ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ರ‍್ಯಾಂಕ್: ಬೆಂಗಳೂರು ಮೇಲುಗೈ

ವಿವಿಧ ಕೋರ್ಸ್‌ಗಳಲ್ಲಿ ಮೊದಲ ಮೂರು ಸ್ಥಾನ ಪಡೆದವರ ಪಟ್ಟಿ
Last Updated 27 ಮೇ 2014, 19:56 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ಈ ತಿಂಗಳ ಆರಂಭದಲ್ಲಿ ಸರ್ಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಮೊದಲ 10 ರ‍್ಯಾಂಕ್ ವಿಜೇತರ ಪಟ್ಟಿಯಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಸಿಂಹಪಾಲು ಪಡೆದಿದ್ದಾರೆ.

ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ, ಬಿ.ಎಸ್‌ಸಿ (ಕೃಷಿ), ಬಿವಿಎಸ್‌ಸಿ ವಿಭಾಗದಲ್ಲಿ ಬೆಂಗಳೂರಿನ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿನಿ ಗಿರಿಜಾ ಅಗರ್‌ವಾಲ್‌ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅದೇ ಕಾಲೇಜಿನ ಶ್ರೀನಿಧಿ ಪ್ರಭು ಅವರು ಎಂಜಿನಿಯ­ರಿಂಗ್‌, ಬಿ–ಫಾರ್ಮಾ/ಫಾರ್ಮಾ–ಡಿ, ಮತ್ತು ಬಿ.ಟೆಕ್‌ (ಕೃಷಿ) ಕೋರ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ವಾಸ್ತುಶಿಲ್ಪ ಕೋರ್ಸ್‌ನಲ್ಲಿ ಬೆಂಗಳೂರಿನ ನ್ಯಾಷ­ನಲ್‌ ಹಿಲ್‌ ಪಬ್ಲಿಕ್‌ ಕಾಲೇಜಿನ ಕೆ. ಸಂಹಿತಾ ಮತ್ತು ಆಹಾರ ತಂತ್ರಜ್ಞಾನ ಕೋರ್ಸ್‌ನಲ್ಲಿ

ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಮೊದಲ ಐದು ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಅವರಿಗೆ ಹಂಚಿಕೆ ಯಾದ ಕಾಲೇಜುಗಳಲ್ಲೇ ಸೀಟು ಆಯ್ಕೆ ಮಾಡಿಕೊಂಡರೆ, ಕೋರ್ಸ್‌ನ ಶುಲ್ಕವನ್ನು ಸರ್ಕಾರ ಮರು ಪಾವತಿ ಮಾಡಲಿದೆ.      – ಸಚಿವ ದೇಶಪಾಂಡೆ

ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ವಿ.ಕೆ. ಸೂರ್ಯ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.

ಅರ್ಹತೆ:  ಸರ್ಕಾರಿ ಕೋಟಾ ಅಡಿ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗೆ 21,257, ಎಂಜಿನಿಯ­ರಿಂಗ್‌ ಕೋರ್ಸ್‌ಗೆ 96,161 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.

ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿ­ಯೋಪಥಿ ಕೋರ್ಸ್‌ಗೆ 69,507, ವಾಸ್ತಶಿಲ್ಪ ಕೋರ್ಸ್‌ಗೆ 1,276, ಕೃಷಿ ಕೋರ್ಸ್‌ಗೆ

70,697, ಪಶು­ಸಂಗೋಪನೆ ಕೋರ್ಸ್‌ಗೆ 68,996,  ಆಹಾರ ತಂತ್ರಜ್ಞಾನ ಕೋರ್ಸ್‌ಗೆ 97,398 ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಅವರು ವಿವರಿಸಿದರು.

ಪ್ರಾಧಿಕಾರ ಈ ವರ್ಷದಿಂದ ಬಿ. ಫಾರ್ಮ ಮತ್ತು ಫಾರ್ಮ–ಡಿ ಕೋರ್ಸ್‌ಗಳ ಸರ್ಕಾರಿ ಸೀಟುಗಳಿಗೂ ಸಿಇಟಿ ಪರೀಕ್ಷೆ ನಡೆಸಿದೆ. ಬಿ.ಫಾರ್ಮ ಮತ್ತು ಫಾರ್ಮ–ಡಿ ಕೋರ್ಸ್‌ಗಳಿಗೆ ಒಟ್ಟು 97,890 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದರು.

ನಿಗದಿತ ದಿನಾಂಕದೊಳಗೆ ಸೀಟು ಹಿಂದಿರುಗಿಸುವ ವಿದ್ಯಾರ್ಥಿಗಳಿಂದ ರೂ. 5,000 ಮಾತ್ರ ಹಣ ಕಡಿತ ಮಾಡಿ­ಕೊಳ್ಳಲಾಗುವುದು. ಇದುವರೆಗೆ ಈ ಮೊತ್ತ ಶೇಕಡ 50ರಷ್ಟಿತ್ತು ಎಂದು ಅವರು ಹೇಳಿದರು.

ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಕೋರ್ಸ್‌ ಶುಲ್ಕವನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಪಾವತಿಸಲಾಗುತ್ತದೆ. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ವಿದ್ಯಾರ್ಥಿಗಳು ಈ ಮೊತ್ತವನ್ನು ಮರು ಪಾವತಿ ಮಾಡಬೇಕು ಎಂದರು.

ಸೀಟ್‌ ಮ್ಯಾಟ್ರಿಕ್ಸ್‌: ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಸಭೆ ನಡೆದ ನಂತರ ವೈದ್ಯಕೀಯ ಸೀಟ್‌ ಮ್ಯಾಟ್ರಿಕ್ಸ್‌ ಅಂತಿಮಗೊಳಿಸಲಾಗು ವುದು. ಜೂನ್‌ 14ರ ಮುನ್ನ ಇದು ಪೂರ್ಣಗೊಳ್ಳುವ ವಿಶ್ವಾಸ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ತಿಳಿಸಿದರು.

ಎಂಜಿನಿಯರಿಂಗ್‌ ಸೀಟ್‌ ಮ್ಯಾಟ್ರಿಕ್ಸ್‌ ಜೂನ್‌ ತಿಂಗಳ ಎರಡನೆಯ ಅಥವಾ ಮೂರನೆಯ ವಾರದಲ್ಲಿ ಅಂತಿಮಗೊಳ್ಳಲಿದೆ ಎಂದು ದೇಶಪಾಂಡೆ ಹೇಳಿದರು.

ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಪ್ರತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಶುಕ್ರವಾರ ಸಂಜೆ 5 ಗಂಟೆಯ ನಂತರ ಪ್ರಕಟಿಸ­ಲಾಗುವುದು. ಅಂಕದಲ್ಲಿ ವ್ಯತ್ಯಾಸ ಇದ್ದರೆ keauthority_ka@nic.in ಇ–ಮೇಲ್‌ ವಿಳಾಸಕ್ಕೆ ತಿಳಿಸಬಹುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ರ್‍ಯಾಂಕ್‌ ತಡೆಹಿಡಿಯಲಾದ ವಿದ್ಯಾರ್ಥಿ­ಗಳು ಅರ್ಹತಾ ಪರೀಕ್ಷೆ  ಅಂಕಪಟ್ಟಿಯ ಯಥಾಪ್ರತಿಯನ್ನು ಪ್ರಾಧಿಕಾರದ ಕಚೇರಿಗೆ ಇ–ಮೇಲ್‌ ಮೂಲಕ (keauthority_ka@nic.in), ಫ್ಯಾಕ್ಸ್‌ ಅಥವಾ ಖುದ್ದಾಗಿ ಸಲ್ಲಿಸುವ ಮೂಲಕ ರ‍್ಯಾಂಕ್ ಪಡೆದುಕೊಳ್ಳಬಹುದು.

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಸಂದರ್ಭದಲ್ಲಿ ಅಂಕಗಳಲ್ಲಿ ವ್ಯತ್ಯಾಸ ಕಂಡುಬಂದರೆ, ಹೊಸದಾಗಿ ನೀಡುವ ಅಂಕಗಳನ್ನು ಆಧರಿಸಿ ರ‍್ಯಾಂಕ್ ನೀಡಲಾಗುತ್ತದೆ. ದಾಖಲೆಗಳ ಪರಿಶೀಲನೆ ಕಾರ್ಯ ಸಹಾಯ ಕೇಂದ್ರಗಳಲ್ಲಿ ಜೂನ್‌ 2ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT