ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಹುಡುಗಿಗೆ ಭಯಾನಕ ಮುಖವಾಡ

Last Updated 23 ಜೂನ್ 2016, 19:30 IST
ಅಕ್ಷರ ಗಾತ್ರ

ದೆವ್ವಗಳೆಂದರೆ ಇಷ್ಟಪಡುವ ಪ್ರಿಯಾಂಕ ದೆವ್ವದ ಕಥೆಯ ‘ನಾನಿ’ ಚಿತ್ರದಲ್ಲಿ ಭಯಪಟ್ಟೇ ನಟಿಸಿದ್ದಾರೆ. ಫೋಟೊಶೂಟ್‌ ಚಿತ್ರಗಳನ್ನು ನೋಡಿಯೇ ಅವರು ಬೆಚ್ಚಿಬಿದ್ದಿದ್ದರಂತೆ.

ಸಾಂಪ್ರದಾಯಿಕ ಉಡುಗೆಯಲ್ಲಿರುವ ಆಕೆಯ ದೇಹವನ್ನು ಆತ್ಮವೊಂದು ಮೆಟ್ಟಿಕೊಂಡಿದೆ. ಕೆದರಿದ ಕೂದಲು, ಉಬ್ಬಿದ ತುಟಿ. ಹಣೆಯಲ್ಲಿ ನಾಲ್ಕಾಣೆ ಗಾತ್ರದ ಕೆಂಪು ಬೊಟ್ಟು. ಬೆಳ್ಳಗೆ ಹೊಳೆಯುವ ದಪ್ಪನೆಯ ಕಣ್ಣುಗಳನ್ನು ತಿರುಗಿಸುತ್ತಾ ಎದುರಿಗೆ ನಿಂತವರನ್ನು ನುಂಗುವಂತೆ ದಿಟ್ಟಿಸುತ್ತಿದೆ ಆ ಆತ್ಮ. ಕಣ್ಣಚಲನೆಗೆ ತಕ್ಕಂತೆ ಮೂಡಿಬರುವ ಹಿನ್ನೆಲೆ ಸಂಗೀತ, ಪ್ರೇಕ್ಷಕರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಅದು ‘ನಾನಿ’ ಸಿನಿಮಾದ ಟ್ರೇಲರ್‌. ಆ ದೃಶ್ಯದಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚೆಲುವೆ ಮೈಸೂರಿನ ಬೆಡಗಿ ಪ್ರಿಯಾಂಕ ರಾವ್.

ಉಪೇಂದ್ರ ಅಭಿಯನಯದ ‘ಸೂಪರ್ರೋ ರಂಗ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಲ್ಲಿಗೆ ನಗೆಯ ಪ್ರಿಯಾಂಕ, ನಂತರ ‘ದಿಲ್‌ ರಂಗೀಲಾ’ ಚಿತ್ರದಲ್ಲಿನ ಗ್ಲಾಮರಸ್ ಪಾತ್ರದ ಮೂಲಕ ಚಿತ್ರರಸಿಕರ ಗಮನ ಸೆಳೆದವರು. ಸದ್ಯದಲ್ಲೇ ತೆರೆ ಕಾಣಲಿರುವ ‘ನಾನಿ’ ಚಿತ್ರದಲ್ಲಿ ದೆವ್ವವಾಗಿ ನಮ್ಮೆದುರು ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಇದು ಅವರ ಮೂರನೇ ಚಿತ್ರ.

ಕಾಲೇಜು ದಿನಗಳಲ್ಲೇ ನಟನೆಯ ಚುಂಗಿಗೆ ಬಿದ್ದ ಪ್ರಿಯಾಂಕ, ಚೆನ್ನೈನಲ್ಲಿರುವ ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್‌ ಅವರ ‘ಕವಿತಾಲಯ’ ಶಾಲೆಯಲ್ಲಿ ಒಂದು ವರ್ಷ ನಟನೆ ಕಲಿತಿದ್ದಾರೆ. ಆರಂಭದಿಂದಲೂ ರಂಗಭೂಮಿಯತ್ತ ಒಲವು ಹೊಂದಿದ್ದ ಅವರು, ಇಂಗ್ಲಿಷ್ ಹಾಗೂ ತಮಿಳಿನ ನಾಟಕಗಳಲ್ಲೂ ಅಭಿನಯಿಸಿದ್ದಾರೆ.

‘ದಿಲ್ ರಂಗೀಲಾ ಚಿತ್ರದಲ್ಲಿ ನನ್ನ ಅಭಿನಯ ಗಮನಿಸಿದ್ದ ನಿರ್ದೇಶಕ ಸುಮಂತ್ ಕೆ. ಗೊಲ್ಲಹಳ್ಳಿ, ಮೈಸೂರಿನಲ್ಲಿ ನನ್ನನ್ನು ಭೇಟಿ ಮಾಡಿ ನಾನಿ ಚಿತ್ರದ ಕತೆಯನ್ನು ಹೇಳಿದರು. ಪ್ರೇತಾತ್ಮವೊಂದು ಮೆಟ್ಟಿಕೊಳ್ಳುವ ತರುಣಿಯ ಹಾಗೂ ಸ್ವಲ್ಪ ಗ್ಲ್ಯಾಮರಸ್ ಹುಡುಗಿಯಾಗಿ ಕಾಣಿಸಿಕೊಳ್ಳುವ ಎರಡು ಬಗೆಯ ಪಾತ್ರ ಅದಾಗಿತ್ತು. ಕತೆ ಕೇಳಿದಾಗ, ತಕ್ಷಣ ಏನು ಹೇಳಬೇಕೆಂದು ತೋಚಲಿಲ್ಲ. ಸ್ವಲ್ಪ ಕಾಲಾವಕಾಶ ಕೇಳಿದೆ’ ಎನ್ನುವ ಪ್ರಿಯಾಂಕ, ‘ಮನೆಗೆ ಬಂದು ಅಮ್ಮನ ಜತೆ ಚರ್ಚಿಸಿ, ಆನಂತರ ಒಪ್ಪಿಕೊಂಡೆ’ ಎನ್ನುತ್ತಾರೆ.

‘ಎರಡು ರೀತಿಯ ಶೇಡ್ ಇರುವ ಪಾತ್ರ ಸಿಗುವುದೇ ಅಪರೂಪ. ಸ್ಯಾಂಡಲ್‌ವುಡ್‌ನಲ್ಲಿ ಈಗಷ್ಟೆ ಹೆಜ್ಜೆ ಇಡುತ್ತಿರುವ ನನಗೆ ಈ ಪಾತ್ರ ಸಿಕ್ಕಿದ್ದು ಅದೃಷ್ಟ. ಮುಂದೆ ಇಂತಹ ಪಾತ್ರಗಳು ಸಿಗುತ್ತವೊ ಇಲ್ಲವೊ ಗೊತ್ತಿಲ್ಲ. ರಂಗಭೂಮಿಯ ಅನುಭವ ಇದ್ದಿದ್ದರಿಂದ ಪಾತ್ರ ನಿರ್ವಹಣೆ ಸವಾಲು  ಎನಿಸಲಿಲ್ಲ’ ಎಂದು ನಟನೆಯ ಕುರಿತು ಹೇಳುತ್ತಾರೆ. ‘ಆತ್ಮ ಮೆಟ್ಟಿಕೊಂಡ ಸ್ತ್ರೀ ಮೇಕಪ್‌ನಲ್ಲಿ ನಡೆದಿದ್ದ ಫೋಟೊಶೂಟ್‌ನ ಚಿತ್ರಗಳನ್ನು ನೋಡಿ ಮೊದಲಿಗೆ ಹೆದರಿದ್ದೆ’ ಎನ್ನುವ ಅವರಿಗೆ, ನಿಜ ಜೀವನದಲ್ಲೂ ದೆವ್ವ–ಭೂತಗಳೆಂದರೆ ಭಯವಂತೆ.

ಅಂದಹಾಗೆ, ಪ್ರಿಯಾಂಕ ಈಗಲೂ ಮಲಗುವುದು ಅಮ್ಮನ ಜತೆಯೇ! ಚಿಕ್ಕಂದಿನಲ್ಲೇ ಸಂಗೀತದ ಕಡೆಗೆ ಆಕರ್ಷಿತರಾಗಿದ್ದ ಪ್ರಿಯಾಂಕ, ಒಂಬತ್ತು ವರ್ಷ ಸಂಗೀತ ಅಭ್ಯಾಸ ಮಾಡಿದ್ದಾರೆ. ಚಿತ್ರಗಳಲ್ಲಿ ನಟಿಸಲು ಆರಂಭಿಸುವುದಕ್ಕೂ ಮುಂಚೆ ನಟನೆ ಜತೆ ಜತೆಗೆ, ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್ ಅವರ ಶಾಲೆಯಲ್ಲಿ ಒಂದು ವರ್ಷ ವೆಸ್ಟರ್ನ್ ವೋಕಲ್ ಮ್ಯೂಸಿಕ್ ಬಗ್ಗೆಯೂ ತರಬೇತಿ ಪಡೆದಿದ್ದಾರೆ. ನಟನೆ ಬಿಟ್ಟರೆ ಸಂಗೀತವೇ ಅವರ ಅಚ್ಚುಮೆಚ್ಚಂತೆ.

‘ನಾನು ರಂಗಭೂಮಿಯಿಂದ ಬಂದವಳು. ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕರೆ ಖಂಡಿತ ಮಿಸ್ ಮಾಡಿಕೊಳ್ಳುವುದಿಲ್ಲ’ ಎನ್ನುವ ಅವರಿಗೆ– ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಅವಕಾಶಗಳು ಬರುತ್ತಿವೆಯಂತೆ. ಸದ್ಯ ‘ನಾನಿ’ಯಲ್ಲಿ ಪ್ರೇಕ್ಷಕರು ನನ್ನ ನಟನೆಗೆ ಯವ ರೀತಿ ಪ್ರತಿಕ್ರಿಯಿಸುತ್ತಾರೆಂಬ ಕುತೂಹಲದಲ್ಲಿರುವ ಅವರು, ‘ಇನ್ನೂ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ’ ಎನ್ನುತ್ತಾರೆ.
ಸುತ್ತಾಟ ಬಲು ಇಷ್ಟ

ಪ್ರವಾಸವೆಂದರೆ ಪ್ರಿಯಾಂಕಗೆ ಬಲು ಇಷ್ಟ. ಇಟಲಿಯಲ್ಲಿ ನೆಲೆಸಿರುವ ಅಣ್ಣನನ್ನು ನೋಡಲು ಪ್ರತಿ ವರ್ಷ ಹೋಗುವ ಅವರು, ಅಲ್ಲಿ ಒಂದೆರಡು ತಿಂಗಳು ಉಳಿದು, ಯೂರೋಪ್‌ ದೇಶಗಳಲ್ಲಿ ಸುತ್ತುತ್ತಾರೆ. ಪ್ರತಿ ವರ್ಷ ಕಡಿಮೆಯೆಂದರೂ ಎರಡು ದೇಶಗಳನ್ನು ಸುತ್ತಾಡಿ ಬರುವ ರೂಢಿ ಅವರದು. ಐಸ್‌ ಕ್ರೀಂ ಎಂದರೆ ಪ್ರಾಣ ಎನ್ನುವ ಪ್ರಿಯಾಂಕ, ‘ತಿಂಡಿ ಮರೆತರೂ ಐಸ್‌ ಕ್ರೀಂ ತಿನ್ನುವುದನ್ನು ಮರೆಯಲಾರೆ.

ಇದೇ ವಿಷಯಕ್ಕೆ ಆಗಾಗ ನನ್ನನ್ನು ಛೇಡಿಸುವ ಸ್ನೇಹಿತರು, ಅಷ್ಟೊಂದು ತಿಂದರೂ ದಪ್ಪವಾಗದೆ ಹೇಗೆ ಫಿಟ್‌ನೆಸ್‌ ಕಾಯ್ದುಕೊಂಡಿದ್ದೀಯಾ? ಎಂದು ಕೇಳುತ್ತಿರುತ್ತಾರೆ. ನಟಿಯರಿಗೆ ಫಿಟ್‌ನೆಸ್‌ ಅತಿ ಮುಖ್ಯ. ಅದಕ್ಕೆ ನಾನೂ ಹೊರತಲ್ಲ. ನನಗೊಬ್ಬರು ತರಬೇತುದಾರರಿದ್ದಾರೆ. ಅವರ ಸಲಹೆ –ಸೂಚನೆಗಳನ್ನು ಬಿಡದೆ ಪಾಲಿಸುತ್ತೇನೆ. ಜತೆಗೆ ಜಿಮ್‌ನಲ್ಲಿ ಒಂದಿಷ್ಟು ವರ್ಕೌಟ್ ಮಾಡುತ್ತೇನೆ’ ಎಂದು ತಮ್ಮ ಫಿಟ್‌ನೆಸ್‌ ಗುಟ್ಟಿನ ಬಗ್ಗೆ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT