‌ ರೂಮಿನ್ ಸುತ್ತ–ಮುತ್ತ
Last Updated 27 ಮೇ 2014, 19:30 IST
ಅಕ್ಷರ ಗಾತ್ರ

ತಪ್ಪು ಮಾಡಿದೆನೆಂಬ ಅರಿವು ಮೂಡಲು ಬೇಕು/
ತಪ್ಪೊಪ್ಪಿಗೆಯ ನುಡಿಯ ನೀನಾಡಬೇಕು//
ಒಪ್ಪಿಕೊಳ್ಳುತ ನಿನ್ನ ಪಾತ್ರವನು ಅದರಲ್ಲಿ/
ತಪ್ಪುಗಳ ತಿದ್ದಿ ನಡೆ –ನವ್ಯಜೀವಿ//

ಲ್ಯಾಬಿನಲ್ಲಿ ಮುಂದಿರುವ ಐ.ಸಿ.ಬಿ ಬೋರ್ಡನ್ನು ಸರಿ ಮಾಡುತ್ತ ಕೆಲಸದಲ್ಲಿ ನಿರತನಾಗಿದ್ದ. ಹಗಲುಗನಸಿನ ಪ್ರಭಾವವೋ ಅಥವಾ ಕೆಲಸದಲ್ಲಿ ಪ್ರೇರಣೆಯ ಅಭಾವವೋ ಒಟ್ಟಿನಲ್ಲಿ ಟೇಬಲಿನ ಮೇಲಿದ್ದ ಕಾಫಿ ಬಟ್ಟಲು ಕೈ ತಾಗಿ ಉರುಳಿ ಕಾಫಿಯೆಲ್ಲಾ ಬೋರ್ಡಿನಲ್ಲಿ ಹರಡಿ ಶಾಮೀಲಾಗಿ ಬಿಟ್ಟಿತು. ವಿಷಯ ತಿಳಿದು ಅಲ್ಲಿಗೆ ಬಂದ ಹಿರಿಯ ಅಧಿ­ಕಾರಿಯೊಡನೆ ಈಗ ಇದರ ಬಗ್ಗೆ ಸಮಾಲೋಚನೆ. ಲ್ಯಾಬಿನ ಒಳಗಡೆ ಯಾವುದೇ ಪಾನೀಯವನ್ನು ತೆಗೆದುಕೊಂಡು ಹೋಗಬಾರದು ಎಂಬ ಮೂಲ ನಿಯಮವನ್ನೇ ಆತ ಉಲ್ಲಂಘಿಸಿದ್ದ. ಆತನ ಅಚಾ­ತುರ್ಯದಿಂದಾಗಿ ಬೆಲೆಬಾಳುವ ಬೋರ್ಡೊಂದು ಸರಿ ಮಾಡಲಾಗದಷ್ಟು ಹಾಳಾಗಿ ಹೋಗಿತ್ತು. ಕಂಪೆನಿಗೆ ನಷ್ಟವಾಗಿತ್ತು. ಅಧಿಕಾರಿಯ ಮಾತುಗ­ಳನ್ನೆಲ್ಲ ಕೇಳಿದ ನಂತರ, ಕೆಲಸ ಮಾಡುವಾಗ ಇವೆಲ್ಲ ಸಾಮಾನ್ಯವೆಂಬ ಧೋರಣೆಯಲ್ಲಿ ‘ಸಾರಿ’ ಎಂದು ಉಸುರಿದ್ದ. ಅಧಿಕಾರಿಗೂ ಅಷ್ಟೇ ಬೇಕಿತ್ತು. ಅದಷ್ಟು ಬೇಗ ಈ ಮಾತುಕತೆಯನ್ನು ಮುಗಿಸಿಬಿಡಬೇಕಿತ್ತು! ಆ ಘಟನೆಯಾದ ನಂತರವೂ ಲ್ಯಾಬಿನಲ್ಲಿ ಇಂತಹ ಅಚಾತುರ್ಯಗಳು ಆಗಿಂದಾಗ್ಗೆ  ನಡೆಯುತ್ತಿದ್ದವು ಎಂಬುದೇ ವಿಪರ್ಯಾಸ.

ಆಂಗ್ಲರು ನಮ್ಮನ್ನು ಬಿಟ್ಟು ತೆರಳುವಷ್ಟರಲ್ಲಿ ನಾವವರದೆಲ್ಲವನ್ನೂ ಕಲಿತು ಬಿಟ್ಟಿದ್ದೆವು. ಅವರ ಬಟ್ಟೆ ಬರೆ, ನೃತ್ಯ, ಗಾಯನ, ಊಟ ಉಪಚಾರ, ಚಿಂತನ ಮಂಥನ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಅವರ ಭಾಷೆ. ನಮ್ಮ ದೇವಭಾಷೆಗೆ ಇರುವ ಪರಿಶುದ್ಧ ಭಾಷಾ ಸೂತ್ರಗಳ ಕೊರತೆಯಿದ್ದರೂ ಹಾಗೂ ನಮ್ಮ ನಾಡು ಭಾಷೆಗಿರುವ ಯಾವುದೇ ಹೃದಯ ಸ್ಪಂದನ ಶಕ್ತಿ ಇಲ್ಲದಿದ್ದರೂ, ನಮಗೆ ಆಂಗ್ಲ ಭಾಷೆ ಅಷ್ಟೊಂದು ಆಪ್ತವಾದದ್ದು ಹೇಗೆ? ಎಂಬುದೇ ನನ್ನನ್ನು ಕಾಡುವ ಪ್ರಶ್ನೆ.

ಈಗಂತೂ ಈ ಪ್ರಶ್ನೆಯನ್ನು ಎತ್ತುವ ಹಾಗೂ ಇಲ್ಲ. ಇಡಿಯ ದೇಶದ ಆರ್ಥಿಕ ವಲಯದ ನಾಡಿಮಿಡಿ­ತವಾದ ತಂತ್ರಾಂಶ ಕ್ಷೇತ್ರ ನಮಗೆ ವರದಾನವಾಗಿ ಪರಿಣಮಿಸಿರುವುದೇ ನಮ್ಮ ಆಂಗ್ಲ ಭಾಷಾ ಪ್ರೌಢಿಮೆಯಿಂದ ಎಂದು ಸಾಬೀತಾಗಿರುವಾಗ ಆಂಗ್ಲವೇ ಎಲ್ಲರ ಮನೆಮಾತಾಗಿಬಿಟ್ಟಿದೆ. ಆದರೆ, ಬಹುತೇಕ ಎಲ್ಲ ವಿಷಯಗಳಲ್ಲೂ ನಮ್ಮ ತದ್ರೂಪದ ಚೈನಾ ಮಾತ್ರಾ ಅದು ಹೇಗೆ ಆಂಗ್ಲವನ್ನು ಬಳಸದಿದ್ದರೂ ಈ ದಿನವೂ ಅಷ್ಟೊಂದು ಮುಂದುವರೆಯುತ್ತಿದೆಯಲ್ಲಾ ಎಂಬ ಸತ್ಯ ಮಾತ್ರ ನಮ್ಮನ್ನು ಆಗಾಗ ಅಣಕಿಸದೇ ಇರಲಾರದು.
ಏಳನೇ ತರಗತಿಯವರೆಗಿನ ನನ್ನ ಆರಂಭಿಕ ಶಿಕ್ಷಣ ನಡೆದದ್ದು ಕನ್ನಡದಲ್ಲಿ. ಶಾಲೆಯಲ್ಲಿ ಎಲ್ಲರೂ ಕನ್ನಡ ಮಾತನಾಡುವವರೆ. ನಮಗೆ ಆಂಗ್ಲವನ್ನು ಬೋಧಿಸುತ್ತಿದ್ದ ಮಾಸ್ತರರು ಕೂಡ  ಕನ್ನಡದಲ್ಲೇ ಆಂಗ್ಲವನ್ನು ಕಲಿಸಿಕೊಟ್ಟಿದ್ದರು. ನಮ್ಮಿಂದ ತಪ್ಪಾದಾಗಲೆಲ್ಲ ಕೈಯಲ್ಲಿ ಬೆತ್ತ ಹಿಡಿದು  ‘ಸಾರಿ’ ಎನ್ನುವವರೆಗೂ ಬಿಡುತ್ತಿರಲಿಲ್ಲ. ನಮಗೆ ‘ಸಾರಿ’ ಎಂಬ ಪದ ಅದೆಷ್ಟು ಕರಗತವಾಗಿಬಿಟ್ಟಿತ್ತು ಎಂದರೆ, ಅದಕ್ಕೊಂದು ಕನ್ನಡದ ಪದವೂ ಇದೆ ಎಂಬುದು ಮರೆತೇ ಹೋಗಿತ್ತು. ಇದೇಕೆ ಹೀಗೆ ಎಂದು ಯಾರೂ ಕೇಳಿರಲಿಲ್ಲ. ನಾವೂ ಕೇಳಿರಲಿಲ್ಲ.
ನನಗಿನ್ನೂ ಚೆನ್ನಾಗಿ ನೆನಪಿನಲ್ಲಿದೆ, ಚಿಕ್ಕವನಿದ್ದಾಗ ನಡೆದ ಒಂದು ಘಟನೆ. ಅತಿಥಿಗಳು ಬರುತ್ತಾರೆಂದು ಮನೆಯಲ್ಲಿ ಪಾಯಸ ಮಾಡಿದ್ದರು. ಹೊರಗೆ ಆಟಕ್ಕೆ ಬರಬೇಕೆಂಬ ಸ್ನೇಹಿತರ ಕೂಗು ಜೋರಾಗುತ್ತಿತ್ತು. ನಾನೊಮ್ಮೆ ಆಟಕ್ಕೆ ಹೊರ ಹೊರಟರೆ ಮತ್ತೆ ನನ್ನನ್ನು ಊಟಕ್ಕೆ ಒಳ ಕರೆತರುವುದು  ಮನೆಯವರಾರಿಗೂ ಸುಲಭದ ಕೆಲಸವಾಗಿರಲಿಲ್ಲ. ಅಂತೆಯೇ ಆಟಕ್ಕೆ ತೆರಳುವ ಮುನ್ನ ಸ್ವಲ್ಪ ಪಾಯಸ ಕುಡಿದು ಹೋಗುವಂತೆ ಅಮ್ಮ ತಿಳಿಸಿದ್ದಳು.

ನನಗೋ ಆತುರ. ಲೋಟಕ್ಕೆ ಪಾಯಸವನ್ನು ಬಗ್ಗಿಸಿಕೊಳ್ಳುವಾಗ ಪಾತ್ರೆಯನ್ನೆಲ್ಲ ಬೀಳಿಸಿಬಿಟ್ಟೆ. ಅಮ್ಮ ಕಷ್ಟಪಟ್ಟು ಮಾಡಿದ್ದ ಪಾಯಸವೆಲ್ಲ ಈಗ  ನೆಲದಲ್ಲಿ ಹರಡಿಕೊಂಡಿದೆ. ಸ್ಥಳಕ್ಕೆ ಧಾವಿಸಿದ ಅಪ್ಪನಿಗೆ ಏನೂ ಜರುಗಿಲ್ಲವೆಂಬಂತೆ ಪ್ರಾಸ್ತಾವಿ­ಕವಾಗಿ ‘ಸಾರಿ’ ಹೇಳಿ ಆಟಕ್ಕೆ ಹೊರ ಹೊರಡುವವನಿದ್ದೆ. ನನ್ನ ರಟ್ಟೆ ಹಿಡಿದು ನಿಲ್ಲಿಸಿದ ಅಪ್ಪ – ‘ಏನೋ, ಸಾರಿ ಅಂತ ಒದರಿಬಿಟ್ರೆ ಆಯ್ತಾ? ಯಾರೋ ನಿನಗೆ ಇದನ್ನ ಹೇಳಿಕೊಟ್ಟೋರು?’ ಎಂದು ಗದರಿಸಿದರು.

ನನ್ನ ವಿಷಯದಲ್ಲಿ ಎಂದಿಗೂ ಕೋಪಿಸಿಕೊಳ್ಳದ ಅಪ್ಪ ಇಂದೇಕೋ ರೇಗುತ್ತಿದ್ದಾರಲ್ಲ ಎಂದೆನಿಸಿ ಮೊದಲ ಬಾರಿಗೆ ನಡೆದ ಅಚಾತುರ್ಯದ ತೀವ್ರತೆಯ ಅರಿವಾಗಿತ್ತು. ಆದರೂ ‘ಅಣ್ಣಾ, ಸಾರಿ ಹೇಳಿದ್ನಲ್ಲ, ಇನ್ನೇನು?’ ಎಂದು ಮರು ಪ್ರಶ್ನೆ ಹಾಕಿದ್ದೆ.

ಅಪ್ಪನ ಕಂಠವೂ ಈಗ ಏರುತ್ತಿತ್ತು – ‘ಸಾರಿ ಅಂದುಬಿಟ್ರೆ ಮುಗೀತಾ? ಇನ್ನೊಮ್ಮೆ ನೀನು ಆಂಗ್ಲದ ಈ ಅನುಕೂಲ ಸಿಂಧು ಪದವನ್ನು ಎಂದಿಗೂ ಬಳಸಬಾರದು. ಶುದ್ಧ ಕನ್ನಡದಲ್ಲಿ ನನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎನ್ನಬೇಕು’ ಎಂದು ತಿಳಿಹೇಳಿದ್ದರು.

ಹೊರಗಡೆಯಿಂದ ಗೆಳೆಯ ಮತ್ತೊಮ್ಮೆ ಆಟಕ್ಕೆ ಕರೆ ನೀಡಿದ್ದ. ‘ಅಣ್ಣ, ನನ್ನಿಂದ ತಪ್ಪಾಯ್ತು. ಇನ್ಮೇಲೆ ಈ ರೀತಿ ಮಾಡೋದಿಲ್ಲ’ ಎಂದು ಒಂದೇ ಉಸಿರಿನಲ್ಲಿ ಬಡಬಡಿಸಿದ್ದೆ. ಚೆಲ್ಲಿ ಹೋದ ಪಾಯಸದ ನೋವಿಗಿಂತ ಮಗನಿಗೆ ಅದೇನೋ ಹೇಳಿಕೊಟ್ಟೆನಲ್ಲ  ಎಂಬ ಸಾಂತ್ವನವೇ ಅಪ್ಪನ ಕಣ್ಣುಗಳಲ್ಲಿ ಮಿಂಚಿದನ್ನು ಕಾಣುತ್ತಲೇ ನಾನು ಅಲ್ಲಿಂದ ಹೊರಕ್ಕೆ ಜಿಗಿದಿದ್ದೆ!

ನಂತರದಲ್ಲಿ ನಾನು ಅನೇಕ ಬಾರಿ ಯೋಚಿಸಿದ್ದೇನೆ. ಆಂಗ್ಲದಲ್ಲಿ ಚುಟುಕಾಗಿ ‘ಸಾರಿ’ ಎನ್ನುವುದು ಅದೆಷ್ಟು ಹಿತ. ಅದನ್ನು ಬಿಟ್ಟು ಕನ್ನಡದಲ್ಲಿ ‘ನನ್ನಿಂದ ತಪ್ಪಾಗಿದೆ. ಇನ್ನೆಂದೂ ಈ ರೀತಿ ಮಾಡುವುದಿಲ್ಲ’ ಎಂಬ ಇಷ್ಟುದ್ದುದ ವಾಕ್ಯವನ್ನೇಕೆ ಬಳಸಬೇಕು? ಉತ್ತರ ಮಾತ್ರ ಸ್ಪಷ್ಟವಾಗಿರಲಿಲ್ಲ.

ಬೋರ್ಡ್‌ ರೂಮಿನ ಸುತ್ತಮುತ್ತ ಕೆಲಸ ಮಾಡುವ ಈ ದಿನಗಳಲ್ಲಿ ನನಗೆ ಅಣ್ಣನ ಮಾತಿನ ಮಹತ್ವ ಗೊತ್ತಾಗುತ್ತಿದೆ. ಎಲ್ಲರಿಂದಲೂ ತಪ್ಪುಗಳು ಜರುಗುವುದು ಸಹಜ. ಆಗೆಲ್ಲ ಬರಿಯ ‘ಸಾರಿ’ ಎಂದು ಬಿಟ್ಟರೆ  ಆಗುತ್ತದೆಯೇನು? ಅದು ತಕ್ಷಣಕ್ಕೆ ನಮ್ಮಿಂದ ತಪ್ಪಾಗಿದೆ ಎನ್ನುವುದರ ಸೂಚಕ. ಆದರೆ ನಾಲಗೆಯಿಂದ ದಿಢೀರನೆ ಹೊರಹೊಮ್ಮಿ ಬಿಡುವ ಆ ಪದಕ್ಕೆ ಅಂತರಾಳದ ಅರಿವಿನ ಗಂಧವಿರುವುದಿಲ್ಲ. ಅದರ ಬದಲು ಅಥವಾ ಅದರ  ಜೊತೆಯಲ್ಲೇ ‘ನನ್ನಿಂದ ತಪ್ಪಾಯ್ತು. ಇನ್ನೆಂದೂ ಹೀಗೆ ಮಾಡುವುದಿಲ್ಲ’ ಎಂದು ಹೇಳುವಾಗ ಮಾತ್ರ ನಾವು ಮಾಡಿರುವ ತಪ್ಪಿನ ಪೂರ್ಣ ಅರಿವು ನಮಗುಂಟಾಗುತ್ತದೆ. ನಮ್ಮ ಅಹಂಕಾರ ಆ ಹೊತ್ತಿಗಾದರೂ ತಲೆ ತಗ್ಗಿಸುತ್ತದೆ. ಆ ತಪ್ಪಿಗೆ ನಾವೇ ಪೂರ್ಣವಾಗಿ ಜವಾಬ್ದಾರಿ ಎಂದು ಹೇಳುವ ಎದೆಗಾರಿಕೆ ಪುಟಿದೊಡೆಯುತ್ತದೆ. ನಮ್ಮ ನಾಡುಭಾಷೆಗಿರುವ ಈ ಪ್ರಾಮಾಣಿಕತೆ  ಹಾಗೂ ಬುದ್ಧಿ ಕಲಿಸಬಲ್ಲ ತಾಕತ್ತು ಆಂಗ್ಲದ ಜನಜನಿತವಾದ ಪದಕ್ಕಿಲ್ಲ ಎಂಬುದು ನನ್ನ ಮತ.

ಸಾರಿ ಎಂದಾಗ ನಮಗೆ ತಪ್ಪಿನ ಅರಿವಾಗಿದೆ ಎಂದರ್ಥ. ‘ನನ್ನಿಂದ ತಪ್ಪಾಯ್ತು. ನಾನೇನೂ ಹೀಗೆ ಮಾಡುವುದಿಲ್ಲ’ ಎಂಬ ಅಣ್ಣನ ಮಾತಿನಲ್ಲಿ ತಪ್ಪು ನನ್ನದೆಂದು ಒತ್ತಿ ಒತ್ತಿ ಹೇಳುವ ಪ್ರಾಮಾಣಿಕತೆ ಇದೆ. ಅದನ್ನು ಮತ್ತೆಂದೂ ಮಾಡಬಾರದೆಂಬ ಪ್ರಜ್ಞೆ ಇದೆ. ಆದರೆ, ಈ ಎರಡೂ ಸಾಲುಗಳಲ್ಲಿ ಎಲ್ಲೂ ಆ ತಪ್ಪನ್ನು ಆ ಕ್ಷಣಕ್ಕೆ ಸರಿ ಮಾಡಬಲ್ಲ ಕಾರ್ಯಕಲಾಪದ ಸೂಚನೆ ಇಲ್ಲ. ಹಾಗಾಗಿ, ಇವೆರಡರ ಜೊತೆಯಲ್ಲೇ ಮೂರನೇ ಸಾಲೊಂದು ಕೂಡ ಅತ್ಯಂತ ಮುಖ್ಯ ಎಂದು ನನಗನ್ನಿಸುತ್ತದೆ.

‘ಸಾರಿ, ನನ್ನಿಂದ ತಪ್ಪಾಯ್ತು. ನಾನೆಂದೂ ಮುಂದೆ ಹೀಗೆ ಮಾಡುವುದಿಲ್ಲ. ಈ ತಪ್ಪಿನಿಂದ ಉಂಟಾದ ನಷ್ಟವನ್ನು ಭರಿಸಲು ಈಗ ನಾನೇನು ಮಾಡಲಿ?’ ಎಂದು ಮೂರನೇ ಸಾಲೊಂದನ್ನು ಸೇರಿಸಿದಾಗ ಮೊದಲೆರಡು ಉತ್ಕೃಷ್ಟವಾದ ಭಾವನೆಗಳಿಗೆ ಕಾರ್ಯಯೋಜನೆಯೊಂದರ ಲೋಪ ಹಚ್ಚಿದಂತಾಗುತ್ತದೆ. ಪಾಯಸದ ಪಾತ್ರೆ ಕೈಜಾರಿ ಬಿದ್ದಾಗ, ನಾನು ಆ ಮೂರನೆಯ ಸಾಲನ್ನೂ ಹೇಳಿಕೊಂಡಿದ್ದರೆ, ಯಾರಿಗೂ ಕಾಯದೆ ತಕ್ಷಣವೇ ನೆಲದಲ್ಲಿ ಹರಡಿದ್ದ ಪಾಯಸವನ್ನು ತೆಗೆದು  ಆ ಜಾಗದಲ್ಲಿ ಖುದ್ದಾಗಿ ನಾನೇ ಸ್ವಚ್ಚ ಮಾಡಿರುತ್ತಿದ್ದೆ. ಚೆಲ್ಲಿ ಹೋದ ಪಾಯಸಕ್ಕೆ ಇನ್ನೇನಾದರೂ ವ್ಯವಸ್ಥೆ ಮಾಡುವುದರಲ್ಲಿ ಮುಂದಾಗುತ್ತಿದೆ. ಆ ಹೊತ್ತಿನಲ್ಲಿ ಗೆಳೆಯರ ಆಟದ ಕೂಗು ನನ್ನನ್ನು ಹೊರಕ್ಕೆ ಎಳೆದುಕೊಂಡು ಬರುತ್ತಲೇ ಇರಲಿಲ್ಲ.

ಬೋರ್ಡ್ ರೂಮಿನ ಸುತ್ತಮುತ್ತ ಮಾನವ ಸಂಪನ್ಮೂಲ ವಿಭಾಗದವರು ಎಲ್ಲರೊಡನೆ  ವ್ಯವಹರಿಸುವಾಗ ಎರಡು ವಾಕ್ಯಗಳನ್ನು ಸಂಪ್ರದಾಯವೆಂಬಂತೆ ಬಳಸುತ್ತಾರೆ. ‘ನನಗೆ ನಿಮ್ಮ ಅಳಲು ಅರ್ಥವಾಗುತ್ತದೆ’ ಹಾಗೂ ‘ನನಗೆ  ನಿಮ್ಮ ವಿಚಾರಗಳ ಬಗ್ಗೆ ಹಾಗೂ ಅಭಿಪ್ರಾಯಗಳ ಬಗ್ಗೆ ಗೌರವ ಇದೆ’. ಇವೆರಡೂ ಬಾಯಿಮಾತುಗಳಷ್ಟೆ. ಯಾರೂ ಈ ಎರಡು ವಾಕ್ಯಗಳ ನಂತರ ‘ಈಗ ನಿಮಗೆ ಸಹಾಯವಾಗುವಂತೆ ನಾನೇನು ಮಾಡಬೇಕು ತಿಳಿಸಿ’ ಎಂದು ಕೇಳುತ್ತಾರೋ, ಆಗ ಅದರಲ್ಲಿ ತೊಂದರೆಗೊಂದು ಪರಿಹಾರ ಹುಡುಕುವ ಮೊದಲ ಎಳೆ ಕಂಡು ಬರುತ್ತದೆ. ಅಥವಾ ಹಾಗೂ ಗೌರವಗಳ ಜೊತೆಯಲ್ಲೇ ಕಾರ್ಯ ಯೋಜನೆಯೊಂದರ ಉಗಮವಾಗುತ್ತದೆ. ತೊಂದರೆಗಳ ಪರಿಹಾರವಾಗಿ ಎಲ್ಲರೂ ಕಂಪೆನಿಯ ಯಶಸ್ಸಿನತ್ತ ಕಾರ್ಯೋನ್ಮುಖರಾಗಲು ಸಹಾಯವಾಗುತ್ತದೆ.

ಆಂಗ್ಲದ ‘ಸಾರಿ’ ಒಂದು ಪ್ರತಿಕ್ರಿಯೆ. ಅಣ್ಣನ ಕನ್ನಡದ ಮಾತುಗಳು ಅದನ್ನು ಮೀರಿದ್ದು ಅದು ಪ್ರಜ್ಞೆ ಹಾಗೂ ಪ್ರತಿಜ್ಞೆಗಳ ಭಾವಭರಿತ ಮಿಲನ. ನಂತರದ ಮೂರನೆಯ ಚಿಂತನೆಯೇ ಕಾರ್ಯವಿಧಾನವೊಂದನ್ನು ರೂಪಿಸುವ ಪ್ರಕ್ರಿಯೆ. ಈ ರೀತಿ ಪ್ರತಿಕ್ರಿಯೆ, ಪ್ರಜ್ಞೆ, ಪ್ರತಿಜ್ಞೆ ಹಾಗೂ ಪ್ರಕ್ರಿಯೆಗಳು ಒಂದುಗೂಡಿದಾಗ ಮಾತ್ರವೇ  ಬೋರ್ಡ್ ರೂಮಿನ ಸುತ್ತಮುತ್ತ ಜರುಗುವ ತಪ್ಪುಗಳು ಮತ್ತೆ ಮತ್ತೆ ಜರುಗುವುದಿಲ್ಲ.
ಲ್ಯಾಬಿನಲ್ಲಿ ಅಚಾತುರ್ಯವೆಸಗಿದ ತಂತ್ರಜ್ಞ ಬರಿಯ ಸಾರಿ ಎಂದು ಬೇಕಾಬಿಟ್ಟಿ ಹೇಳಿ ನಿಲ್ಲಿಸಿದಾಗ, ಆತನ ಮೇಲಧಿಕಾರಿ ಅವನಿಗೆ  ಆ ಪದದ ಹಿಂದೆ ಇರುವ ಶುಷ್ಕತೆಯ ಅರಿವನ್ನು ಮಾಡಿಸಬೇಕಿತ್ತು. ಅದರ ಜೊತೆಗೆ ಆತ ಪರಿಭಾವಿಸಬೇಕಾದ ಇನ್ನೆರಡು ಅಂಶಗಳ ಪರಿಚಯ ಮಾಡಿಸಬೇಕಿತ್ತು. ಹಾಗಾಗಿದ್ದರೆ, ಆ ಲ್ಯಾಬಿನಲ್ಲಿ ಮತ್ತೆ ಅಂತಹ ತಪ್ಪುಗಳು ಜರುಗುತ್ತಿರಲಿಲ್ಲ ಎಂಬುದೇ ನನ್ನ ಅಭಿಮತ....

* ಲೇಖಕರನ್ನು satyesh.bellur@gmail.com ಇ-ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT