ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರು ಕಾಣದ ಸುಡುಗಾಡು ಸಿದ್ಧರು

ಗಾಳಿ–ಮಳೆಗೆ ಬೀದಿಗೆ ಬಿದ್ದ 28 ಕುಟುಂಬಗಳ ಬವಣೆಯ ಬದುಕು, ಮಳೆಗಾಲದ ಭೀತಿ
Last Updated 6 ಜುಲೈ 2015, 8:55 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಮೇ 3ರಂದು ಬೀಸಿದ ಗಾಳಿ ಹಾಗೂ ಮಳೆಗೆ ಬೀದಿಗೆ ಬಂದಿದ್ದ, ಶಾಂತಿ ನಗರದ 28 ಸುಡುಗಾಡು ಸಿದ್ಧರ ಕುಟುಂಬಗಳ ಸ್ವಂತ ಸೂರಿನ ಕನಸು ಇನ್ನೂ ಈಡೇರಿಲ್ಲ. ಈ ಸುಡುಗಾಡು ಸಿದ್ಧರು ಮತ್ತೆ ತಮ್ಮ ಜೋಪಡಿ ಸೇರಿದ್ದು, ಮಳೆಗಾಲದ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಮೇ 3ರಂದು ಭಾರಿ ಗಾಳಿ ಸಹಿತ ಮಳೆ ಸುರಿದಿತ್ತು. ಆ ವೇಳೆಯಲ್ಲಿ ನಗರದ ವಿವಿಧೆಡೆ ಮರ ಗಿಡಗಳು ಬಿದ್ದು, ಮನೆಗಳ ಛಾವಣಿ ಹಾರಿಹೋಗಿ ಹಾನಿ ಸಂಭವಿಸಿತ್ತು. ಹಲವಾರು ಕುಟುಂಬಗಳು ನಷ್ಟ ಅನುಭವಿಸಿದ್ದರೆ, ಶಾಂತಿನಗರದ ಖಾಲಿ ಜಾಗದಲ್ಲಿದ್ದ ಸುಮಾರು 120 ಮಂದಿಯ 28 ಸುಡುಗಾಡು ಸಿದ್ಧರ ಕುಟುಂಬಗಳ ಜೋಪಡಿಗಳೇ ಹಾರಿ ಹೋಗಿ ಅಕ್ಷರಶಃ ಬೀದಿಗೆ ಬಂದಿದ್ದರು.

ಹೀಗೆ ಸೂರು ಕಳೆದುಕೊಂಡು ಬೀದಿಗೆ ಬಂದಿರುವುದು ಮಾತ್ರವಲ್ಲ, ಅವರ ಬಟ್ಟೆಬರೆ, ಕುರಿ–ಕೋಳಿ, ಅಡುಗೆ ಪರಿಕರ ಮತ್ತಿತರ ಸೊತ್ತುಗಳೂ ಹಾರಿ ಹೋಗಿದ್ದವು. ಹೀಗಾಗಿ ನಾಗೇಂದ್ರನಮಟ್ಟಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾತ್ಕಾಲಿಕವಾಗಿ ‘ಗಂಜಿಕೇಂದ್ರ’ದ ವ್ಯವಸ್ಥೆ ಮಾಡಲಾಗಿತ್ತು. ಶಾಲೆ ಆವರಣದಲ್ಲೇ ಸುಮಾರು ಐದು ದಿನಗಳವರೆಗೆ ಬೀಡುಬಿಟ್ಟಿದ್ದರು.

ಆಗ ಮಾನವೀಯತೆ ತೋರಿದ ಹೊಸಮಠದ ಚರಮೂರ್ತಿ ಬಸವಶಾಂತಲಿಂಗ ಸ್ವಾಮೀಜಿ, ಸಾಂತ್ವನ ಹೇಳಿ,  ತಾತ್ಕಾಲಿಕವಾಗಿ ಶೆಡ್‌ ಹಾಕಿಕೊಳ್ಳಲು ‘ತಾಡಪತ್ರೆ’ (ಟಾರ್ಫಲ್‌) ಮತ್ತಿತರ ನೆರವು ನೀಡಿದ್ದರು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ  ಅವರು ವಿವಿಧ ನೆರವು ನೀಡಿದ್ದರು. ಅಲ್ಲದೇ, ಸುಡುಗಾಡು ಸಿದ್ಧರ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸುವ ಭರವಸೆ ನೀಡಿದ್ದರು.

ಅಂತಯೇ ರವಿ ವಿಭೂತಿ ಎಂಬ ಬಾಲಕನು ಹುಕ್ಕೇರಿಮಠಕ್ಕೆ ಸೇರಿಸಿಕೊಂಡಿದ್ದು, ಆತನ ಶಾಲೆ, ವಸತಿ ಮತ್ತಿತರರ ವ್ಯವಸ್ಥೆಯನ್ನೂ ಸ್ವತಃ ಸ್ವಾಮೀಜಿ ಮುತುವರ್ಜಿ ವಹಿಸಿ ಮಾಡಿದ್ದಾರೆ. ಹೀಗೆ ಸ್ವಾಮೀಜಿ, ಮುಖಂಡರು ಸೇರಿದಂತೆ ಹಲವರು ಮಾನವೀಯತೆಯ ನೆರವು ನೀಡಿದರು.

ಆದರೆ, ಸರ್ಕಾರದಿಂದ ಸೂರು ಕಾಣುವ ಭಾಗ್ಯ ಮಾತ್ರ ಸುಡುಗಾಡು ಸಿದ್ಧರಿಗೆ ಇನ್ನೂ ಕೈಗೂಡಿಲ್ಲ. ‘ಶಾಂತಿನಗರದಲ್ಲಿ ಸುಡುಗಾಡು ಸಿದ್ಧರು ವಾಸಿಸುತ್ತಿರುವ ಪ್ರದೇಶವು ದ್ವೀಪದಂತಿದೆ. ಇಲ್ಲಿ ಖಾಸಗಿ ಹೊಲಗಳ ಮಧ್ಯೆ ಸರ್ಕಾರದ ಏಳು ಎಕರೆ ಜಮೀನಿದೆ. ಇಲ್ಲಿಯೇ ಅವರಿಗೆ ನಿವೇಶನ ಹಾಗೂ ವಸತಿ ನಿರ್ಮಿಸಿಕೊಡುವ  ಭರವಸೆ ದೊರೆತಿತ್ತು.

ಆದರೆ, ಪ್ರಮುಖ ರಸ್ತೆಯಿಂದ ಸಂಪರ್ಕವಿಲ್ಲದ ಈ ಸ್ಥಳಕ್ಕೆ ಮೊದಲು ಸಂಪರ್ಕ ರಸ್ತೆ ಆಗಬೇಕಾಗಿದೆ. ಅದಕ್ಕಾಗಿ ಭೂ–ಸ್ವಾಧೀನ ಮಾಡಬೇಕಾಗಿದೆ. ಇಲ್ಲಿರುವ ಸರ್ಕಾರದ 7 ಎಕರೆ ಜಾಗದಲ್ಲಿ ಸುಡುಗಾಡು ಸಿದ್ಧರು ಮಾತ್ರವಲ್ಲದೇ, ಚಿಂದಿ ಆಯುವ ಮತ್ತಿತರ 105 ಫಲಾನುಭವಿಗಳಿಗೆ ಶಾಶ್ವತ ವಸತಿ ಕಲ್ಪಿಸುವ ಯೋಜನೆ ರೂಪಿಸಲಾಗಿತ್ತು.

ಆದರೆ, ಭರವಸೆ ಕಾರ್ಯಗತಗೊಂಡಿಲ್ಲ. ಅಷ್ಟು ಮಾತ್ರವಲ್ಲ, ರಾಜೀವ್‌ ಗಾಂಧಿ ನಿಗಮದಿಂದ 15 ಎಕರೆ ಭೂಮಿಯನ್ನು ಖರೀದಿಸಿ ಚರಂಡಿ ವ್ಯವಸ್ಥೆ, ರಸ್ತೆ, ಬೀದಿ ದೀಪ ಹಾಗೂ ಮತ್ತಿತರರ ಮೂಲಸೌಕರ್ಯ ಸಹಿತ ವಸತಿ ಕಲ್ಪಿಸುವುದು. ಡಾ. ಬಿ.ಆರ್‌ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಸವಲತ್ತುಗಳು, ಹೈನುಗಾರಿಕೆಗೆ ₨25 ಸಾವಿರ ಸಾಲ ಹಾಗೂ ₨75 ಸಾವಿರ ಸಬ್ಸಿಡಿ ನೀಡುವ ಭರವಸೆ ಸರ್ಕಾರದಿಂದ ದೊರಕಿತ್ತು.

‘ಆದರೆ, ಈ ತನಕ ಯಾವ ಭರವಸೆಯೂ ಈಡೇರಿಲ್ಲ. ಮತ್ತೆ ನಮ್ಮಿಂದ ಯಾವುದೇ ಮಾಹಿತಿ ಪಡೆದಿಲ್ಲ. ನಮಗೆ ಏನನ್ನೂ ತಿಳಿಸಿಲ್ಲ. ಮಕ್ಕಳು ಶಾಲೆಗೆ ಹೋಗಬೇಕಾದರೂ, ಕನಿಷ್ಠ ಒಂದು ಕಿ.ಮೀ ದೂರವಿದೆ. ಮನೆಯಿಂದ ರಸ್ತೆ ಇಲ್ಲ. ಸುತ್ತಲ ಹೊಲ ದಾಟಿ ಹೋಗಬೇಕು. ಅಲ್ಲದೇ, ನಮ್ಮ ಒಂದು ಹೊತ್ತಿನ ಗಂಜಿಗೂ ಕಷ್ಟವಾಗುತ್ತಿದೆ. ಮತ್ತೆ ಮಳೆ–ಗಾಳಿ ಬೀಸುವಾಗ ಭಯವಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ಬಸವರಾಜ ಬಾದಗಿ.

‘ಸರ್ಕಾರವು ಮತ್ತೆ ಭಾರಿ ಮಳೆ ಸುರಿಯುವ ಮೊದಲೇ ನಿವೇಶನ ಹಾಗೂ ವಸತಿ ನೀಡುವ ಬೇಡಿಕೆ ಈಡೇರಿಸಬೇಕು. ಸುಡುಗಾಡು ಸಿದ್ಧರಿಗೆ ಬದುಕುವ ಅವಕಾಶ ಕಲ್ಪಿಸಬೇಕು. ಭರವಸೆಗಳನ್ನು ಕೂಡಲೇ ಈಡೇರಿಸಬೇಕಾಗಿದೆ’ ಎಂದು ಅವರು ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT