ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ವಿಧಾನ, ಪರಿಸರಸ್ನೇಹಿ ತಂತ್ರಜ್ಞಾನ

ಬಾದಾಮಿ ನಾಡಿನಿಂದ -5
Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

‘ರುಚಿಕರ, ಸುರಕ್ಷಿತ, ಆರೋಗ್ಯ ಪೂರ್ಣ ಬಾದಾಮಿ ಉತ್ಪಾದನೆ’ - ಇದು ಬಾದಾಮಿ ಮಂಡಳಿಯ ಗುರಿ. ಬೆಳೆಗಾರರು, ಸಂಸ್ಕರಣಾದಾರರು, ಮಾರುಕಟ್ಟೆದಾರರ ಸಹಕಾರದೊಂದಿಗೆ ಈ ಗುರಿ ತಲುಪಲು ಹೆಜ್ಜೆ ಹಾಕುತ್ತಿದೆ. ಇದೇ ಕಾರಣದಿಂದಲೇ ಕ್ಯಾಲಿಫೋರ್ನಿಯಾ ಬಾದಾಮಿ ಜಗದ್ವಿಖ್ಯಾತಿ ಪಡೆದಿದೆ. ಬಾದಾಮಿ ಉತ್ಪಾದನೆ ಹೆಚ್ಚಿಸುವುದಕ್ಕಾಗಿ ಬೆಳೆಗಾರರು, ಸಂಸ್ಕರಣಾದಾರರು ವಿವಿಧ ಹಂತಗಳಲ್ಲಿ ಪರಿಸರಸ್ನೇಹಿ, ಸುಸ್ಥಿರ ತಂತ್ರಜ್ಞಾನಗಳನ್ನು ಬಳಸುತ್ತಾರೆ. 

ಬಾದಾಮಿ ತ್ಯಾಜ್ಯ ಪುನರ್ ಬಳಕೆ
ಬಾದಾಮಿ ತೋಟಗಳಲ್ಲಿ ಸುರಿಯುವ ತರಗೆಲೆಗಳು, ಬಾದಾಮಿ ಸಿಪ್ಪೆಯಂತಹ ಜೀವ ರಾಶಿ (ಬಯೋ ಮಾಸ್)ಯನ್ನು ಬೆಳೆಗಾರರು ವ್ಯರ್ಥ ಮಾಡುವುದಿಲ್ಲ. ಬದಲಿಗೆ ಅದನ್ನು ಬಾದಾಮಿ ಕೃಷಿಗೆ ಕಾಂಪೋಸ್ಟ್ ಆಗಿ ಬಳಸುತ್ತಾರೆ. ಈ ಸಿಪ್ಪೆ ಕೆಲವು ಭಾಗಗಳಲ್ಲಿ ಜಾನುವಾರುಗಳಿಗೆ ಆಹಾರವಾಗಿಯೂ ಹಾಗೂ ಹಾಸಿಗೆಯಾಗಿಯೂ ಬಳಕೆಯಲ್ಲಿದೆ. ಕೆಲವು ಸಂಸ್ಕರಣಾ ಘಟಕಗಳಲ್ಲಿ ವಿದ್ಯುತ್ ಕೊರತೆ ನೀಗಿಸಿಕೊಳ್ಳಲು ಪರ್ಯಾಯ ಇಂಧನ ಮೂಲಗಳಾದ ಸೌರಶಕ್ತಿ, ಪವನ ವಿದ್ಯುತ್ ಬಳಕೆಗೆ ಮುಂದಾಗಿರುವ ಕಂಪೆನಿಗಳು, ಈ ಮೂಲಕ ಇಂಧನದ ಮೇಲಿನ ಒತ್ತಡ ಕಡಿತಗೊಳಿಸುವ ಪ್ರಯತ್ನದಲ್ಲಿವೆ.

ಪರಿಣಾಮಕಾರಿ ನೀರಾವರಿ ವಿಧಾನ
ಬಾದಾಮಿ ತೋಟಗಳಲ್ಲಿ ಮಿತ ನೀರಿನ ಬಳಕೆಗಾಗಿ ಸ್ಪ್ರಿಂಕ್ಲರ್, ಟೇಪ್ ಡ್ರಿಪ್‌ಇರಿಗೇಷನ್ ಮತ್ತು ಮೈಕ್ರೋ ಸ್ಪ್ರಿಂಕ್ಲರ್ ತಂತ್ರಜ್ಞಾನ ಅಳವಡಿಸಲಾಗಿದೆ. ಜಲ ಸಂರಕ್ಷಣೆ ಹಾಗೂ ನೀರಿನ ಗುಣಮಟ್ಟ ಕಾಪಾಡುವಲ್ಲಿ ಬಾದಾಮಿ ಬೆಳೆಗಾರರು ಮುಂಚೂಣಿಯಲ್ಲಿದ್ದಾರೆ. ಕಡಿಮೆ ನೀರು ಬಳಸಿ, ಅಧಿಕ ಇಳುವರಿ ಪಡೆಯುವಂತಹ ತಂತ್ರಜ್ಞಾನ ಚಾಲ್ತಿಯಲ್ಲಿದೆ. ಬಾದಾಮಿ ಮಂಡಳಿ ಪ್ರಕಾರ ಶೇ 70 ರಷ್ಟು ಬೆಳೆಗಾರರು (6500 ಎಕರೆ) ಮೈಕ್ರೋ ಸ್ಪ್ರಿಂಕ್ಲರ್ ಮೂಲಕ ಬೆಳೆಗೆ ನೀರು ಪೂರೈಸುತ್ತಿದ್ದಾರೆ. ಇದು ವ್ಯರ್ಥವಾಗುವ ನೀರನ್ನು ತಪ್ಪಿಸುವ ಪ್ರಯತ್ನ. ಜತೆಗೆ, ಕಡಿಮೆ ಅವಧಿಯಲ್ಲಿ ಹೆಚ್ಚು ಮರಗಳಿಗೆ ಅಗತ್ಯವಾದಷ್ಟು ನೀರನ್ನು ಪೂರೈಸುವ ವಿಧಾನ.

ಸ್ವಚ್ಛ ಸಂಸ್ಕರಣಾ ಘಟಕಗಳು
ಬಾದಾಮಿ ತೋಟದಲ್ಲಿ ಮಾತ್ರವಲ್ಲ, ಸಂಸ್ಕರಣಾ ಘಟಕಗಳಲ್ಲೂ ಸ್ವಚ್ಛತೆ ಮತ್ತು ಉತ್ತಮ ಪರಿಸರಕ್ಕೆ ಆದ್ಯತೆ. ಸಂಸ್ಕರಣಾ ಘಟಕಗಳು, ನಮ್ಮ ಅಡುಗೆ ಮನೆಗಿಂತ ದುಪ್ಪಟ್ಟು ಸ್ವಚ್ಛವಾಗಿರುತ್ತವೆ. ಒಂದು ಸಣ್ಣ ತ್ಯಾಜ್ಯವೂ ಒಳ ನುಸುಳದಂತೆ ಸಂಸ್ಕರಣಾ ಘಟಕವನ್ನು ಕಂಪೆನಿಗಳು ಕಾಪಾಡಿರುತ್ತವೆ. ನಮ್ಮ ಪತ್ರಕರ್ತರ ಬಳಗ ಸಂಸ್ಕರಣಾ ಘಟಕವೊಂದರ ಭೇಟಿಗೆ ಹೊರಟು ನಿಂತಾಗ, ‘ಸ್ವಚ್ಛತೆಯ ಪಟ್ಟಿಯನ್ನು ಆ ಕಂಪೆನಿಯ ಪ್ಲಾಂಟ್ ಮ್ಯಾನೇಜರ್ ನಮ್ಮ ಕೈಗಿತ್ತರು. ಮಾತ್ರವಲ್ಲ, ಹಂತ ಹಂತವಾಗಿ ಮಾರ್ಗದರ್ಶನ ಮಾಡುತ್ತಾ, ಸಂಸ್ಕರಣಾ ವಿಧಾನಗಳನ್ನು ವಿವರಿಸಿದರು. ವಿಶ್ವದ ಗ್ರಾಹಕರಿಗೆ ಆರೋಗ್ಯಪೂರ್ಣ ಬಾದಾಮಿ ನೀಡುವ ಸಲುವಾಗಿ ಕ್ಯಾಲಿಫೋರ್ನಿಯಾ ಬಾದಾಮಿ ಮಂಡಳಿ ವಿವಿಧ ಸುಸ್ಥಿರ ಹಾಗೂ ಪರಿಸರ ಸ್ನೇಹಿ ವಿಧಾನಗಳನ್ನು ಪ್ರೋತ್ಸಾಹಿಸುತ್ತಿದೆ. ಹಾಗಾಗಿಯೇ ‘ಕ್ಯಾಲಿಫೋರ್ನಿಯಾ ಬಾದಾಮಿ’ ವಿಶ್ವಖ್ಯಾತಿ ಪಡೆದಿದೆ.

‘ಎಬಿಸಿ’ಯ ಹೆಗ್ಗಳಿಕೆ
ಕ್ಯಾಲಿಫೋರ್ನಿಯಾದಲ್ಲಿ 50ರ ದಶಕಕ್ಕೂ ಮುನ್ನ ಬಾದಾಮಿ ಕೃಷಿ ಆರಂಭವಾಯಿತು. 1950ರಲ್ಲಿ ‘ಕ್ಯಾಲಿಫೋರ್ನಿಯಾ ಫೆಡರಲ್ ಮಾರ್ಕೆಟಿಂಗ್ ಆರ್ಡರ್’ ಸ್ಥಾಪನೆಯಾಯಿತು. ಬಾದಾಮಿಯ ಮಾರುಕಟ್ಟೆ ಅಭಿವೃದ್ಧಿ ಕುರಿತು ಕಾರ್ಯಚಟುವಟಿಕೆ ಆರಂಭಿಸಿದ ಮೇಲೆ 1970ರಲ್ಲಿ ಕ್ಯಾಲಿಫೋರ್ನಿಯಾ ಬಾದಾಮಿ ಮಂಡಳಿಯಾಗಿ (ಎಬಿಸಿ) ಹೆಸರು ಬದಲಿಸಲಾಯಿತು. ಸದ್ಯ ಬಾದಾಮಿ ಮಂಡಳಿ, ಬಾದಾಮಿ ಉತ್ಪಾದನೆ, ಪೌಷ್ಟಿಕಾಂಶ (ನ್ಯೂಟ್ರಿಯಂಟ್ಸ್) ಮತ್ತು ಮಾರುಕಟ್ಟೆ ಸಂಶೋಧನೆ, ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಕ್ಷೇತ್ರದಲ್ಲಿ ಜಾಹೀರಾತು ಮತ್ತು ಪ್ರಚಾರ, ಗುಣಮಟ್ಟ ನಿಯಂತ್ರಣ ಮತ್ತು ಉತ್ಪಾದನಾ ಅಂಕಿ ಅಂಶಗಳ ವಿಶ್ಲೇಷಣೆ ಮತ್ತು ಪ್ರಸಾರದಲ್ಲಿ ತೊಡಗಿಸಿಕೊಂಡಿದೆ.

ಮಂಡಳಿಯ ಶಿಸ್ತು ಬದ್ಧ ಕಾರ್ಯಚಟುವಟಿಕೆಯಿಂದಾಗಿ, ವರ್ಷ ವರ್ಷ ಬಾದಾಮಿ ಕೃಷಿ ವಿಸ್ತಾರವಾಗುತ್ತಿದೆ. 2003ರಲ್ಲಿ 5.50 ಲಕ್ಷ ಎಕರೆಯಲ್ಲಿದ್ದ ಬೆಳೆ, 2013ರ ವೇಳೆಗೆ ಅಂದಾಜು 8.10 ಲಕ್ಷ ಎಕರೆಯಷ್ಟಾಗಿದೆ. 2003ರಲ್ಲಿ ವಾರ್ಷಿಕ 1,173 ದಶಲಕ್ಷ ಪೌಂಡ್ನಷ್ಟಿದ್ದ ಬಾದಾಮಿ ಉತ್ಪಾದನೆ, 2013-14ರ ವೇಳೆಗೆ 2,238 ದಶಲಕ್ಷ ಪೌಂಡ್ ತಲುಪುವ ನಿರೀಕ್ಷೆ ಇದೆ ಎನ್ನುತ್ತದೆ ಮಂಡಳಿಯ ಅಂಕಿ ಅಂಶ. ಕ್ಯಾಲಿಫೋರ್ನಿಯಾದಿಂದ ಬಾದಾಮಿ ಆಮದು ಮಾಡಿಕೊಳ್ಳುವ 10 ಪ್ರಮುಖ ರಾಷ್ಟ್ರಗಳಲ್ಲಿ ಭಾರತ 4ನೇ ಸ್ಥಾನದಲ್ಲಿದೆ. 2006-07¬ರಲ್ಲಿ 58 ದಶಲಕ್ಷ ಪೌಂಡ್ನಷ್ಟು ಬಾದಾಮಿ ಆಮದು ಮಾಡಿಕೊಳ್ಳುತ್ತಿದ್ದ ಭಾರತ, 2012-13ರಲ್ಲಿ 125 ದಶಲಕ್ಷ ಪೌಂಡ್ ಆಮದು ಮಾಡಿಕೊಳ್ಳುತ್ತಿದೆ. ಇದು ‘ಎಬಿಸಿ’ ಹೆಗ್ಗಳಿಕೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT