ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂಆರ್‌ ಕಾಲೇಜು ಅತ್ಯುತ್ತಮ ತಂಡ

ಅಖಿಲ ಭಾರತ ಅಣಕು ನ್ಯಾಯಾಲಯ ಸ್ಪರ್ಧೆ
Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾ­ಲ­ಯದ ಕಾನೂನು ಕಾಲೇಜು ನಗರ­ದಲ್ಲಿ ಎರಡು ದಿನಗಳಿಂದ ಆಯೋಜಿ­ಸಿದ್ದ ‘19ನೇ ಅಖಿಲ ಭಾರತ ಅಣಕು ನ್ಯಾಯಾಲಯ ಸ್ಪರ್ಧೆ 2015’ರಲ್ಲಿ ನಗರದ ಸಿಎಂಆರ್‌ ಕಾನೂನು ಕಾಲೇ­ಜಿನ ವಿದ್ಯಾರ್ಥಿಗಳ ತಂಡ ‘ಅತ್ಯುತ್ತಮ ತಂಡ’ವಾಗಿ ಹೊರಹೊಮ್ಮಿತು.

ದೇಶದ ವಿವಿಧ ವಿಶ್ವವಿದ್ಯಾಲಯ­ಗಳು ಮತ್ತು ಕಾನೂನು ಕಾಲೇಜುಗಳಿಗೆ ಸೇರಿದ ವಿದ್ಯಾರ್ಥಿಗಳ 28 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಶನಿವಾರ ಪ್ರಾಥಮಿಕ ಸುತ್ತಿನ ಸ್ಪರ್ಧೆಗಳು ನಡೆದಿ­ದ್ದವು. ಭಾನುವಾರ ಕ್ವಾರ್ಟರ್‌ ಫೈನಲ್‌, ಸೆಮಿ ಫೈನಲ್‌ ಮತ್ತು ಅಂತಿಮ ಸುತ್ತಿನ ಸ್ಪರ್ಧೆಗಳು ನಡೆ­ದವು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೆ.ಎಲ್.ಮಂಜುನಾಥ್ ಮತ್ತು ಅಲಹಾಬಾದ್‌ ಹೈಕೋರ್ಟ್‌ ನ್ಯಾಯ­ಮೂರ್ತಿ ಹುಲುವಾಡಿ ಜಿ.ರಮೇಶ್ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.

ಅಂತಿಮ ಸುತ್ತಿನಲ್ಲಿ ಒಡಿಶಾದ ಎನ್‌ಎಲ್‌ಯು ಕಾನೂನು ಕಾಲೇಜು ತಂಡ ‘ರನ್ನರ್‌ ಅಪ್‌’ ಸ್ಥಾನ ಪಡೆಯಿತು. ಎನ್‌ಎಲ್‌ಯು ಕಾಲೇಜಿನ ವಿದ್ಯಾರ್ಥಿನಿ ಸ್ಮೃತಿ ಸಿಂಗ್‌ ಅವರು ‘ಉತ್ತಮ ವಿದ್ಯಾರ್ಥಿ ವಕೀಲೆ’ ಎಂಬ ಬಿರುದಿಗೆ ಪಾತ್ರರಾದರು. ಅಲಹಾಬಾದ್‌ ವಿವಿ ಕಾನೂನು ಕಾಲೇಜು ವಿದ್ಯಾ­ರ್ಥಿ­­ಗಳ ತಂಡ ‘ಅತ್ಯುತ್ತಮ ವಾದ­ಪತ್ರ’ ಪ್ರಶಸ್ತಿಗೆ ಭಾಜನವಾ­ಯಿತು. ಭೋಪಾಲ್‌ನ ಎನ್‌ಎಲ್‌ಐಯು ಕಾನೂನು ಕಾಲೇಜಿನ ವಿದ್ಯಾರ್ಥಿನಿ ಶುಭಾಂಗಿಣಿ ಜೈನ್‌ ‘ಉತ್ತಮ ಸಂಶೋಧಕಿ’ ಪಟ್ಟ ಪಡೆದರು.

ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ನ್ಯಾಯ­ಮೂರ್ತಿ ಕೆ.ಎಲ್.ಮಂಜುನಾಥ್ ಅವರು, ‘ಕಾನೂನು ಪದವಿ ಪಡೆದವರು ಕಾರ್ಪೋರೇಟ್‌ ಕಚೇರಿ­ಗಳ ಉದ್ಯೋಗಿಗಳಾಗುವ ಬದಲು ಬಡ ಜನರ ಕಣ್ಣೀರು ಒರೆಸುವ  ಕಾರ್ಯದಲ್ಲಿ ತೊಡಗಬೇಕು’ ಎಂದರು.

ನ್ಯಾಯಮೂರ್ತಿ ರಾಮ ಮೋಹನ್‌ ರೆಡ್ಡಿ ಅವರು ಮಾತನಾಡಿ, ‘ಯುವ ವಕೀಲರು ಸಾಮಾಜಿಕ ಜವಾಬ್ದಾರಿ ಅರಿತು ಅದರಂತೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು. ವಿವಿ ಕುಲಸಚಿವೆ  ಡಾ.ಕೆ.ಕೆ.ಸೀತಮ್ಮ, ಸ್ನಾತ­ಕೋತ್ತರ ಕಾನೂನು  ವಿಭಾಗದ ಮುಖ್ಯಸ್ಥ ಡಾ.ವಿ.­ಸುದೇಶ್ ಮತ್ತು ಡೀನ್ ಡಾ.ಸುರೇಶ್ ವಿ.ನಾಡಗೌಡರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT