ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಸೆಯಲ್ಲರಳಿದ ಅಣಬೆ

ಅಕ್ಷರ ಗಾತ್ರ

ಗುಡುಗು ಮಿಂಚು ಜೋರಾಗಿತ್ತು. ನಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಿಮ್ಮ, ‘ಇವತ್ತು ಅಣಬೆ ರಾಶಿ ಏಳುತ್ತದೆ ಈ ಗುಡುಗಿಗೆ’ ಎಂದು, ಪಕ್ಕದ ಕಾಡಿನತ್ತ ಹೆಜ್ಜೆ ಹಾಕಿದ್ದ. ಹಾಗೆ ಹೋದ ಕೆಲವೇ ಹೊತ್ತಿನಲ್ಲಿ ಕೈತುಂಬಾ ಅಣಬೆ ಹೊತ್ತು ಖುಷಿಯಿಂದ ಬಂದಿದ್ದ. ಅಂದಿನ ತರಕಾರಿ ಅವನಿಗೆ ಅಲ್ಲೇ ಸಿಕ್ಕಿತ್ತು. ಹಾಗೇ ಸ್ಥಳೀಯವಾಗಿ ಸಿಗುವ, ಸ್ಥಳೀಯರು ಆಹಾರವಾಗಿ ಉಪಯೋಗಿಸುವ ಅಣಬೆ ಜಾತಿಯ ಪಟ್ಟಿ ಮಾಡತೊಡಗಿದ್ದೆ. ಆ ಪಟ್ಟಿ ಹದಿನೈದು ಹದಿನಾರು ದಾಟಿತ್ತು.

ಇಷ್ಟೊಂದು ವೈವಿಧ್ಯ ನಮ್ಮ ಕಾಡಿನಲ್ಲಿ ಇರುವಾಗ ನಮ್ಮ ಅಣಬೆ ಬೆಳಗಾರರೇಕೆ ಅದೇ ‘ಬಟನ್ ಮಶ್ರೂಮ್’ನಂತಹ ಕೆಲವೇ ಕೆಲವು ಜಾತಿಯ ಅಣಬೆ ಬೆಳೆಯುತ್ತಾರೆ? ಅಣಬೆ ಏಕೆ ಇನ್ನೂ ಪಂಚತಾರಾ ಹೊಟೇಲುಗಳ ತಿಂಡಿಯಾಗಿ ಮಾತ್ರ ಉಳಿದುಕೊಂಡಿದೆ? ಕಾಡಿನಂಚಿನಲ್ಲಿರುವ ನಮ್ಮಂತಹ ಹಳ್ಳಿಗಳಲ್ಲಿ ಇಷ್ಟು ಖುಷಿಯಿಂದ ತಿನ್ನುವ ಈ ಅಣಬೆ, ನಗರದ ಸಾಮಾನ್ಯರ ದರ್ಶಿನಿಗಳಲ್ಲಿ ಏಕೆ ಕಾಣಿಸಿಕೊಳ್ಳುತ್ತಿಲ್ಲ?

ಹಾಗೆ ಯೋಚಿಸುವಾಗಲೇ ಕೆಲವು ವರ್ಷಗಳ ಹಿಂದೆ ಚೀನಾದಲ್ಲಿ ಕಂಡ ಅಣಬೆ ಬೆಳೆ ವೈವಿಧ್ಯ ನೆನಪಾಯಿತು. ಅಲ್ಲಿ ಅಣಬೆ ಬೆಳೆದು ಚೀನಾದ ರೈತರು ಕೋಟ್ಯಧಿಪತಿಯಾಗಿದ್ದನ್ನು ಕಂಡಿದ್ದೆ. ಮೂರೇ ಮೂರು ವರ್ಷದ ಹಿಂದೆ ಅಣಬೆ ಬೆಳೆಯಲು ಶುರು ಮಾಡಿದ ರೈತ ಮೂರಂತಸ್ತಿನ ಕಟ್ಟಡ ಕಟ್ಟುತ್ತಿರುವ ಉದಾಹರಣೆಯನ್ನು ನೋಡಿದ್ದೆ. ಕೆಲವು ನೆನಪುಗಳು ಇಲ್ಲಿವೆ ನೋಡಿ.

ಅದೊಂದು ದೊಡ್ಡ ಹಾಲ್. ಒಳಗೆ ಹೋದರೆ ಎಲ್ಲೆಡೆ ಹಳೇ ಖಾಲಿ ಬಾಟಲಿಗಳನ್ನು ಬಟ್ಟೆಯಲ್ಲಿ ಬಾಯಿ ಮುಚ್ಚಿ ಇಡಲಾಗಿತ್ತು. ಇದು ವಾಣಿಜ್ಯಿಕವಾಗಿ ಸ್ಪೋರ್‌ಗಳನ್ನು ಉತ್ಪಾದಿಸಲು ಪ್ರಾರಂಭವಾದ ಖಾಸಗಿ ಕಂಪೆನಿ. ಇಡೀ ಹಾಲಿನ ತುಂಬ ಸಾವಿರಾರು ಬಾಟಲಿಗಳನ್ನು ಕಾಗದದ ಪುಟ್ಟ ಕವರಿನಲ್ಲಿ ಮುಚ್ಚಿಟ್ಟಿದ್ದರು. ಬಾಟಲಿಯ ಬಾಯಿ ಒಡೆದು, ಅದರೊಳಗೆ ಒಂದಿಷ್ಟು ಮರದ ಹೊಟ್ಟು ಹಾಕಿಟ್ಟಿದ್ದರು.
ಆ ಅಣಬೆ ‘ಬ್ರಾಕೆಟ್ ಮಶ್ರೂಮ್’ ಎಂದು ಕರೆಯುವ ನಮ್ಮ ಕಾಡಿನಲ್ಲಿ ಸಾಮಾನ್ಯವಾಗಿರುವ ಅಣಬೆಗಳ ಹಾಗೆ ಕಾಣುತ್ತವೆ.

ಔಷಧೀಯ ಅಣಬೆ ಆ ಅಣಬೆಯ ಹೆಸರು ಲಿಂಗ್ಜಿ. ಅಂದರೆ ಚೈತನ್ಯ ಎಂದೇ ಅರ್ಥವಂತೆ. ವೈಜ್ಞಾನಿಕ ಹೆಸರು ಗ್ಯಾನೋಡರ್ಮಾ ಲ್ಯುಸಿಡಿಯಮ್. ಸಾಮಾನ್ಯವಾಗಿ ಕಾಡಿನಲ್ಲಿ ಓಕ್ ಮರಗಳ ಲಡ್ಡಾದ ಕಾಂಡದಲ್ಲಿ ಬೆಳೆಯುತ್ತಿದ್ದ ಇದನ್ನು ಇತ್ತೀಚೆಗೆ ವಾಣಿಜ್ಯವಾಗಿ ಬೆಳೆಯಲು ಪ್ರಾರಂಭಿಸಿದ್ದು.

ಈ ಅಣಬೆಯ ಇತಿಹಾಸ ಮೂರು ಸಾವಿರ ವರ್ಷಕ್ಕೂ ಹಿಂದೆ ಆಳುತ್ತಿದ್ದ ಸಾಂಗ್ ಸಾಮ್ರಾಜ್ಯದ ಕಾಲಕ್ಕೆ ಹೋಗುತ್ತದೆ. ಪಂಜು ಎನ್ನುವ ಒಬ್ಬ ಸಾಂಗ್ ಸಾಮ್ರಾಜ್ಯದಲ್ಲಿ 800 ವರ್ಷ ಬದುಕಿದ್ದನಂತೆ. ಆತ ಈ ಅಣಬೆಯನ್ನು ಸೇವಿಸಿದ್ದರಿಂದ ಆಯಸ್ಸು ಹೆಚ್ಚಾಗಿತ್ತಂತೆ  ಎನ್ನುವಲ್ಲಿಂದ ಕಥೆ ಪ್ರಾರಂಭವಾಗುತ್ತದೆ. 1920ರಲ್ಲಿ  ಇದನ್ನು ಮತ್ತೆ ಕಂಡು ಹಿಡಿಯಲಾಯಿತು. 1970ರಲ್ಲಿ ಮೊದಲ ಬಾರಿ ಕೃತಕವಾಗಿ ಇದನ್ನು ಉತ್ಪಾದಿಸಲು ಪ್ರಾರಂಭಿಸಿದರು. ಇದರ ಬೀಜ, (ಇಂಗ್ಲಿಷಿನಲ್ಲಿ ಸ್ಪೋರ್ ಎನ್ನುತ್ತಾರೆ) ತುಂಬಾ ಸೂಕ್ಷ್ಮ. ಈ ಬೀಜಗಳನ್ನು ಔಷಧವಾಗಿ ಬಳಸಲಾಗುತ್ತದೆ.

ಸಾಮಾನ್ಯವಾಗಿ ಏಪ್ರಿಲ್‌ನಿಂದ ಜೂನ್‌ವರೆಗೆ ಇದರ ಕೃಷಿ ಕಾಲ. ಹಳೆ ಬಾಟಲಿಗಳ ಬಾಯಿ ಒಡೆದು, ಅದರಲ್ಲಿ  ಓಕ್ ಮರದ ಹುಡಿ, ಹಿಟ್ಟು, ಸುಣ್ಣ, ಸಕ್ಕರೆ ಇವುಗಳನ್ನು ಮಿಶ್ರಣ ಮಾಡಿ ಬಾಟಲಿಗಳಲ್ಲಿ ತುಂಬುತ್ತಾರೆ. ಜುಲೈ - ಅಗಸ್ಟ್‌ನಲ್ಲಿ ಬೀಜ ಉತ್ಪಾದನೆ ಆರಂಭ. ಆಗ ಬಾಟಲಿಗಳಿಗೆ ಪ್ಲಾಸ್ಟಿಕ್ ಕಟ್ಟಿ ಸ್ಪೋರ್‌ ಸಂಗ್ರಹಿಸುತ್ತಾರೆ. ನಂತರ ಸೆಪ್ಟೆಂಬರ್  ಅಕ್ಟೋಬರ್‌ನಲ್ಲಿ ಸ್ಪೋರುಗಳನ್ನು ಸಂಗ್ರಹಿಸಿ ಮಾರಲಾಗುತ್ತದೆ. ಹಾಗಾಗಿ ವರ್ಷಕ್ಕೆ ಒಂದೇ ಬೆಳೆ.  ಹಿಂದೆಲ್ಲಾ 10 ಸಾವಿರ ಬಾಟಲಿಗಳಿಂದ 500 ಗ್ರಾಮ್ ಸ್ಪೋರ್ ಸಿಗುತ್ತಿತ್ತು. ಈಗ ಪ್ಲಾಸ್ಟಿಕ್ನಿಂದ ಕವರ್ ಮಾಡಿ ಹೆಚ್ಚು ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದಾರೆ. ಹಾಗಾಗಿ  ಒಂದು ಸಾವಿರ ಬಾಟಲಿಗೆ 500 ಗ್ರಾಂ ಸ್ಪೋರ್    ಸಿಗುತ್ತದೆಯಂತೆ. 

ಅಣಬೆಗೆ ಈಗ ಮಾರುಕಟ್ಟೆ ಬೆಲೆ 500 ಗ್ರಾಮ್‌ಗೆ ಒಂದು ಸಾವಿರ ಯುವಾನ್. ಅಂದರೆ ಕೆ.ಜಿಗೆ ಸುಮಾರು ಹದಿನೈದು ಸಾವಿರ ರೂಪಾಯಿಗಳು. ಆದರೆ ಈ ರೈತರಿಗೆ ಸಿಗುತ್ತಿರುವುದು 500 ಗ್ರಾಮ್‌ಗೆ 600 ಯುವಾನ್‌ಗಳು ಮಾತ್ರ. ಸ್ಪೋರುಗಳಿಗೆ, ಕಿಲೋಗೆ 10 ಸಾವಿರ ಯುವಾನ್ ಇದೆಯಂತೆ.

ಇದು ಔಷಧೀಯ ಅಣಬೆಯ ಕಥೆಯಾದರೆ, ಆಹಾರಕ್ಕಾಗಿ ಬೆಳೆಯುವ ಹಲವಾರು ಅಣಬೆಗಳು ಈ ದೇಶದಲ್ಲಿವೆ. ಅಣಬೆ ಆಹಾರದ ಸಾಮಾನ್ಯ ಭಾಗ. ತುಂಬ ವ್ಯಾಪಕವಾಗಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ವೈವಿಧ್ಯವೂ ಅಷ್ಟೇ ಇದೆ. ಆ ಚೀನೀ ಯುವಕ ಆಫ್ರಿಕಾದ ಮುಜ಼ಂಬಿಕ್ ದೇಶದಲ್ಲಿ ಕೆಲಸಕ್ಕಿದ್ದ. ಚೀನಾದ ಯಾವುದೋ ಕಂಪೆನಿಯ ವತಿಯಿಂದ ಅಲ್ಲಿಗೆ ಕೆಲಸಕ್ಕೆ ಹೋಗಿದ್ದ. ನೌಕರಿ ಸಾಕೆನಿಸಿ, ಊರಿಗೆ ಬಂದು ಸೇರಬೇಕೆನಿಸಿದಾಗ ಈತನಿಗೆ ಕಾಣಿಸಿದ್ದು ಅಣಬೆ ಕೃಷಿ. ಬಾಡಿಗೆ ಮನೆಯಲ್ಲಿ ಅಣಬೆ ಬೆಳೆಯಲು ಪ್ರಾರಂಭಿಸಿದ. ಆತ ಬೆಳೆದದ್ದು ತಿನ್ನಲು ಉಪಯೋಗಿಸುವ ಅಣಬೆ. ಗಂಡ ಹೆಂಡತಿ ಇಬ್ಬರೇ ಸೇರಿ ಕೆಲಸ ಮಾಡಿದರು. ಸಾಮಾನ್ಯವಾಗಿ ಎಲ್ಲೆಡೆಯಂತೆ ಪ್ಲಾಸ್ಟಿಕ್ ಕವರುಗಳಲ್ಲಿ ಹುಲ್ಲು ತುಂಬಿ ಅದರೊಡನೆ ಅಣಬೆ ಬೆಳೆಯುತ್ತಾರೆ.

ಪ್ರತಿ ದಿನ ಅಣಬೆಯನ್ನು ಒಂದಿಷ್ಟು ಹೊಟೇಲುಗಳಿಗೆ, ಮಾರುಕಟ್ಟೆಗೆ ಇವರೇ ಕೊಂಡೊಯ್ದು ಬರುತ್ತಾರೆ. ನಿರಂತರವಾಗಿ ಬೆಳೆ ಬರುವ ಹಾಗೆ ಯೋಜಿತವಾಗಿ ಬೆಳೆಯುತ್ತಿರುವುದೇ ಯಶಸ್ಸಿನ ಹಿಂದಿರುವ ಸತ್ಯ. ಮಾರುಕಟ್ಟೆಯಾಗಿ ಹೆಚ್ಚುಳಿದದ್ದು, ಇವರೇ ಒಣಗಿಸಿ ಮಾರುತ್ತಾರೆ. ಒಣಗಿಸಿ ಪ್ಯಾಕ್ ಮಾಡಿ ದೂರದ ಊರುಗಳಿಗೂ ಕಳಿಸುತ್ತಾರೆ.

ಊರ ಅಣಬೆಯ ಕಾಲ
ಇವರ ಇನ್ನೊಂದು ಗುಟ್ಟು ಇವರು ಬೆಳೆಯುವ ವಿವಿಧ ಜಾತಿಯ ಅಣಬೆಗಳು. ನೈಸರ್ಗಿಕವಾಗಿ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರೀತಿಯ ಅಣಬೆಗಳು ಹುಟ್ಟುತ್ತವೆ ಅಲ್ಲವೆ?. ನಮ್ಮಲ್ಲೂ ಮಳೆಗಾಲದ ಶುರುವಿನಲ್ಲಿ ಒಂದು ಜಾತಿಯದಾದರೆ, ಮಳೆಗಾಲ ಮುಗಿಯುತ್ತಿದ್ದ ಹಾಗೆ ಇನ್ನೊಂದು ಅಣಬೆ ಬೆಳೆಯುವುದಲ್ಲವೇ? ಅಂಥ ಸ್ಥಳೀಯ ಅಣಬೆಯನ್ನೇ ಬೆಳೆದರೆ? ಆ ಕಾಲದಲ್ಲಿ ಅದೇ ಅಣಬೆಯನ್ನು ಬೆಳೆದು ಮಾರಿದರೆ ಹೇಗೆ? ಹೀಗೆ ಯೋಚಿಸಿ ಅಲ್ಲೇ ಸ್ಥಳೀಯವಾಗಿ ಜನಪ್ರಿಯವಾದ ಅಣಬೆಗಳ ಬೀಜೋತ್ಪಾದನೆ ಮಾಡಿ ಅದನ್ನೇ ಬೇರೆ ಕಾಲದಲ್ಲಿ ಬೆಳೆದು ಮಾರುತ್ತಾರೆ. 

ಕೆಲವು ವರ್ಷಗಳ ಹಿಂದೆ ಕಿರು ಅರಣ್ಯಗಳ ಬಗ್ಗೆ ಅಧ್ಯಯನ ಮಾಡಿದ್ದೆ. ಆಗ ನಮ್ಮಲ್ಲೂ ಸುಮಾರು ಹದಿನಾರು ಜಾತಿಯ ಅಣಬೆಗಳನ್ನು ತಿನ್ನಲು ಉಪಯೋಗಿಸುತ್ತಿದ್ದುದನ್ನು ದಾಖಲಾತಿ ಮಾಡಿದ್ದೆ. ಹುತ್ತದ ಅಣಬೆ, ಮೊದಲ ಮಳೆ ಬಿದ್ದಾಗ ಹುಟ್ಟುವ ಪುಟ್ಟ ಅಣಬೆಗಳು, ಹೈಗ (ಹೋಪಿಯ ವೈಟಿ)ಎಂದು ಸಾಮಾನ್ಯವಾಗಿ ಕರೆಯುವ, ಮರದಡಿಯಲ್ಲಿ ಮಾತ್ರ ಬೆಳೆಯುವ ಅಣಬೆ, ಹೀಗೆ ಅದರ ವೈವಿಧ್ಯ ಸಾಕಷ್ಟು ನಮ್ಮಲ್ಲಿ ಇದೆ. ನಮ್ಮಲ್ಲಿ ಅಣಬೆ ತಿನ್ನುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಮತ್ತೇಕೆ ಸಾಮಾನ್ಯ ಮಾರುಕಟ್ಟೆಯಲ್ಲಿ ಅಣಬೆ ಮಾರಾಟವಾಗುತ್ತಿಲ್ಲ? ನಾವು ಯೋಚಿಸಬೇಕಾಗಿದೆ.

ಆದರೆ ಅಣಬೆ ಬೆಳೆಯುವವರು ‘ಬಟನ್ ಮಶ್ರೂಮ್’ ನಂತಹ ಕೆಲವೇ ಕೆಲವು ಜಾತಿಯನ್ನು  ಬೆಳೆಯುತ್ತಾರೆ. ಇಂಥ ಸ್ಥಳೀಯ ಜಾತಿಯ ಅಣಬೆಗಳನ್ನು ಬೆಳೆಯಲು ತಂತ್ರಜ್ಞಾನ ಅಭಿವೃದ್ಧಿಯಾಗಬೇಕಿದೆ. ಹಾಗಾದರೆ, ಅಣಬೆ ಬೆಳೆಗಾರ ಮಾರುಕಟ್ಟೆಗಾಗಿ ಪಂಚತಾರ ಹೊಟೇಲುಗಳತ್ತ ಮಾತ್ರ ನೋಡದೇ ಸಾಮಾನ್ಯ ಮಾರುಕಟ್ಟೆಯಲ್ಲೂ ಇದನ್ನು ಮಾರಬಹುದೇನೋ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT