ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಬಾಳ್ವೆ: ಯಾರಿಗಾಗಿ?

Last Updated 4 ಮೇ 2015, 19:30 IST
ಅಕ್ಷರ ಗಾತ್ರ

ನಂಜನಗೂಡು ತಾಲ್ಲೂಕಿನ ಬದನವಾಳುವಿನಲ್ಲಿ ಏಪ್ರಿಲ್ 19ರಂದು ಸುಸ್ಥಿರ ಬದುಕಿನ ಸಮಾವೇಶ ಏರ್ಪಾಟುಗೊಂಡಿತ್ತು. ಈ ಸಮಾವೇಶ ಸುಸ್ಥಿರ ಬದುಕಿನ ಹಲವು ಸಾಧ್ಯತೆಗಳನ್ನು ಚರ್ಚಿಸಿತು. ಬದುಕಿನ ಮೂಲ ನೆಲಗಟ್ಟೇ ಅಸ್ಥಿರಗೊಳ್ಳುತ್ತಿರುವ ಈ ಹೊತ್ತಿನಲ್ಲಿ  ಮುಂದಿನ ತಲೆಮಾರಿಗೂ ಈ ಭೂಮಿಯನ್ನು, ಪ್ರಕೃತಿಯನ್ನು ಉಳಿಸಬೇಕಿದೆ. ಹೀಗೆ ಉಳಿಸಬೇಕೆನ್ನುವ ಪ್ರಾಮಾಣಿಕ ಆಸಕ್ತಿ ಉಳ್ಳ ಮನಸ್ಸುಗಳು ಒಂದೆಡೆ ಸೇರಿ ಚರ್ಚಿಸಿದ್ದು ಮಹತ್ವದ ವಿಷಯವೇ ಸರಿ.

ಆದರೆ ಸಮಾವೇಶ  ಕೆಲವೊಂದು ಗೊಂದಲಗಳನ್ನು ಸೃಷ್ಟಿಸಿದೆ. ಈ ಗೊಂದಲಗಳಿಗೆ ಮುಖಾಮುಖಿ ಆಗದಿದ್ದರೆ ಖಂಡಿತಾ ಈ ಸಮಾವೇಶದ ಉದ್ದೇಶ ಸಾರ್ಥಕವಾಗಲಾರದು. ಈ ಹಿನ್ನೆಲೆಯಲ್ಲಿ ಕಾಡಿದ ಆತಂಕಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಈ ಸಮಾವೇಶ ಆರಂಭಗೊಳ್ಳುವುದಕ್ಕೆ ಕೆಲವು ದಿನಗಳ ಹಿಂದೆ, ಬದನವಾಳುವಿನಿಂದ ಸ್ವಲ್ಪವೇ ದೂರದ ಊರೊಂದರಲ್ಲಿ ದಲಿತ ಕೂಲಿ ಕಾರ್ಮಿಕರಿಬ್ಬರ ತಲೆ ಕತ್ತರಿಸಿ ಹಾಕಲಾಗಿತ್ತು.

ಅಷ್ಟೇ ಏಕೆ, ಸಮಾವೇಶಗೊಂಡ ಸ್ಥಳದಲ್ಲೇ ದಶಕದ ಹಿಂದೆ ದಲಿತರ ಮಾರಣಹೋಮವೂ ಆಗಿತ್ತು. ಸಮಾವೇಶಕ್ಕೆ ಬಂದಿದ್ದವರಲ್ಲಿ, ಇಂತಹ ಅಸ್ಥಿರ ಬದುಕುಗಳ ಬಗ್ಗೆ  ಸುಸ್ಥಿರತೆಯ ಪ್ರಶ್ನೆ ಕಾಡಲೇ ಇಲ್ಲ. ಹಾಗಾದರೆ ಇದರಲ್ಲಿ ಯಾರು ಯಾರ ಸುಸ್ಥಿರ ಬದುಕನ್ನು ಕುರಿತು ಮಾತನಾಡುತ್ತಿದ್ದಾರೆ. ಈ ದೇಶದಲ್ಲಿ ಶ್ರಮಸಹಿತ ಸರಳ ಜೀವನವನ್ನು ಇಲ್ಲಿನ ದಲಿತರು, ಆದಿವಾಸಿಗಳು, ಬಡವರು ಇದುವರೆಗೆ ಆಚರಿಸುತ್ತಲೇ ಬಂದಿದ್ದಾರೆ. 

ಇವರಿಗಿನ್ನೂ ಕನಿಷ್ಠ ಸೌಲಭ್ಯಗಳು ತಾಗಲೇ ಇಲ್ಲ.  ‘ನೇಯೋರ ಮೈ ಬೆತ್ತಲೆ’ ಎನ್ನುವ ಹಾಗೆ ಇಲ್ಲಿನ ದುಡಿಯುವ ಜನರು ದುಡಿಯುತ್ತಲೇ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆ. ಇಂತಹವರು ಈಗಾಗಲೇ ಸರಳ ಜೀವನದ ಅಡಿಯಲ್ಲಿ ನಿತ್ಯದ ಬದುಕು ದೂಡುತ್ತಿದ್ದಾರೆ.
ಈ ದೇಶದ ನೆಲ, ಜಲ, ಸಂಪತ್ತನ್ನು ನಿರಂತರ ಲೂಟಿ ಹೊಡೆದು ಅದನ್ನು ನಿತ್ಯ ನಿರಂತರ ಸುಲಿಗೆ ಮಾಡಿ, ಎಲ್ಲ  ಸುಖಗಳನ್ನು ಕೆಲವೇ ಜನರು ಅನುಭವಿಸುತ್ತಿದ್ದಾರೆ. ಇಂತಹ ಸುಖಗಳಿಗೆ ಇಲ್ಲಿನ ದುಡಿಯುವವರನ್ನೇ ಭದ್ರ ಬುನಾದಿಯನ್ನಾಗಿ ಮಾಡಿಕೊಳ್ಳಲಾಗಿದೆ.

ನೀರಿಲ್ಲದೆ, ವಿದ್ಯುತ್‌ ಇಲ್ಲದೆ ಸೊರಗುತ್ತಿರುವ  ಹಳ್ಳಿಗಳು ಒಂದುಕಡೆಯಾದರೆ, ‘ನೀರು, ವಿದ್ಯುತ್‌  ಇರುವುದೇ ನಮಗಾಗಿ’ ಎನ್ನುವ ಹಾಗೆ ಉಪಯೋಗಿಸುವ ನಗರ ಪ್ರದೇಶಗಳು ಮತ್ತೊಂದು ಕಡೆಗಿವೆ. ದುರಂತವೆಂದರೆ ಈ ಸರಳ ಬದುಕಿನ ಪಾಠ ಕೇಳಿಸಿಕೊಳ್ಳುತ್ತಿರುವವರು ಕೂಡ ಮೂಲ ಸೌಕರ್ಯಗಳಿಂದ ವಂಚಿತರಾದವರೇ ಆಗಿದ್ದಾರೆ. ‘ಲೋಕನೀತಿಯ ಬಲಸಂವರ್ಧನೆ’ (ಸುರೇಂದ್ರ ಕೌಲಗಿ, ಸಂಗತ, ಮೇ 2) ಆಗುವುದು, ದೋಚುವ ಮತ್ತು ಕೊಳ್ಳುಬಾಕರ ವಿರುದ್ಧ ನಿಂತು ರಾಜಿ ರಹಿತ ಹೋರಾಟಕ್ಕೆ ಅಣಿಯಾದಾಗ ಮಾತ್ರ. ಆದರೆ ಸುಸ್ಥಿರ ಬದುಕಿನ ಸಮಾವೇಶದಲ್ಲಿ ಇವರ ವಿರುದ್ಧ ಗಟ್ಟಿ ದನಿ ಕೇಳಿಬರಲೇ ಇಲ್ಲ.

ಭಾರತದ ಕ್ರೂರ ಮುಖಗಳಲ್ಲಿ ಜಾತಿ ಮತ್ತು ಧರ್ಮ ಅತ್ಯಂತ ಪ್ರಬಲ ಬೇರುಗಳಾಗಿ ಪರಿಣಮಿಸಿವೆ. ಈ ದೇಶದ ಜಾತಿಯಂತೂ ನಿತ್ಯ ಒಂದಲ್ಲಾ ಒಂದು ಕಡೆ ದಲಿತರನ್ನು ಕಿತ್ತು ತಿನ್ನುತ್ತಿದೆ. ಹೀಗಿರುವಲ್ಲಿ ಜಾತಿಯ ವಿನಾಶ ಆಗದ ಹೊರತು, ಸಂಪತ್ತಿನ ಅಸಮಾನತೆ ಸರಿದೂಗದ ಹೊರತು ಎಲ್ಲರ ಸುಸ್ಥಿರ ಬದುಕು ಹೇಗೆ ಸಾಧ್ಯ?

ದನ ಕಾಯುವ ಹುಡುಗ, ನೂಲು ಸುತ್ತುವ ಹುಡುಗಿ ಅಭಿವೃದ್ಧಿಯ ಹರಿಕಾರರರೇ ಸರಿ ಎನ್ನುವ ಹೇಳಿಕೆ ಸಮಾವೇಶದ ಆರಂಭದಲ್ಲೇ ಮೊಳಗಿತು. ಆದರೆ, ಇವರಿಬ್ಬರ ನಡುವಿನ ಮದುವೆ ಕಾರಣಕ್ಕೇ ಕೊಲೆಗಳು ನಡೆದುಹೋಗಿವೆ. ಇದರ ವಿರುದ್ಧ ದನಿ ಎತ್ತದ
ಹೊರತು ಸುಸ್ಥಿರ ಬದುಕಿನ ಮಜಲುಗಳನ್ನು ನೆಲೆಗೊಳಿಸಲು ಸಾಧ್ಯವೇ? ಗ್ರಾಮ ಸ್ವರಾಜ್ಯದ ಕನಸು ಕಾಣುತ್ತಲೇ ಗ್ರಾಮಗಳಲ್ಲಿನ ಭೀಕರ ಜಾತಿ ಪದ್ಧತಿಯ ಕ್ರೌರ್ಯವನ್ನು ಕಂಡೂ ಕಾಣದಂತೆ ಇರುವುದು ಅನ್ಯಾಯವಲ್ಲವೇ?

ಈ ದೇಶದಲ್ಲಿ ಭೂಮಿ ರಾಷ್ಟ್ರೀಕರಣ ಆಗಬೇಕು, ಇಲ್ಲಿನ ಕೈಗಾರಿಕೆಗಳು ಸರ್ಕಾರದ ಅಧೀನದಲ್ಲಿರಬೇಕು, ಸರ್ಕಾರವೇ ವಿಮೆ ಮಾಡಿಸಬೇಕು ಎನ್ನುವ ಅಂಬೇಡ್ಕರ್ ಆಶಯ ಈಡೇರಬೇಕು. ಇಲ್ಲದಿದ್ದರೆ ಇಲ್ಲಿನ ಆಳುವ ವರ್ಗ ಈ ದೇಶದ ಬೆನ್ನುಮೂಳೆಯನ್ನು ಬಗ್ಗಿಸುತ್ತಲೇ ಇರುತ್ತದೆ. ಶೇಕಡ 75ರಷ್ಟು ಭೂಮಿ ಹಾಗೂ ಸಂಪತ್ತು ಶೇಕಡ 25ರಷ್ಟು ಜನರ ನಡುವೆ ಹಂಚಿಕೆಯಾಗಿರುವಾಗ
ಇದು ಸಮಾನ ನೆಲೆಗೆ ತಲುಪದೆ ಸುಸ್ಥಿರ ಬದುಕು ಸಾಧ್ಯವೇ...? ಇದನ್ನು ಮೊದಲು ಮನಗಾಣಬೇಕಿದೆ.

ಇಲ್ಲಿನ ನೆಲ, ಜಲ, ಸಂಪತ್ತು ಎಲ್ಲರಿಗೂ ಸರಿಯಾದ ಪ್ರಮಾಣದಲ್ಲಿ ಹಂಚಿಕೆಯಾಗದ ಹೊರತು ಎಲ್ಲರ ಅಭಿವೃದ್ಧಿ ಮರೀಚಿಕೆಯೇ ಸರಿ!
ಇಲ್ಲಿ ಈಗಾಗಲೇ ಎಲ್ಲ ಸವಲತ್ತುಗಳನ್ನು ಅನುಭವಿಸಿ ತಿಂದುಂಡು ತೇಗುತ್ತಿರುವವರು ಒಂದು ಕಡೆಗಿದ್ದಾರೆ. ತಿಂದುಂಡು ತೇಗಬೇಕೆಂಬ ಕನಸು ಕಾಣುತ್ತಾ ದಾಪುಗಾಲಿಡುತ್ತಿರುವ ಮಧ್ಯಮವರ್ಗ ಮತ್ತೊಂದು ಕಡೆಗಿದೆ.

ಅನುಭವಿಸಲಿಕ್ಕೆ ಸವಲತ್ತುಗಳೇ ಇಲ್ಲದೆ ಕಣ್ಣು ಬಿಡುತ್ತಿರುವ ಮತ್ತೊಂದು ಅಸಹಾಯಕ ವರ್ಗ ಕೂಡ ಇಲ್ಲೇ ಇದೆ. ಸುಸ್ಥಿರ ಬದುಕಿನ ಅರಿವು ಮೂಡಿಸುವುದು ಇಲ್ಲಿ ಯಾರಿಗೆ? ಒಂದು ವೇಳೆ ಬದಲಾವಣೆ ವ್ಯಕ್ತಿಗತ ನೆಲೆಯಲ್ಲಿ  ಬರಬೇಕೆಂಬಂತೆ ಅದರ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದರೂ ಇದು ನಿಜವಾಗಿ ಮುಟ್ಟಬೇಕಿರುವುದು ಯಾರಿಗೆ? ಮೇಲಿನ ಎರಡು ಸ್ತರಗಳಿಗೆ ಇದು ಅರಿವಾಗದ ಹೊರತು ಎಲ್ಲರ ಬದುಕು ಸುಸ್ಥಿರವಾಗಲು ಸಾಧ್ಯವಿಲ್ಲ.

ಇದರಲ್ಲೇ ಆಳುವ ವರ್ಗಗಳೂ ತಮ್ಮ ಪಾಲನ್ನು ಹೊಂದಿರುತ್ತವೆ. ಹೀಗಿರುವಾಗ  ‘ಸುಸ್ಥಿರ ಸಮಾವೇಶದ ಗೊತ್ತುಗುರಿಗಳಿಗೆ ರಾಜಕೀಯ ಹಲ್ಲನ್ನು ಜೋಡಿಸಬೇಕಿದೆ. ಆ ಮೂಲಕ ಲೋಕಶಕ್ತಿ ಬಲಪಡಿಸಬೇಕು’ ಎನ್ನುವ ಚುನಾವಣಾ ಮಾದರಿಯ ಹೋರಾಟದಿಂದ ಇದು ಸಾಧ್ಯವೇ?

ಇದರ ನಡುವೆಯೂ ಇಂತಹ ಅನೇಕ ಪ್ರಶ್ನೆಗಳನ್ನು ತನ್ನೊಡಲಲ್ಲಿ ಇರಿಸಿಕೊಂಡು, ಪ್ರಾಮಾಣಿಕ ಚಳವಳಿಗಳು ಎತ್ತುವ ಪ್ರಶ್ನೆಗಳಿಗೆ ಉತ್ತರಿಸುತ್ತಲೇ, ಮುಖಾಮುಖಿಯಾಗುತ್ತಲೇ ತೆರೆದುಕೊಳ್ಳುವ ಪ್ರಯತ್ನವನ್ನು ಈ ಸಮಾವೇಶದ ಮುಂಚೂಣಿ ನಾಯಕರು ಮಾಡಿದರೆ ಉದ್ದೇಶ ಈಡೇರುವ ಸಾಧ್ಯತೆಗಳು ಭವಿಷ್ಯದಲ್ಲಿ ಗೋಚರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT