ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ನಿಧನ

ಯಕ್ಷಗಾನ ರಂಗದ ಪ್ರಬುದ್ಧ ವಾಗ್ಮಿ
Last Updated 1 ಜುಲೈ 2016, 11:28 IST
ಅಕ್ಷರ ಗಾತ್ರ

ಬಂಟ್ವಾಳ (ದಕ್ಷಿಣ ಕನ್ನಡ): ಯಕ್ಷಗಾನ ರಂಗದ ಹಿರಿಯ ಕಲಾವಿದ, ಪ್ರಬುದ್ಧ ವಾಗ್ಮಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ (59) ಇವರು ಅಸೌಖ್ಯದಿಂದ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಬಾರ್ಜರಡ್ಡದ ತಮ್ಮ ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ 9.15ಕ್ಕೆ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.

ಐದು ತಿಂಗಳ ಹಿಂದೆಯಷ್ಟೇ ತೀವ್ರ ಅನಾರೋಗ್ಯಕ್ಕೀಡಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶೆಟ್ಟರು ಈಚೆಗಷ್ಟೇ ಮನೆಗೆ ಹಿಂತಿರುಗಿದ್ದರು.

ತೆಂಕು ತಿಟ್ಟು, ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿಯಾಗಿ, ಅರ್ಥಧಾರಿಯಾಗಿ, ಪ್ರಸಂಗಕರ್ತರಾಗಿ ಅತ್ಯುತ್ತಮ ವಾಕ್ಚಾತುರ್ಯದಿಂದ ಪೌರಾಣಿಕ ಮತ್ತು ಕಾಲ್ಪನಿಕ ಪ್ರಸಂಗಗಳಿಗೆ ಜೀವ ತುಂಬುವ ಮೂಲಕ ಅಪಾರ ಮಂದಿ ಅಭಿಮಾನಿಗಳನ್ನು ಹೊಂದಿದ್ದರು.

ಪದವಿಪೂರ್ವ ಶಿಕ್ಷಣ ಬಳಿಕ ಯಕ್ಷಗಾನದ ಕಡೆಗೆ ವಿಶೇಷ ಒಲವು ಹರಿಸಿದ ವಿಶ್ವನಾಥ ಶೆಟ್ಟಿ, ಯಕ್ಷಗಾನ ಮತ್ತು ತಾಳಮದ್ದಳೆ ಕೂಟದಲ್ಲಿ ಸರಳ ಮತ್ತು ಶುದ್ಧ ಭಾಷಾ ಪ್ರಯೋಗ ಮೂಲಕ ಪ್ರೇಕ್ಷಕರ ಗಮನ ಸೆಳೆದವರು.

ಕಟೀಲು, ಕದ್ರಿ, ಕರ್ನಾಟಕ, ಮಂಗಳಾದೇವಿ, ಸಾಲಿಗ್ರಾಮ, ಹಿರಿಯಡ್ಕ ಯಕ್ಷಗಾನ ಮೇಳಗಳಲ್ಲಿ ಗೆಜ್ಜೆಕಟ್ಟಿ ತಿರುಗಾಟ ನಡೆಸುವ ಮೂಲಕ ಕಲಾಸೇವೆ ನಡೆಸಿದ್ದಾರೆ.

ಪಾತ್ರ ನಿರ್ವಹಣೆ: ಪೌರಾಣಿಕ ಪ್ರಸಂಗಗಳಲ್ಲಿ ಶ್ರೀಕೃಷ್ಣ, ಶ್ರೀರಾಮ, ಪರಶುರಾಮ, ಭೀಷ್ಮ, ಹನುಮಂತ, ಈಶ್ವರ ಪಾತ್ರಗಳಿಂದ ಜನಮೆಚ್ಚುಗೆ ಗಳಿಸಿದ್ದ ವಿಶ್ವನಾಥ ಶೆಟ್ಟರು, ಕಾಲ್ಪನಿಕ ಪ್ರಸಂಗಗಳಲ್ಲಿಯೂ ವಿಭಿನ್ನ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.

ತೆಂಕು ತಿಟ್ಟಿನ ಕರ್ನಾಟಕ ಮೇಳದ ಪ್ರಸಿದ್ಧ 'ಮಾನಿಷಾದ' ಪ್ರಸಂಗದಲ್ಲಿ ಇವರು ನಿರ್ವಹಿಸಿದ 'ವಾಲ್ಮೀಕಿ' ಪಾತ್ರವು ಇವರಿಗೆ ವಿಶೇಷ ಗೌರವ ಮತ್ತು ಜನಪ್ರಿಯತೆ ತಂದು ಕೊಟ್ಟಿದೆ. ಯಕ್ಷರಂಗದ ವಿವಿಧ ಪಾತ್ರಗಳಲ್ಲಿ ಸಂಸ್ಕೃತ ಶ್ಲೋಕ, ಅರ್ಥ, ಭಾವಾರ್ಥ ಬಳಸಿಕೊಂಡು ಮಾತಿನ ಮೋಡಿ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು.

ಪ್ರಸಂಗ ರಚನೆ: ಬೊಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ ಮತ್ತಿತರ ತುಳು ಪ್ರಸಂಗ ಮಾತ್ರವಲ್ಲದೆ ವಿಷಮ ಸಮರಂಗ, ಕನ್ಯಂತರಂಗ, ಚಾಣಾಕ್ಷ ಚಾಣಕ್ಯ, ವರ್ಣವೈಷಮ್ಯ, ಶಶಿವಂಶವಲ್ಲರಿ, ಜ್ವಾಲಾ ಜಾಹ್ನವಿ, ಶ್ರೀರಾಮಸೇತು ಮತ್ತಿತರ ಪೌರಾಣಿಕ ಪ್ರಸಂಗ ರಚಿಸಿ ಅತ್ಯುತ್ತಮ ಪ್ರಸಂಗಕರ್ತರೆನಿಸಿಕೊಂಡವರು ಇವರು.

ಸರಳ ವ್ಯಕ್ತಿತ್ವ ಮತ್ತು ಸೌಮ್ಯ ಸ್ವಭಾವ ಹೊಂದಿದ್ದ ಶೆಟ್ಟರು ಯಕ್ಷಗಾನ ರಂಗದ ಮೇರು ಕಲಾವಿದರಾಗಿದ್ದರು.

ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಸಿದ್ಧಕಟ್ಟೆ ಬಾರ್ಜರಡ್ಡ ಮನೆ ಸಮೀಪದಲ್ಲಿ ನಡೆಯಿತು.

ಮೃತರ ಸಹೋದರ ಸಿದ್ಧಕಟ್ಟೆ ಸದಾಶಿವ ಶೆಟ್ಟಿ ಕೂಡಾ ಪ್ರಬುದ್ಧ ಯಕ್ಷಗಾನ ಕಲಾವಿದರಾಗಿದ್ದು, ಸಹೋದರಿ ಮಲ್ಲಿಕಾ ಶೆಟ್ಟಿ ಹವ್ಯಾಸಿ ಯಕ್ಷಗಾನ ಜತೆಗೆ ಆಕಾಶವಾಣಿ ಮತ್ತು ದೃಶ್ಯ ಮಾಧ್ಯಮ ವಾರ್ತಾ ವಾಚಕಿಯಾಗಿದ್ದಾರೆ.

ಸಂತಾಪ: ಅರಣ್ಯ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಸದಸ್ಯರಾದ ಕಿಶನ್ ಹೆಗ್ಡೆ, ಸರಪಾಡಿ ಅಶೋಕ ಶೆಟ್ಟಿ ಸಹಿತ ಅಪಾರ ಮಂದಿ ಕಲಾವಿದರು ಮತ್ತು ಅಭಿಮಾನಿಗಳು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT