ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧುಗೆ ಹ್ಯಾಟ್ರಿಕ್ ಪ್ರಶಸ್ತಿಯ ಗರಿ

Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ಮಕಾವ್‌ (ಪಿಟಿಐ): ಭಾರತದ ಪಿ.ವಿ ಸಿಂಧು ಮಕಾವ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಸಿಂಧು 21–9, 21–23, 21–14ರಲ್ಲಿ ಆರನೇ ಶ್ರೇಯಾಂಕದ ಜಪಾನ್‌ನ ಮಿನಾತ್ಸು ಮಿತಾನಿ ಅವರನ್ನು ಮಣಿಸಿದರು.

ಒಂದು ಗಂಟೆ ಆರು ನಿಮಿಷ ನಡೆದ ಹಣಾಹಣಿಯಲ್ಲಿ ವಿಶ್ವದ 12ನೇ ರ್‍ಯಾಂಕ್‌ನ ಆಟಗಾರ್ತಿ ಸಿಂಧು ಅತ್ಯುತ್ತಮ ಸ್ಪ್ಯಾಷ್‌ ಹಾಗೂ ರಿಟರ್ನ್ಸ್‌ಗಳ ಮೂಲಕ ಗಮನ ಸೆಳೆದರು.

ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಸಿಂಧು ಬ್ರೇಕ್‌ ಪಾಯಿಂಟ್‌ ಪಡೆಯುವ ಮೂಲಕ 11–5 ರಲ್ಲಿ ಮುನ್ನಡೆ ಪಡೆದರು. ಮಿತಾನಿ ಅಂತಿಮ ಹಂತದವರೆಗೂ ತಿರುಗೇಟು ನೀಡಲು ಪ್ರಯತ್ನಿಸಿದರು. ನಿಖರ ಸ್ಮ್ಯಾಷ್‌ಗಳಿಂದ ಗಮನಸೆಳೆದ ಸಿಂಧು 19–9ರಲ್ಲಿ ಮುನ್ನಡೆ ಪಡೆದರು. ಕೆಲವು ಅನಗತ್ಯ ತಪ್ಪುಗಳಿಂದ ಮಿತಾನಿ ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರು.

ಎರಡನೇ ಗೇಮ್‌ನಲ್ಲೂ ಸಿಂಧು ಆತ್ಮವಿಶ್ವಾಸದಿಂದ ಮುನ್ನುಗಿದರು.  ಆದರೆ ಈ ಬಾರಿ ಮಿತಾನಿ 4–2ರ ಮುನ್ನಡೆ ಪಡೆದರು. ಸಿಂಧು ಕೆಲವು ತಪ್ಪು ನಿರ್ಧಾರಗಳಿಂದ ಮಿತಾನಿಗೆ ಮತ್ತೆ 10–9ರ ಮುನ್ನಡೆ ಬಿಟ್ಟುಕೊಟ್ಟರು.

ಬಳಿಕ ಚೇತರಿಸಿಕೊಂಡ ಸಿಂಧು 16–16ರಲ್ಲಿ ಸಮಬಲ ಮಾಡಿಕೊಂಡರು. 19–19ರಲ್ಲಿ ಸಮಬಲ ಹೊಂದಿದ್ದ ವೇಳೆ ಸಿಂಧು ಗೇಮ್‌ ಪಾಯಿಂಟ್‌ ಪಡೆಯುವ ಮೂಲಕ 21–20ರಲ್ಲಿ ಮುನ್ನಡೆ ಪಡೆದರು. ಬಳಿಕ ಚುರುಕಿನ ಆಟ ಆಡಿದ ಮಿತಾನಿ ಮತ್ತೊಂದು ಗೇಮ್‌ ಪಾಯಿಂಟ್‌ ಗಿಟ್ಟಿಸುವ ಮೂಲಕ ಎರಡನೇ ಗೇಮ್‌ ಜಯಿಸಿದರು.

ಮೂರನೇ ಗೇಮ್‌ನಲ್ಲಿ ಎಚ್ಚರಿಕೆಯಿಂದ ಆಡಿದ ಸಿಂಧು 5–3ರ ಮುನ್ನಡೆ ಪಡೆದರು. ಮಿತಾನಿ ಮತ್ತೆ ಅನಗತ್ಯ ತಪ್ಪುಗಳಿಂದ ಭಾರತದ ಆಟಗಾರ್ತಿಗೆ 9–4ರ ಮುನ್ನಡೆ ಬಿಟ್ಟುಕೊಟ್ಟರು. ಈ ಅವಕಾಶ ಬಳಸಿಕೊಂಡ ಸಿಂಧು ನಂತರ ಎಲ್ಲಿಯೂ ತಪ್ಪು ಮಾಡದೆ ಸುಲಭವಾಗಿ ನಿರ್ಣಾಯಕ ಗೇಮ್‌ ಗೆದ್ದುಕೊಳ್ಳುವ ಮೂಲಕ ಹ್ಯಾಟ್ರಿಕ್‌ ಸಾಧನೆಗೆ ಕಾರಣರಾದರು.

₹10 ಲಕ್ಷ ಬಹುಮಾನ: ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ ಅಧ್ಯಕ್ಷ ಅಖಿಲೇಶ್‌ ದಾಸ್‌ ಗುಪ್ತಾ ಅವರು ಪಿ.ವಿ ಸುಂಧು ಅವರಿಗೆ ₹10 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT