ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧೂ ಲಿಪಿ ಸಂಖ್ಯಾ ರೂಪಿ!

Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

ತೊಂಬತ್ತು ವರ್ಷಗಳ ಹಿಂದೆ ಸಿಂಧೂ ನಾಗರಿಕತೆ ಬೆಳಕಿಗೆ ಬಂದ ಲಾಗಾಯ್ತಿನಿಂದಲೂ ಅದರ ಲಿಪಿ ಒಂದು ಒಗಟಾಗಿ ಪರಿಣಮಿಸಿದೆ. ಪ್ರಾಕ್ತನ ಶಾಸ್ತ್ರದಲ್ಲಿ ಅತಿರಥ–ಮಹಾರಥರೆನಿಸಿದ ಹಲವು ದಿಗ್ಗಜರು ಸಿಂಧೂ ಲಿಪಿ ಕುರಿತು ಖಚಿತ ಅಭಿಪ್ರಾಯಕ್ಕೆ ಬರಲಾಗದೆ ಕೈಚೆಲ್ಲಿದ್ದಾರೆ.

ಆ ಲಿಪಿಯನ್ನು ಓದಲು ಅಸಾಧ್ಯವಾಗಿರುವುದು ಬಹುಮುಖ್ಯ ತೊಡಕಾಗಿದೆ. ಹೀಗಾಗಿ ಅದು ಏನು ಹೇಳುತ್ತದೆ ಎಂಬುದು ಯಕ್ಷಪ್ರಶ್ನೆಯೇ ಆಗಿಬಿಟ್ಟಿದೆ. ಕೆಲವು ಸಂಶೋಧಕರು ಆ ಲಿಪಿಯನ್ನು ಸಂಸ್ಕೃತದ ಮೂಲರೂಪ ಎಂದು ವ್ಯಾಖ್ಯಾನಿಸಿದರೆ, ಇನ್ನು ಕೆಲವರು ಅದಕ್ಕೆ ದ್ರಾವಿಡ ಭಾಷೆಗಳ ಹೋಲಿಕೆ ಕೊಟ್ಟಿದ್ದಾರೆ.

ಸಿಂಧೂ ಲಿಪಿ ಕುರಿತ ದಶಕಗಳ ಮಂಥನ ಇದುವರೆಗೆ ಯಾವ ‘ಅಮೃತ’ವನ್ನೂ ಹೊರಗೆ ತೆಗೆದಿಲ್ಲ. ಈ ಮಧ್ಯೆ ಸಿಂಧೂ ಲಿಪಿ ಮೇಲೆ ಹಲವು ವರ್ಷ ಸಂಶೋಧನೆ ನಡೆಸಿರುವ ವಿಜ್ಞಾನ ಇತಿಹಾಸಕಾರ ಬಿ.ವಿ. ಸುಬ್ಬರಾಯಪ್ಪ, ಅದು ಸಂಖ್ಯೆಗಳ ಗುಚ್ಛವೇ ಹೊರತು ಭಾಷೆಯಲ್ಲ ಎಂಬ ಅಭಿಪ್ರಾಯ ಮಂಡಿಸಿದ್ದಾರೆ.

ಆ ಮೂಲಕ ಚರ್ಚೆಗೆ ಹೊಸದೊಂದು ಆಯಾಮವನ್ನೇ ನೀಡಿದ್ದಾರೆ. ಕಾಕತಾಳೀಯ ಎನ್ನುವಂತೆ ಸಿಂಧೂ ನಾಗರಿಕತೆ ಬೆಳಕಿಗೆ ಬಂದ ಕಾಲಮಾನದಲ್ಲೇ ಜನಿಸಿದ ಸುಬ್ಬರಾಯಪ್ಪ, ಅದರ ಐತಿಹಾಸಿಕ ಆಯಾಮಗಳನ್ನು ವಿಶ್ಲೇಷಿಸುವಲ್ಲಿ ಬಲು ನಿಸ್ಸೀಮರು. ವಿಶೇಷವಾಗಿ ಸಿಂಧೂ ಲಿಪಿಗೆ ಸಂಬಂಧಿಸಿದಂತೆ ಅವರು ಮಾಡಿಟ್ಟುಕೊಂಡ ದೀರ್ಘ ಟಿಪ್ಪಣಿಗಳು ಬಲು ಕುತೂಹಲಕಾರಿಯಾಗಿವೆ.

ಭಾಷೆ ಹಾಗೂ ಸಂಖ್ಯೆಗಳು ಧುತ್ತೆಂದು ಉದ್ಭವಿಸಿಲ್ಲ ಅಥವಾ ಶೂನ್ಯದಿಂದ ಸೃಷ್ಟಿಯಾದವೂ ಅಲ್ಲ. ಅವುಗಳಿಗೆ ಮಾನವನೇ ಜನಕ. ಮಾನವ ಸಂಘಜೀವಿಯಾಗಿ ಒಂದು ಕಡೆ ಬದುಕು ಸಾಗಿಸಲು ಆರಂಭಿಸಿದ ಮೇಲೆ ಸಂವಹನ ಹಾಗೂ ಕ್ರಯ–ವಿಕ್ರಯಕ್ಕಾಗಿ ಭಾಷೆ ಮತ್ತು ಸಂಖ್ಯೆಗಳ ವ್ಯವಸ್ಥೆಗೆ ನಾಂದಿ ಹಾಡಿದ. ಆ ಭಾಷೆಗೆ ಲಿಪಿ ರೂಪುಗೊಂಡಿದ್ದು ಎಷ್ಟೋ ಶತಮಾನಗಳ ಬಳಿಕ. ಹೀಗಾಗಿ ಆದಿಮ ಕಾಲದಲ್ಲಿ ಚಿತ್ರ ಹಾಗೂ ಸಂಖ್ಯೆಗಳ ಮೂಲಕ ವಿವರ ದಾಖಲಿಸಲಾಗುತ್ತಿತ್ತು ಎನ್ನುವುದು ಸುಬ್ಬರಾಯಪ್ಪ ಅವರ ಖಚಿತ ಅಭಿಪ್ರಾಯವಾಗಿದೆ.

ಉಜ್ವಲ ನಾಗರಿಕತೆ
ಭಾರತೀಯ ಪುರಾತತ್ವ ಇಲಾಖೆಯ ಪ್ರಧಾನ ನಿರ್ದೇಶಕರಾಗಿದ್ದ ಸರ್‌ ಜಾನ್‌ ಮಾರ್ಷಲ್‌ ಅವರು 1924ರಲ್ಲಿ ‘ಇಲ್‌ಸ್ಟ್ರೇಟೆಡ್‌ ಲಂಡನ್‌ ನ್ಯೂಸ್‌’ ಪತ್ರಿಕೆಯಲ್ಲಿ ಬರೆದ ಉತ್ಖನನದ ಸುದೀರ್ಘ ಕಥಾನಕದಿಂದ ಉಜ್ವಲ ಸಿಂಧೂ ನಾಗರಿಕತೆ ಜಗತ್ತಿನ ಮುಂದೆ ಮೊಟ್ಟಮೊದಲಿಗೆ ಅನಾವರಣಗೊಂಡಿತು. ಪುರಾತತ್ವ ಇಲಾಖೆಯ ಸಂಶೋಧಕರ ತಂಡ ನಡೆಸಿದ ಉತ್ಖನನದಿಂದ ಹರಪ್ಪ ಮತ್ತು ಮೊಹೆಂಜೋದಾರೊ ನಗರಗಳು ಆಗ ಪತ್ತೆ ಆಗಿದ್ದವು.

ಜಗತ್ತಿನ ಮೂರು ಪುರಾತನ ನಾಗರಿಕತೆಗಳಲ್ಲಿ– ಮೆಸೊಪೊಟೋಮಿಯಾ ಹಾಗೂ ಈಜಿಪ್ಟ್‌ ಇನ್ನೆರಡು– ಸಿಂಧೂ ನಾಗರಿಕತೆಯೇ ವಯಸ್ಸಿನಲ್ಲಿ ಕಿರಿಯದು. ಆದರೆ, ವಿಸ್ತೀರ್ಣದಲ್ಲಿ ಇದು ಮಿಕ್ಕ ಎರಡಕ್ಕಿಂತಲೂ ದೊಡ್ಡದಾಗಿತ್ತು. 10 ಲಕ್ಷ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಈ ನಾಗರಿಕತೆ ಹರಡಿತ್ತು. ಸಿಂಧೂ ಕಣಿವೆಯಾಚೆಗೂ ಅದು ಪಸರಿಸಿತ್ತು.

ಭೂ ಉತ್ಖನನ ಹೆಚ್ಚುತ್ತಾ ಹೋದಂತೆ ಅಲ್ಲಿನ ಪರಿಪೂರ್ಣ ಜೀವನ ಸೌಕರ್ಯಗಳು ಸಹ ಒಂದೊಂದಾಗಿ ಕಾಣಿಸಿಕೊಳ್ಳುತ್ತಾ ಹೋಗಿದ್ದವು. ಸುಟ್ಟ ಇಟ್ಟಿಗೆಗಳಿಂದ ಸಾಲಾಗಿ ನಿರ್ಮಿಸಿದ್ದ ಮನೆಗಳು, ಅವುಗಳ ಸ್ನಾನಗೃಹಗಳಿಗೆ ಅಂತರಸಂಪರ್ಕ ಹೊಂದಿದ್ದ ಒಳಚರಂಡಿಗಳು, ಚೌಕಾಕಾರದ ಓಣಿಗಳು, ನೇರವಾದ ದಾರಿಗಳು, ಬೃಹದಾಕಾರದ ಉಗ್ರಾಣಗಳು... ಅಲ್ಲಿನ ಉಜ್ವಲ ನಾಗರಿಕತೆಗೆ ಸಾಕ್ಷ್ಯ ಒದಗಿಸಿದ್ದವು.

ಕಂಚು–ಹಿತ್ತಾಳೆ ತಂತ್ರಜ್ಞಾನ, ಹತ್ತಿ ಬಟ್ಟೆ ನೇಯ್ಗೆ ಕೌಶಲ ಅಲ್ಲಿನ ಜನಗಳಿಗೆ ಗೊತ್ತಿದ್ದ ಬಗೆಗೂ ದಾಖಲೆಗಳು ಸಿಕ್ಕಿದ್ದವು. ಈ ಉತ್ಖನನದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮುದ್ರೆಗಳು ಸಿಕ್ಕಿದ್ದು, ಅದರ ಮೇಲಿರುವ ಲಿಪಿಯೇ ಸಿಂಧೂ ಲಿಪಿ ಎಂದು ಹೆಸರಾಗಿದೆ. ಈ ಲಿಪಿಯನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾದರೆ ಸಿಂಧೂ ನಾಗರಿಕತೆ ಇತಿಹಾಸವನ್ನು ಸುಸ್ಪಷ್ಟವಾಗಿ ಕಟ್ಟಲು ಸಾಧ್ಯವಿದೆ.

ಭೇದಿಸಲಾಗದ ರಹಸ್ಯ
ಹಲವು ದಶಕಗಳಿಂದ ಇತಿಹಾಸಕಾರರು, ಭಾಷಾಶಾಸ್ತ್ರಜ್ಞರು ಹಾಗೂ ಪ್ರಾಕ್ತನ ಶಾಸ್ತ್ರಜ್ಞರನ್ನು ಒಳಗೊಂಡ ಬಹುದೊಡ್ಡ ವಿದ್ವಾಂಸರ ಪಡೆ ಸಾಕಷ್ಟು ಪ್ರಯತ್ನ ಹಾಕಿದ್ದರೂ ಆ ಲಿಪಿಯನ್ನು ಅರ್ಥೈಸಲು ಆಗಿಲ್ಲ. ರಹಸ್ಯವನ್ನು ಭೇದಿಸಲು ಸಾಧ್ಯವಾಗಿಲ್ಲ. ಸಿಂಧೂ ಲಿಪಿ ಸ್ವತಃ ಒಂದು ಭಾಷಾ ಬರಹವಾಗಿದೆ ಎನ್ನುವುದು ಬಹುತೇಕರ ಊಹೆ. ಪುರಾತತ್ವ ಶಾಸ್ತ್ರಜ್ಞ ಎಸ್‌.ಆರ್‌. ರಾವ್‌ ಅವರು ಆ ಲಿಪಿಯನ್ನು ಸಂಸ್ಕೃತದ ಮೂಲರೂಪ ಎಂದು ಕರೆದರೆ, ಸಂಶೋಧಕರಾದ ಆಸ್ಕೊ ಪರ್ಪೊಲಾ ಮತ್ತು ಐರಾವತಂ ಮಹದೇವನ್‌ ಅವರು ಅದೇ ಲಿಪಿಯಲ್ಲಿ ಮೂಲ ತಮಿಳು ಭಾಷೆಯನ್ನು ಕಂಡರು.

ಅಮೆರಿಕದ ವಿದ್ವಾಂಸರಾದ ಸ್ಟೀವ್‌ ಫಾರ್ಮರ್‌, ರಿಚರ್ಡ್‌ ಸ್ಪ್ರೋಟ್‌ ಮತ್ತು ಮೈಕೆಲ್‌ ವಿಸಲ್‌ ಅವರು 2004ರಲ್ಲಿ ಮಂಡಿಸಿದ ಸುದೀರ್ಘ ಸಂಶೋಧನಾ ಪ್ರಬಂಧದಲ್ಲಿ ಸಿಂಧೂ ಲಿಪಿಯನ್ನು ಒಂದು ಭಾಷೆಯಾಗಿ ಒಪ್ಪಿಲ್ಲ. ಇದಕ್ಕೆ ತದ್ವಿರುದ್ಧವಾದಂತಹ ವಾದ 2009ರಲ್ಲಿ ಬಂತು. ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ರಾಜೇಶ್‌ ರಾವ್‌, ಅವರ ತಂಡ ಮತ್ತು ಐರಾವತಂ ಮಹದೇವನ್‌ ಒಟ್ಟಾಗಿ ಸಿಂಧೂ ಲಿಪಿ ಒಂದು ಭಾಷೆ ಎನ್ನುವುದನ್ನು ಪುನಃ ಸಾಬೀತುಮಾಡಲು ಯತ್ನಿಸಿದರು.

ರಾಜೇಶ್‌ ರಾವ್‌ ಮತ್ತು ಅವರ ತಂಡದ ಸಂಶೋಧನೆಯನ್ನು ರಿಚರ್ಡ್‌ ಸ್ಪ್ರೋಟ್‌ ಸೈದ್ಧಾಂತಿಕವಾಗಿ ಅಲ್ಲಗಳೆದರು. ವಿವಿಧ ಸಂಸ್ಕೃತಿಗಳಿಂದ ಭಾಷೆರಹಿತ ಸಂಕೇತಗಳ ಲಿಪಿ ಸಂಗ್ರಹಿಸಿದ ಅವರು, ಸಿಂಧೂ ನಾಗರಿಕತೆಯಲ್ಲಿ ಸಿಕ್ಕ ಮುದ್ರೆಗಳ ಚಿತ್ರ ಲಿಪಿಯನ್ನು ಜತೆಗೆ ಸೇರಿಸಿಕೊಂಡು ತಮಿಳೂ ಸೇರಿದಂತೆ 14 ಭಾಷೆಗಳ ಬರಹದೊಂದಿಗೆ ತುಲನೆ ಮಾಡಿದರು. ಕಂಪ್ಯೂಟರ್‌ ಸಹಾಯದಿಂದ ನಡೆದ ಈ ಪ್ರಯೋಗದಲ್ಲಿ ಸಿಂಧೂ ಲಿಪಿ, ಯಾವ ಭಾಷೆಯ ಮೂಲ ಬರಹದೊಂದಿಗೂ ತಾಳೆ ಆಗಲಿಲ್ಲ. ಹೀಗಾಗಿ ಈ ಲಿಪಿ ಭಾಷೆಯಲ್ಲ ಎಂಬುದನ್ನು ಅವರು ಪುನಃ ಒತ್ತಿ ಹೇಳಿದರು.

ಹಳೆಯ ಜಾಡು
ಸಿಂಧೂ ಲಿಪಿಗೆ ಸಂಬಂಧಿಸಿದಂತೆ ಇದುವರೆಗೆ ನಡೆದ ಬಹುತೇಕ ಎಲ್ಲ ಸಂಶೋಧನೆಗಳು ಅದೊಂದು ಭಾಷಾ ಲಿಪಿ ಎಂಬ ಪೂರ್ವ ನಿರ್ಧರಿತ ಜಾಡಿನಲ್ಲೇ ಸಾಗಿವೆ. ಬಹುಕಾಲದವರೆಗೆ ಲಿಪಿಯನ್ನೇ ಹೊಂದಿರದಿದ್ದ ಹಲವು ಭಾಷೆಗಳಿವೆ (ಉದಾಹರಣೆಗೆ ವೈದಿಕ ಸಾಹಿತ್ಯ). ಈ ಹಿಂದಿನ ಸಂಶೋಧನಾ ಪ್ರಕ್ರಿಯೆಯಲ್ಲಿ ಮುದ್ರೆಗಳಲ್ಲಿರುವ ಲಿಪಿಗಷ್ಟೇ ಗಮನ ಕೇಂದ್ರೀಕರಿಸಲಾಗಿತ್ತು.

ಅದೇ ಚಿತ್ರರೂಪದಲ್ಲಿದ್ದ ಲಿಪಿಯನ್ನು ಸಂಪೂರ್ಣ ಗೌಣವಾಗಿ ಕಂಡು, ಮುದ್ರೆಗಳಲ್ಲಿದ್ದ ಪ್ರಾಣಿಗಳ ಚಿತ್ರ ಹಾಗೂ ಅವುಗಳ ಮುಂದಿದ್ದ ಆಕೃತಿಗಳನ್ನು ಗಣನೆಗೆ ತೆಗೆದುಕೊಂಡಿರಲೇ ಇಲ್ಲ. ಹೀಗಾಗಿ ಸೈದ್ಧಾಂತಿಕ ದೃಷ್ಟಿಯಿಂದ ಅದೊಂದು ಅಪರಿಪೂರ್ಣ ನಡೆಯಾಗಿತ್ತು ಎನ್ನುತ್ತಾರೆ ಸುಬ್ಬರಾಯಪ್ಪ. ಸಿಂಧೂ ನಾಗರಿಕತೆಯಲ್ಲಿ ದೊರೆತ ಬಹುತೇಕ ಮುದ್ರೆಗಳು ಸಮಕಾಲೀನವಾದವು ಎನ್ನುವ ಸಾಮಾನ್ಯ ಅಭಿಪ್ರಾಯಕ್ಕೆ ಸಂಶೋಧಕರು ಬಂದದ್ದು ಸಹ ಸಮಂಜಸವಲ್ಲ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.

ಮುದ್ರೆಗಳಲ್ಲಿರುವ ಪ್ರಾಣಿಗಳು ಹೇಳುವುದೇನು, ಅವುಗಳ ಮುಂದಿರುವ ಸಂಕೇತಗಳು ಬಚ್ಚಿಟ್ಟುಕೊಂಡ ಗುಟ್ಟು ಯಾವುದು ಎಂಬ ವಿಷಯವಾಗಿ ಸುಬ್ಬರಾಯಪ್ಪ ಅವರಲ್ಲಿ ವ್ಯಕ್ತವಾದ ಕುತೂಹಲ ಅವರನ್ನು ಸಂಶೋಧನೆಗೆ ಧುಮುಕುವಂತೆ ಮಾಡಿದೆ. ಅವರ ಶೋಧದ ಟಿಪ್ಪಣಿಗಳು ಇಂತಿವೆ:

ಸಿಂಧೂ ನಾಗರಿಕತೆ ಇದ್ದ ತಾಣಗಳಲ್ಲಿ (ಭಾರತ ಹಾಗೂ ಪಾಕಿಸ್ತಾನ) ಸಿಕ್ಕ ಮುದ್ರೆಗಳು ಕೃಷಿ ಉತ್ಪಾದನೆ ಮತ್ತು ನಿರ್ವಹಣೆ ಲೆಕ್ಕಾಚಾರದ ಟಿಪ್ಪಣಿಗಳಂತೆ ಕೆಲಸ ಮಾಡಿದ ಎಲ್ಲ ಕುರುಹುಗಳಿವೆ. ಆಗಿನ ಕಾಲದಲ್ಲಿ ಕೃಷಿ ಮತ್ತು ಪಶು ಸಂಗೋಪನೆಯೇ ಮುಖ್ಯ ವೃತ್ತಿಯಾಗಿತ್ತು. ಅದರ ಲೆಕ್ಕಾಚಾರ ಇಡಲು ದಶಮಾನ–ಸಂಕಲನ–ಗುಣಕಾರದ ಗಣಿತ ಪದ್ಧತಿ ಚಾಲ್ತಿಯಲ್ಲಿತ್ತು.

ಬಾರ್ಲಿ, ಗೋಧಿ, ಹತ್ತಿ ಆಗಿನ ಮುಖ್ಯ ಬೆಳೆಯಾಗಿತ್ತು. ಉಗ್ರಾಣಗಳಲ್ಲಿ ಧಾನ್ಯ ಹಾಗೂ ಹತ್ತಿ ಸಂಗ್ರಹ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಸಂಕೇತಿಸಲು ಅಲಂಕಾರಿಕ ಪ್ರಾಣಿಯಾದ ಯೂನಿಕಾರ್ನ್‌ (ಏಕ ಶೃಂಗಿ, ಒಕ್ಕೊಂಬಿ) ಚಿತ್ರ ಬಿಡಿಸಲಾಗಿತ್ತು. ಅದರ ಮುಂದಿದ್ದ ತೆನೆ ಚಿತ್ರ ಯಾವ ಧಾನ್ಯದ ಸಂಗ್ರಹ ಎಂಬುದನ್ನು ಸಂಕೇತಿಸುತ್ತಿತ್ತು. ತೆನೆ ನೇರವಾಗಿದ್ದರೆ ಅದು ಬಾರ್ಲಿ ಎಂದರ್ಥ. ಆ ಬಾರ್ಲಿಯಲ್ಲೂ ಎರಡು, ನಾಲ್ಕು ಹಾಗೂ ಆರು ಪಂಕ್ತಿಗಳ ತೆನೆಗಳು ಇರುತ್ತಿದ್ದವು.

ಪಂಕ್ತಿಗಳ ಈ ವಿವರವನ್ನು ಅಷ್ಟೇ ಗೆರೆ ಎಳೆಯುವ ಮೂಲಕ ಚಿತ್ರಿಸಲಾಗುತ್ತಿತ್ತು. ತೆನೆ ಅಂಕುಡೊಂಕಾಗಿದ್ದರೆ ಅದು ಗೋಧಿ ಧಾನ್ಯದ ದ್ಯೋತಕವಾಗಿತ್ತು. ಎತ್ತುಗಳು, ಎಮ್ಮೆಗಳು ಹಾಗೂ ಖಡ್ಗಮೃಗಗಳನ್ನೂ ಮುದ್ರೆಗಳಲ್ಲಿ ಬಳಕೆ ಮಾಡಲಾಗಿದೆ. ಆಗಿನ ಕೃಷಿ ಚಟುವಟಿಕೆ ವ್ಯವಸ್ಥೆ ಮೇಲೆ ಈ ಚಿತ್ರಗಳು ಬೆಳಕು ಚೆಲ್ಲುತ್ತವೆ. ಮುದ್ರೆಗಳಲ್ಲಿ ಒಂದೊಂದು ಸಂಕೇತವೂ 3–4 ಸಲ ಪುನರಾವರ್ತನೆ ಆಗಿದ್ದು, ಅಲ್ಲಿರುವುದು ಸಂಖ್ಯೆಗಳ ಮೌಲ್ಯವೇ  ಹೊರತು ಭಾಷಾ ಅಭಿವ್ಯಕ್ತಿಯಲ್ಲ ಎನ್ನುವುದಕ್ಕೆ ಮತ್ತೊಂದು ಪುರಾವೆಯಾಗಿದೆ.

ಸಸ್ಯಶಾಸ್ತ್ರಜ್ಞರ ಜತೆ ಸುದೀರ್ಘ ಸಮಾಲೋಚನೆ ನಡೆಸಿ, ಆಗಿನ ದಿನಗಳ ಬೆಳೆ ಪದ್ಧತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಅಭಿಪ್ರಾಯಕ್ಕೆ ಬರಲಾಗಿದೆ. ಕಣಗಳಲ್ಲಿ ರಾಶಿ ಮಾಡುವಾಗ, ಬೃಹದಾಕಾರದ ಉಗ್ರಾಣಗಳಲ್ಲಿ ಧಾನ್ಯ ಶೇಖರಿಸಿ ಇಡುವಾಗ ಅವುಗಳ ಗುಣಲಕ್ಷಣಗಳಿಗೆ ಅನುಗುಣವಾಗಿ ವರ್ಗೀಕರಣ ಮಾಡಲಾಗುತ್ತಿತ್ತು. ಈ ವಿಧದ 1,100ಕ್ಕೂ ಅಧಿಕ ಮುದ್ರೆಗಳು ಹರಪ್ಪ ಸಂಸ್ಕೃತಿಯಲ್ಲಿ ಸಿಕ್ಕಿವೆ. ಬಟಾಣಿ, ಎಳ್ಳು, ಖರ್ಜೂರಗಳನ್ನೂ ಆಗ ಬೆಳೆದ ಮಾಹಿತಿ ಇದೆ. ಸುಮಾರು 60 ವಿಧದ ಸಂಖ್ಯಾತ್ಮಕ ವಿವರಣೆ ಈ ಮುದ್ರೆಗಳಲ್ಲಿದೆ.

ಸಿಂಧೂ ಲಿಪಿ ಕುರಿತಂತೆ ಮಂಡಿಸಲಾದ ಈ ಸಂಖ್ಯಾತ್ಮಕ ಗ್ರಹಿಕೆ ಕುರಿತಂತೆ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ), ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತು ಮತ್ತು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಗಳು ಒಟ್ಟಾಗಿ ವೈಜ್ಞಾನಿಕವಾಗಿ ಒರೆಗೆ ಹಚ್ಚುವ ಕೆಲಸ ಮಾಡಬೇಕು ಎಂಬ ಆಶಯ ಸುಬ್ಬರಾಯಪ್ಪ ಅವರದಾಗಿದೆ.
*
ಹೆಮ್ಮೆಯ ಇತಿಹಾಸಕಾರ
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಬಿದರೆ ಗ್ರಾಮದ ಬಿ.ವಿ. ಸುಬ್ಬರಾಯಪ್ಪ ಕನ್ನಡ ನಾಡು ಕಂಡ ಅನನ್ಯ ವಿಜ್ಞಾನ ಇತಿಹಾಸಕಾರ. ಓದಿದ್ದು ರಸಾಯನ ಶಾಸ್ತ್ರವಾದರೂ ಪ್ರಾಕ್ತನಶಾಸ್ತ್ರದ ಮೇಲೂ ಅವರ ಪ್ರೀತಿ ಬೆಳೆಯಿತು. ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯಲ್ಲಿ ಕಾರ್ಯ ನಿರ್ವಹಿಸುವಾಗ ಓರಿಯಂಟಲ್‌ ಲೈಬ್ರರಿಯೇ ಅವರ ಮನೆಯಾಗಿತ್ತು.

ಪುರಾತನ ದಾಖಲೆಗಳ ಆಗರವಾದ ಈ ಗ್ರಂಥಾಲಯದಲ್ಲಿ ಅವರು ನಿತ್ಯ ಹಲವು ಗಂಟೆಗಳ ಕಾಲ ಅಧ್ಯಯನ ನಡೆಸುತ್ತಿದ್ದರು. ಪುರಾತತ್ವ ಸಂಗತಿಗಳ ಮೇಲಿನ ಅವರ ಅಪರಿಮಿತ ಪ್ರೀತಿ ಅವರನ್ನು ಭಾರತೀಯ ರಾಷ್ಟ್ರೀಯ ಇತಿಹಾಸ ಆಯೋಗದವರೆಗೆ ಮುನ್ನಡೆಸಿತು. ಅದರ ಮೊದಲ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರದ ಅವಧಿಯನ್ನು ತವರಿನಿಂದ ಆಚೆಯೇ ಕಳೆದರು.

ಅಂತರರಾಷ್ಟ್ರೀಯ ಇತಿಹಾಸ ಮತ್ತು ತತ್ವಜ್ಞಾನ ಒಕ್ಕೂಟದ ಮೊದಲ ಪಾಶ್ಚಿಮಾತ್ಯೇತರ ಅಧ್ಯಕ್ಷರಾದ ಹಿರಿಮೆಯೂ ಅವರದಾಗಿದೆ. ಪ್ರತಿಷ್ಠಿತ ಕೋಪರ್ನಿಕಸ್‌ ಪ್ರಶಸ್ತಿ ಪುರಸ್ಕೃತರಾದ ಅವರು, ಇಟಲಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪಡೆದಿದ್ದಾರೆ. ನಿವೃತ್ತಿ ಬಳಿಕ ತವರಿಗೆ ವಾಪಸಾದ ಅವರು ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (ನಿಯಾಸ್‌)ಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ಇತಿಹಾಸವನ್ನು ಬರೆದವರೂ ಇವರೇ. 90 ವರ್ಷದ ಈ ಇಳಿ ವಯಸ್ಸಿನಲ್ಲೂ ಸಂಶೋಧನೆ–ಅಧ್ಯಯನ–ಬರಹ ಪ್ರವೃತ್ತಿಯನ್ನು ಬಿಟ್ಟಿಲ್ಲ.

‘ಹಿಸ್ಟರಿ ಆಫ್‌ ಸೈನ್ಸ್‌’, ‘ಫಿಲಾಸಫಿ ಅಂಡ್‌ ಕಲ್ಚರ್‌ ಇನ್‌ ಇಂಡಿಯನ್‌ ಸಿವಿಲೈಸೆಷನ್‌’, ‘ಮೆಡಿಸಿನ್‌ ಅಂಡ್‌ ಲೈಫ್‌ ಸೈನ್ಸ್ ಇನ್‌ ಇಂಡಿಯಾ’, ‘ಕೆಮಿಸ್ಟ್ರಿ ಅಂಡ್‌ ಕೆಮಿಕಲ್‌ ಟೆಕ್ನಿಕ್ಸ್‌ ಇನ್‌ ಇಂಡಿಯಾ’, ‘ಇಂಡಿಯನ್‌ ಪರ್‌ಸ್ಪೆಕ್ಟಿವ್‌ ಇನ್‌ ಫಿಸಿಕಲ್‌ ವರ್ಲ್ಡ್‌’, ‘ಇಂಡಿಯನ್‌ ಆಸ್ಟ್ರೊನಮಿ’ ಸೇರಿದಂತೆ 20ಕ್ಕೂ ಅಧಿಕ ಗ್ರಂಥಗಳನ್ನು ಬರೆದಿದ್ದಾರೆ. ಅವುಗಳೆಲ್ಲ ಭಾರತದ ವಿಜ್ಞಾನ ಮತ್ತು ಪುರಾತತ್ವ ಅಧ್ಯಯನ ಮಾಡುವವರಿಗೆ ಆಕರ ಗ್ರಂಥಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT