ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಗೊಂದಲಗಳಿಗೆ ಪರಿಹಾರ

‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳಕ್ಕೆ ವಿದ್ಯಾರ್ಥಿಗಳು, ಪೋಷಕರ ಲಗ್ಗೆ
Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳಕ್ಕೆ ಭಾನುವಾರ ಬರುವಾಗ ಆ ವಿದ್ಯಾರ್ಥಿಗಳ ಮನದಲ್ಲಿ ಬರಿ ಗೊಂದಲಗಳೇ ತುಂಬಿದ್ದವು. ಆದರೆ, ಮೇಳದಿಂದ ವಾಪಸ್‌ ಹೋಗುವಾಗ ಅಂತಹ ಗೊಂದಲಗಳೆಲ್ಲ ಮಂಜಿನಂತೆ ಕರಗಿ ಹೋಗಿದ್ದವು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಸಮೂಹ ನಗರದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಮೈದಾನದಲ್ಲಿ ಆಯೋಜಿಸಿದ್ದ ‘ಎಜುವರ್ಸ್‌’ 8ನೇ ಅಧ್ಯಾಯದ ‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳದ ಅಂತಿಮ ದಿನವಾದ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಬಂದು ಮಾಹಿತಿ ಪಡೆದರು.

ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಮುಂದೆ ಹಲವು ಪ್ರಶ್ನೆಗಳಿದ್ದವು. ಹೀಗಾಗಿ ಪ್ರಶ್ನೆಗಳ ಸುರಿಮಳೆಯೇ ಅಲ್ಲಿ ಸುರಿಯಿತು. ಪ್ರತಿಯೊಬ್ಬರ ಪ್ರಶ್ನೆಗೂ ತಾಳ್ಮೆಯಿಂದ ಉತ್ತರಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಪಿಆರ್‌ಒ ಎ.ಎಸ್‌.ರವಿ ಅವರು ಎಲ್ಲರ ಗೊಂದಲವನ್ನು ನಿವಾರಣೆ ಮಾಡಿದರು.

ಮೇಳಕ್ಕೆ ಬಂದಿದ್ದ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ನಿರ್ವಹಣಾ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆಯಲು ಉತ್ಸುಕರಾಗಿದ್ದರು. ಮಳಿಗೆಗಳಲ್ಲಿದ್ದ ಮಾಹಿತಿ ಕೈಪಿಡಿಯನ್ನು ತೆಗೆದುಕೊಂಡ ವಿದ್ಯಾರ್ಥಿಗಳು ಯಾವ ಕೋರ್ಸ್‌ ಸೇರಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದರು.

ಮೇಳದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 70ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮಳಿಗೆಗಳನ್ನು ತೆರೆದಿದ್ದವು. ಮಳಿಗೆಗಳಲ್ಲಿದ್ದ ಕಾಲೇಜಿನ ಉಪನ್ಯಾಸಕರು, ನಿರ್ದೇಶಕರು ಹಾಗೂ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್‌ಗಳ ಬಗ್ಗೆ ವಿವರಿಸಿದರು.

ಸಿಇಟಿ ಗೊಂದಲ: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿಇಟಿ ಬರೆದಿರುವ, ಮುಂದಿನ ವರ್ಷ ಸಿಇಟಿ ಬರೆಯಲಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಎ.ಎಸ್‌. ರವಿ ಅವರು ಸಿಇಟಿ ಕೌನ್ಸೆಲಿಂಗ್‌ ಹಾಗೂ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾತನಾಡಿದರು. ದಾಖಲಾತಿ ಪರಿಶೀಲನೆ ವೇಳೆ ತರಬೇಕಿರುವ ದಾಖಲೆಗಳು, ಮೀಸಲಾತಿ ಸೌಲಭ್ಯ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು, ಸೀಟ್‌ ಮ್ಯಾಟ್ರಿಕ್ಸ್‌, ಆಪ್ಶನ್‌ ಎಂಟ್ರಿ ಸೇರಿದಂತೆ ಹಲವು ಹಂತಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಶ್ನೆ ಕೇಳಲು ಪೋಷಕರು, ವಿದ್ಯಾರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಸಭಾ ಕಾರ್ಯಕ್ರಮ ಮುಗಿದ ಬಳಿಕವೂ ತಮಗಿದ್ದ ಗೊಂದಲ ಪರಿಹರಿಸಿಕೊಳ್ಳಲು ರವಿ ಅವರ ಸುತ್ತುವರೆದರು. ಅವರಿಂದ ಸೂಕ್ತ ಮಾಹಿತಿ ಪಡೆದ ಪೋಷಕರು, ವಿದ್ಯಾರ್ಥಿಗಳು ನಿರಾಳರಾದರು.

ಉದ್ಯೋಗದ ಸೃಷ್ಟಿಕರ್ತರಾಗಿ...
‘ನೀವು ಕೇವಲ ಉದ್ಯೋಗ ಆಕಾಂಕ್ಷಿಗಳಾಗಬೇಡಿ. ಉದ್ಯೋಗದ ಸೃಷ್ಟಿಕರ್ತರಾಗಿ’ ಎಂದು ಡೆಕ್ಕನ್‌ ಸೆಂಟರ್‌ ಫಾರ್‌ ಇನೋವೇಷನ್‌ ಅಂಡ್‌ ಡಿಸೈನ್‌ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಅರವಿಂದ್‌ ಲೋದಾಯ ಹೇಳಿದರು.

‘ಉದ್ಯಮ ಸ್ಥಾಪಿಸಲು ಅಥವಾ ವ್ಯಾಪಾರ– ವ್ಯವಹಾರ ನಡೆಸಲು ಹೆಚ್ಚಿನ ಹಣದ ಅಗತ್ಯವಿಲ್ಲ. ಮೊಬೈಲ್‌ ಆ್ಯಪ್‌ಗಳ ಮೂಲಕವೂ ಉದ್ಯಮವನ್ನು ಮುನ್ನಡೆಸಬಹುದು. ಒಂದು ವೇಳೆ ಇದರಲ್ಲಿ ನೀವು ಯಶಸ್ವಿಯಾಗದಿದ್ದರೆ, ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸುವುದಿಲ್ಲ’ ಎಂದರು.

‘ಚಿಕ್ಕ ವಯಸ್ಸಿನಲ್ಲೇ ಹೊಸ ಆವಿಷ್ಕಾರಗಳನ್ನು ಮಾಡಬೇಕು. ನಿಮ್ಮ ಪ್ರಯತ್ನವು ವಿಫಲವಾದರೂ ಮುಂದಿನ ಹಾದಿಯತ್ತ ಹೊರಳಲು ಸಹಕಾರಿ ಆಗುತ್ತದೆ. ಜನರ ನಾಡಿಮಿಡಿತವನ್ನು ಅರಿತು ಅವರಿಗೆ ಏನು ಬೇಕೋ ಅದನ್ನು ನೀಡಬೇಕು. ತಂದೆ– ತಾಯಿಗಳು ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು’ ಎಂದು ಸಲಹೆ ನೀಡಿದರು.

ಎ.ಎಸ್‌.ರವಿ ಮಾತನಾಡಿ, ‘ಜೂನ್‌ 3ರಿಂದ ದಾಖಲಾತಿ ಪರಿಶೀಲನೆ ನಡೆಯಲಿದೆ. ರಾಜ್ಯದಲ್ಲಿ 15 ನೋಡಲ್‌ ಕೇಂದ್ರಗಳಿದ್ದು, ಯಾವ ಕೇಂದ್ರದಲ್ಲಿ ಬೇಕಾದರೂ ದಾಖಲೆಗಳನ್ನು ಸಲ್ಲಿಸಬಹುದು. ಮೂಲ ದಾಖಲೆಗಳ ಜತೆಗೆ ಜೆರಾಕ್ಸ್‌ ಪ್ರತಿಗಳು ಹಾಗೂ ಮೀಸಲಾತಿ ಬಯಸುವವರು ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು.

ಇದಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಂಡ ಬಳಿಕವಷ್ಟೇ ನೋಡಲ್‌ ಕೇಂದ್ರಗಳಿಗೆ ಭೇಟಿ ನೀಡಬೇಕು’ ಎಂದು ಸಲಹೆ ನೀಡಿದರು. ‘ಹೈದರಾಬಾದ್‌ ಕರ್ನಾಟಕ  ಪ್ರದೇಶಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ತಂದೆ–ತಾಯಿ ಈ ಭಾಗದಲ್ಲಿ ವಾಸವಾಗಿದ್ದು, ವಿದ್ಯಾರ್ಥಿಯು ಬೆಂಗಳೂರು ಅಥವಾ ಯಾವುದೇ ನಗರದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಅವರು ಮೀಸಲಾತಿ ಪಡೆಯಲು ಅರ್ಹರಾಗಿರುತ್ತಾರೆ’ ಎಂದರು.

ಏಳು ಸಾವಿರ ಮಂದಿ ಭೇಟಿ
ಶನಿವಾರ 850 ವಿದ್ಯಾರ್ಥಿಗಳ ಜತೆಗೆ ಸುಮಾರು ಒಂದೂವರೆ ಸಾವಿರ ಮಂದಿ ಪೋಷಕರು ಹಾಗೂ ಭಾನುವಾರ 1,600 ವಿದ್ಯಾರ್ಥಿಗಳ ಜತೆಗೆ ಸುಮಾರು ಮೂರು ಸಾವಿರ ಮಂದಿ ಪೋಷಕರು ಮೇಳಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ಎರಡು ದಿನ ನಡೆದ ಮೇಳಕ್ಕೆ ಸುಮಾರು ಏಳು ಸಾವಿರ ಮಂದಿ ಭೇಟಿ ನೀಡಿದಂತಾಗಿದೆ.

‘ಸಿಇಟಿ ಬಗ್ಗೆ ಸ್ಪಷ್ಟ ಮಾಹಿತಿ’
ಸಿಇಟಿ ಮಾಹಿತಿ ಪುಸ್ತಿಕೆಯಲ್ಲಿನ ವಿವರಗಳನ್ನು ಓದಿದೆ. ಆದರೆ, ಸರಿಯಾಗಿ ಅರ್ಥವಾಗಲಿಲ್ಲ. ಮೇಳದಲ್ಲಿ ಭಾಗವಹಿಸಿದ ಬಳಿಕ ಸಿಇಟಿ ಬಗ್ಗೆ ಸ್ಪಷ್ಟ ಚಿತ್ರಣ ಮೂಡಿತು
– ಎಂ. ನಿಶ್ಚಿತಾ,ಜಯನಗರ

***
ವೈದ್ಯೆ ಆಗುವ ಕನಸಿದೆ. ಸಿಇಟಿ ಬರೆದಿದ್ದೇನೆ.  ನೀಟ್ ಪರೀಕ್ಷೆ ಬಗ್ಗೆ ಮಾಹಿತಿ ಬೇಕಿತ್ತು. ಅದಕ್ಕಾಗಿ ಮೇಳದಲ್ಲಿ ಭಾಗವಹಿಸಿದೆ. ನನ್ನ ಗೊಂದಲವನ್ನು ತಜ್ಞರು ಬಗೆಹರಿಸಿದರು
– ಸಿ. ಸಿಂಚನಾ,  ನಾಗರಬಾವಿ

***
ಸಿಇಟಿ ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಸಿಕ್ಕಿತು. ನನ್ನ ಮಗ ಈಗ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. ಮುಂದಿನ ವರ್ಷ ಸಿಇಟಿ ಬರೆಯಲು ಬೇಕಾದ ಮಾರ್ಗದರ್ಶನ ಮೇಳದಿಂದ ದೊರೆಯಿತು. ಇಂತಹ ಮೇಳ ಆಯೋಜಿಸಿದ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗೆ ಕೃತಜ್ಞತೆಗಳು
– ವಿಜಯಾ, ಬನಶಂಕರಿ

***
ಅಧ್ಯಯನ ಪ್ರಮಾಣಪತ್ರ, ಸೀಟ್‌ ಮ್ಯಾಟ್ರಿಕ್ಸ್‌ ಬಗ್ಗೆ ಗೊಂದಲವಿತ್ತು. ಅದು ಬಗೆಹರಿಯಿತು. ಸಿಇಟಿ ಕೌನ್ಸೆಲಿಂಗ್‌ ಕುರಿತ ಪ್ರತಿ ಹಂತದ ಮಾಹಿತಿಯನ್ನು ತಜ್ಞರು ಸವಿವರವಾಗಿ ತಿಳಿಸಿಕೊಟ್ಟರು
- ಡಿ.ರಕ್ಷಿತ್‌, ಜೆ.ಪಿ.ನಗರ

***
ಪೋಷಕರಿಗೆ ಮಕ್ಕಳ ಭವಿಷ್ಯದ್ದೇ ಚಿಂತೆ. ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಹೊಣೆ ಇರುತ್ತದೆ. ನನ್ನ ಮಗಳು ಸಿಇಟಿ ಬರೆದಿದ್ದಾಳೆ. ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲಕ್ಕೆ ಇಲ್ಲಿ ಪರಿಹಾರ ಸಿಕ್ಕಿತು
– ರಘು ಪುರುಷೋತ್ತಮ್‌, ಬಸವನಗುಡಿ

***
ನಾನು ಸಿಇಟಿ, ಕಾಮೆಡ್‌–ಕೆ ಪರೀಕ್ಷೆ ಬರೆದಿದ್ದೇನೆ. ರ್‍ಯಾಂಕ್‌ ನೋಡಿಕೊಂಡು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಮಳಿಗೆಗಳಿಗೆ ಭೇಟಿ ನೀಡಿ ವಿವಿಧ ಕಾಲೇಜುಗಳು ಹಾಗೂ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದೆ
– ಎಲ್‌. ಚೇತನ್‌,  ಯಶವಂತಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT