ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಬಿನ ಸವಿರುಚಿ

ನಮ್ಮೂರ ಊಟ
Last Updated 29 ಮೇ 2015, 19:30 IST
ಅಕ್ಷರ ಗಾತ್ರ

ಸೇಬಿನ ಸಿಹಿ ಬಜ್ಜಿ
ಸಾಮಗ್ರಿ
: ಒಂದು ಸೇಬು, ಮೈದಾಹುಡಿ - ನಾಲ್ಕು ಚಮಚ, ಅಕ್ಕಿಹುಡಿ - ನಾಲ್ಕು ಚಮಚ, ಏಲಕ್ಕಿ ಬೆರೆಸಿದ ಸಕ್ಕರೆ ಪುಡಿ - ನಾಲ್ಕು ಚಮಚ, ಚೆರಿ - ಅಲಂಕಾರಕ್ಕೆ, ಉಪ್ಪು - ರುಚಿಗೆ.

ವಿಧಾನ: ಮಿಕ್ಸಿಂಗ್ ಬೌಲ್‌ನಲ್ಲಿ ಮೈದಾ, ಅಕ್ಕಿಹುಡಿ ಮತ್ತು ಉಪ್ಪು ಹಾಕಿ ಬೇಕಷ್ಟು ನೀರು ಸೇರಿಸಿ ಬಜ್ಜಿಯ ಹದಕ್ಕೆ ಕಲಸಿಕೊಳ್ಳಿ. ರೌಂಡ್ ಆಗಿ ಕತ್ತರಿಸಿಟ್ಟುಕೊಂಡಿರುವ ಸೇಬಿನಿಂದ ಬೀಜ ಬೇರ್ಪಡಿಸಿ ಕಲಸಿಟ್ಟುಕೊಂಡಿರುವ ಹಿಟ್ಟಿಗೆ ಮುಳುಗಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಸರ್ವಿಂಗ್ ಪ್ಲೇಟ್‌ನಲ್ಲಿಟ್ಟು ಎರಡೂ ಬದಿಗೂ ಬಿಸಿ ಇರುವಾಗಲೇ ಸಕ್ಕರೆ ಹುಡಿ ಉದುರಿಸಿ. ನಂತರ ಇದರ ಮೇಲೆ ಚೆರಿಯನ್ನಿಟ್ಟು ಅಲಂಕರಿಸಿ ಸರ್ವ್ ಮಾಡಬಹುದು.

ಸೇಬುಹಣ್ಣಿನ ಕೇಸರಿಬಾತ್
ಸಾಮಗ್ರಿ: ಸೇಬು - ಒಂದು, ಸಕ್ಕರೆ - ಒಂದು ಕಪ್, ಹಾಲಲ್ಲಿ ಬೇಯಿಸಿಟ್ಟ ರೈಸ್- ಒಂದು ಕಪ್, ತುಪ್ಪ - ಕಾಲು ಕಪ್, ಗೋಡಂಬಿ ದ್ರಾಕ್ಷಿ - ನಾಲ್ಕು ಚಮಚ, ಕೇಸರಿ - ಎರಡು ಎಸಳು.

ವಿಧಾನ: ಸೇಬನ್ನು ಸಿಪ್ಪೆ ತೆಗೆದು ತುರಿದಿಡಿ. ಬಾಣಲೆಯಲ್ಲಿ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹುರಿದು ಕೊಳ್ಳಿ . ಇದಕ್ಕೆ ಹಾಲಿನಲ್ಲಿ ಬೇಯಿಸಿದ ಅನ್ನ ಹಾಕಿ ಮುಗುಚುತ್ತಾ ಇರುವಾಗ ಸಕ್ಕರೆ ಸೇರಿಸಿಕೊಂಡು ಚೆನ್ನಾಗಿ ಕೈ ಆಡಿಸಿಕೊಳ್ಳಿ. ನಂತರ ಕೇಸರಿ ಹಾಗೂ ತುರಿದ ಸೇಬು ಸೇರಿಸಿ ಚೆನ್ನಾಗಿ ಐದು ನಿಮಿಷ ಮಗುಚಿ ಇಳಿಸಿ.

ಸೇಬಿನ ಮೊರಬ್ಬ
ಸಾಮಗ್ರಿ
: ಸೇಬು - ಎರಡು, ಸಕ್ಕರೆ - ನಾಲ್ಕು ಚಮಚ, ತುರಿದ ಹಸಿ ಶುಂಠಿ - ಒಂದು ಚಮಚ, ಲಿಂಬೆರಸ-ಆರು ಚಮಚ, ಕಾಳುಮೆಣಸಿನ ಪುಡಿ - ಒಂದು ಚಮಚ, ಗರಂ ಮಸಾಲ - ಒಂದು ಚಮಚ, ಒಣಶುಂಠಿ ಪುಡಿ - ಒಂದು ಚಮಚ, ಜೀರಿಗೆ ಪುಡಿ - ಅರ್ಧ ಚಮಚ, ಅರಶಿಣ - ಕಾಲು ಚಮಚ, ಉಪ್ಪು - ರುಚಿಗೆ ಬೇಕಷ್ಟು.

ವಿಧಾನ: ಶುಚಿಗೊಳಿಸಿದ ಸೇಬನ್ನು ತುರಿದಿಡಿ. ಬಾಣಲೆಗೆ ನಾಲ್ಕು ಚಮಚ ಎಣ್ಣೆಹಾಕಿ ತುರಿದ ಸೇಬನ್ನು ಹಾಕಿ ಬಾಡಿಸಿ. ನಂತರ ಇದಕ್ಕೆ ಮೇಲೆ ತಿಳಿಸಿದ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಮಗುಚುತ್ತಾ ಇದ್ದು, ಕೊನೆಗೆ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಮಾಡಿ ಸುಮಾರು ಐದು ನಿಮಿಷ ಸಣ್ಣುರಿಯಲ್ಲಿಟ್ಟು ನಂತರ ಕೆಳಗಿಳಿಸಿ. ಆರಿದ ಮೇಲೆ ಲಿಂಬೆರಸ ಸೇರಿಸಿ ಕಲಕಿ. ಈಗ ತಯಾರಾದ ಮೊರಬ್ಬ ಚಪಾತಿ, ಮೊಸರನ್ನ ಇತ್ಯಾದಿಗಳೊಡನೆ ಸವಿಯಬಹುದು.

ಸೇಬಿನ ರಾಯತ
ಸಾಮಗ್ರಿ: ಸಣ್ಣಗೆ ಹೆಚ್ಚಿದ ಸೇಬಿನ ಚೂರುಗಳು - ಅರ್ಧ ಕಪ್, ಮೊಸರು - ಒಂದು ಕಪ್, ಹೆಚ್ಚಿದ ಸೌತೆಕಾಯಿ - ಅರ್ಧ ಕಪ್, ನೀರುಳ್ಳಿ - ಅರ್ಧ ಕಪ್, ಕಾಳುಮೆಣಸಿನ ಪುಡಿ - ಒಂದು ಚಮಚ, ದಾಳಿಂಬೆ ಬೀಜಗಳು - ನಾಲ್ಕು ಚಮಚ, ಓಟ್ಸ್ - ಎರಡು ಚಮಚ, ಕೊತ್ತಂಬರಿ ಸೊಪ್ಪು - ಸ್ವಲ್ಪ, ಸಕ್ಕರೆ - ಒಂದು ಚಮಚ, ಹೆಚ್ಚಿದ ಖರ್ಜೂರ - ನಾಲ್ಕು, ಉಪ್ಪು - ರುಚಿಗೆ.

ವಿಧಾನ: ಮಿಕ್ಸಿಂಗ್ ಬೌಲ್‌ಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ. ಮೇಲಿನಿಂದ ಕಾಳುಮೆಣಸಿನ ಪುಡಿ ಹಾಕಿ ಸರ್ವ್ ಮಾಡಿ. ಚಪಾತಿ ಜೊತೆ ಸವಿಯಲು ರುಚಿ.

ಓಟ್ಸ್ ವಿದ್ ಆ್ಯಪಲ್
ಸಾಮಗ್ರಿ: ಓಟ್ಸ್ - ಎರಡು ಚಮಚ,  ಹಾಲು - ಒಂದು ಕಪ್, ಸಣ್ಣಗೆ ಹೆಚ್ಚಿದ ಸೇಬು - ನಾಲ್ಕು ಚಮಚ, ಸ್ವೀಟ್‌ಕಾರ್ನ್- ಎರಡು ಚಮಚ, ಪೇಪರ್ ಅವಲಕ್ಕಿ - ಎರಡು ಚಮಚ, ಹೆಚ್ಚಿದ ಖರ್ಜೂರ - ಮೂರು ಚಮಚ, ಹೆಚ್ಚಿದ ಬಾಳೆಹಣ್ಣು - ನಾಲ್ಕು ಚಮಚ, ಬಾದಾಮಿ ತರಿ - ಎರಡು ಚಮಚ, ಜೇನುತುಪ್ಪ - ಎರಡು ಚಮಚ, ಏಲಕ್ಕಿ - ಚಿಟಿಕಿ.

ವಿಧಾನ: ಓಟ್ಸ್‌ಅನ್ನು ಬಾಣಲೆಗೆ ಹಾಕಿ ಸ್ವಲ್ಪ ಬೆಚ್ಚಗೆ ಮಾಡಿಡಿ. ಮಿಕ್ಸಿಂಗ್ ಬೌಲ್‌ನಲ್ಲಿ ಬಿಸಿಹಾಲು ಹಾಕಿ ಇದಕ್ಕೆ ಓಟ್ಸ್ ಸೇರಿಸಿ ಹತ್ತು ನಿಮಿಷ ಇಡಿ. ನಂತರ, ಮೇಲಿನ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಕೊನೆಗೆ ಜೇನುತುಪ್ಪ ಸೇರಿಸಿ ಸರ್ವ್ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT