ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷ ಜೈನ್ ಬಂಧನ

Last Updated 2 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಾಲದ ಮಿತಿಯನ್ನು ನಿಯಮಬಾಹಿರವಾಗಿ ಹೆಚ್ಚಿಸಲು ಎರಡು ಕಂಪೆನಿಗಳಿಂದ ₨50 ಲಕ್ಷ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಡಿಕೇಟ್‌ ಬ್ಯಾಂಕ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಎಸ್‌.ಕೆ.ಜೈನ್‌ ಅವರನ್ನು ಸಿಬಿಐ ಬೆಂಗಳೂರಿನಲ್ಲಿ ಶನಿವಾರ ಬಂಧಿಸಿದೆ.

ಪ್ರಮುಖ ರಾಷ್ಟ್ರೀಕೃತ ಬ್ಯಾಂಕೊಂದರ ಮುಖ್ಯಸ್ಥರ ಬಂಧನದ ಅಪರೂಪದ ವಿದ್ಯಮಾನ ಇದು. ಜೈನ್‌ ಮಾತ್ರವಲ್ಲದೆ ದೆಹಲಿ ಮೂಲದ ಭೂಷಣ್‌  ಉಕ್ಕು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ನೀರಜ್‌ ಸಿಂಘಲ್‌, ಪ್ರಕಾಶ್‌ ಇಂಡಸ್ಟ್ರೀಸ್‌ನ  ಸಿಎಂಡಿ  ವೇದ್‌ ಪ್ರಕಾಶ್‌ ಅಗರ್‌ವಾಲ್‌, ಚಾರ್ಟರ್ಡ್ ಅಕೌಂಟೆಂಟ್‌ ಪವನ್‌ ಬನ್ಸಲ್‌, ಮಧ್ಯಪ್ರದೇಶ ಕಾಂಗ್ರೆಸ್ ಕಾನೂನು ವಿಭಾ­ಗದ ಅಧ್ಯಕ್ಷ ವಿನೀತ್‌ ಗೋಧಾ ಮತ್ತು ಅವರ ಸಹೋದರ ಪುನೀತ್ ಗೋಧಾ, ವಿಜಯ್‌ ಪಹುಜಾ, ಪುರುಷೋತ್ತಮ ಲಾಲ್‌ ತೋತ್ಲಾನಿ ಮತ್ತು ಪಂಕಜ್‌ ಬನ್ಸಲ್‌ ಎಂಬುವವ­ರನ್ನು ಭೋಪಾಲ್‌ ಮತ್ತಿತರ ಕಡೆ ಸಿಬಿಐ ಬಂಧಿಸಿದೆ.

ಆರೋಪ ಏನು?: ಬೆಂಗಳೂರಿನಲ್ಲಿ ಉದ್ದಿಮೆ ಸ್ಥಾಪಿಸಲು  ಪಹುಜಾ ಅವರಿಗೆ ಸಾಲದ ಮಿತಿಯನ್ನು ₨200 ಕೋಟಿಗೆ ಹೆಚ್ಚಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ 50 ಲಕ್ಷ ಲಂಚವನ್ನು ಹವಾಲಾ ಜಾಲದ ಮೂಲಕ ಭೋಪಾಲ್‌ನಲ್ಲಿ ಪಾವತಿಸ­ಲಾಗಿದೆ ಎಂಬುದು ಆರೋಪ. ಈ ಲಂಚದ ಮಧ್ಯವರ್ತಿ­ಗಳಾದ ಗೋಧಾ ಸಹೋದರರು ಜೈನ್‌ ಅವರ ಸಮೀಪ ಬಂಧುಗಳು ಎನ್ನಲಾಗಿದೆ.

ಜೈನ್‌ ವಿರುದ್ಧ ಎರಡು ಪ್ರಕರಣಗಳನ್ನು ಸಿಬಿಐ ದಾಖಲಿಸಿದೆ. ಅವರ ಬಗ್ಗೆ ಸಂದೇಹ­ಗೊಂಡಿದ್ದ ಸಿಬಿಐ, ಅವರ ಚಲನವಲನಗಳ ಮೇಲೆ ಆರು ತಿಂಗಳಿಂದ ನಿಗಾ ಇರಿಸಿತ್ತು. ಜೈನ್‌ ಅವರ ಮನೆಯಲ್ಲಿ  21 ಲಕ್ಷ ನಗದು,   1.68 ಕೋಟಿ ಮೌಲ್ಯದ ಚಿನ್ನ ಹಾಗೂ  63 ಲಕ್ಷ ನಿಶ್ಚಿತ ಅವಧಿಯ ಠೇವಣಿ ದಾಖಲೆಗಳು ಸಿಕ್ಕಿವೆ   ಎನ್ನಲಾಗಿದೆ.‘ದೊಡ್ಡ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರ ಪ್ರಕರಣಗಳನ್ನು ಪತ್ತೆಹಚ್ಚುತ್ತೇವೆ ಎಂಬು­ದಕ್ಕೆ ಇದೊಂದು ನಿದರ್ಶನ’ ಎಂದು ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ, ಮುಂಬೈ, ಬೆಂಗಳೂರು ಮತ್ತು ಭೋಪಾಲ್‌ ನಗರಗಳ 20 ಕಡೆ ಸಿಬಿಐ ಶೋಧ ಕಾರ್ಯ ನಡೆಸಿ ದಾಖಲೆಗಳನ್ನು ಸಂಗ್ರಹಿಸಿದೆ.

ಅನಿರೀಕ್ಷಿತ 
ಉಡುಪಿ: ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷ ಎಸ್.ಕೆ. ಜೈನ್ ಅವ­ರನ್ನು ಸಿಬಿಐ ಬಂಧಿಸಿದ ಸುದ್ದಿ  ಮಣಿಪಾಲದಲ್ಲಿ­ರುವ ಬ್ಯಾಂಕಿನ ಪ್ರಧಾನ ಕಚೇರಿ ಸಿಬ್ಬಂದಿಗೆ ಅನಿರೀಕ್ಷಿತ­ವಾಗಿತ್ತು. ಈ ಸುದ್ದಿ ಬಂದ ಬಳಿಕವೂ ಬ್ಯಾಂಕಿನ ಪ್ರಧಾನ ಕಚೇರಿ ಎಂದಿನಂತೆಯೇ ಕಾರ್ಯ ನಿರ್ವಹಿಸಿತು. ಆದರೆ, ಕಚೇರಿ ಸಿಬ್ಬಂದಿ ಮಾತು ಮರೆತವರಂತೆ ಕಂಡು ಬಂದರು.

ಎಸ್.ಕೆ. ಜೈನ್ ಅವರು ಸಿಂಡಿಕೇಟ್ ಬ್ಯಾಂಕಿನ ಸಿಎಂಡಿ ಆಗಿ 2013ರ ಜುಲೈ 8ರಂದು ಅಧಿಕಾರ ವಹಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT