ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಐಡಿ ಮುಂದೆ ಸತ್ಯದ ಅನಾವರಣ

ತೀರ್ಥಹಳ್ಳಿ ಶಾಲಾ ಬಾಲಕಿ ನಂದಿತಾ ಸಾವಿನ ಪ್ರಕರಣ
Last Updated 12 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ತೀರ್ಥಹಳ್ಳಿಯ ಬಾಳೆಬೈಲಿನ ಬಾಲಕಿ ನಂದಿತಾ ಸಾವಿನ ಪ್ರಕರಣ ಕುರಿತು ಸಿಐಡಿ ಅಧಿಕಾರಿ­ಗಳು ನಡೆಸುತ್ತಿರುವ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಪ್ರಕರಣ ಕುರಿತು ಕೆಲವು ಮಹತ್ವದ ಸಂಗತಿಗಳು ಅನಾವರಣಗೊಂಡಿವೆ.

ಸಿಐಡಿ ಹಿರಿಯ ಅಧಿಕಾರಿಗಳೂ ಸೇರಿದಂತೆ 30ಕ್ಕೂ ಹೆಚ್ಚು ಸಿಬ್ಬಂದಿ ಕಳೆದ 10 ದಿನಗಳಿಂದ ತನಿಖೆಯಲ್ಲಿ ತೊಡಗಿ­ಸಿಕೊಂಡಿದ್ದಾರೆ. ಅಪಹರಣ­ವಾ­ಗಿದೆ ಎನ್ನಲಾಗಿದ್ದ ಅರಣ್ಯ ಇಲಾಖೆ ನರ್ಸರಿ ಬಳಿಯ ಸ್ಥಳ, ಆಕೆ ಪತ್ತೆಯಾದ ಆನಂದಗಿರಿ ಗುಡ್ಡ, ಕಲಿಯುತ್ತಿದ್ದ ಶಾಲೆ, ಬಾಳೆಬೈಲಿನ ಮನೆ, ಚಿಕಿತ್ಸೆ ಪಡೆದ ತೀರ್ಥಹಳ್ಳಿ, ಶಿವಮೊಗ್ಗದ ಆಸ್ಪತ್ರೆಗಳು, ಸಾವು ಕಂಡ ಮಣಿಪಾಲದ ಆಸ್ಪತ್ರೆ ಸೇರಿದಂತೆ ಎಲ್ಲ ಸ್ಥಳಗಳಿಗೂ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

ನಂದಿತಾ ಪೋಷಕರು, ಅವರ ಕುಟುಂಬದ ಇತರೆ ಸದಸ್ಯರು, ಆಕೆ­ಯನ್ನು ಗುಡ್ಡದಲ್ಲಿ ಮೊದಲು ನೋಡಿದ ಕೂಲಿ ಕಾರ್ಮಿಕರು, ಶಾಲಾ ಸಹಪಾಠಿ­ಗಳು, ಶಿಕ್ಷಕರು, ವೈದ್ಯರು, ಪೋಷಕರು ಆರೋಪಿಸಿದ ವ್ಯಕ್ತಿಗಳು, ಆಸ್ಪತ್ರೆ ಸಿಬ್ಬಂದಿ, ಸ್ಥಳೀಯ ಪೊಲೀಸರು, ಸಾರ್ವಜನಿಕರು ಸೇರಿದಂತೆ ನೂರಾರು ಮಂದಿಯ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಘಟನೆಯ ಸಂಪೂರ್ಣ ವಿವರ ಪಡೆದಿದ್ದಾರೆ.

ತೀರ್ಥಹಳ್ಳಿಯ ಮುಖ್ಯರಸ್ತೆ­ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು, ಘಟನೆ ನಡೆದ ದಿನ, ಅಂದರೆ ಅ. 29ರಿಂದ ಆಕೆ ಮೃತಪಟ್ಟ ಅ.31 ರವರೆ­ಗಿನ ಮೊಬೈಲ್‌ ಕರೆಗಳ ಪಟ್ಟಿ, ವೈದ್ಯಕೀಯ ಪ್ರಮಾಣಪತ್ರ­ಗಳು, ವೈದ್ಯರ ಹೇಳಿಕೆಗಳು, ಸಾರ್ವಜನಿಕರು ನೀಡಿದ ಕೆಲವು ಗುಪ್ತ ಮಾಹಿತಿ­ಗಳು, ದಾಖಲೆಗಳು ಪ್ರಕರಣದ ಸತ್ಯಾಸತ್ಯತೆ ಕಂಡು­ಕೊಳ್ಳುವಲ್ಲಿ ಸಿಐಡಿಗೆ ನೆರವಾಗಿವೆ.

ಅನಾವರಣಗೊಂಡ ಸತ್ಯಗಳು: ಅ.29ರಂದು ಶಾಲೆಗೆ ಹೊರಟ ಬಾಲಕಿ ನಂದಿತಾಳನ್ನು ಮೂವರು ಅಪ­ಹರಿಸಿ­ಕೊಂಡು ಅತ್ಯಾಚಾರ ಯತ್ನ ನಡೆಸಿದ್ದಾರೆ. ನಂತರ ಆಕೆಯನ್ನು ಆನಂದ ಗಿರಿ ಗುಡ್ಡದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಬಿಟ್ಟು ಹೋಗುವ ಮುನ್ನ ಆಕೆಗೆ ಬಲವಂತವಾಗಿ ನೀರಿನಲ್ಲೇ ಏನೋ ಬೆರೆಸಿ ಕುಡಿಸಿದ್ದಾರೆ. ಅದ­ರಿಂದಲೇ ಆಕೆ ಮೃತಪಟ್ಟಿದ್ದಾಳೆ ಎಂದು ನಂದಿತಾಳ ತಂದೆ ಟಿ.ಜಿ.ಕೃಷ್ಣ ಅ. 31ರ ರಾತ್ರಿ ತೀರ್ಥಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.

–ನಂದಿತಾಗೆ ಒಂದು ವರ್ಷದಿಂದ ಸೋಹನ್‌ ಎನ್ನುವ ಯುವಕನ ಜತೆ ಆತ್ಮೀಯತೆ ಇತ್ತು. ಆತನ ಪರಿಚಯ ನಂದಿತಾ ಮನೆಯವರಿಗೂ ಇತ್ತು. ಆತನ ಜತೆ ಸಲುಗೆಯಿಂದ ಇರುವ ಬಗ್ಗೆ ಪೋಷಕರು ಮಗಳಿಗೆ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದರು. ನಂತರ ನಿರ್ಬಂಧ ವಿಧಿಸಿದ್ದರು.

ದಸರಾ ರಜೆ ಮುಗಿಯುವದನ್ನೇ ಕಾಯು­ತ್ತಿದ್ದ ಆಕೆ ಶಾಲೆಯ ಪುನ­ರಾರಂಭದ ದಿನ (ಅ. 29) ಸೋಹನ್ ಜತೆ ಮಾತನಾಡಲು ಆನಂದಗಿರಿ ಗುಡ್ಡಕ್ಕೆ ತೆರಳಿದ್ದಾಳೆ. ಅಲ್ಲಿ ತಂದೆಯ ಪರಿಚಯಸ್ಥರು ಯಾರೋ ನೋಡಿದ್ದಾರೆ ಎಂದು ಭಯ ಬಿದ್ದು, ಸೋಹನ್‌ನನ್ನು ಅಲ್ಲಿಂದ ಕಳುಹಿಸಿದ್ದಾಳೆ. ನಂತರ ಗುಡ್ಡದ ಬಳಿ ಕಂಡ ಕಮಲಮ್ಮ ಅವರನ್ನು ಕೂಗಿ ಕರೆದಿದ್ದಾಳೆ. ಕಮಲಮ್ಮನ ಮಗನ ಸಹಕಾರದಿಂದ ಅಪ್ಪನ ಜತೆ ಮನೆ ತಲುಪಿದ್ದಾಳೆ ಎನ್ನುವುದು ತನಿಖೆ ವೇಳೆ ಬಯಲಾಗಿದೆ.

ನಂದಿತಾ ಸಾವು ಆತ್ಮಹತ್ಯೆ: ನಂದಿತಾ ಸಾವು ಕೊಲೆ­ಯಲ್ಲ. ಆತ್ಮಹತ್ಯೆ ಎನ್ನುವುದೂ ಸಾಬೀತಾಗಿದೆ. ಮನೆಗೆ ಹೋದ ನಂತರ ಪ್ರಕರಣದಿಂದ ಬೇಸರ­ಗೊಂಡ ತಾಯಿ–ತಂದೆ ಹಾಗೂ ಕೆಲ ಬಂಧುಗಳು ಆಕೆಗೆ ಬುದ್ಧಿವಾದ ಹೇಳಿದ್ದಾರೆ. ಅಲ್ಲಿಯವರೆಗೂ ಮೌನ­ವಾಗಿಯೇ ಇದ್ದ ಆಕೆ, ಎಲ್ಲರಿಂದ ಬುದ್ಧಿ­ಮಾತನ್ನೂ ಕೇಳಿಸಿಕೊಂಡು ಮಲಗಿದ್ದಾಳೆ.

ಎಲ್ಲರೂ ನಿದ್ದೆಗೆ ಜಾರಿದ ನಂತರ ಆಕೆ ತಾನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ  ಮನೆಯಲ್ಲಿ ಇದ್ದಾಗ ಆಟವಾಡಿಸಿ­ಕೊಂಡು ಕಾಲ ಕಳೆಯುತ್ತಿದ್ದ 11 ವರ್ಷದ ಪುಟಾಣಿ ತಂಗಿ ನಿಧಿ ಕುರಿತು ಆತ್ಮಹತ್ಯೆಯ ಪತ್ರ ಬರೆದಿಟ್ಟು, ಅಧಿಕ ರಕ್ತದೊತ್ತಡ ನಿಯಂತ್ರಿಸುವ ಮಾತ್ರೆ ಸೇವಿಸಿದ್ದಾಳೆ.

ಮಧ್ಯ ರಾತ್ರಿಯ ನಂತರ ವಾಂತಿ ಆರಂಭವಾಗಿದೆ. ಬೆಳಗಿನ ಜಾವ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ಆಕೆಯ ರಕ್ತದೊತ್ತಡ ಆಗಲೇ ಸಾಕಷ್ಟು ಕ್ಷೀಣಿಸಿದ್ದು, ಅಪಾಯಕಾರಿ ಮಟ್ಟ ತಲುಪಿತ್ತು. ನಂತರ ಶಿವಮೊಗ್ಗ, ಅಲ್ಲಿಂದ ಮಣಿಪಾಲಕ್ಕೆ ತಲುಪಿದಾಗ ಆಕೆ ಬದುಕುಳಿಯುವ ಸ್ಥಿತಿ ಕ್ಷೀಣಿಸಿತ್ತು.

ಅ.29ರ ರಾತ್ರಿ ಆಕೆ ರಕ್ತದ ಒತ್ತಡ ನಿಯಂತ್ರಿಸುವ ಮಾತ್ರೆ ಸೇವಿಸಿದ್ದಾಳೆ. ಅದರಿಂದ ಆಕೆಯ ರಕ್ತದ ಒತ್ತಡ ಕ್ಷೀಣಿಸಿ, ಹೃದಯ ಬಡಿತ ನಿಂತ ಪರಿಣಾಮ ಸಾವು ಸಂಭವಿಸಿದೆ ಎನ್ನುವುದನ್ನು ವೈದ್ಯಕೀಯ ದಾಖಲೆಗಳು ದೃಢಪಡಿಸಿವೆ. ಅದು ಅವಳ ಅಜ್ಜಿಗಾಗಿ ತಂದಿಟ್ಟಿದ್ದ ಮಾತ್ರೆ (ಆಮ್ಲೊಡೆಪಿನ್‌–Amlo­depin) ಎನ್ನುವುದನ್ನು ಸಿಐಡಿ ಅಧಿಕಾರಿ­ಗಳು ಖಚಿತಪಡಿಸಿ­ಕೊಂಡಿದ್ದಾರೆ.

ಆತ್ಮಹತ್ಯೆ ಪತ್ರದಲ್ಲಿರುವುದು ನಂದಿತಾ ಕೈ ಬರಹ ಎನ್ನುವುದನ್ನು ವಿಧಿ–ವಿಜ್ಞಾನ ಪ್ರಯೋಗಾಲಯವೂ ದೃಢಪಡಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ‘ನಾನು ನನ್ನ ಜೀವ ಕಳೆದುಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಗೆಳೆಯ ಸೋಹನ್‌ಗೆ ಎಸ್‌ಎಂಎಸ್‌ ಸಂದೇಶ ಕಳುಹಿಸಿದ್ದಾಳೆ ಎನ್ನಲಾಗಿದ್ದು, ಈ ಮಾಹಿತಿ ಖಚಿತಗೊಂಡಿಲ್ಲ.

ಕನ್ಯತ್ವಕ್ಕೆ ಧಕ್ಕೆಯಾಗಿರಲಿಲ್ಲ: ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ. ಆಕೆಯ ಕನ್ಯತ್ವಕ್ಕೆ ಯಾವುದೇ ಧಕ್ಕೆಯಾಗಿ­ರಲಿಲ್ಲ ಎಂದು ಮಣಿಪಾಲದ ವೈದ್ಯರು ನೀಡಿದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿದೆ. ಪ್ರಕರಣದ ಆರೋಪಿ ಯಾರು?: ನಂದಿತಾ ಪ್ರಕರಣ ಆತ್ಮಹತ್ಯೆ ಎನ್ನುವುದು ಸಾಬೀತಾದ ಬೆನ್ನಲ್ಲೇ, ಹಲವು ಪ್ರಶ್ನೆಗಳು ಸಿಐಡಿಗೆ ಕಾಡಿವೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದವರು ಯಾರು? ಬಾಲಕಿಯನ್ನು ದೂರದ ಗುಡ್ಡಕ್ಕೆ ಕರೆದುಕೊಂಡು ಹೋದ ಸ್ನೇಹಿತನೇ, ಬುದ್ಧಿಮಾತು ಹೇಳಿದ ತಾಯಿ–ತಂದೆಯೇ, 29ರಂದು ಬೆಳಿಗ್ಗೆ ನಡೆದ ಘಟನೆಯನ್ನು ಜಾತಿ–ಧರ್ಮದ ಆಧಾರದಲ್ಲಿ ಸಂಕೀರ್ಣಗೊಳಿಸಿ ಆಕೆಯ ಮನಸ್ಸಿನ ಮೇಲೆ ಪರಿಣಾಮ ಬೀರು­ವಂತೆ ಮಾಡಿದ ಕೆಲ ಪಟ್ಟಭದ್ರರೇ? ಎಂಬ ಉತ್ತರಕ್ಕಾಗಿ ತನಿಖಾ ತಂಡ ತಡಕಾಡುತ್ತಿದೆ.

ವೈದ್ಯರು, ಪೊಲೀಸರ ತಲೆದಂಡ! ಈ ಪ್ರಕರಣದಲ್ಲಿ ಪೊಲೀಸರಿಗೆ ಮಾಹಿತಿ ನೀಡದ ತೀರ್ಥಹಳ್ಳಿಯ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಪ್ರಕರಣದ ಮಾಹಿತಿ ಇದ್ದರೂ, ಮೇಲಧಿಕಾರಿಗಳ ಗಮನಕ್ಕೆ ತಾರದ ಗಮನಕ್ಕೆ ಕೆಲ ಸ್ಥಳೀಯ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT