ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಹಳ್ಳಿಯಲಿ ಸ್ವಾವಲಂಬಿ ಬದುಕು

Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆ ತಾಲ್ಲೂಕಿನ ಗಡಿ ಗ್ರಾಮ ಜಿ. ಬೊಪ್ಪನಹಳ್ಳಿ. ಸುಮಾರು 120 ಕುಟುಂಬಗಳು ಇರುವ ಈ ಗ್ರಾಮವೀಗ ಸಂಪೂರ್ಣ ಸಾವಯವಮಯ. ಏಕೆಂದರೆ ಈ ಗ್ರಾಮದ ತುಂಬಾ ಸಾವಯವ ಕೃಷಿಕರೇ ತುಂಬಿದ್ದಾರೆ. ವಾರ್ಷಿಕ 6,500 ಮಿಲಿಮೀಟರ್‌ ಮಳೆಯಾಗುವ ಈ ಗ್ರಾಮದಲ್ಲಿ ಖುಷ್ಕಿ ಪ್ರದೇಶ ಹೆಚ್ಚಿದೆ. ಗ್ರಾಮದ ಸುತ್ತಲೂ 40 ಸಣ್ಣ ಪ್ರಮಾಣದ ಕಟ್ಟೆಗಳಿದ್ದು, ಅವುಗಳನ್ನೂ ಸಾವಯವ ಕೃಷಿಗೆ ಬಳಸಿಕೊಳ್ಳಲಾಗುತ್ತಿದೆ.

ಕೃಷಿ ವೆಚ್ಚ ತಗ್ಗಿಸಲು, ಭೂಮಿಯ ಸತ್ವ ಉಳಿಸಿಕೊಳ್ಳಲು ಸಾವಯವ ಕೃಷಿಗೆ ಮೊರೆ ಹೋಗಿದ್ದರೆ, ಉಪಕಸುಬಾಗಿ ಹೈನುಗಾರಿಕೆ ಮಾಡುತ್ತಿದ್ದು, ಅದರ ವೆಚ್ಚ ತಗ್ಗಿಸಲು ಅಜೋಲಾ ಹಾಗೂ ಹಸಿರು ಮೇವು ಬೆಳೆಯುತ್ತಿದ್ದಾರೆ. ಸಿಲಿಂಡರ್‌ ವೆಚ್ಚ ಉಳಿಸಲು ಗೋಬರ್‌ ಗ್ಯಾಸ್‌ ಘಟಕ ಸ್ಥಾಪಿಸಿಕೊಂಡಿದ್ದು,  ವಿದ್ಯುತ್‌ ಬಿಲ್‌ ಉಳಿಸಲು ಸೋಲಾರ್‌್ ಅಳವಡಿಸಿದ್ದಾರೆ. ಹೀಗೆ ಒಂದೇ ಗ್ರಾಮದಲ್ಲಿ ಹಲವು ಬಗೆಯ ಪ್ರಯೋಗಗಳು ನಡೆಯುತ್ತಿವೆ. ಇದರಿಂದ ರೈತರು ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.

ಸಾವಯವದ ಹಿಂದೆ...
2010–11ನೇ ಸಾಲಿನಲ್ಲಿ ಕೃಷಿ ಇಲಾಖೆ ಹಾಗೂ ವಿಕಸನ ಸಂಸ್ಥೆಯ ಸಹಯೋಗದಲ್ಲಿ ಈ ಗ್ರಾಮವನ್ನು ಸಾವಯವ ಗ್ರಾಮಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಸರ್‌ ಎಂ. ವಿಶ್ವೇಶ್ವರಯ್ಯ ಸಾವಯವ ಕೃಷಿಕರ ಸಂಘದ ಮೂಲಕ ಗ್ರಾಮಸ್ಥರಿಗೆ ಸಾವಯವ ಕೃಷಿಯಿಂದ ಆಗುವ ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಅದರ ಪರಿಣಾಮವಾಗಿಯೇ ಈ ಗ್ರಾಮವನ್ನೀಗ ‘ಸಾವಯವ ಗ್ರಾಮ’ ಎನ್ನಲಾಗುತ್ತಿದೆ. ಪ್ರತಿ ಮನೆಯಲ್ಲಿಯೂ ಗಂಜಲದ ತೊಟ್ಟಿ ನಿರ್ಮಿಸಲಾಗಿದೆ, ಅಜೋಲಾ ತೊಟ್ಟಿಗಳೂ ಇವೆ. ಯೋಜನೆ ಅನುಷ್ಠಾನಕ್ಕಾಗಿ ₹ 14. 50 ಲಕ್ಷ ಸಹಾಯಧನ ಖರ್ಚು ಮಾಡಲಾಗಿದೆ.

ಹೊಲಗಳಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವ ಮೂಲಕ ನೀರು ಅಲ್ಲಿಯೇ ಇಂಗುವಂತೆ ಮಾಡಲಾಗಿದೆ. ಹೆಚ್ಚಿನ ನೀರು ಅಲ್ಲಿರುವ ಹಳ್ಳ ಸೇರುತ್ತದೆ. ಅದಕ್ಕೂ ಚೆಕ್‌ ಡ್ಯಾಂ ನಿರ್ಮಿಸಲಾಗಿದ್ದು, ಅದರಿಂದ 120 ಎಕರೆ ಪ್ರದೇಶದಲ್ಲಿ ರಾಜಮುಡಿ, ಪುಟ್ಟುಭತ್ತ ಬೆಳೆಯಲಾಗುತ್ತಿದೆ. ಯೋಜನೆ ಜಾರಿಗೊಳಿಸುವಾಗ ಗ್ರಾಮದ ಬಹುತೇಕ ಮನೆಯ ಗೋಡೆಗಳ ಮೇಲೆ ಸಾವಯವ ಕೃಷಿ ಮಹತ್ವ ಸಾರುವ ಘೋಷಣೆಗಳನ್ನು ಬರೆಸಲಾಗಿತ್ತು. ಯೋಜನೆಯ ಜಾರಿ ಅವಧಿ ಪೂರ್ಣಗೊಂಡು ಎರಡು ವರ್ಷವಾಗಿದ್ದರೂ ಕೃಷಿಕರು ಸ್ವಯಂ ಆಸಕ್ತಿಯಿಂದ ಅದನ್ನೇ ಮುಂದುವರೆಸಿದ್ದಾರೆ. ಇದಕ್ಕೆ ಕಾರಣ, ಈ ಶಾಶ್ವತ ಗೋಡೆ ಬರಹಗಳು.

ಗ್ರಾಮದಲ್ಲಿ ಕೆಲವರು ಗೋಬರ್‌ ಗ್ಯಾಸ್‌ ಘಟಕಗಳನ್ನು ಅಳವಡಿಸಿಕೊಂಡಿದ್ದಾರೆ. ಆ ಮೂಲಕ ಸಿಲಿಂಡರ್‌ ಖರೀದಿ ನಿಲ್ಲಿಸಿದ್ದಾರೆ. ಮನೆಗೆ ಸಾಕಾಗುವಷ್ಟು ಗ್ಯಾಸ್‌ ಅನ್ನು ಅಲ್ಲಿಯೇ ಉತ್ಪಾದಿಸುತ್ತಿದ್ದಾರೆ. ಗ್ಯಾಸ್‌ ಉತ್ಪಾದನೆ ನಂತರ ಬರುವ ಸೆಗಣಿಯ ಸ್ಲರಿಯನ್ನು ಹೊಲಕ್ಕೆ ಗೊಬ್ಬರವಾಗಿ ಬಳಸಿಕೊಳ್ಳುತ್ತಾರೆ.

ಹಲವು ಘಟಕ
ಗ್ರಾಮದಲ್ಲಿ 40 ಎರೆಹುಳು ಗೊಬ್ಬರ ಘಟಕಗಳಿದ್ದರೆ, 10 ಜಪಾನ್‌ ಮಾದರಿ ಗೊಬ್ಬರ ಘಟಕಗಳಿವೆ. ಎರೆಹುಳು ಗೊಬ್ಬರದ ಘಟಕಗಳನ್ನು ಎರಡು ವಿಭಾಗಗಳನ್ನಾಗಿ ಮಾಡಿಕೊಳ್ಳಲಾಗಿದ್ದು, ಒಂದರ ಗೊಬ್ಬರ ಉತ್ಪಾದನೆ ಮುಗಿಯುವ ವೇಳೆಗೆ ಇನ್ನೊಂದು ವಿಭಾಗದಲ್ಲಿ ಗೊಬ್ಬರ ಉತ್ಪಾದಿಸುತ್ತಾರೆ.

ಜೀವಾಮೃತ ತಯಾರಿಕೆಯ 94, ಬಯೋಡೈಜೆಸ್ಟರ್‌ನ ನಾಲ್ಕು, ಸಸ್ಯಜನ್ಯ ಕ್ರೀಟನಾಶಕ ಡ್ರಂ ಘಟಕಗಳು 100 ಇವೆ. ಎರೆಹುಳು ಗೊಬ್ಬರ ಘಟಕದಲ್ಲಿ ತ್ಯಾಜ್ಯ ಹಾಗೂ ಸೆಗಣಿ ಹಾಕಲಾಗುತ್ತದೆ. ಜಪಾನ್‌ ಮಾದರಿ ಘಟಕದಲ್ಲಿ ಪ್ಲಾಸ್ಟಿಕ್‌ ಹೊರತುಪಡಿಸಿ ತ್ಯಾಜ್ಯ ವಸ್ತುಗಳು, ಸೆಗಣಿ, ಗಂಜಲ ಎಲ್ಲವನ್ನೂ ಹಾಕಲಾಗುತ್ತದೆ. ಹಸುಗಳ ಸಂಖ್ಯೆ ಹೆಚ್ಚಾದ ಮೇಲೆ ಗೊಬ್ಬರದ ಪ್ರಮಾಣ ಹೆಚ್ಚಾಗಿ ಕೆಲವರು ಪ್ರತಿ ಕೆ.ಜಿಗೆ 6 ರೂಪಾಯಿಯಂತೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ. ಎರೆಹುಳುಗಳಿಗೂ ಬೇಡಿಕೆ ಇದೆ ಎನ್ನುತ್ತಾರೆ ಗ್ರಾಮಸ್ಥರು.

13 ಮನೆಗಳು ಗೋಬರ್‌ ಗ್ಯಾಸ್‌ ಘಟಕ ಹೊಂದಿವೆ. ಅದರಲ್ಲಿ ಕೆಲವು ಹಲವಾರು ವರ್ಷಗಳಿಂದ ಇವೆ. ಬ್ಯಾಂಕ್‌ ಸಬ್ಸಿಡಿ ಪಡೆದು 12 ಮನೆಗಳಲ್ಲಿ ಸೋಲಾರ್‌ ಅಳವಡಿಸಿಕೊಂಡಿದ್ದಾರೆ. ಮನೆಯಲ್ಲಿ ನಾಲ್ಕು ವಿದ್ಯುತ್‌ ದೀಪಗಳು ಯಾವಾಗಲೂ ಉರಿಯುತ್ತವೆ. ಶೇ90ರಷ್ಟು ಮನೆಗಳಲ್ಲಿ ಶೌಚಾಲಯವಿದೆ.

ಹೈನುಗಾರಿಕೆ ಜೋರು
ಸಾವಯವ ಗ್ರಾಮದ ಕೆಲಸ ಪೂರ್ಣಗೊಂಡ ಮೇಲೆ ಏನಾದರೂ ಮಾಡಬೇಕು ಎಂದು ವಿಕಸನ ಸಂಸ್ಥೆಯು, ನಬಾರ್ಡ್‌ ಜೊತೆಗೂಡಿ ಕಳೆದ ಒಂದು ವರ್ಷದಿಂದ ಕೃಷಿಯ ಜತೆಗೆ ಹೈನುಗಾರಿಕೆಗೆ ಒತ್ತು ನೀಡಿದೆ. ಹಸು ಕೊಳ್ಳಲೆಂದು 53 ಮಂದಿಗೆ ನಬಾರ್ಡ್‌ ವತಿಯಿಂದ ಎರಡು ಕಂತುಗಳಲ್ಲಿ ತಲಾ ಒಂದು ಲಕ್ಷ ರೂಪಾಯಿ ಸಾಲ ನೀಡಲಾಗಿದೆ.

ಹಸುಗಳ ಖರೀದಿಯಿಂದಾಗಿ ನಿತ್ಯ 300ರಿಂದ 400 ಲೀಟರ್‌ ಆಗುತ್ತಿದ್ದ ಹಾಲಿನ ಸಂಗ್ರಹವು 900ರ ಆಸು–ಪಾಸಿಗೆ ಹೆಚ್ಚಾಗಿದೆ. ದಿನನಿತ್ಯದ ಖರ್ಚು ಹಾಲಿನಲ್ಲಿಯೇ ಮುಗಿದು ಹೋಗುತ್ತಿದೆ. ಒಂದು ಹಿಡಿ ಅಜೋಲಾ ನೀಡಿದರೆ, ಒಂದು ಲೀಟರ್‌ನಷ್ಟು ಹಾಲು ಹೆಚ್ಚಾಗಿದೆ. ಹಸುಗಳ ಜತೆಗೆ ಗ್ರಾಮದಲ್ಲಿ ಕುರಿ, ಮೇಕೆ ಸಾಕಾಣಿಕೆಯೂ ನಡೆಯುತ್ತಿದೆ.

ಸಂಕಷ್ಟಗಳ ಬೆನ್ನಟ್ಟಿ...
ಸಾವಯವ ವಿಧಾನದಲ್ಲಿಯೇ ರಾಗಿ, ಭತ್ತ, ಅಲಸಂದೆ, ಹುಚ್ಚೆಳ್ಳು, ಹುರುಳಿ,  ಹಲಸು, ತೆಂಗು ಬೆಳೆಯಲಾಗುತ್ತಿದೆ. ಆದರೆ ಮಾರುಕಟ್ಟೆ ಕೊರತೆ ಇಲ್ಲಿನ ರೈತರನ್ನೂ ಬಿಟ್ಟಿಲ್ಲ. ಸಾವಯವ ಉತ್ಪನ್ನವನ್ನು ಮೊದಲಿಗೆ ಮೈಸೂರಿನ ಸಂಸ್ಥೆಯೊಂದಕ್ಕೆ ಮಾರಾಟ ಮಾಡಲಾಗುತ್ತಿತ್ತು. ಅಲ್ಲಿ ಹೆಚ್ಚಿನ ಬೆಲೆ ದೊರಕದ್ದರಿಂದ ನಿಲ್ಲಿಸಲಾಯಿತು. ಆ ನಂತರ ಮಾರುಕಟ್ಟೆ ಕಂಡುಕೊಂಡಿಲ್ಲ. ಹಾಗಾಗಿ ಸಾಮಾನ್ಯ ಮಾರುಕಟ್ಟೆಯಲ್ಲಿಯೇ ಸಾವಯವ ಉತ್ಪಾದಿತ ವಸ್ತುಗಳನ್ನೂ ಮಾರಾಟ ಮಾಡಲಾಗುತ್ತಿದೆ. ಅವುಗಳಿಗೆ ದೊರೆಯುವ ಬೆಲೆಯೇ ಇವುಗಳಿಗೂ ದೊರೆಯುತ್ತಿದೆ.

ಗಂಧದ ಕಡ್ಡಿ, ಮೇಣದ ಬತ್ತಿ, ಹಪ್ಪಳ, ಬಾಳೆನಾರಿನಿಂದ ವಿವಿಧ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಲಾಗಿತ್ತು. ಆದರೆ, ಮಾರುಕಟ್ಟೆ ಕಂಡುಕೊಳ್ಳದ ಕಾರಣ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಸಣ್ಣ ಪ್ರಮಾಣದ ಹಿಡುವಳಿ ಹೆಚ್ಚಾಗಿರುವುದರಿಂದ ಮನೆಯಲ್ಲಿ ಒಬ್ಬರು ಮಾತ್ರ ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು. ಹಾಗಾಗಿ ಗ್ರಾಮದ ಹಲವಾರು ಯುವಕರು ಕೆಲಸ ಹುಡುಕಿಕೊಂಡು ಮುಂಬೈ ಹಾಗೂ ಬೆಂಗಳೂರಿಗೆ ಹೋಗಿದ್ದಾರೆ. ಆದರೆ ಇಲ್ಲಿರುವ ರೈತರು ಮಾತ್ರ ಪ್ರಯೋಗವನ್ನು ಮಾಡುತ್ತಲೇ ಇದ್ದಾರೆ.

‘ಸಾವಯವ ಕೃಷಿ ಅಳವಡಿಸಿಕೊಂಡ ಮೇಲೆ ರಾಗಿ, ಭತ್ತದ ಇಳುವರಿ ಮೊದಲ ವರ್ಷ ಕಡಿಮೆಯಾಗಿತ್ತು. ಆದರೆ ಈಗ ಮಾಮೂಲಿ ಇಳುವರಿ ಬರುತ್ತಿದೆ. ಕೃಷಿ ವೆಚ್ಚದಲ್ಲಿ ರಾಸಾಯನಿಕ ಗೊಬ್ಬರಕ್ಕೆ ಬಳಸುತ್ತಿದ್ದ ಖರ್ಚು ಉಳಿತಾಯವಾಗಿದೆ. ಅಜೋಲಾ ಬೆಳೆಸುವುದರಿಂದ ಹೈನುಗಾರಿಕೆಯಲ್ಲಿ ಖರ್ಚೂ ಕಡಿಮೆಯಾಗಿದೆ. ಮಾರುಕಟ್ಟೆ ಒದಗಿಸಿ, ಹೆಚ್ಚಿನ ಬೆಲೆ ಸಿಕ್ಕರೆ ಇನ್ನೂ ಉತ್ತಮ’ ಎನ್ನುತ್ತಾರೆ ರೈತ ರಾಮಚಂದ್ರ.

‘ಭೂಮಿಯ ಫಲವತ್ತತೆ ಹೆಚ್ಚುವುದರಿಂದ ಮಳೆ ಸ್ವಲ್ಪ ವಿಳಂಬವಾದರೂ ಬೆಳೆ ಹಾಳಾಗುವುದಿಲ್ಲ. ಸಾವಯವ ಕೃಷಿಯಿಂದ ವಿಷಮುಕ್ತ ಆಹಾರ ದೊರೆಯುತ್ತದೆ. ಸ್ವಾವಲಂಬನೆಯ ಬದುಕಿನತ್ತ ಹೆಚ್ಚಿನ ಒತ್ತು ನೀಡಿದ್ದೇವೆ’ ಎನ್ನುತ್ತಾರೆ ರೈತ ಮಂಜೇಗೌಡ. ‘ವಿವಿಧೆಡೆಗಳಿಂದ ರೈತರು ಪಡೆದುಕೊಂಡಿರುವ ಸಾಲ ಸಾವಯವ ಹಾಗೂ ಇನ್ನಿತರ ಪ್ರಯೋಗಗಳಿಂದಾಗಿ ಕಾಲಕಾಲಕ್ಕೆ ಸರಿಯಾಗಿ ಸಂದಾಯವಾಗುತ್ತಿವೆ’ ಎನ್ನುವ ಮಾತು ವಿಕಸನ ಸಂಸ್ಥೆಯ ಪ್ರತಿನಿಧಿ ನಾಗೇಗೌಡ ಅವರದ್ದು.
*
ಸಾಲವಿದ್ದರೂ ಸೋತಿಲ್ಲ... 
ಸಾಲದಿಂದ ಇಲ್ಲಿನ ಎಲ್ಲ ರೈತರೂ ಮುಕ್ತರಾಗಿಲ್ಲ. ಸಾವಯವ ಕೃಷಿ ಹಾಗೂ ಹೈನುಗಾರಿಕೆಗೆ ಒತ್ತು ನೀಡಿದ ಮೇಲೆ ಕೈಸಾಲದಿಂದ ಬಹುತೇಕರು ಮುಕ್ತಿ ಪಡೆದಿದ್ದಾರೆ. ಹೆಚ್ಚಿನ ಬಡ್ಡಿ ತೆರುವುದು ತಪ್ಪಿದೆ. ಬ್ಯಾಂಕ್‌ ಹಾಗೂ ನಬಾರ್ಡ್‌ನಿಂದ ಸಾಲ ಪಡೆದಿದ್ದಾರೆ. ಮಹಿಳೆಯರು ಸ್ತ್ರೀಶಕ್ತಿ ಸಂಘ ಹಾಗೂ ಧರ್ಮಸ್ಥಳದ ಗ್ರಾಮೀಣ ಅಭಿವೃದ್ಧಿ ತಂಡಗಳಿಂದ ಸಾಲ ಪಡೆದು, ಹೈನುಗಾರಿಕೆಯಲ್ಲಿ ತೊಡಗಿಸಿದ್ದಾರೆ. ದುಡಿಮೆಗೆ ಹಣ ಬಳಸುತ್ತಿರುವುದರಿಂದ ಸಾಲ ಮರು ಪಾವತಿ ಸಾಮರ್ಥ್ಯ ಹೆಚ್ಚಳವಾಗಿದೆ. ಕಂತುಗಳನ್ನು ಸರಿಯಾಗಿ ಪಾವತಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT