ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಳು ನೋಟ

Last Updated 14 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಫಲಿತಾಂಶ ಮತ್ತು ಪ್ಲೇಸು!
ಬೀದರ್:
ಇದು ಪರೀಕ್ಷೆ ಕಾಲ. ಗುರುವಾರ ದ್ವಿತೀಯ ಪಿಯುಸಿ ಪರೀಕ್ಷೆ ಶುರುವಾಗಿದೆ. ನಂತರ ಎಸ್‌ಎಸ್‌ಎಲ್‌ಸಿ ಪರೀಕ್ಷೆ. ‘ಕರ್ನಾಟಕದ ಕಿರೀಟ’ ಬೀದರ್‌ನಲ್ಲಿ ಕಳೆದ ಒಂದೂವರೆ ತಿಂಗಳಿಂದ ಅಲ್ಲಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೂ ಕಾರ್ಯಾಗಾರ, ಮಾರ್ಗದರ್ಶನ ಎಂಬ ‘ಪರೀಕ್ಷೆ’ಗಳು ಆಗಿವೆ.

‘ಬೀದರ್‌ಗೆ ಮತ್ತೆ ಕಡೇ ಸ್ಥಾನ’ ಎಂಬುದು ಈ ಎರಡೂ ವಾರ್ಷಿಕ ಪರೀಕ್ಷೆಗಳಲ್ಲಿ ಕಳೆದ ಮೂರು ವರ್ಷಗಳಿಂದ ಆಗಿರುವ ಹ್ಯಾಟ್ರಿಕ್‌ ‘ಸಾಧನೆ’. ಫಲಿತಾಂಶ ಪ್ರಕಟವಾದಾಗ ಎಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂಬುದಕ್ಕಿಂತ ಜಿಲ್ಲೆಗೆ ಯಾವ ಸ್ಥಾನ ಎಂಬುದೇ ಕುತೂಹಲದ ಅಂಶ.

ಈ ವರ್ಷ ಫಲಿತಾಂಶ ಉತ್ತಮಪಡಿಸಲು ಹೆಚ್ಚುವರಿ ತರಗತಿ ಸೇರಿ ವಿಶೇಷ ಕಸರತ್ತು ಆಗಿದೆ. ಆದರೂ ಫಲಿತಾಂಶ ಹೆಚ್ಚುತ್ತದಾ ಎಂಬ ಅನುಮಾನವಂತೂ ಉಳಿದಿದೆ.

ಬೀದರ್‌ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಈಚೆಗೆ ಕಾರ್ಯಾಗಾರದಲ್ಲಿ ‘ಜಿಲ್ಲೆಗೆ ಕೆಳಗಿನಿಂದ ಮೊದಲನೇ ಪ್ಲೇಸ್‌ ಇದೆ. ಅದು ಬೇಡ. ಒಂದು ಪ್ಲೇಸ್‌ ಆದರೂ ಮೇಲೆ ಬರುವಂತೆ ಪ್ರಾಮಾಣಿಕ ಯತ್ನ ಮಾಡಿ. ನಾನಿರುವಾಗಲೇ ಅಂಥ ದಿನ ನೋಡ್ಬೇಕು’ ಎಂದು ಅರಿಕೆ ಇಟ್ಟರು.

ಏಕೆ ಫಲಿತಾಂಶ ಉತ್ತಮಗೊಳ್ಳುತ್ತಿಲ್ಲ ಎಂಬುದು ಅವರ ಪ್ರಶ್ನೆ. ಅಲ್ಲಿದ್ದ ಶಿಕ್ಷಕರು ಉತ್ತರಿಸಲಿಲ್ಲ. ಆದರೆ, ತಡವಾಗಿ ಬಂದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಇದಕ್ಕೆ ಉತ್ತರ ಎಂಬಂತೆ ಮಾತನಾಡಿದರು.

ಅವರು ಹೇಳಿದ್ದು: ‘ಇದು ಏನು ಕಾರ್ಯಕ್ರಮ ಅನ್ನೋದೆ ತಿಳಿದಿಲ್ಲ. ನಾನು ಮಹಿಳಾ ದಿನಾಚರಣೆ ಅನ್ಕಂಡಿದ್ದೆ. ಎಷ್ಟೊಂದು ಮಕ್ಕಳಿದ್ದೀರಿ. ಎಲ್ಲ ಎಸ್‌ಎಸ್‌ಎಲ್‌ಸಿ ಇರಬೇಕು. ಚೆನ್ನಾಗಿ ಓದಿ. ಫಲಿತಾಂಶ ಹೆಚ್ಚಾಗಲು ಶಿಕ್ಷಕರದಷ್ಟೇ ಅಲ್ಲ. ನಿಮ್ಮ ಪಾತ್ರವೂ ಇದೆ’.ಈ ಮಾತಿನ ನಂತರ ಸ್ವತಃ ಅಧ್ಯಕ್ಷೆ ಜತೆಗೆ ಕೆಲವರು ನಕ್ಕರು. ವಿದ್ಯಾರ್ಥಿಗಳು ಮಾತ್ರ ಗಂಭೀರವಾಗಿದ್ದರು. ಅವರಿಗೆ ಪರೀಕ್ಷೆ ಕಾಲ.
ಉ.ಮ.ಮಹೇಶ್‌

ನನ್ನ ಗಮನಕ್ಕೆ ಬಂದಿಲ್ಲ...
ಬಳ್ಳಾರಿ: ಆಗಸ್ಟ್‌ 15, ನವೆಂಬರ್‌ 1 ಮತ್ತು ಜನವರಿ 26 ರಂದು ತಪ್ಪದೇ ಜಿಲ್ಲಾ ಕೇಂದ್ರಕ್ಕೆ ಬರುವ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಬಳ್ಳಾರಿ ಜಿಲ್ಲಾ  ಉಸ್ತುವಾರಿ ಸಚಿವರೋ, ತಾವು ಚುನಾವಣೆಯಲ್ಲಿ ಗೆದ್ದಿರುವ ಹೂವಿನ ಹಡಗಲಿಗೋ ಅಥವಾ ಮೂಲ ಕ್ಷೇತ್ರವಾದ ಹರಪನಹಳ್ಳಿಗೋ ಎಂಬ ಬಗ್ಗೆ ಜಿಲ್ಲೆಯಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ. ಜನರಿಗೆ ಈ ಕುರಿತು ಸಂಶಯಗಳೂ ಇವೆ.

ಆಗೊಮ್ಮೆ, ಈಗೊಮ್ಮೆ ಬಳ್ಳಾರಿಗೆ ಬಂದಾಗಲೆಲ್ಲ ಸಭೆ, ಸಮಾರಂಭಗಳಲ್ಲಿ ಹಾಜರಿರುವ ಪತ್ರಕರ್ತರನ್ನು ಕಂಡು, ಸಣ್ಣದೊಂದು ಪತ್ರಿಕಾಗೋಷ್ಠಿ ಮಾಡುವುದನ್ನು ತಪ್ಪಿಸದ ಸಚಿವರು, ತಮಗೆ ಕೇಳಲಾದ ಪ್ರಶ್ನೆಗಳಿಗೆ ‘ನನ್ನ ಗಮನಕ್ಕೆ ಬಂದಿಲ್ಲ’ ಎಂಬ ಸಿದ್ಧ ಉತ್ತರ ನೀಡುವುದನ್ನು ಬಿಟ್ಟಿಲ್ಲ.

‘ಮಹಾನಗರ ಪಾಲಿಕೆ ಆಡಳಿತದ ವಿರುದ್ಧ ಬೇಸತ್ತ ನಗರದ ಜನರು  ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಅನೇಕ ದೂರುಗಳನ್ನು ಸಲ್ಲಿಸಿದ್ದಾರಲ್ಲ ಎಂದು ಇತ್ತೀಚೆಗಷ್ಟೇ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನ್ನ ಗಮನಕ್ಕೆ ಬಂದಿಲ್ಲ’ ಎಂಬ ವಾಕ್ಯವನ್ನು ಪುನರುಚ್ಚರಿಸಿದರು.

‘ಹೌದು ಸ್ವಾಮಿ, ನಗರದ ಜನರ ಸಮಸ್ಯೆಗಳು ನಿಮ್ಮ ಗಮನಕ್ಕೆ ಬಂದಿಲ್ಲವೆಂದೇ ಜನರು ಅನಿವಾರ್ಯವಾಗಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಪಾಲಿಕೆ ಅಧಿಕಾರಿಗಳು ಜನರ ನೋವಿಗೆ ಸ್ಪಂದಿಸುತ್ತಿಲ್ಲ ಎಂಬ ವಿಷಯ ನಂತರವಾದರೂ ನಿಮಗೆ ಗೊತ್ತಾಗಬೇಕಿತ್ತಲ್ಲ’ ಎಂಬ ಪ್ರಶ್ನೆ ತೂರಿ ಬಂತು.

‘ನೋಡಿ ಇದು ಪ್ರಜಾಪ್ರಭುತ್ವ. ಜನರು ಯಾರ ವಿರುದ್ಧವಾದರೂ ದೂರು ಸಲ್ಲಿಸಬಹುದು. ಆ ಹಕ್ಕು ಸಂವಿಧಾನಬದ್ಧವಾಗಿ ದೊರೆತಿದೆ. ನಮ್ಮ ಆಡಳಿತದಲ್ಲಿ ಎಲ್ಲ ಸುಗಮವಾಗಿ ನಡೆಯುತ್ತಿದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು’ ಎಂಬ ಉತ್ತರ ನೀಡಿ ಅಚ್ಚರಿ ಮೂಡಿಸಿದರು.
ಸಿದ್ದಯ್ಯ ಹಿರೇಮಠ

ಅಹವಾಲು ಪಟ್ಟಿ, ದಾಖಲೆ ಕೊರತೆ!
ಹುಬ್ಬಳ್ಳಿ:
 ಅಧಿಕಾರಕ್ಕಾಗಿ ಭಿನ್ನರಾಗ ಹಾಡುವುದು. ವೃಥಾ ಆರೋಪ ಮಾಡುವುದು ರಾಜಕಾರಣಿಗಳಿಗೆ ಹೊಸದೇನಲ್ಲ. ಆದರೆ, ಕಾಂಗ್ರೆಸ್‌ನಲ್ಲಿ ಇದು ಕೆಲವೊಮ್ಮೆ ವಿಪರೀತಕ್ಕೆ ತಿರುಗುತ್ತದೆ ಎಂಬುದನ್ನು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಪ್ರಮಾಣೀಕರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಲಿತ ವಿರೋಧಿ ಚಟುವಟಿಕೆಗಳು, ಬೆಳಗಾವಿ ಕಾಂಗ್ರೆಸ್‌ನಲ್ಲಿ ಆಗುತ್ತಿರುವ ವಿಚಿತ್ರ ಬೆಳವಣಿಗೆಗಳು, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಸೇರಿದಂತೆ ತಮ್ಮ ಆರೋಪಗಳ ದೊಡ್ಡ ಪಟ್ಟಿಯನ್ನು ಮಾಧ್ಯಮದವರ ಮುಂದೆ ಮಂಡಿಸಲು ಬಂದ ‘ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕರ್ತರ ವೇದಿಕೆ’ಯ ಸಂಚಾಲಕ ಶಂಕರ ಮುನವಳ್ಳಿ, ‘ಕಾಮಿಡಿ ಪೀಸ್‌’ ಆಗಿ ಮರಳಿದ್ದು ಮಾತ್ರ ವಿಪರ್ಯಾಸ.

ಸಿದ್ದರಾಮಯ್ಯ ಅವರನ್ನು ದಲಿತ ವಿರೋಧಿ ಎನ್ನುತ್ತಲೇ, ‘ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್‌ ಪರ ಬ್ಯಾಟಿಂಗ್‌ ಮಾಡಿದ ಮುನವಳ್ಳಿ, ಕಾಂಗ್ರೆಸ್‌ ಮಾನ್ಯತೆ ರದ್ದು ಪಡಿಸುವಂತೆ ಚುನಾವಣಾ ಆಯೋಗದ ಮೊರೆ ಹೋಗುತ್ತೇನೆ. ಅಲ್ಲಿ ನ್ಯಾಯ ಸಿಗದಿದ್ದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತೇನೆ’ ಎಂದಾಗ ಸುದ್ದಿಗೋಷ್ಠಿಯಲ್ಲಿ ನಗೆಯ ಅಲೆ ಉಕ್ಕಿತು.
ಸಿದ್ದೇಶ್‌ ಎಂ.ಎಸ್‌.

ನೀನೇ ಸಿಎಂ ಆಗಲು ದೇವರಲ್ಲಿ  ಕೇಳಿಕೊಳ್ಳಬೇಕಿತ್ತು!
ಬೆಂಗಳೂರು:
ಆತನಿಗೆ ಧಾವಂತ. ತಕ್ಷಣ ಮುಖ್ಯಮಂತ್ರಿಯನ್ನು ಭೇಟಿಯಾಗಿ ಏನೋ ಹೇಳಬೇಕೆನ್ನುವ ತವಕ. ಅದಕ್ಕೆಂದೇ ಆತ ಹಲವು ಬಾರಿ ಸಿ.ಎಂ. ಮನೆಗೆ ಎಡತಾಕಿದ್ದ. ಕೊನೆಗೂ ಆ ವ್ಯಕ್ತಿಗೆ ಮುಖ್ಯಮಂತ್ರಿಗಳ ದರ್ಶನ ಆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡ ತಕ್ಷಣ ಆತನಿಗೆ ಧನ್ಯತೆಯ ಭಾವ. ಮನೆಯಿಂದ ಹೊರ ಬಂದ ಸಿ.ಎಂ. ಮಾಮೂಲಿಯಾಗಿಯೇ ‘ಏನಯ್ಯಾ ಸಮಸ್ಯೆ’ ಅಂದರು.

ಆ ವ್ಯಕ್ತಿ ಕಡೆಯಿಂದ ಯಾವ ಉತ್ತರವೂ ಬರಲಿಲ್ಲ. ದಣಿವಾರಿಸಿಕೊಂಡ ನಂತರ ‘ನೀವು ಮುಖ್ಯಮಂತ್ರಿ ಆಗಲಿ ಅಂತ ನಾನು ದೇವರಲ್ಲಿ ಕೋರಿಕೊಂಡಿದ್ದೆ. ನೀವು ಸಿಎಂ ಆಗಿದ್ದು ನನಗೆ ತುಂಬಾನೆ ಸಂತೋಷ ಉಂಟು ಮಾಡಿದೆ...’ ಎಂದ.
ಇದನ್ನೆಲ್ಲಾ ಕೇಳಿಸಿಕೊಂಡ  ಸಿದ್ದರಾಮಯ್ಯ ಮುಗುಳ್ನಕ್ಕರು. ‘ಹೌದಾ...’ ಎಂದರು. ‘ನೀನು ಒಂದು ಕೆಲ್ಸ ಮಾಡಬಹುದಿತ್ತು. ನನ್ನ ಪರ ದೇವರಿಗೆ ಕೇಳುವ ಬದಲು, ನೀನೇ ಸಿ.ಎಂ ಆಗಲು ದೇವರನ್ನು ಕೇಳಿಕೊಳ್ಳಬಹುದಿತ್ತು. ಯಾಕೆ ಹಾಗೆ ಮಾಡಲಿಲ್ಲ’ ಎಂದು ಸಿ.ಎಂ. ಪ್ರಶ್ನೆ ಮಾಡುತ್ತಿದ್ದ ಹಾಗೆ ಆ ವ್ಯಕ್ತಿ ಮಾತಿಲ್ಲದಂತಾದ.
ಬಿ.ಎನ್‌.ಶ್ರೀಧರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT